ಎಚ್.ಡಿ.ಕೋಟೆ: ತಾಲೂಕಿನಲ್ಲಿ ನಡೆದಿರುವ ಅವ್ಯವಹಾರ ಮತ್ತು ಹಗರಣಗಳನ್ನು ಸರ್ಕಾರದ ಗಮನಕ್ಕೆ ತರಬೇಕಾದರೆ ಜನರೊಂದಿಗೆ ಸೇರಿ ಪ್ರತಿಭಟನೆ ಮಾಡುವುದೇ ಒಳಿತು ಎಂದು ಜಿಪಂ ಸದಸ್ಯ ವೆಂಕಟಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಲವಾರು ಕಾಮಗಾರಿಯಾಗದೆ ಹಣ ಡ್ರಾ ಆಗಿರುವ ವಿಚಾರದಲ್ಲಿ ಜಿಪಂಗೆ ಸೀಮಿತ ಎಂಬಂತೆ ಮಾತನಾಡಿದ್ದಾರೆ, ಆದರೆ ನಮ್ಮ ವ್ಯಾಪ್ತಿಯಲ್ಲಿ ತನಿಖೆ ಮಾಡಿ ವರದಿ ಮಾಡಲಾಗಿದೆ. ಆದರೆ ಶಾಸಕರು ವಿಧಾನಸಭೆಯಲ್ಲಿ ನಿಲುವಳಿ ಸೂಚನೆಯಡಿಯಲ್ಲಿ ಚರ್ಚಿಸಿ ತಪ್ಪಿತಸ್ಥರ ವಿರುದ್ಧ ಕ್ರಮವಹಿಸಿ ಸಾರ್ವಜನಿಕರ ಹಣವನ್ನು ಜನರ ಅಭಿವೃದ್ಧಿಗೆ ಬಳಸುವಂತೆ ಕೆಲಸ ಮಾಡುವಂತಾಗಲಿ ಎಂದರು.
ಪಟ್ಟಣ ಪ್ರವಾಸಿ ಮಂದಿರದಲ್ಲಿ ಸಾಕಷ್ಟು ಸಮಯ ಇರುತ್ತಾರೆ, ಹಳೇ ಐಬಿ ದುರಸ್ತಿಗಾಗಿ 20 ಲಕ್ಷರೂ ಖರ್ಚಾಗಿದ್ದು ಯಾವುದೇ ಕೆಲಸವಾಗಿಲ್ಲ ಇದನ್ನು ನೋಡಿದರೆ ಶಾಸಕ ಚಿಕ್ಕಮಾದು ಮತ್ತು ಬೆಂಬಲಿಗರ ಪ್ರಮಾಣಿಕತೆ ಏನೆಂಬುದು ಅರ್ಥವಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಜೆಡಿಎಸ್ ಸಂಘಟನೆ ಇಲ್ಲದೆ ತಾಲೂಕಿನಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಹೇಳಿದರು.
ಚಿಕ್ಕಮಾದು ಶಾಸಕರಾಗುವ ಮೊದಲೇ ತಾಲೂಕಿನಲ್ಲಿ ಜಾ.ದಳ ಮಾಜಿ ಅಧ್ಯಕ್ಷ ಸಿ.ವಿ.ನಾಗರಾಜು ಹಾಗೂ ವಿಧಾನ ಪರಿಷತ್ತಿನ ಸದಸ್ಯ ಸಂದೇಶ್ ನಾಗರಾಜು ಸೇರಿದಂತೆ ಅನೇಕ ಮುಖಂಡರ ನೇತೃತ್ವದಲ್ಲಿ ಪಕ್ಷ ಸಂಘಟಿತವಾಗಿ ಸ್ಥಳೀಯ ಸಂಸ್ಥೆಯ ಗ್ರಾಪಂ, ತಾಪಂ, ಜಿಪಂ ಚುನಾವಣೆಗಳಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದು ಅಧಿಕಾರ ಹಿಡಿಯಲಾಗಿತ್ತು. ಆದರೆ ನಿಷ್ಠಾವಂತರು ಶಾಸಕ ಚಿಕ್ಕಮಾದುರ ಕುತಂತ್ರ ಮತ್ತು ಸ್ವಹಿತಾ ಸಕ್ತಿಯಿಂದಾಗಿ ಹಲವಾರು ಪಕ್ಷದಿಂದ ದೂರವಾಗಬೇಕಾಯಿತು ಎಂದು ಸ್ಪಷ್ಟಪಡಿಸಿದರು.
ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸುವ ಶಾಸಕರು ನಂತರ ಆ ಕಾಮಗಾರಿ ಎಷ್ಟರ ಮಟ್ಟಿಗೆ ಗುಣಮಟ್ಟದಿಂದ ನಡೆಯುತ್ತಿದೆ ಎಂದು ಒಮ್ಮೆಯಾದರು ಪರಿಶೀಲನೆಗೆ ಮುಂದಾಗಿರುವುದಿಲ್ಲ, ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ದ ಸರ್ಕಾರದ ಗಮನಕ್ಕೆ ತಂದಿರುವುದಿಲ್ಲ ಎಂದು ದೂರಿದರು.
ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಶಾಸಕರಾಗಿದ್ದ ಸಂದರ್ಭದಲ್ಲಿ ಕಬಿನಿ, ತಾರಕ ಜಲಾಶಯದ ಆಧುನೀಕರಣಕ್ಕೆ 100 ಕೋಟಿಗೂ ಹೆಚ್ಚು ಹಣ ತಂದು ಅಭಿವೃದ್ಧಿಪಡಿಸಲಾಗಿತ್ತು. ಇದರ ಜೊತೆಗೆ ಚಿಕ್ಕದೇವಮ್ಮ ಬೆಟ್ಟದ ದೇವಸ್ಥಾನದ ಅಭಿವೃದ್ಧಿಯಲ್ಲಿ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಹೆಚ್ಚಿನ ಪಾತ್ರವಹಿಸಿದ್ದರು ಎಂದರು.