Advertisement

Desi Swara: ಮಕ್ಕಳೊಂದಿಗೆ ಬೆರೆತು ಮನಸ್ಸನ್ನು ಅರಿಯೋಣ

11:46 AM May 11, 2024 | Team Udayavani |

ಒಬ್ಬ ಪರಿಪೂರ್ಣ ಮಹಿಳೆ ಅಥವಾ ತಾಯಿ ಅನ್ನುವ ಪದಕ್ಕೆ ನಿಜವಾದ ಅರ್ಥಬರುವುದು ಮಕ್ಕಳನ್ನು ಶಿಕ್ಷಿಸದೇ ಸರಿ ದಾರಿಗೆ ತಂದಾಗ, ಆವಾಗಲೇ ಪರಿಪೂರ್ಣ ಮಹಿಳೆ ಮತ್ತು ಉತ್ತಮ ಗುರುಗಳು ಎನಿಸುವುದು. ಮಕ್ಕಳು ಹಠ ಮಾಡುತ್ತಾರೆ, ಕಾಟ ಕೊಡುತ್ತಾರೆ ಅಥವಾ ತಂದೆ-ತಾಯಿಗೆ ಹಿಂಸೆ ಕೊಡುತ್ತಾರೆ ಇದು ಸಹಜ. ನನ್ನ ಪ್ರಕಾರ ಒಬ್ಬರದ್ದು ಜಾಸ್ತಿ ಇರಬಹುದು ಒಬ್ಬರದ್ದು ಕಡಿಮೆ ಇರಬಹುದು, ಅಡ್ವಾಂಟೇಜ್‌ ಅಂಡ್‌ ಡಿಸ್‌ಅಡ್ವಾಂಟೇಜ್‌ ಪ್ರತಿಯೊಬ್ಬರಲ್ಲೂ ಇರುತ್ತದೆ. ಮಕ್ಕಳಲ್ಲಿ ಮಾತ್ರವಲ್ಲದೆ ದೊಡ್ಡವರಲ್ಲೂ ಕೂಡ. ಒಂದು ಮಗು ಒಂದು ವಿಷಯದಲ್ಲಿ ರಚ್ಚೆ ಹಿಡಿದು ಹಠ ಮಾಡಿದರೆ ಇನ್ನೊಂದು ವಿಷಯದಲ್ಲಿ ಅದ್ಭುತ ಬೆಳವಣಿಗೆ ಆ ಮಗುವಿನಲ್ಲಿ ಇರುತ್ತದೆ, ಇನ್ನೊಂದು ಮಗುವಿನಲ್ಲಿ ಆ ಬೆಳವಣಿಗೆ ಕುಂಠಿತವಿರುತ್ತದೆ, ಇದನ್ನು ಬುದ್ಧಿವಂತರಾದ ನಾವು ಅರ್ಥಮಾಡಿಕೊಳ್ಳಬೇಕು. ಮಕ್ಕಳಲ್ಲಿ ತಾರತಮ್ಯ ಮಾಡಬಾರದು.

Advertisement

ಮುಖ್ಯವಾಗಿ ತಾಯಿ ಮತ್ತು ಗುರುವಿಗೆ ಮಕ್ಕಳ ಬಗ್ಗೆ ಹೆಚ್ಚಾಗಿ ತಿಳಿದಿರಬೇಕು. ತಾಯಿಗೆ ಎಷ್ಟು ಗೊತ್ತಿರುತ್ತದೆ ಆ ಗುರುವಿಗೂ ಕೂಡ ಅಷ್ಟೇ ಮಗುವಿನ ಬಗ್ಗೆ ತಿಳಿದಿರುತ್ತದೆ. ಹಾಗಂದ ಮಾತ್ರಕ್ಕೆ ನಾವು ಮಕ್ಕಳನ್ನು ಶಿಕ್ಷಿಸುವುದು ಎಷ್ಟರ ಮಟ್ಟಿಗೆ ಸರಿ. ನನ್ನ ಪ್ರಕಾರ ಹೊಡೆಯುವುದು, ಬಡೆಯುವುದು ಮಾಡುವುದರಿಂದ ಮಕ್ಕಳ ಮಾನಸಿಕ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತದೆ. ಮಕ್ಕಳ ಹಾರ್ಮೋನಿನಲ್ಲಿ ಏರುಪೇರು ಆದರೆ ನಾವೇ ಮುಂದೆ ಅನುಭವಿಸಬೇಕಾಗುತ್ತದೆ. ಮಾನಸಿಕ ನೋವು ಅನ್ನುವುದು ಮಕ್ಕಳು ಅನುಭವಿಸುವ ದೊಡ್ಡ ಶಿಕ್ಷೆ. ಒಬ್ಬ ಶಿಕ್ಷಕಿಯಾದವರು ಮಕ್ಕಳ ನ್ಯೂನತೆಗಳನ್ನು ಕಂಡುಹಿಡಿದು ಯಾವುದರಲ್ಲಿ ಕೊರತೆ ಇದೆ ಎಂದು ಕಂಡುಕೊಳ್ಳಬೇಕು.

ಅದನ್ನು ಮಕ್ಕಳೊಂದಿಗೆ ಬೆರೆತು ಅವರನ್ನು ಸರಿಯಾದ ದಾರಿಗೆ ತರುವುದು ಉತ್ತಮ ಶಿಕ್ಷಕರ ನಿಜವಾದ ಲಕ್ಷಣ. ಮಕ್ಕಳನ್ನು ಶಿಕ್ಷಿಸುವುದು, ಹಿಂಸೆ ಕೊಡುವುದು, ಓದದಿದ್ದರೆ ಅನೇಕ ರೀತಿಯ ಕಠಿನ ಕ್ರಮ ತೆಗೆದುಕೊಳ್ಳುವುದು, ಉತ್ತಮ ಶಿಕ್ಷಕ – ಶಿಕ್ಷಕಿಯರ ಲಕ್ಷಣ ಅಲ್ಲ. ಹಾಗೆ ತಂದೆ-ತಾಯಿಯಾದವರು ಕೂಡ ತಮ್ಮ ಮಕ್ಕಳನ್ನು ಹಿಂಸಿಸದೆ ಉತ್ತಮ ದಾರಿಗೆ ತರುವುದು ಉತ್ತಮ ಪೋಷಕರ ಲಕ್ಷಣ ಹಾಗೂ ಕರ್ತವ್ಯ. ಹಲವಾರು ಜನ ಹೇಳುತ್ತಾರೆ ಹೊಡಿಬೇಕು, ಶಿಕ್ಷಿಸಬೇಕು ಅವರನ್ನು ತುಂಬಾ ಹೊತ್ತು ಶಾಲೆಯಲ್ಲಿ ಇರಿಸಬೇಕು ಎಂದು. ನಾನಂತೂ ಆ ಪದ್ಧತಿ ನೋಡಿಲ್ಲ, ನನ್ನ ತಾಯಿ ನನಗೆ ಹಾಗೆ ಮಾಡಲಿಲ್ಲ ಅದು ಬೇರೆ ವಿಚಾರ.

ತುಂಬಾ ಹೊತ್ತು ಶಾಲೆಯಲ್ಲಿ ಇರಿಸಿ, ದುಡ್ಡು ಕೊಟ್ಟು ಎಲ್ಲ ತರಗತಿಗೆ ಸೇರಿಸಿ, ಹಾಗೆ ಮಾಡಿದರೆ ಸರಿಯಾಗುತ್ತೆ ಎನ್ನುವ ಕೆಲವು ಮಹಿಳೆಯರಾದರೆ, ಇನ್ನು ಕೆಲವರು ಇನ್ನೂ ಹಲವಾರು ರೀತಿಯಲ್ಲಿ ಮಕ್ಕಳ ಬಗ್ಗೆ ಅನಗತ್ಯವಾಗಿ ಮಾತನಾಡುತ್ತಾರೆ. ನನಗೆ ಅನಿಸುತ್ತದೆ ಅಂತವರಲ್ಲಿ ಮಕ್ಕಳನ್ನು ಸರಿಯಾಗ ಬೆಳೆಸಬೇಕಾದ ವಿಷಯದ ಬಗ್ಗೆ ಜ್ಞಾನದ ಕೊರತೆಯಿದೆ. ಮಕ್ಕಳನ್ನು ಸರಿಯಾದ ದಾರಿಗೆ ತರಬೇಕಾದರೆ ನಾವು ಅವರ ದಾರಿಯಲ್ಲಿ ನಡೆದು ಮಕ್ಕಳಾಗಿ ಸಹನೆ, ತಾಳ್ಮೆಯಿಂದ ಹೇಳಬೇಕು. ಅದರಲ್ಲೂ ಒಬ್ಬ ಹೆಣ್ಣಿಗೆ ಸಹನೆ, ತಾಳ್ಮೆ, ಮಮತೆ, ಶಿಸ್ತು, ಸಂಯಮ,ಒಳ್ಳೆಯ ನಡತೆ ಇದೆಲ್ಲ ಐದು ಮುತ್ತು ರತ್ನಗಳಿದ್ದ ಹಾಗೆ. ಯಾಕೆಂದರೆ ನಮ್ಮ ಅಜ್ಜಿಯರು ಅಥವಾ ನನ್ನ ಅಮ್ಮಂದಿರು ಅಂದರೆ ಹಿಂದಿನ ಕಾಲದ ಮಹಿಳೆಯರಲ್ಲಿ ಈ ಲಕ್ಷಣಗಳು ಇರುತ್ತಿದ್ದವು. ಅವರಲ್ಲಿ ವಿದ್ಯಾಭ್ಯಾಸದ ಅರ್ಹತೆಯ ಮಟ್ಟ ಕಡಿಮೆ ಇದ್ದರೂ ಜ್ಞಾನ, ತಿಳುವಳಿಕೆ ಹೆಚ್ಚಾಗಿ ಇರುತ್ತಿತ್ತು. ಇದನ್ನು ನಾವು ನಮ್ಮ ಸುತ್ತಮುತ್ತಲಿನ ಹಿಂದಿನ ಅನೇಕ ಮಹಿಳೆಯರಲ್ಲಿ ಗಮನಿಸಬಹುದು.

ಆದರೆ ಇಂದಿನ ಮಹಿಳೆಯರಲ್ಲಿ ಇದರ ಕೊರತೆ ಜಾಸ್ತಿ ಇದೆ. ತಾವು ಸಂತೋಷವಾಗಿರಬೇಕು, ತಾವು ಪಾರ್ಟಿಯಲ್ಲಿ ಮೋಜಿನಲ್ಲಿ ಇರಬೇಕು ಎಂದು ತಮ್ಮ ಮಕ್ಕಳಿಗೆ ಶಿಕ್ಷೆ ಕೊಡಬೇಕು ಎಂಬುದನ್ನು ಚೆನ್ನಾಗಿ ಅರಿತಿರುತ್ತಾರೆ. ಈ ಗುಣ ಕೆಲವು ಗಂಡಸರಲ್ಲಿ ಸಹ ಕಂಡು ಬರುತ್ತದೆ. ಆದರೆ ಇಂತಹ ವಿಷಯಗಳು ಆ ಮಕ್ಕಳಲ್ಲಿ ಎಂತಹ ಪ್ರಭಾವ ಬೀರುತ್ತದೆ ಎಂದರೆ ವೃದ್ಧಾಶ್ರಮಕ್ಕೆ ತಂದೆ-ತಾಯಿಯರನ್ನು ನೂಕುವಷ್ಟು. ತಾವು ಮಾಡಿದ ತಪ್ಪನ್ನು ಮುಂದೆ ನಮ್ಮ ಮಕ್ಕಳು ಮಾಡುತ್ತಾರೆ, ನಮ್ಮ ಮಕ್ಕಳು ನಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ವೃದ್ಧಾಶ್ರಮಕ್ಕೆ ನೂಕಿದ್ದಾರೆ ಎಂದು ದೂರುತ್ತಾರೆ. ಅದು ನೀವೇ ಹೇಳಿ ಕೊಟ್ಟ ಪಾಠವಲ್ಲವೇ, ಪಾಪ ಅವರದ್ದು ಏನು ತಪ್ಪಿಲ್ಲ ಬಿಡಿ, ಆಮೇಲೆ ವೃದ್ಧಾಶ್ರಮಗಳು ಜಾಸ್ತಿ ಆಯಿತು ಎಂದು ಸಭೆಗಳಲ್ಲಿ ಭಾಷಣ ಮಾಡುತ್ತಾರೆ.

Advertisement

ಮಕ್ಕಳನ್ನು ಹೀಗೇ ಬೆಳೆಸಬೇಕು, ಹಾಗೆ ಬೆಳೆಸಬೇಕು, ಎನ್ನುವ ಕೆಟ್ಟ ಮನಸ್ಥಿಯನ್ನು ಮೊದಲು ಬಿಡಿ. ಮಕ್ಕಳಿಗೆ ಒಮ್ಮೆ ಪ್ರೀತಿ ಕೊಟ್ಟು ನೋಡಿ. ಆ ಕ್ಷಣದಿಂದ ಅಮ್ಮಾ, ಅಮ್ಮಾ ಎಂದು ಕೂಗಿ ಓಡಿ ಬರುತ್ತಾರೆ. ಯಾಕೆಂದರೆ ಅವರ ನೋವು ನಲಿವು ಯಶಸ್ವಿಗೆ ಕಾರಣಳಾದ, ಮಮತೆಯ, ತ್ಯಾಗಮೂರ್ತಿ ಅಮ್ಮನೇ ಆಗಿರುತ್ತಾಳೆ ಮತ್ತು ಅವರ ಪ್ರತೀ ನೋವಿನಲ್ಲಿ, ಅಣುಕಣದಲ್ಲಿಯೂ ಅಮ್ಮ ಬೆರೆತಿರುತ್ತಾರೆ.

ಅವರ ರಕ್ತದ ಕಣಕಣದಲ್ಲಿಯೂ ಪ್ರೀತಿ, ವಾತ್ಸಲ್ಯ, ತ್ಯಾಗ ಎದ್ದು ಕಾಣುತ್ತದೆ. ಇದು ನಾನು ಬರೀ ಹೇಳುವ ಮಾತಲ್ಲ ಹೀಗೆ ನಡೆದುಕೊಂಡ ತಾಯಿಯರನ್ನು ನೀವೇ ಹೋಗಿ ಕೇಳಿ ಅಂತಹ ಮಕ್ಕಳು ಹೇಗಿದ್ದಾರೆ ಎಂದು. ಎಲ್ಲ ಕ್ಲಾಸಿಗೂ ಸೇರಿಸಿ ಹೆಮ್ಮೆಯಿಂದ ಬೀಗುವ ಮಹಿಳೆಯರ ಮಕ್ಕಳು ಹೇಗಿ¨ªಾರೆ ಅನ್ನುವುದನ್ನು ನೀವೇ ನೋಡಿ. ಹಾಗಾಗಿ ಮಕ್ಕಳನ್ನು ಶಿಕ್ಷಿಸಬೇಡಿ, ಸಹನೆಯಿಂದ ವರ್ತಿಸಿ ಕಾದು ನೋಡಿ. ಅಂದರೆ ಕಡಿಮೆ ನೋವು ತಿಂದ ಕಲ್ಲು ಮೆಟ್ಟಿಲುಗಳಾಗುತ್ತದೆ. ಹೆಚ್ಚು ನೋವು ತಿಂದ ಕಲ್ಲು ಶಿಲೆಯಾಗಿ ಅಭಿಷೇಕ ಕೊಳಪಡುತ್ತದೆ. ಹಾಗಾಗಿ ನಾವು ಯಾರನ್ನು ಆದರ್ಶ ವ್ಯಕ್ತಿಗಳು ಅಂತ ಇವತ್ತು ಕೈ ಮುಗಿಯುತ್ತೀವೊ ಅವರೆಲ್ಲರೂ ನೂರಾರು ಕಷ್ಟದಿಂದ, ತುಂಟತನದಿಂದ ಬೆಳೆದ ಮಕ್ಕಳೇ ಆಗಿದ್ದು ಇಂದಿನ ಆದರ್ಶ ಪುರುಷರು ಹಾಗೂ ಮಹಿಳೆಯರಾಗಿದ್ದಾರೆ.

ತಂದೆ ತಾಯಿಯರಿಗೆ ಈ ಮೂಲಕ ಹೇಳುವುದೇನೆಂದರೆ, ಸ್ಕೂಲ್‌ ಮಾರ್ಕ್ಸ್ ಬಗ್ಗೆ ಮಕ್ಕಳ ಮನಸ್ಸನ್ನು ಕದಡುವುದು, ಆ ಮಗು ಹೆಚ್ಚು ಅಂಕ ಗಳಿಸಿದೆ, ನೀನು ಕಡಿಮೆ ಮಾರ್ಕ್ಸ್, ತೆಗೆದಿದ್ದೀಯ, ಎಂದು ದಿನಾದಿನ ಬೈದುಬೈದು ಪಾಪ ಮಕ್ಕಳು ಎಷ್ಟು ನೋವು ಅನುಭವಿಸುತ್ತಾರೆ ಎಂದು ನಮಗೆ ಅರ್ಥವಾಗಬೇಕು. ಈ ಚಿತ್ರ ಹಿಂಸೆಗೆ ಎಷ್ಟೋ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿ¨ªಾರೆ. ಮಕ್ಕಳಿಗಿಂತ ಅಂಕಗಳು ಹೆಚ್ಚಲ್ಲ ಅನ್ನೋದು ನನ್ನ ವಾದ. ಅವರು ಚೆನ್ನಾಗಿ ಆರೋಗ್ಯವಾಗಿದ್ದರೆ, ಅಷ್ಟೇ ಸಾಕು. ಅದಕ್ಕಿಂತ ಸ್ಕೂಲ್‌ ಮಾರ್ಕ್ಸ್, ಪರ್ಸೆಂಟೇಜ್‌ ಮುಖ್ಯ ಅಲ್ಲ.

ಓದುವ ಮನಸಿದ್ದರೆ, ಉತ್ತಮ ಜ್ಞಾನವಿದ್ದರೆ ಓದುತ್ತಾರೆ, ಇಲ್ಲವಾದರೆ ಬೇರೆ ರೀತಿಯ ದುಡಿಮೆಗೆ ಒಳಗಾಗುತ್ತಾರೆ. ಖಂಡಿತ ಅವರ ಮನಸ್ಸನ್ನು ಕದಡುವ ಪ್ರಯತ್ನ ಮಾಡಬೇಡಿ. ಮಕ್ಕಳು ಯಾವ ವಿಷಯದಲ್ಲಿ ಪರಿಣಿತಿ ಹೊಂದಿರುತ್ತಾರೆ ಎಂದು ಅರಿಯಿರಿ. ಕೆಲವು ಮಕ್ಕಳು ಕರಕುಶಲತೆಯಲ್ಲಿ ಪರಿಣಿತಿ ಹೊಂದಿರುತ್ತಾರೆ, ಇನ್ನು ಕೆಲವರು ಚಿತ್ರಕಲೆಯಲ್ಲಿ ಹೊಂದಿರುತ್ತಾರೆ. ಅದರ ಬಗ್ಗೆ ಗಮನವಿಟ್ಟು ಅದನ್ನು ಮುಂದುವರಿಸಿ. ಅದು ಬಿಟ್ಟು ಮಕ್ಕಳನ್ನು ಹೀಗೆ ಆಗೂ, ಹಾಗೆ ಆಗೂ ಎಂದು ಒತ್ತಾಯಿಸಬೇಡಿ.

ಇನ್ನು ಪುರಾಣದ ಕಥೆಗೆ ಹೋಗುವುದಾದರೆ ಭಗವಂತ ಕೃಷ್ಣನನ್ನು ಕೇಳಿದ್ದೀರಿ ಅವನ ತುಂಟಾಟದ ಲೀಲೆಗಳನ್ನು ನಾನೇನು ಹೇಳಬೇಕಿಲ್ಲ. ಪ್ರತೀ ಮನೆಮನೆಯಲ್ಲೂ ಮನೆ ಮನಗಳಲ್ಲೂ ಮೂಡಿ ಬಂದಿದೆ. ಅಷ್ಟು ತುಂಟಾಟ ಮಾಡುತ್ತಿದ್ದ ಕೃಷ್ಣ ಪ್ರತೀ ಮನೆಮನೆಗೆ ಹೋಗಿ ಅವರ ಮನೆ ಮಜ್ಜಿಗೆ, ಮೊಸರು ಗಡಿಗೆ ಎಲ್ಲ ಒಡೆದು ಬರುತ್ತಿದ್ದ. ಅವರೆಲ್ಲರೂ ಹೀಗೆಯೇ ಬಯ್ಯುತ್ತಿದ್ದರು. ಆದರೆ ಯಶೋದೆ ಮಾತ್ರ ಅಪ್ಪಿ ಮುದ್ದಾಡುತ್ತಿದ್ದಳು. ಅವರೆಲ್ಲ ಬೈದರು ಸಹ ಕೃಷ್ಣನನ್ನು ಬೈಯುತ್ತಿರಲಿಲ್ಲ, ಅಲ್ಲಿಂದಲೇ ಶುರುವಾಗಿದೆ ನಮಗೆ ತಾಯಿಯ ಮಮತೆ, ವಾತ್ಸಲ್ಯ ಅನ್ನೋದು. ನಮ್ಮೆಲ್ಲರಿಗೂ ಯಶೋದೆ ಉತ್ತಮ ಉದಾಹರಣೆಯಾಗುತ್ತಾಳೆ. ಹಾಗಾಗಿ ನಮ್ಮ ಮಕ್ಕಳನ್ನು ಶಿಕ್ಷಿಸದೆ ಉನ್ನತ ದಾರಿಗೆ ತರುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

*ಮಹಾಲಕ್ಷ್ಮೀ ಸುಬ್ರಹ್ಮಣ್ಯ, ಶಾರ್ಜಾ

Advertisement

Udayavani is now on Telegram. Click here to join our channel and stay updated with the latest news.

Next