ರಾಯಚೂರು: ಕಸ ವಿಲೇವಾರಿ ತರಬೇತಿ ಪಡೆದ ಮಹಿಳೆಯರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲ ಗ್ರಾಮಗಳಿಂದಲೂ ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ಮೂಲಕ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ ತಿಳಿಸಿದರು.
ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ವಾಹಿನಿ ಅಭಿವೃದ್ಧಿ ಸಂಸ್ಥೆ ಹೋಸಪೇಟೆ ಸಹಯೋಗದಲ್ಲಿ ಗುರುವಾರ ಸ್ವ-ಸಹಾಯ ಸಂಘದ ಸದಸ್ಯರಿಗೆ ಘನ ತ್ಯಾಜ್ಯ ನಿರ್ವಹಣೆ ಕುರಿತು ತರಬೇತಿಯ ಸಮರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಗ್ರಾಪಂಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು ಮಾಡಿ, ಮಹಿಳಾ ಒಕ್ಕೂಟಗಳ ಗುಂಪಿನ ಸದಸ್ಯರಿಂದಲೇ ನಡೆಸಲು ನಿರ್ಧರಿಸಲಾಗಿದೆ. ಮನೆ-ಮನೆಗಳಿಂದ ಕಸವನ್ನು ಸಂಗ್ರಹಿಸಿ, ವಿಂಗಡಿಸಿ, ಗೊಬ್ಬರ ಉತ್ಪಾದನೆ ಮಾಡಿ, ಮಾರಾಟ ಮಾಡುವವರೆಗೆ ಎಲ್ಲ ಕೆಲಸಗಳನ್ನು ಮಹಿಳೆಯರೇ ನಿರ್ವಹಣೆ ಮಾಡಲಿದ್ದಾರೆ ಎಂದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ನಿಂದ ಗ್ರಾಪಂ ಮಟ್ಟದಲ್ಲಿ ಸ್ವತ್ಛ ಸಂಕೀರ್ಣ ಘಟಕದ ನಿರ್ವಹಣೆ ವಹಿಸಿಕೊಂಡಿದ್ದು, ಹೊರಗುತ್ತಿಗೆ ಆಧಾರದ ಮೇಲೆ ಅದಕ್ಕೆ ಸಿಬ್ಬಂದಿ ನೇಮಕ, ತರಬೇತಿ, ವೇತನ ನೀಡುತ್ತದೆ. ತರಬೇತಿ ಪಡೆದ ಮಹಿಳೆಯರು ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಿಂದಲೂ ಕಸ ಸಂಗ್ರಹಿಸಿ ವಿಲೇವಾರಿ ಮಾಡಬೇಕು. ತರಬೇತಿ ಪಡೆದ ಮಹಿಳೆಯರಿಗೆ 6 ಸಾವಿರ ರೂ. ಗೌರವ ಧನ ನೀಡಲಾಗುತ್ತದೆ. ಕಸದಿಂದ ಬಂದ ಆದಾಯವನ್ನು ಸಿಬ್ಬಂದಿ, ವಾಹನ ವೆಚ್ಚಕ್ಕೆ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಪಂ ಯೋಜನಾ ನಿರ್ದೇಶಕ ಮಡೋಳಪ್ಪ ಪಿ.ಎಸ್. ಮಾತನಾಡಿ, ಮಹಿಳೆಯರ ಸಬಲೀಕರಣ ನಿಟ್ಟಿನಲ್ಲಿ ಈ ತರಬೇತಿ ನೀಡಲಾಗಿದೆ. ಈವರೆಗೂ 5 ತಂಡಗಳ 57 ಗ್ರಾಪಂ ಮಹಿಳೆಯರಿಗೆ ತರಬೇತಿ ನೀಡಲಾಗಿದೆ ಎಂದರು.
ಸ್ವಚ್ಛ ಭಾರತ್ ಯೋಜನೆ ಅಡಿ ತರಬೇತಿ ಪಡೆದ ಮಹಿಳೆಯರು ಕೆಲಸ ಮಾಡುವ ವೇಳೆಯಲ್ಲಿ ಸುರಕ್ಷತಾ ಕಿಟ್‌ಗಳನ್ನು ನೀಡಲಾಗುತ್ತಿದೆ. ಆಯಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಂಜೀವಿನಿ ಶೆಡ್‌ಗಳನ್ನು ನಿರ್ಮಿಸಲಾಗುತ್ತದೆ. ಮಹಿಳೆಯರು ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳಬೇಕು ಎಂದರು.
ತರಬೇತಿಯಲ್ಲಿ ಜಿಲ್ಲೆಯ 12 ಗ್ರಾಪಂಗಳಿಂದ 34 ಮಹಿಳೆಯರು ಭಾಗವಹಿಸಿದ್ದರು. ತರಬೇತಿ ಪಡೆದ ಮಹಿಳೆಯರಿಗೆ ಸಿಇಒ ಹಾಗೂ ಪಿಡಿರವರು ಪ್ರಮಾಣ ಪತ್ರವನ್ನು ವಿತರಿಸಿದರು. ಎನ್.ಆರ್. ಎಲ್.ಎಮ್‌ನ ವ್ಯವಸ್ಥಾಪಕ ವಿಜಯ ಕುಮಾರ, ಎಂಜಿಐಆರ್‌ಡಿ ಅಕಾರಿ ಗಣೇಶ್, ಸೇರಿದಂತೆ ಕೆವಿಕೆಯ ಅಧಿಕಾರಿಗಳು, ಮಹಿಳೆಯರು ಉಪಸ್ಥಿತರಿದ್ದರು.