Advertisement

ಕಲಾ ಪ್ರಕಾರಗಳ ಅಧ್ಯಯನಕ್ಕೆ ಆಸ್ಥೆ ವಹಿಸಲಿ: ಅನಸೂಯ ಪಾವಂಜೆ

04:46 PM Apr 07, 2018 | Team Udayavani |

ಮಹಾನಗರ: ಯುವ ಸಮುದಾಯವು ಕಲಾ ಪ್ರಕಾರಗಳ ಅಧ್ಯಯನದ ಬಗ್ಗೆ ವಿಶೇಷ ಆಸ್ಥೆ ವಹಿಸುವುದು ಇಂದಿನ ಅಗತ್ಯ ಎಂದು ಕರ್ನಾಟಕ ಕ್ರಾಫ್ಟ್ಸ್ ಕೌನ್ಸಿಲ್‌ ನ ಮಾಜಿ ಕಾರ್ಯದರ್ಶಿ ಅನಸೂಯ ಪಾವಂಜೆ ಹೇಳಿದರು. ಮಂಗಳೂರು ವಿಶ್ವವಿದ್ಯಾಲಯ, ಎನ್‌ಜಿ ಪಾವಂಜೆ ಲಲಿತಕಲಾ ಪೀಠ ಮತ್ತು ರಾಜ್ಯ ಲಲಿತಕಲಾ ಅಕಾಡೆಮಿ ಸಹಯೋಗದಲ್ಲಿ ನಗರದ ರೋಶನಿ ನಿಲಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ‘ಕರಾವಳಿ ಪರಂಪರೆ ಮತ್ತು ಕಲೆ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಆಧುನಿಕ ಕಲೆಯ ವಿಕಾಸ’ ಎಂಬ ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

Advertisement

 ಕಲೆ ಬೆಳೆಯಲಿ
ಆಧುನಿಕ ಕಲೆ ತನಗೆ ಅರ್ಥವಾಗದಿದ್ದರೂ ಅಲ್ಲಿನ ಬಣ್ಣಗಳ ಸಂಯೋಜನೆ ಉತ್ತಮವಾಗಿದೆ. ತನ್ನ ತಂದೆ ಎನ್‌ಜಿ ಪಾವಂಜೆ ಅವರು ಚಿತ್ರಕಲೆಯ ಬೆಳವಣಿಗೆಗಾಗಿ ಶ್ರಮಿಸಿದವರು. ಮೈಸೂರು ಅರಸರ ಆಸ್ಥಾನದಲ್ಲಿ ಚಿತ್ರಕಲೆ ಬಿಡಿಸುತ್ತಿದ್ದ ಬಗ್ಗೆ ತನಗೆ ನೆನಪುಗಳಿವೆ. ಕಲೆ ಬೆಳೆಯಬೇಕು ಎಂದರು.

ಅಧ್ಯಯನ ನಡೆಯಲಿ
ಹಿರಿಯ ಸಂಶೋಧಕ ಡಾ| ಪುಂಡಿಕಾಯಿ  ಗಣಪಯ್ಯ ಭಟ್‌ ಮಾತನಾಡಿ, ಕರಾವಳಿಯಲ್ಲಿ ಚಿತ್ರಕಲೆಗೆ ಇನ್ನೂರು ವರ್ಷಗಳ ಇತಿಹಾಸವಿದ್ದರೂ, ಪರಂಪರೆಯ ಚಿತ್ರ ಕತೆಯ ಕುರಿತ ಸರಿಯಾದ ಮಾಹಿತಿ ನಮಗೆ ಸಿಗುತ್ತಿಲ್ಲ. ಮೂಡಬಿದಿರೆಯಲ್ಲಿ ಲಭ್ಯವಿರುವ ತಾಳೆಗರಿಗಳಲ್ಲಿ ಇರುವ ಚಿತ್ರಗಳು ಶ್ರವಣಬೆಳಗೊಳ, ಬಂಕಾಪುರದಿಂದ ಬಂದವುಗಳು ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಜಾನಪದ, ಯಕ್ಷಗಾನ, ಭೂತಾರಾಧನೆ ಬಣ್ಣಗಾರಿಕೆಯನ್ನೂ ಚಿತ್ರಕಲೆ ಎಂದು ಪರಿಗಣಿಸಬಹುದು. ಈ ನಿಟ್ಟಿನಲ್ಲಿ ಇನ್ನಷ್ಟು ಹೆಚ್ಚಿನ ಅಧ್ಯಯನವಾಗಬೇಕು ಎಂದರು.ಹಿರಿಯ ಕಲಾವಿದ ಪಿ.ಎಸ್‌. ಪುಣಿಚಿತ್ತಾಯ ಕಾಸರಗೋಡು, ಉಡುಪಿ ಆರ್ಟಿಸ್ಟ್ಸ್ ಫೋರಂ ಅಧ್ಯಕ್ಷ ರಮೇಶ್‌ ರಾವ್‌ ಅತಿಥಿಗಳಾಗಿದ್ದರು. ರಾಜ್ಯ ಲಲಿತ ಕಲಾ ಅಕಾಡೆಮಿ ಅಧ್ಯಕ್ಷೆ ಪ್ರೊ| ಎಂ.ಜೆ. ಕಮಲಾಕ್ಷಿ ಆಶಯ ನುಡಿಗಳನ್ನಾಡಿದರು. 

ಮಂಗಳೂರು ವಿವಿ ಕುಲಪತಿ ಪ್ರೊ| ಕೆ. ಬೈರಪ್ಪ ಅಧ್ಯಕ್ಷತೆ ವಹಿಸಿದ್ದರು. ಲಲಿತಕಲಾ ಅಕಾಡೆಮಿ ರಿಜಿಸ್ಟ್ರಾರ್‌ ಇಂದ್ರಮ್ಮ, ಎನ್‌.ಜಿ. ಪಾವಂಜೆ ಲಲಿತಕಲಾ ಪೀಠ ಸಂಯೋಜಕ ಪ್ರೊ| ಕೆ. ಕೃಷ್ಣ ಶರ್ಮ ಮುಖ್ಯ ಅತಿಥಿಗಳಾಗಿದ್ದರು. ಪ್ರೊ| ರವಿಶಂಕರ ರಾವ್‌ ಸ್ವಾಗತಿಸಿ, ಡಾ| ನೇಮಿರಾಜ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕಲಾಕೃತಿ ಪ್ರದರ್ಶನ
ವಿಚಾರ ಸಂಕಿರಣ ಅಂಗವಾಗಿ ನಡೆದ ಕಲಾ ಪ್ರದರ್ಶನದಲ್ಲಿ 29 ಮಂದಿ ಕಲಾವಿದರ ಕಲಾಕೃತಿ ಪ್ರದರ್ಶನಗೊಂಡಿತು. ಎರಡು ದಿನಗಳ ಕಾಲ ವಿವಿಧ ಗೋಷ್ಠಿಗಳು ನಡೆಯಲಿದ್ದು, ಕಲಾವಿದರು ವಿವಿಧ ವಿಚಾರಗಳ ಬಗ್ಗೆ ವಿಷಯ ಮಂಡಿಸಲಿದ್ದಾರೆ. ಶನಿವಾರ ಸಂಜೆ ಸಮಾರೋಪ ನಡೆಯಲಿದೆ. ಕರಾವಳಿಯ ಯುವ ಆಧುನಿಕ ಚಿತ್ರ ಕಲಾವಿದರ ಚಿತ್ರ ಪ್ರದರ್ಶನ ಇಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next