ಕೊಣಾಜೆ: ಪ್ರತಿಯೊಂದು ಗ್ರಾಮಕ್ಕೂ ಪೊಲೀಸರನ್ನು ನಿಯೋಜಿ ಸುವ ಮೂಲಕ ಹಳ್ಳಿಗೊಬ್ಬ ಪೊಲೀಸ್ ಯೋಜನೆಯಿಂದ ಪ್ರತಿ ಗ್ರಾಮದಲ್ಲೂ ಶಾಂತಿ, ಸುವ್ಯವಸ್ಥೆ, ಸೌಹಾರ್ದ ವಾತವಾರಣ ನಿರ್ಮಿಸುವಲ್ಲಿ ಸಹಕಾರಿ ಯಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಿರ್ವಹಿಸಲಿದೆ ಎಂದು ಕೊಣಾಜೆ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಸುಕುಮಾರ್ ಅಭಿಪ್ರಾಯಪಟ್ಟರು.
ಅವರು ಪಾವೂರು ಗ್ರಾ.ಪಂ. ಸಭಾಂಗಣದಲ್ಲಿ “ಜನಸ್ನೇಹಿ ಪೊಲೀಸ್ ಬೀಟ್ಸ್’ ಯೋಜನೆಯಡಿ ಶನಿವಾರ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪೊಲೀಸ್ ಮತ್ತು ಗ್ರಾಮಸ್ಥರ ನಡುವೆ ಸಂಪರ್ಕ ಉದ್ದೇಶದಿಂದ ಜನಸ್ನೇಹಿ ಪೊಲೀಸ್ ಬೀಟ್ಸ್ ಯೋಜನೆಯಡಿ ಆರಂಭದಲ್ಲಿ ಗ್ರಾಮಕ್ಕೆ 50 ಹಳ್ಳಿ ಪೊಲೀಸರನ್ನು ನಿಯೋಜಿಸಲು ನಿರ್ಧರಿಸಲಾಗಿತ್ತು, ಆದರೆ ಜನಸಂಖ್ಯೆ, ವಾರ್ಡ್‌ಗಳ ಆಧಾರದಲ್ಲಿ 150 ಮಂದಿಯನ್ನು ನಿಯೋಜಿಸಲು ನಿರ್ಧರಿ ಸಲಾಗಿದೆ. ಗ್ರಾಮಸ್ಥರು ಸಹಕಾರ ನೀಡಿದಾಗ ಸೌಹಾರ್ದ ವಾತಾವರಣ ನಿರ್ಮಾಣ ಸಾಧ್ಯ ಎಂದರು.
ಪ್ರದೇಶದಲ್ಲಿ ಯಾವುದೇ ಸಮಸ್ಯೆ ಎದುರಾದರೆ ಸಂಬಂಧಪಟ್ಟ ನಿಯೋಜಿತ ಪೊಲೀಸರಿಗೆ ಕರೆ ಮಾಡಿದರೆ ಅವರು 15 ನಿಮಿಷದಲ್ಲೇ ಸ್ಥಳಕ್ಕೆ ಆಗಮಿತ್ತಾರೆ. ಇದು ಅಸಾಧ್ಯವಾದಲ್ಲಿ ಮೇಲಧಿಕಾರಿಗಳೇ ಸ್ಥಳಕ್ಕೆ ಆಗಮಿಸಿ ಪರಿಹಾರ ಕಲ್ಪಿಸುತ್ತಾರೆ ಎಂದು ತಿಳಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ಫಿರೋಜ್ ಮಾತನಾಡಿ, ಹಳ್ಳಿ ಪೊಲೀಸ್ ವ್ಯವಸ್ಥೆಯಡಿ ನಿಯೋಜನೆ ಗೊಂಡವರಿಗೆ ಇಲಾಖೆಯಿಂದ ಸಮವಸ್ತ್ರ ಹಾಗೂ ವೇತನ ನೀಡದಿದ್ದರೂ ಪೊಲೀಸರಿಗೆ ಸಿಗುವ ಗೌರವ ಸಿಗಲಿದೆ. ನಮ್ಮ ಜವಾಬ್ದಾರಿ ನಿಭಾಯಿಸಿದಲ್ಲಿ ಪೊಲೀಸರ ಅಗತ್ಯವೇ ಇರದು. ಈ ನಿಟ್ಟಿನಲ್ಲಿ ಸಮರ್ಥರನ್ನೇ ಗುರುತಿಸಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ಮಾತನಾಡಿ, ತಡರಾತ್ರಿ ಹೊರಗಿನವರ ವಾಹನ ತಿರುಗಾಡುತ್ತಿದ್ದು ಅದನ್ನು ಪ್ರಶ್ನಿಸುವ ಹಕ್ಕು ನಮಗಿಲ್ಲದಿದ್ದರೆ ಇಲಾಖೆ ಕ್ರಮ ಕೈಗೊಳ್ಳಬೇಕು. ಹಿಂದೊಮ್ಮೆ ಇದೇ ರೀತಿ ಸಭೆ ನಡೆಸಲಾಗಿದ್ದರೂ ಒಂದು ಸಭೆ ಬಳಿಕ ಯೋಜನೆ ಸ್ಥಗಿತಗೊಂಡಿದ್ದು ಈ ಬಾರಿ ಹಾಗಾಗಬಾರದು. ಪೊಲೀಸರಿಗೆ ನೀಡುವ ಮಾಹಿತಿ ಆರೋಪಿಗಳಿಗೆ ಬಿಟ್ಟು ಕೊಡಬಾರದು. ನಿಗಡಿತ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸಬೇಕು. ಬಸ್ ತಂಗುದಾಣದಲ್ಲಿ ಯುವಕರು ತಂಗದಂತೆ ನೋಡಿಕೊಳ್ಳಬೇಕು. ಬಸ್ಸುಗಳ ಗಾಜು ಒಡೆದು ಪ್ರಯಾಣಿಕರಿಗೆ ತೊಂದರೆ ಕೊಟ್ಟ ಆರೋಪಿಗಳನ್ನು ತತ್‌ಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.
ಪಂಚಾಯತ್ ಸದಸ್ಯ ಎಂ.ಪಿ.ಹಸನ್, ಮಾಜಿ ಸದಸ್ಯ ನಾರ್ಬಟ್ ಡಿಸೋಜ, ಗ್ರಾಮಸ್ಥರಾದ ಅಲ್ತಾಫ್ ಮಲಾರ್, ಅಬ್ದುಲ್ ಕಬೀರ್ ಮಾತನಾಡಿದರು. ಉಪಾಧ್ಯಕ್ಷೆ ಲೀಲಾವತಿ, ಎಎಸ್‌ಐ ಸಂಜೀವ ಹರೇಕಳ, ಪೊಲೀಸ್ ಸಿಬಂದಿಗಳಾದ ಶಿವಕುಮಾರ್ ರಾಥೋಡ್, ಶಿವಪ್ರಸಾದ್, ಮಂಜುನಾಥ ಮೊದಲಾದವರು ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯ ವಿವೇಕ್ ರೈ ಕಾರ್ಯಕ್ರಮ ನಿರೂಪಿಸಿದರು.