Advertisement
ಮೊದಲಿಗೆ ನವೆಂಬರ್ ತಿಂಗಳು ಎಂದರೆ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಸಡಗರ. ಈ ಬಗ್ಗೆ ಕಳೆದ ಸರಣಿಯಲ್ಲಿ ಓದಿದ್ದೀರಿ. ಈ ತಿಂಗಳು ಯಾವುದಾದರೂ ಒಂದು ವಾರಾಂತ್ಯ ನಮ್ಮಲ್ಲಿನ ಕನ್ನಡ ಸಂಘ ಆಯೋಜಿತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. ಕೆಲವು ಸಂಘಗಳಲ್ಲಿ ಈ ಸಂದರ್ಭದಲ್ಲಿ ಜನವರಿಯಿಂದ ವಹಿಸಿಕೊಳ್ಳುವ ಹೊಸ ಆಡಳಿತವರ್ಗವನ್ನು ಪರಿಚಯಿಸುತ್ತಾರೆ. ಹೀಗೇಕೆ ಎಂದರೆ ವರ್ಷದ ಕೊನೆಯ ಹಬ್ಬ ಎಂದರೆ ನಮ್ಮಲ್ಲಿ ದೀಪಾವಳಿ ಮತ್ತು ರಾಜ್ಯೋತ್ಸವ. ಅನಂತರ ಮೂಡಿಬರುವುದೇ ಹೊಸ ಕ್ಯಾಲೆಂಡರ್ ವರ್ಷದ ಸಂಕ್ರಾಂತಿ ಇತ್ಯಾದಿ.
Related Articles
Advertisement
ನವೆಂಬರ್ ತಿಂಗಳ ಪ್ರಮುಖ ಆಚರಣೆ ಎಂದರೆ ಥ್ಯಾಂಕ್ಸ್ ಗಿವಿಂಗ್. ಪ್ರಮುಖವಾಗಿ ಈ ಹಬ್ಬದ ಆಚರಣೆಯ ಉದ್ದೇಶವೇ ಹಿಂದಿನ ವರ್ಷದಲ್ಲಿ ಉತ್ತಮ ಬೆಳೆಯನ್ನು ನೀಡಿದ ದೈವಕ್ಕೆ ವಂದಿಸುವ ಅಥವಾ ಧನ್ಯವಾದಗಳನ್ನು ಅರ್ಪಿಸುವುದು. ಈ ಆಚರಣೆಯಂದು ಸಂಸಾರಗಳು ಒಗ್ಗೂಡಿ ಸಂಜೆ ಅದ್ಭುತವಾದ ಹಬ್ಬದಡಿಗೆಯನ್ನು ಊಟ ಮಾಡುತ್ತಾರೆ. ಟರ್ಕಿಯನ್ನು ತಿನ್ನುತ್ತಾರೋ, ವೈನ್ ಕುಡಿಯುತ್ತಾರೋ ಅದನ್ನು ಬದಿಗೆ ಹಾಕಿ. ಆದರೆ ಅಪ್ಪ-ಅಮ್ಮ ಒಂದೆಡೆಯಿದ್ದು, ಮಕ್ಕಳು ಮದುವೆಯಾಗಿಯೋ ಅಥವಾ ಕೆಲಸದ ಮೇಲೋ ದೂರದ ಊರುಗಳಲ್ಲಿ ಇರುವ ಸಂದರ್ಭಗಳಲ್ಲಿ, ಮಕ್ಕಳೆಲ್ಲರೂ ಅಪ್ಪ-ಅಮ್ಮನೊಂದಿಗೆ ಜತೆಗೂಡಿ ಆಚರಿಸುವ ಈ ಹಬ್ಬ ವಿಶೇಷವೇ ತಾನೇ? ಹಬ್ಬ ಎಂದರೆ ಬಂಧು-ಬಳಗದವರೊಡನೆ ಆಚರಿಸುವುದು ತಾನೇ? ಈ ಥ್ಯಾಂಕ್ಸ್ ಗಿವಿಂಗ್ ಎಂಬುದು ಅಪ್ಪ-ಅಮ್ಮ-ಅಕ್ಕ-ತಂಗಿ-ಅಣ್ಣ-ತಮ್ಮರೊಡನೆ ಆಚರಿಸುವ ಸಂಭ್ರಮ. ಇಲ್ಲಿನ ಮತ್ತೂಂದು ವಿಷಯ ಏನಪ್ಪಾ ಎಂದರೆ, ಈ ಆಚರಣೆ ಕೇವಲ ಅಮೆರಿಕಕ್ಕೆ ಸೀಮಿತವಾಗದೇ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ ಮತ್ತಿತರ ದೇಶಗಳಲ್ಲೂ ಆಚರಣೆ ಮಾಡುತ್ತಾರೆ.
ಥ್ಯಾಂಕ್ಸ್ ಗಿವಿಂಗ್ ಎಂಬುದು ನವೆಂಬರ್ ತಿಂಗಳ ಕೊನೆಯ ಗುರುವಾರದಂದು ಆಚರಿಸಲಾಗುತ್ತದೆ. ಈ ಹಬ್ಬಕ್ಕೂ ಡಿಸೆಂಬರ್ ತಿಂಗಳ ಕ್ರಿಸ್ಮಸ್ ಹಬ್ಬಕ್ಕೂ ಹೆಚ್ಚು ಕಮ್ಮಿ ಒಂದು ತಿಂಗಳ ಅಂತರ. ಥ್ಯಾಂಕ್ಸ್ ಗಿವಿಂಗ್‌ನ ಮತ್ತೂಂದು ವಿಶೇಷ ಎಂದರೆ ಆ ದಿನದ ಅನಂತರ ಕ್ರಿಸ್ಮಸ್ ಹಬ್ಬದ ಸ್ವಾಗತಕ್ಕೆಂದು ಮನೆಗಳಲ್ಲಿ ದೀಪಾಲಂಕಾರ ಮಾಡುವುದು. Holiday Seasonಎಂದು ಮನದಲ್ಲಿ ಮೂಡುವುದು ಈ ಬೆಳಕಿನ ಅಲಂಕಾರಗಳಿಂದಲೇ.
ಥ್ಯಾಂಕ್ಸ್ ಗಿವಿಂಗ್ ದಿನದ ಅನಂತರದ್ದೇ Black Friday. ಅಂದಿನ ದಿನಗಳ ಪದ್ಧತಿಯಂತೆ ಬೆಳಗಿನ ಝಾವ ನಾಲ್ಕಕ್ಕೆ ಅಂಗಡಿ ಬಾಗಿಲು ತೆರೆದು ವ್ಯಾಪಾರ ಆರಂಭ. ಆ ಹಗಲು ಹಲವಾರು ವಸ್ತುಗಳು ರಿಯಾಯಿತಿ ದರಕ್ಕೆ ದೊರೆಯುತ್ತದೆ. ಜನರು ಹಿಂದಿನ ದಿನದ ರಾತ್ರಿಯಿಂದಲೇ ತಮ್ಮಿಷ್ಟದ ಅಂಗಡಿಯ ಮುಂದೆ ಸಾಲು ನಿಲ್ಲತೊಡಗುತ್ತಾರೆ. ಸಾಮಾನ್ಯವಾಗಿ ಎಲ್ಲ ಪ್ರಾಂತಗಳಲ್ಲೂ ನವೆಂಬರ್ ಥಂಡಿ. ಹೀಗಿರುವಾಗಲೂ ಮಂದಿ, ದಪ್ಪನೆಯ ಬಟ್ಟೆಗಳನ್ನು ಧರಿಸಿ ಸಾಲಲ್ಲಿ ನಿಲ್ಲುತ್ತಾರೆ. ಆ ಮರುದಿನದ ಭರಾಟೆ ನೋಡುವುದೇ ಮಜಾ.
ಬೆಳಗ್ಗೆ ಅಂಗಡಿಯ ಬಾಗಿಲು ತೆರೆದೊಡನೆ ದಢದಢ ಒಳಗೆ ಹೋಗುತ್ತಾರೆ. ಹೀಗೆ ಅಂಗಡಿಯ ಒಳಕ್ಕೆ ಹೋಗುವುದರಲ್ಲೂ ಕೆಲವು ವೈವಿಧ್ಯತೆ ಇದೆ. ಕೆಲವು ಅಂಗಡಿಗಳ ಮುಂದೆ ಸಾಲು ಎಂಬುದು ಇರುವುದಿಲ್ಲ. ಎಲ್ಲರೂ ಅಂಗಡಿಯ ಬಾಗಿಲ ಹೊರಗೆ ನಿಂತಿರುತ್ತಾರೆ. ಬಾಗಿಲು ತೆರೆದೊಡನೆ ನೂಕುನುಗ್ಗಲು. ಒಮ್ಮೆಯಂತೂ ಬಾಗಿಲು ತೆರೆದ ಸೆಕ್ಯುರಿಟಿಯವನ ಮೇಲೆಯೇ ಜನ ನುಗ್ಗಿ ಸ್ಥಳದಲ್ಲೇ ಮೃತನಾಗಿದ್ದ. ಇನ್ನು ಕೆಲವೆಡೆ ಸಾಲುಗಟ್ಟಿ ನಿಲ್ಲುತ್ತಾರೆ. ಇಂಥಾ ಟಿವಿ, ಇಂಥಾ ಲ್ಯಾಪ್‌ಟಾಪ್ ಕಡಿಮೆ ಬೆಳೆಗೆ ಸಿಗುತ್ತದೆ ಎಂದು ಮೊದಲೇ ಹೇಳಲಾಗಿರುತ್ತದೆ. ಬಹುಶ: ಆ ದಿನಕ್ಕೆ ಆ ಅಂಗಡಿಗೆ ಹತ್ತು ಟಿವಿಗಳು ಮತ್ತು ಇಪ್ಪತ್ತು ಲ್ಯಾಪ್‌ಟಾಪ್‌ಗಳ ವ್ಯವಹಾರಕ್ಕೆ ನೀಡಲಾಗಿರುತ್ತದೆ ಎಂದುಕೊಳ್ಳೋಣ. ಸಾಲಿನಲ್ಲಿ ಟಿವಿಗಾಗಿ ನಿಂತಿರುವ ಮೊದಲ ಹತ್ತು ಮಂದಿಗೆ ಕೂಪನ್ ನೀಡಲಾಗುತ್ತದೆ. ಅದರಂತೆಯೇ ಲ್ಯಾಪ್‌ಟಾಪ್ ಬೇಕು ಎಂದಿರುವ ಇಪ್ಪತ್ತು ಮಂದಿಗೆ ಕೂಪನ್ ನೀಡಲಾಗುತ್ತದೆ. ಕೌಂಟರ್‌ಗೆ ಹೋಗಿ ಕೂಪನ್ ತೋರಿಸಿದರೆ ಅವರಿಗೆ ಬೇಕಿರುವ ಈ ಪದಾರ್ಥಗಳು ಸಿಗುತ್ತದೆ. ಇವೆರಡೂ ಕೂಪನ್ ದೊರೆಯದವರು, ಅಂಗಡಿಯೊಳಕ್ಕೆ ಹೋಗಿ ತಮಗೇನು ಬೇಕೋ ಅದನ್ನು ಖರೀದಿಸುತ್ತಾರೆ.
ಕ್ರಿಸ್ಮಸ್ ಹಬ್ಬಕ್ಕೆ, ತಮ್ಮ ಜನಕ್ಕೆ ಉಡುಗೊರೆ ನೀಡುವುದು ಸಂಪ್ರದಾಯ. ಇದಕ್ಕೆಂದೇ ದರ ಕಡಿಮೆಯಿರುವಾಗ ಉಡುಗೊರೆ ತೆಗೆದಿಟ್ಟುಕೊಳ್ಳುವುದು ಒಂದು ಪರಿಪಾಠ. ಈಚೆಗಿನ ದಿನಗಳಲ್ಲಿ ಆನ್‌ಲೈನ್ ಖರೀದಿಯ ಭರಾಟೆ, ವ್ಯಾಪಾರಗಳಲ್ಲಿನ ಪೈಪೋಟಿ, ಕೋವಿಡ್‌ನಿಂದಾಗಿ ವ್ಯಾಪಾರ ಕುಂಠಿತವಾದ ದಿನಗಳು ಎಂಬೆಲ್ಲ ಸಂಕಷ್ಟಗಳು ಎದುರಾಗಿ ಹಬ್ಬದ ಆಚರಣೆಗೆ ಕುಂದು ಬಂದಿರುವುದು ಖೇದನೀಯ. ಶುಕ್ರವಾರದ ವಿಶೇಷ ವ್ಯವಹಾರಕ್ಕೆ ಹಿಂದಿನ ರಾತ್ರಿಯಿಂದಲೇ ಕೆಲಸಗಳು ಮಾಡುವುದು ಸಾಮಾನ್ಯವಾದರೂ, ತಮ್ಮ ವ್ಯವಹಾರ ಹೆಚ್ಚಲಿ ಎಂದು ಥ್ಯಾಂಕ್ಸ್ ಗಿವಿಂಗ್ ಹಬ್ಬದ ದಿನದಂದೂ ವಹಿವಾಟು ಆರಂಭವಾಗುವುದು, ಹಬ್ಬದ ಸಡಗರವನ್ನು ನುಂಗಿ ಹಾಕುತ್ತಿದೆ. ಹಣ ಮಾಡುವ ಉದ್ದೇಶವು ವರ್ಷಾವರಿ ಹಬ್ಬದ ಸಂಭ್ರಮವನ್ನು ಹಾಳು ಮಾಡುತ್ತಿದೆ ಎಂಬ ಗುಲ್ಲು ಏಳುತ್ತಿದೆ. ಹಬ್ಬಗಳನ್ನು ಹಬ್ಬಗಳಾಗಿ ಆಚರಿಸುವ ಹಕ್ಕು ನಮಗಿದೆ ಎಂಬುದು ನಮ್ಮದೂ ಕೂಗಲ್ಲವೇ? ನಮ್ಮಂತೆಯೇ ಎಲ್ಲೆಲ್ಲೂ ಇದೇ ಆಗಿದೆ ಎಂದರೆ ಈ ವಿಚಾರದಲ್ಲಿ ನಾವೆಲ್ಲರೂ ಒಂದೇ ಎನ್ನಬಹುದೇ?
-ಶ್ರೀನಾಥ್ ಭಲ್ಲೆ, ರಿಚ್ಮಂಡ್