ಮೈಸೂರು: ಕನ್ನಡ ಜಾನಪದ ಪರಿಷತ್ ಮೈಸೂರು ಜಿಲ್ಲಾ ಘಟಕದವತಿಯಿಂದ ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಹಿರಿಯ ನಂದಿ ಧ್ವಜ ಕಲಾವಿದ ಎಚ್.ಎನ್.ನಾಗಪ್ಪ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ನೀ.ಗಿರಿಗೌಡ, ನೀಲಗಾರ ಕಲಾವಿದ ಮಾದನಾಯಕ, ಕಂಸಾಳೆ ಕಲಾವಿದ ಮಹದೇವ, ನಂದಿ ಧ್ವಜ ಕಲಾವಿದ ಎನ್.ಮಲ್ಲೇಶಯ್ಯ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಕ್ಯಾತನಹಳಿ ಎಚ್.ಪ್ರಕಾಶ್ ಮಾತನಾಡಿ, ರಾಜ್ಯದ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲೂ ಕಜಾಪ ಘಟಕಗಳಿದ್ದು, ಸರ್ಕಾರದ ಯಾವುದೇ ಅನುದಾನವಿಲ್ಲದೇ ಜಾನಪದವನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಜಾನಪದ ಕಲೆಗಳ ಬಗ್ಗೆ ತರಬೇತಿ ನೀಡುವ ಉದ್ದೇಶವನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ ಇದೇ ಕಾಲೇಜಿನಲ್ಲಿ ಜಾನಪದ ಹಬ್ಬ ಏರ್ಪಡಿಸುವ ಉದ್ದೇಶವಿದೆ ಎಂದು ಹೇಳಿದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಭಾರ ಪ್ರಾಂಶುಪಾಲರಾದ ಡಾ.ರಾಗಿಣಿ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ರಾಜ್ಯ ಕಾರ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ಕಾರ್ಯದರ್ಶಿ ಬೆಸೂರು ಮೋಹನ್ ಪಾಳೇಗಾರ್ ಸನ್ಮಾನಿತರನ್ನು ಪರಿಚಯಿಸಿದರು.
ಪರಿಷತ್ತಿನ ಸಂಚಾಲಕಿ ಡಾ.ಕನಕ ತಾರ, ಪತ್ರಿಕಾ ಕಾರ್ಯದರ್ಶಿ ಡಾ.ಕುಮಾರ್, ಕಂಸಾಳೆ ಕುಮಾರಸ್ವಾಮಿ, ಕಾಲೇಜಿನ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ರಾಮದಾಸ್ ರೆಡ್ಡಿ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಪ್ರೊ.ಟಿ.ನಾಗವೇಣಿ, ಬಸವರಾಜು, ಜಿಲ್ಲಾ ಸಂಚಾಲಕ ಗಣೇಶ್ ಕುಮಾರಸ್ವಾಮಿ ಮುಖ್ಯ ಅತಿಥಿಗಳಾಗಿದ್ದರು.