Advertisement

UV Fusion: ಬಾಂಧವ್ಯದ ಬಂಧವನ್ನು ಬೆಸೆಯೋಣ…

09:18 PM Sep 17, 2024 | Team Udayavani |

ಅದೊಂದು ಕಾಲವಿತ್ತು. ಸಂಜೆಯಾಗುತ್ತಿದ್ದಂತೆ ಅರಳಿ ಮರದಡಿ ಕೂತು ಹಿರಿಯರ ಮಾತು – ಕಥೆಗಳು ಆರಂಭವಾಗುತ್ತಿದ್ದವು. ಯಾವುದೇ ಟಿವಿ, ಮೊಬೈಲ್‌ಗ‌ಳ ಜಂಜಾಟಗಳಿರಲಿಲ್ಲ. ರಸ್ತೆ ದೀಪಗಳ ಬೆಳಕಲ್ಲಿಯೇ ಮಕ್ಕಳ ಆಟ – ಪಾಠಗಳಾಗುತ್ತಿತ್ತು. ಹೆಂಗಸರು ಮಾತನಾಡಲು ಶುರು ಮಾಡಿದರೆ ಸಾಕು ಊರ ಉಸಾಬರಿ ಎಲ್ಲ ಹೊರ ಬರುತ್ತಿತ್ತು. ಮನೆಯ ಅಂಗಳದಲ್ಲಿ ರಸ್ತೆಯ ಮಧ್ಯದಲ್ಲಿ ಎಲ್ಲೆಂದರಲ್ಲಿ ಹರಟೆ ಹೊಡೆಯುತ್ತ ನಿಂತುಕೊಳ್ಳುತ್ತಿದ್ದರು. ಪತ್ರದ ಮೂಲಕ ಎಷ್ಟೋ ವಿಷಯಗಳು ರವಾನೆಯಾಗುತ್ತಿತ್ತು. ಆ ಪತ್ರಕ್ಕಾಗಿ ಅದರಲ್ಲಿರುವ ವಿಷಯವನ್ನು ತಿಳಿದುಕೊಳ್ಳುವ ಸಲುವಾಗಿ ಹಂಬಲಿಸುವ ಮನಗಳೆಷ್ಟೋ.

Advertisement

ಮನೆಯಿಂದ ಹತ್ತಾರು ಕಿ.ಮೀ. ದೂರದಲ್ಲಿರುವ ಶಾಲೆಗೆಂದು ಹೋಗುವಾಗ ಸ್ನೇಹಿತರೊಂದಿಗೆ ಮಾಡುವ ಚೇಷ್ಟೆ ತಮಾಷೆಗಳು, ಮಾವಿನ ಮರಗಳಿಗೆ ಕಲ್ಲು ಹೊಡೆದು ಶಾಲೆಗೆ ತಡವಾಗಿ ಹೋದರೆ ಶಿಕ್ಷಕರಿಂದ ಬೀಳುತ್ತಿದ್ದ ಏಟುಗಳು ಅದರಿಂದ ಬರುತ್ತಿದ್ದ ಬಾಸುಂಡೆಗಳು ಅಬ್ಬಬ್ಟಾ …ನೋವಿದ್ದರೂ ಕಂಡ ಕನಸುಗಳೇನು ಒಂದೆರಡಲ್ಲ.

ಆದರೆ ಇಂದು ಇದಾವ ಖುಷಿಯು ಮನುಷ್ಯನಿಗಿಲ್ಲ. ಜೀವನದ ಉತ್ಸಾಹವನ್ನು ಮರೆತಂತಿದೆ. ಬಾಂಧವ್ಯದ ಬಂಧಗಳು ಬಿಡಿಬಿಡಿಯಾಗುತ್ತಿದೆ. ಅರೆಕ್ಷಣ ತನ್ನ ಕೈಯಲ್ಲಿ ಮೊಬೈಲ್‌ ಇಲ್ಲದಿದ್ದರೆ ಚಡಪಡಿಸುವವನು ತನ್ನ ಸಂಪೂರ್ಣ ಜೀವನವನ್ನೇ ನೀರಸವಾಗಿ ವ್ಯಯಿಸುತ್ತಿದ್ದಾನೆ. ಬೆಳಗಾದರೆ ಸಾಕು ನೆರಳಿನಂತೆಯೇ ಜೊತೆಯಾಗುವ ಜವಾಬಾœರಿ ಹಾಗೂ ಸಮಸ್ಯೆಗಳ ಬಗ್ಗೆ ಯೋಚಿಸುತ್ತಾ, ದಿನವಿಡೀ ತನ್ನವರ ಖುಷಿಗಾಗಿ ದುಡಿದು ದುಡಿದು ಕೊನೆಯಲ್ಲಿ ಯಾರಿಗಾಗಿ ಈ ಜೀವನ ಎನ್ನುವ ಮನೋಸ್ಥಿತಿಗೆ  ಒಳಗಾಗುತ್ತಿದ್ದಾನೆ. ದುಡ್ಡಿದ್ದರಷ್ಟೇ ಖುಷಿ ಎನ್ನುವ ಭ್ರಮೆಗೆ ಬಲಿಯಾಗುತ್ತಿದಾನೆ.

ಇನ್ನಾದರೂ ಮನುಷ್ಯ ಬದುಕಿನ ನೈಜತೆಯನ್ನು ಅರ್ಥೈಸಿಕೊಳ್ಳಬೇಕಿದೆ. ಬಾಂಧವ್ಯವನ್ನು ಬೆಸೆಯಬೇಕಿದೆ. ಒಂದರ್ಧ ಗಂಟೆ ತಮ್ಮ ಕೈಯಲ್ಲಿರುವ ಫೋನನ್ನು ಮರೆತು ನಮ್ಮವರೊಂದಿಗೆ ಬೆರೆತು ಅವರ ಸುಖ ದುಃಖ ತಿಳಿದು ಒಟ್ಟಾಗಿ ಕೂತು ಹರಟೆ ಹೊಡೆದು ಹಿರಿಯ ಅನುಭವಗಳಿಗೆ ಕಿವಿಯಾಡಿಸುತ್ತಾ, ಮಕ್ಕಳೊಂದಿಗೆ ಮತ್ತೆ ತನ್ನ ಬಾಲ್ಯಾವಸ್ಥೆಯನ್ನು  ಮೆಲುಕು ಹಾಕುತ್ತಾ, ತನ್ನೊಳಗಿರುವ ಮಗುತನವನ್ನು ಹೊರಗೆಸೆದು ನಿಜವಾದ ಬದುಕಿನ ಮೌಲ್ಯವನ್ನು ಅರಿತು ನಮ್ಮವರೊಂದಿಗೆ ಬೆರೆಯಬೇಕಿದೆ.

ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿ, ಇಂದಿನ ಖುಷಿಯ ಕ್ಷಣಗಳನ್ನು ಬಿಟ್ಟು ನಾಳೆಯಲ್ಲಿ ಜೀವಿಸುವ ಯೋಚನೆಯಲ್ಲಿ ತಮ್ಮವರು ಎಂದುಕೊಂಡವರನ್ನು ಮರೆತು ಒಬ್ಬಂಟಿಯಾಗಿ ಸಾಗುತ್ತಿದ್ದಾನೆ. ಇರುವುದೆಲ್ಲವ ಬಿಟ್ಟು ಇರದುದರಡೆಗೆ ಸಾಗುವುದೇ ಜೀವನ ಎಂಬ ಮಾತಿನಂತಾಗಿದೆ ವಾಸ್ತವದ ಮಾನವನ ಸ್ಥಿತಿಗತಿ. ಹೀಗಾಗಿ ಹೇಗೆ ನದಿಗಳು ಸಮುದ್ರಗಳನ್ನ ರಸಿ ಹೋಗಿ ತನ್ನೊಡಲ ಸೇರುವುದೋ ಹಾಗೆ ಮಾನವನು ತನ್ನ ಬೇರನ್ನಾಶ್ರಯಿಸಬೇಕಿದೆ. ಮತ್ತೂಮ್ಮೆ ಭಾವನೆಗಳ ಬಿಗಿಗೊಳಿಸಬೇಕಿದೆ. ಹಿಂದಿನ ದಿನಗಳ ಮರಳಿ ಪಡೆಯಬೇಕಿದೆ. ಜೀವನ ಎಂದರೆ ಬರಿ ಆ ಸಮಸ್ಯೆಗಳೇ ತುಂಬಿದ ಸುಳಿಯಲ್ಲ ಅದು ನಂಬಿಕೆ, ಪ್ರೀತಿ, ವಿಶ್ವಾಸ, ಖುಷಿ ತುಂಬಿದ ಪರಿಪೂರ್ಣ ಮಡಿಲು.

Advertisement

-ಉಲ್ಲೇಖ

ಎಸ್‌ಡಿಎಂ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next