Advertisement

ಬೇಸಗೆ ಬದಿಗಿರಲಿ, ಮಳೆಗಾಲ ಎದುರಿಸಲು ಸಿದ್ಧವಾಗೋಣ

07:05 AM Feb 10, 2018 | |

ನಗರವಾಸಿಗಳು ಬೇಸಗೆಗೆ ಹೆದರುವುದಿಲ್ಲ. ಆದರೆ ಮಳೆಗಾಲಕ್ಕೆ ಕಂಗಾಲಾಗಿ ಹೋಗುತ್ತಾರೆ. ಒಂದು ಮಳೆ ಸುರಿದರೆ ಸಾಕು, ದಿಕ್ಕೇ ತೋಚದೆ ನಿಂತುಬಿಡುತ್ತಾರೆ. ಎಷ್ಟು ವಿಚಿತ್ರವಾದ ಸ್ಥಿತಿ.

Advertisement

ಮತ್ತೆ ಮಳೆಗಾಲ ಬರುತ್ತಲಿದೆ. ಇಡೀ ನಗರವೇ ಸಿದ್ಧವಾಗಬೇಕಿದೆ !
ಈ ಮಾತೇ ವಿಚಿತ್ರವೆನಿಸಬಹುದು. ಇನ್ನೂ ಫೆಬ್ರವರಿ ತಿಂಗಳು. ಮಾರ್ಚ್‌ ಮುಗಿದು ಬಿರು ಬೇಸಗೆಯ ಮೂರು ತಿಂಗಳು ಕಳೆದ ಮೇಲೆ ಮಳೆಗಾಲದ ಹಾಡು ಆರಂಭವಾಗುವುದು. ಅದು ಏನಿದ್ದರೂ ಜೂನ್‌ ಆಸುಪಾಸು. ಅದಕ್ಕಿಂತ ಮೊದಲು ಬಿದ್ದರೆ ಮೂರು ಹನಿ ಬೀಳಬಹುದೇ ಹೊರತು ಮೂರು ಸಾವಿರ ಹನಿ ಬೀಳುವುದಂತೂ ಸಾಧ್ಯವಿಲ್ಲದ ಮಾತು. ಏಪ್ರಿಲ್‌ ಸುಮಾರಿನಲ್ಲಿ ಎಲ್ಲೋ ಒಂದು ದಿನದ ಸಂಜೆ ಆಲಿಕಲ್ಲಿನ ಮಳೆ ಸುರಿಯುವುದು ಬಿಟ್ಟರೆ ಜೋರಾಗಿ ಇಡೀ ಭೂಮಿ ತಣ್ಣಗಾಗುವ ಹಾಗೆ ಮಳೆ ಬಿದ್ದದ್ದು ಕಡಿಮೆ. ಹಾಗಾಗಿ ಬೇಸಗೆಗೆ ತಯಾರಾಗುವ ಮೊದಲು ಮಳೆಗಾಲವನ್ನೇಕೆ ನೆನಪು ಮಾಡಿಕೊಳ್ಳಬೇಕು?

ಇಂಥದೊಂದು ಪ್ರಶ್ನೆಗೆ ಬೇಕಾದಷ್ಟು ಉತ್ತರವಿದೆ. ನಮ್ಮ ನಗರಗಳಲ್ಲಿ ಜನರನ್ನು ಕಾಡುವುದು ಬೇಸಗೆಯ ಬಿಸಿಲಲ್ಲ; ಬದಲಾಗಿ ಮಳೆಗಾಲದ ಮಳೆ. ಯಾವುದೇ ದೊಡ್ಡ ನಗರದ ಜನರಲ್ಲಿ ಹೋಗಿ ಮಳೆಗಾಲದ ಬಗ್ಗೆ ಕೇಳಿ. ಬಹುತೇಕ ಮಂದಿ ಯಾಕಾದರೂ ಮಳೆಗಾಲ ಬರುತ್ತಪ್ಪಾ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಇದರ ಅರ್ಥ ಅವರೆಲ್ಲಾ ಮಳೆಯನ್ನು ದ್ವೇಷಿಸುತ್ತಿಲ್ಲ. ಅವರಿಗೂ ಇಳೆಯನ್ನು ತಂಪು ಮಾಡುವ ಮಳೆ ಬೇಕು. ಆದರೆ ನಗರದಲ್ಲಿದ್ದುಕೊಂಡು ಮಳೆಗಾಲದ ಖುಷಿಯನ್ನು ಅನುಭವಿಸಲು ನಿಜಕ್ಕೂ ಸಾಧ್ಯವಾಗುತ್ತಿಲ್ಲ.

ನಗರದ್ದೇ ಬೇರೆ
ಮಳೆ ಎಲ್ಲ ಕವಿಗಳನ್ನೂ ಖುಷಿಗೊಳಿಸಿರುವಂಥದ್ದು, ಪ್ರೇರಣೆ ಯಾಗಿರುವಂಥದ್ದು, ಉತ್ಸಾಹ ತುಂಬಿರುವಂಥದ್ದು. ಗ್ರಾಮೀಣ ಭಾರತದಲ್ಲಿ ಇಂದಿಗೂ ಮಳೆಗಾಲ ಬಂದರೆ ಖುಷಿಪಟ್ಟು ಸಂಭ್ರಮಿಸುತ್ತಾರೆ. ಹಿಂದಿನಂತೆ ಹಪ್ಪಳ-ಸಂಡಿಗೆ ಮಾಡುವುದು ಕಡಿಮೆಯಾಗಿದ್ದರೂ ಮಳೆ ಯಾಕಾದರೂ ಬರುತ್ತದಪ್ಪಾ ಎಂದು ನೊಂದು ನುಡಿಯುವವರು ಕಡಿಮೆ. ಆದರೆ ನಗರದಲ್ಲಿ ಹಾಗಿಲ್ಲ. ಒಂದು ಮಳೆ ಬಂದರೆ ನಗರವೆಲ್ಲ ನೀರಿನಲ್ಲಿ ಮುಳುಗುತ್ತದೆ. ಟ್ರಾಫಿಕ್‌ ಜಾಮ್‌ನಿಂದಾಗಿ ಕೆಲಸ ಮುಗಿಸಿ ಮನೆಗೆ ಬರುವವರೆಲ್ಲ ರಸ್ತೆಯಲ್ಲೇ, ತಾವಿರುವ ವಾಹನದಲ್ಲೇ ಮಲಗಿಕೊಳ್ಳುವ ಸ್ಥಿತಿ. ಯಾರೂ ಎಲ್ಲಿಗೂ ಹೋಗದ ಸ್ಥಿತಿ, ಎಷ್ಟೋ ಕಡೆ ಸ್ವಲ್ಪ ತಗ್ಗಾದ ಪ್ರದೇಶದಲ್ಲಿ ನೆಲಮಹಡಿಯಲ್ಲಿರುವ ಮನೆಗಳಿಗೆ ನೀರು ನುಗ್ಗಿರುತ್ತದೆ. ಮೇಲ್ಮಹಡಿ ಯಲ್ಲಿರುವವರು ಆತಂಕದಲ್ಲಿ ಹೊರಗೆ ಬಾರದೇ ಬೇರೆಯವರ ಸಹಾಯಕ್ಕೆ ಹಾತೊರೆಯುತ್ತಿರುತ್ತಾರೆ. ಗ್ರಾಮೀಣರಿಗೆ ವರವೆನಿಸುವ ಮಳೆಯೇ ನಗರದವರಿಗೆ ಶಾಪವಾಗಿ ತೋರುತ್ತದೆ. ಈ ಹಿನ್ನೆಲೆಯಲ್ಲೇ ಹೇಳಿದ್ದು ನಗರಗಳಲ್ಲೀಗ ಬೇಸಗೆಗಿಂತಲೂ ಮಳೆಗಾಲಕ್ಕೇ ಸಿದ್ಧವಾಗಬೇಕು ಎಂದು. ಬೇಸಗೆಯ ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಹಲವಾರು ಉಪಾಯಗಳಿವೆ. ಆ ಹೊತ್ತಿಗೆ ಹವಾನಿಯಂತ್ರಿತ ಕೊಠಡಿಯಿಂದ ಹೊರಗೆ ಬಾರದಿದ್ದರೆ ಆಯಿತು. ಇನ್ನೆಲ್ಲೋ ತಂಪಾದ ಜಾಗದಲ್ಲಿ ಕುಳಿತು ಕಾಲ ಕಳೆದರೆ ಆಗಬಹುದು.  ಉಳಿದಂತೆ ಹೆಚ್ಚೆಂದರೆ ಕೆಲವು ಪ್ರದೇಶಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಬಹುದು. ಅದಕ್ಕೆ ನೀರನ್ನು ರೇಷನ್‌ ಮಾಡುವುದು, ಬೋರ್‌ವೆಲ್‌ಗ‌ಳನ್ನು ಬಳಸುವುದು, ಹತ್ತಿರದ ಗ್ರಾಮೀಣ ಪ್ರದೇಶಗಳಿಂದ ಟ್ಯಾಂಕರ್‌ಗಳಲ್ಲಿ ನೀರು ಪೂರೈಸುವುದು- ಇಂಥ ಹಲವು ಉಪಕ್ರಮಗಳಿಂದ ಬೇಸಗೆ ಮುಗಿಸಿಬಿಡಬಹುದು. ಆದರೆ ಮಳೆಗಾಲವನ್ನು ಹೀಗೆ ಕಳೆದು ಬಿಡಲು ಸಾಧ್ಯವೇ? ಒಮ್ಮೆ ಯೋಚಿಸಿ. ಖಂಡಿತಾ ಸಾಧ್ಯವಿಲ್ಲ.

ಬೆಂಗಳೂರಿನ ಕಥೆ
ಇದು ಬಹಳ ಹಳೆಯದೇನೂ ಅಲ್ಲ. ಕಳೆದ ಸೆಪ್ಟೆಂಬರ್‌ ತಿಂಗಳು, ಅಂದರೆ ಸರಿ ಸುಮಾರು ಆರು ತಿಂಗಳ ಹಿಂದೆ. ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಮಳೆ ಸುರಿಯತೊಡಗಿತು. ಒಬ್ಬ ಸೆಕ್ಯುರಿಟಿ ಗಾರ್ಡ್‌ ಮಳೆಗೆ ಕೊಚ್ಚಿ ಹೋಗಿದ್ದ. ಭೂಮಿಗೆ ಬಿದ್ದ ಮಳೆ ನೀರು ಹರಿದು ಹೋಗಲಾಗದೇ ಸಿಕ್ಕ ಸಿಕ್ಕ ಕಡೆಗಳೆಲ್ಲ ನಿಂತುಕೊಂಡಿತು. ಬಹಳಷ್ಟು ಪ್ರದೇಶಗಳಲ್ಲಿ ಮನೆಗಳು, ಅಪಾರ್ಟ್‌ಮೆಂಟ್‌ಗಳು ನೀರಿನಲ್ಲಿ ಮುಳುಗಿದವು, ರಸ್ತೆಗಳೆಲ್ಲ ಜಾಮ್‌ ಆಗಿ ಅದರೊಳಗಿದ್ದವರೆಲ್ಲ ತ್ರಿಶಂಕುಗಳಾದರು. ಕೇವಲ ಹತ್ತು ಕಿ.ಮೀ. ಕ್ರಮಿಸಬೇಕಾದರೆ ಕನಿಷ್ಠ ಎರಡು-ಮೂರು ಗಂಟೆ ತಗುಲುವ ಸ್ಥಿತಿ. ಕೆಲವರಂತೂ ತಮ್ಮ ಮನೆಗಳಿಗೆ ಹೋಗಲಾಗದೇ ಹತ್ತಿರದ ಸರ್ವೀಸ್‌ ಅಪಾರ್ಟ್‌ಮೆಂಟ್‌ ಬಾಡಿಗೆ ಪಡೆದು ಇದ್ದ ಪ್ರಸಂಗಗಳೂ ನಡೆದಿದ್ದವೆನ್ನಿ. ಸಹಾಯಕ್ಕೆ ಬರಬೇಕಿದ್ದ ಸ್ಥಳೀಯ ಆಡಳಿತ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ  “ಹೀಗಾದ್ರೆ ನಾವೇನು ಮಾಡೋದು?’ ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿತು. ಒಂದೇ ದಿನಕ್ಕೆ ಸುಮಾರು 65 ಮಿ.ಮೀ. ಮಳೆ ಸುರಿದಿತ್ತು ಅಷ್ಟೆ. 

Advertisement

ಇನ್ನು ಮುಂಬಯಿ ಕಥೆ
ಆಗಸ್ಟ್‌ 29, ಮುಂಬಯಿ. ಇಡೀ ನಗರವೇ ಸ್ತಬ್ಧಗೊಂಡಿದ್ದು ನಿರಂತರವಾಗಿ ಸುರಿದ ಮಳೆಯಿಂದಾಗಿ. ನಗರದ ಜೀವನಾಡಿಯಾಗಿದ್ದ ಲೋಕಲ್‌ ರೈಲು ಸೇವೆ ಸ್ಥಗಿತಗೊಂಡಿತು. ಶಾಲೆಗಳಿಗೆ ರಜೆ ಘೋಷಿಸಲಾಯಿತು. ನಗರದ ಒಂದು ಹುಲ್ಲುಕಡ್ಡಿಯೂ ಅತ್ತಿತ್ತ ಚಲಿಸದಂತಾಯಿತು. ಒಟ್ಟೂ ಜನರಿಗೆ ಏನೋ ತೋಚದೇ ಅಸಹಾಯಕರಾಗಿ ಕುಳಿತರು. ಸ್ಥಳೀಯ ಆಡಳಿತವೂ ಮಾಡಿದ್ದು ಅದನ್ನೇ. ಆ ದಿನದ ನೆರೆ ಹೇಗಿತ್ತು ಎಂದರೆ, 2005ರ ಜುಲೈ 6 ರಂದು ನಿರ್ಮಾಣವಾದ ಮಹಾ ಪ್ರಳಯದ ಪರಿಸ್ಥಿತಿಯನ್ನು ನೆನಪಿಸುತ್ತಿ¤ತ್ತು. ಅಂದರೆ ಅಂದು 24 ಗಂಟೆಗಳಲ್ಲಿ ಸುಮಾರು 944 ಮಿ. ಮೀಟರ್‌ ಮಳೆ ಸುರಿದಿತ್ತು. ಅದೇ ಸಂದರ್ಭದಲ್ಲಿ ಚಂಡೀಗಢದಲ್ಲೂ ಬಹುತೇಕ ಇದೇ ಸ್ಥಿತಿ ನಿರ್ಮಾಣವಾಗಿತ್ತು. 

ದಿಲ್ಲಿ ಕಥೆಯನ್ನು ನೀವು ಹಿಂದೆಯೇ ಕೇಳಿದ್ದೀರಿ. ರಸ್ತೆಯಲ್ಲಿ ಹೋಗುತ್ತಿದ್ದ ಬಸ್ಸಿನಿಂದ ಇಳಿಯಲಾಗದಷ್ಟು ನೀರು ಆವರಿಸಿಕೊಂಡು, ಪಕ್ಕದ ಕಾಂಪೌಂಡ್‌ಗೆ ಏಣಿ ಇಟ್ಟು ಜನರನ್ನು ಇಳಿಸಿದ ಚಿತ್ರಗಳು ನಾವೇ ಸೃಷ್ಟಿಸಿಕೊಂಡ ಭೀಕರತೆಯನ್ನು ಪ್ರದರ್ಶಿಸಿತ್ತು. ಅಸ್ಸಾಂ ಸಹಿತ ಈಶಾನ್ಯ ರಾಜ್ಯಗಳಲ್ಲಿ ಮಳೆ ಸುರಿದ ಕೂಡಲೇ ನೆರೆ ಆವರಿಸಿಕೊಂಡ ಸಂದರ್ಭದಲ್ಲಿ ಬಾಳೆಗಿಡಗಳ ತೆಪ್ಪದ ಮಾದರಿ ರಚಿಸಿಕೊಂಡು ಅದರ ಮೇಲೆ ಸುರಕ್ಷಿತ ಸ್ಥಳವನ್ನು ತಲುಪುವ ಚಿತ್ರ ಸಾಮಾನ್ಯವಾಗಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು. ಅಂಥದ್ದೇ ಸ್ಥಿತಿ ಅಭಿವೃದ್ಧಿಗೊಂಡ ನಗರಗಳು, ರಾಜಧಾನಿಯಂಥ ಕಡೆಯೂ ಘಟಿಸಿದ್ದು ಸುಳ್ಳಲ್ಲ.

ಏನು ಮಾಡಬೇಕು?
ನಾವು ಇತಿಹಾಸದಿಂದ ಕಲಿತ ಪಾಠ ಕಡಿಮೆ. ಅದಕ್ಕೆ ಸ್ಪಷ್ಟ ಉದಾಹರಣೆಯೆಂದರೆ, 2005ರಲ್ಲಿ ಬಿದ್ದ ಮಳೆಯ ಪರಿಸ್ಥಿತಿ ಗೊತ್ತಿದ್ದೂ ಮುಂಬಯಿ ಮಹಾನಗರ ಪಾಲಿಕೆಯಾಗಲಿ, ಮಹಾರಾಷ್ಟ್ರ ಸರಕಾರವಾಗಲಿ ಅಂಥದೊಂದು ಭೀಕರ ಸ್ಥಿತಿ ನಿಭಾವಣೆಗೆ ಯಾವ ಸಿದ್ಧತೆಯನ್ನೂ ಮಾಡಿಕೊಳ್ಳಲಿಲ್ಲ, ಉಪಕ್ರಮವನ್ನೂ ಕೈಗೊಳ್ಳಲಿಲ್ಲ. ಆದ್ದರಿಂದ 2017ರ ಆಗಸ್ಟ್‌ನಲ್ಲಿ ಮತ್ತೆ ಅಂಥ ಸ್ಥಿತಿ ರೂಪುಗೊಂಡಾಗ ಕೈ ಕಟ್ಟಿ ಕುಳಿತುಕೊಳ್ಳುವಂತಾಯಿತು. 

ಬೆಂಗಳೂರಿನಲ್ಲಿ ಮತ್ತೂಂದು ಕಳೆದ ವರ್ಷದ ದುರಂತ ಘಟಿಸ ಬಾರದು ಎಂದರೆ ಆರು ತಿಂಗಳ ಮೊದಲೇ ಸಿದ್ಧವಾಗುವುದು ಒಳಿತು. ನೀರು ಹರಿದು ಹೋಗಬೇಕಾದ ಕಾಲುವೆ ಪ್ರದೇಶಗಳ ಒತ್ತುವರಿ ತೆರವುಗೊಳಿಸಬೇಕು. ನೀರು ಸಂಗ್ರಹವಾಗುವಂಥ ಕೆರೆಗಳ ಹೂಳು ತೆಗೆದು ಸಿದ್ಧಗೊಳಿಸಿಕೊಳ್ಳಬೇಕು. 

ನಗರದಲ್ಲಿ ಎಲ್ಲೂ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಚರಂಡಿಗಳಿಗೆ ಹರಿದು ಹೋಗುವ ಮಳೆ ನೀರಿನ ಪ್ರಮಾಣ ಕುಗ್ಗಿಸುವುದಕ್ಕೆ ಏನು ಮಾಡಬೇಕೆಂದು ತಿಳಿದು ಸುಲಭ ಉಪಾಯಗಳನ್ನು ಕೈಗೊಳ್ಳಬೇಕು. ಉಳಿದ ಶಾಶ್ವತ ಪರಿಹಾರಗಳನ್ನು ಮತ್ತೆ ಆಲೋಚಿಸೋಣ. ಎಲ್ಲೆಲ್ಲಿ ತಗ್ಗು ಪ್ರದೇಶಗಳಿವೆಯೋ ಅಲ್ಲಿ ಅಪಾಯದ ಸಂದರ್ಭದಲ್ಲಿ ಸ್ಥಳಾಂತರಗೊಳಿಸಲು ಅನುಕೂಲ ಆಗುವ ಕ್ರಮಗಳನ್ನು ಮೊದಲೇ ರೂಪಿಸಿಟ್ಟುಕೊಳ್ಳಬೇಕು. ಇಷ್ಟೆಲ್ಲಾ ಸಾಧ್ಯವಾದರೆ ಸಮಸ್ಯೆಯ ಭೀಕರತೆಯನ್ನು ತಪ್ಪಿಸಬಹುದು.

ಸ್ಥಳೀಯ ಆಡಳಿತಗಳ ಇಂಥ ಉಪಕ್ರಮಗಳಿಂದ ಬರೀ ಆಗುವ ನಷ್ಟ ತಪ್ಪುವುದಿಲ್ಲ; ಜನರಲ್ಲಿ ವಿಶ್ವಾಸ ಮೂಡಿಸುತ್ತದೆ. ನಾವು ನಂಬಿರುವ ನಗರಗಳು ನಮ್ಮನ್ನು ಮುಳುಗಿಸುವುದಿಲ್ಲ ಎಂಬ ಧೈರ್ಯವನ್ನು ತುಂಬಬಲ್ಲದು. ಅಷ್ಟಾದರೆ ನಗರವಾಸಿಗಳಿಗೆ ದೀರ್ಘಾಯುಷ್ಯದ ವರ ಸಿಕ್ಕಿದಂತೆ.

ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next