Advertisement
ನಮ್ಮಲ್ಲಿ ಕೊರೊನಾದ ಎರಡನೇ ಅಲೆಯ ತೀವ್ರತೆಯು ಕಡಿಮೆ ಯಾಗುತ್ತಿದೆ. ಜುಲೈ ತಿಂಗಳ ಕೊನೆಗೆ ಇದರ ಪ್ರಭಾವ ನಮ್ಮ ದೇಶದಲ್ಲಿ ಕೊನೆಗೊಳ್ಳಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಾದ 6 ರಿಂದ 8 ತಿಂಗಳ ಬಳಿಕ ಮೂರನೇ ಅಲೆ ಕಾಣಿಸಿಕೊಳ್ಳಬಹುದೆಂದು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲು ಸಲಹೆ ನೀಡಲಾಗಿದೆ. ಈ ಎರಡನೇ ಅಲೆಯು ನಮಗೆ ಕಲಿಸಿರುವ ಪಾಠಗಳನ್ನು ಎಂದಿಗೂ ಮರೆಯಬಾರದು.
Related Articles
Advertisement
ಕೊರೊನಾ ವೈರಾಣುವಿನ ವಿರುದ್ಧ ಈಗ ಲಸಿಕೆ ಲಭ್ಯವಿದೆ. ವಿದೇಶಗಳಲ್ಲಿ ಕೊರೊನಾದ ಮೂರನೇ ಅಲೆಯು ಶೀಘ್ರವಾಗಿ ಕೊನೆಗೊಳ್ಳಲು ಲಸಿಕೆಯ ಬಳಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ನಮ್ಮಲ್ಲೂ ಕೊರೊನಾದ ಮೊದಲನೇ ಅಲೆಯ ಅನಂತರ ಲಸಿಕೆ ಪಡೆದವರಲ್ಲಿ ಹೆಚ್ಚಿನವರಿಗೆ ಎರಡನೇ ಅಲೆಯಲ್ಲಿ ಹಾನಿಯಾಗಲಿಲ್ಲ. ಕರ್ನಾಟಕದಲ್ಲಿ ಕಳೆದ ಡಿಸೆಂಬರ್ ಕೊನೆಗೆ 12,585 ಮಂದಿ ಕೊರೊನಾದಿಂದ ಅಸುನೀಗಿದ್ದು ಅವರಲ್ಲಿ 329 ಮಂದಿ ವೈದ್ಯರಿದ್ದರು. ಎರಡನೇ ಅಲೆಯ ಪ್ರಭಾವ ಆರಂಭವಾಗುವ ಮೊದಲೇ ವೈದ್ಯರಿಗೆ ಕೊರೊನಾ ಲಸಿಕೆ ಪಡೆಯಲು ಸಾಧ್ಯವಾಯಿತು. ಎರಡನೇ ಅಲೆಯಲ್ಲಿ ಕರ್ನಾಟಕದಲ್ಲಿ 17,946 ಮಂದಿ ಇಂದಿನವರೆಗೆ ಮೃತಪಟ್ಟಿದ್ದು ಇವರಲ್ಲಿ ವೈದ್ಯರು 8 ಮಂದಿ ಮಾತ್ರ. ಸೂಕ್ತ ಸಮಯದಲ್ಲಿ ಲಸಿಕೆ ಹಾಕಿಸಿಕೊಂಡದ್ದೇ ಇದಕ್ಕೆ ಕಾರಣ. ಲಸಿಕೆ ಪಡೆದ ವೈದ್ಯರಲ್ಲಿ ಹಲವರಿಗೆ ಸೋಂಕು ತಗಲಿತ್ತಾ ದರೂ ತೀವ್ರವಾದ ಕಾಯಿಲೆಗೆ ತುತ್ತಾದವರು ಕೆಲವೇ ಮಂದಿ. ಲಸಿಕೆಯು ಪ್ರಭಾವಶಾಲಿ ಎಂಬುದಕ್ಕೆ ಇದೊಂದೇ ಉದಾಹರಣೆ.
ಪ್ರಸ್ತುತ 18 ವಯಸ್ಸಿನ ಮೇಲಿನವರಿಗೆಲ್ಲ ಲಸಿಕೆ ಕೊಡಲಾಗುತ್ತದೆ. ಮುಂದೆ ಮಕ್ಕಳಿಗೂ ಲಸಿಕೆ ದೊರೆಯಲಿದೆ. ಲಸಿಕೆಯ ಬಗ್ಗೆ ಇಲ್ಲ-ಸಲ್ಲದ ಮಾಹಿತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಕಾರಣ, ಅನೇಕರು ಲಭ್ಯವಿದ್ದರೂ ಹಾಕಿಸಿಕೊಳ್ಳಲಿಲ್ಲ. ನಮ್ಮ ದೇಶದಲ್ಲಿ ಈಗ ಕೊಡಲಾಗುತ್ತಿರುವ ಲಸಿಕೆಗಳು ಉತ್ತಮ ವಾಗಿದ್ದು, ಸದ್ಯಕ್ಕೆ ಕೊರೊನಾ ಸೋಂಕಿನ ಅನಾಹುತಗಳಿಂದ ರಕ್ಷಣೆ ಕೊಡುತ್ತವೆ ಎಂಬುದು ಸಾಬೀತಾಗಿದೆ. ನಮ್ಮ ಜಿಲ್ಲೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ, ಮೆಡಿಕಲ್ ಕಾಲೇಜುಗಳಲ್ಲಿ ಲಸಿಕೆಯನ್ನು ಕೊಡಲಾಗುತ್ತದೆ.
ಆರೋಗ್ಯದ ಸಮಸ್ಯೆ ಇದ್ದವರಿಗೆ ಕೊರೊನಾ ಸೋಂಕು ಹೆಚ್ಚು ಅಪಾಯ ಕಾರಿ. ಆದುದರಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯ, ಮೂತ್ರ ಜನಕಾಂಗ ನಮಸ್ಯೆ ಮುಂತಾದ ಕಾಯಿಲೆಗಳಿಂದ ಬಳಲುತ್ತಿರುವವರು ಯಾವುದೇ ಹಿಂಜರಿಕೆ ಇಲ್ಲದೆ ಮೊದಲು ಲಸಿಕೆ ಪಡೆಯಬೇಕು. ನಮ್ಮ ಜಿಲ್ಲೆಗಳಲ್ಲಿ ಸಾವಿರಾರು ಮಂದಿ ಲಸಿಕೆ ಹಾಕಿಸಿ ಕೊಂಡಿದ್ದಾರೆ. ಇವರಲ್ಲಿ ಆರೋಗ್ಯದ ಸಮಸ್ಯೆ ಇದ್ದವರು ಅನೇಕ ಮಂದಿ ಇದ್ದರೂ ಯಾರಿಗೂ ಅನಾಹುತವಾಗಿಲ್ಲ.
ನಾವು ಮೂರನೇ ಅಲೆಯ ನಿರೀಕ್ಷಣೆಯಲ್ಲೇ ಮುಂದಿನ ಕೆಲವು ತಿಂಗಳು ಇರಬೇಕಾಗಿದೆ. ಮೂರನೇ ಅಲೆಯು ಯಾವುದೇ ಮುನ್ಸೂಚನೆ ಇಲ್ಲದೆ ಬರಬಹುದು. ತಜ್ಞರು ಸೂಚಿಸುವವರೆಗೆ ನಾವು ನಮ್ಮ ರಕ್ಷಣೆಯನ್ನು ಮಾಡಬೇಕಾಗಿದೆ. ಮುಖ್ಯವಾಗಿ ಮನೆಯಲ್ಲೇ ಇರುವುದು, ಮನೆಯಿಂದ ಹೊರಗೆ ಹೋಗಲೇ ಬೇಕಾದಾಗ ಮಾಸ್ಕ್ ಧರಿಸುವುದು, ಅನೇಕ ಮಂದಿ ಸೇರುವಂತಹ ಸನ್ನಿವೇಶಗಳನ್ನು ತಪ್ಪಿಸುವುದು, ಮಾರ್ಕೆಟ್, ಮಾಲ್, ಅಂಗಡಿ ಮುಂತಾದ ಜನ ಸೇರುವ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಅಗತ್ಯವಾಗಿದೆ. ಕೊರೊನಾ ವೈರಸ್‌ನ ಹಾವಳಿ ಕಡಿಮೆಯಾಗುವ ತನಕ ನಾವು ಮುಂಜಾಗ್ರತೆ ವಹಿಸಬೇಕಾಗಿದೆ. ಸ್ವಲ್ಪ ಅಜಾಗರೂಕತೆಗೆ ಬಹಳ ಬೆಲೆ ತೆರ ಬೇಕಾಗಬಹುದೆಂಬ ಎಚ್ಚರ ನಮಗಿರಲಿ.
- ಡಾ| ಎಡ್ವರ್ಡ್ ಎಲ್. ನಜ್ರೆತ್, ಆಥೊìಪೆಡಿಕ್ ಸರ್ಜರಿ ವಿಭಾಗದ ಪ್ರೊಫೆಸರ್, ಕಣಚೂರು ಮೆಡಿಕಲ್ ಕಾಲೇಜು, ನಾಟೆಕಲ್, ಮಂಗಳೂರು