Advertisement

ಶಿಕ್ಷಣವಂಚಿತ ಮಕ್ಕಳು ಮುಖ್ಯ ವಾಹಿನಿಗೆ ಬರಲಿ

11:46 PM Oct 11, 2022 | Team Udayavani |

ಜ್ಞಾನಕ್ಷೇತ್ರದಲ್ಲಿ ಪ್ರಪಂಚ ಇಂದು ಅಪಾರ ಬದಲಾವಣೆಗಳಿಗೆ ಒಳಗಾಗುತ್ತಿದೆ. ಕಲ್ಪನೆಗೂ ಎಟುಕದ ರೀತಿಯ ವೈಜ್ಞಾನಿಕ ಹಾಗೂ ತಾಂತ್ರಿಕ ಮುನ್ನಡೆಗಳ ಕಾಲದಲ್ಲಿ ಸಮಕಾಲೀನ ಕೌಶಲವರ್ಧನೆ ಬೆಳವಣಿಗೆಯ ಅಡಿಪಾಯ. ಬೆಳವಣಿಗೆಗೆ ಬದಲಾವಣೆ ಅಗತ್ಯ ಹಾಗೂ ಬದಲಾವಣೆ ಪ್ರಗತಿಪರ ಆಗಿರಬೇಕು. ಈ ಪ್ರಕ್ರಿಯೆಯ ಮೊದಲ ಹೆಜ್ಜೆಯೇ ಶಿಕ್ಷಣವಂಚಿತ ಮಕ್ಕಳನ್ನು ಗುರುತಿಸಿ, ಅವರನ್ನು ಮತ್ತೆ ಶಾಲೆಗಳತ್ತ ಕರೆತರಬೇಕು.

Advertisement

ರಾಷ್ಟ್ರದ ಸುಸ್ಥಿರ ಅಭಿವೃದ್ಧಿ ಹಾಗೂ ವೈಯುಕ್ತಿಕ ಪ್ರಗತಿಗೆ ಶಿಕ್ಷಣವೇ ತಳಹದಿಯಾದುದರಿಂದ ಯಾವ ಮಗುವೂ ಶಾಲೆಯಿಂದ ಹೊರಗಿದ್ದು ಶಿಕ್ಷಣದಿಂದ ವಂಚಿತ ರಾಗದಂತೆ ನೋಡಿಕೊಳ್ಳುವುದೇ ನಮ್ಮ ನೈತಿಕ ಮೂಲಭೂತ ಕರ್ತವ್ಯವಾಗಿದೆ. ಇಂದಿನ ಮಕ್ಕಳೇ ಮಂದಿನ ಪ್ರಜೆಗಳು ಎಂಬ ಮಾತು ಚಾಲ್ತಿಯಲ್ಲಿದೆ ಯಾದರೂ ನಾವು ಮಕ್ಕಳಿಗಿರುವ ಹಕ್ಕುಗಳ ಬಗ್ಗೆ ಲಕ್ಷ್ಯ ಕೊಡುವಲ್ಲಿ ಹಿಂದೆ ಬಿದ್ದಿದ್ದೇವೆ ಅನ್ನಿಸುತ್ತದೆ.

ಈ ನಿಟ್ಟಿನಲ್ಲಿ ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು ಹಾಗೂ ಕಲಿಕೆಯಲ್ಲಿ ಗುಣಮಟ್ಟವನ್ನು ಸಾಧಿಸುವುದು ಬಹಳ ಮುಖ್ಯವಾಗುತ್ತದೆ. ಆದರೆ ಇತ್ತೀಚಿನ ವರದಿಗಳು ಏರಿಕೆಯಾಗುತ್ತಿರುವ ಶಿಕ್ಷಣ ವಂಚಿತ ಮಕ್ಕಳ ಸಂಖ್ಯೆ ಹಾಗೂ ಕಲಿಕಾ ಬಡತನದತ್ತ ಬೆಟ್ಟು ಮಾಡುತ್ತಿವೆ. ವೇಗ ವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿರುವ ಭಾರತದ ಅಭಿವೃದ್ಧಿಗೆ ವೇಗತಡೆಯಾಗದಂತೆ ಎಚ್ಚರಿಕೆಯ ಹೆಜ್ಜೆ ಇರಿಸುವುದು ಅಗತ್ಯವಾಗಿದೆ.

ಕಳವಳಕಾರಿ ಸಮೀಕ್ಷಾ ವರದಿ
ರಾಜ್ಯದಲ್ಲಿ 6 ರಿಂದ 14 ವರ್ಷದ 15,338 ಮಕ್ಕಳು ಶಾಲೆ ಯಿಂದ ಹೊರಗುಳಿದಿದ್ದಾ ರೆ. ಇದೇ ವಯೋ ಮಾನದ ಹತ್ತು ಸಾವಿರ ಮಕ್ಕಳು ಶಾಲೆಗಳಲ್ಲಿ ಪ್ರವೇಶ ವನ್ನೇ ಪಡೆದಿಲ್ಲ. 3 ವರ್ಷದೊಳಗಿನ 4.54 ಲಕ್ಷ ಮಕ್ಕಳು ಹಾಗೂ 4 ರಿಂದ 6 ವರ್ಷದ 5.33 ಲಕ್ಷ ಮಕ್ಕಳು ಅಂಗನವಾಡಿ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿಲ್ಲ. ನಮ್ಮ ರಾಜ್ಯದಲ್ಲಿ ಸುಮಾರು 10.12 ಲಕ್ಷ ಮಕ್ಕಳು ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಂದ ಹೊರಗೆ ಉಳಿದಿದ್ದಾ ರೆ ಎಂದು ರಾಜ್ಯ ಸರಕಾರವು ಕರ್ನಾಟಕ ಹೈಕೋರ್ಟ್‌ಗೆ ಜುಲೈ ತಿಂಗಳಲ್ಲಿ ಸಲ್ಲಿಸಿದ ಅಂಕಿಅಂಶಗಳು ಬಹಿರಂಗ ಪಡಿಸಿವೆ. ಈ ಸಮೀಕ್ಷಾ ವರದಿ ಅತ್ಯಂತ ಕಳವಳಕಾರಿ ಹಾಗೂ ಆಘಾತಕಾರಿ ವಿಷಯ.

ಏರಿಕೆಯಾದ ಶಿಕ್ಷಣ ವಂಚಿತರ ಸಂಖ್ಯೆ
ರಾಜ್ಯದಲ್ಲಿ 70 ಸಾವಿರಕ್ಕೂ ಅಧಿಕ ಮಕ್ಕಳು ಶಾಲೆ ಯಿಂದ ಹೊರಗುಳಿದಿದ್ದಾರೆ ಎಂದು ಶಿಕ್ಷಣ ಇಲಾಖೆ 2019ರಲ್ಲಿ ಹೇಳಿತ್ತು. ಅದಕ್ಕೆ ಹೋಲಿಸಿದರೆ ಮೂರು ವರ್ಷ ಗಳಲ್ಲಿ ಆ ಪ್ರಮಾಣ ಭಾರೀ ಏರಿಕೆಯಾಗಿದ್ದು, ಅದಕ್ಕೆ ಕೋವಿಡ್‌ ಸಹಿತ ನಾನಾ ಕಾರಣಗಳಿವೆ ಎಂಬ ಅಂಶ ಸಮೀಕ್ಷೆಯಲ್ಲಿ ಕಂಡು ಬಂದಿದೆ. ಮಕ್ಕಳನ್ನು ಶಾಲೆಗಳತ್ತ ಸೆಳೆಯಲು ಸರಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಅವಕಾಶವಂಚಿತ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಇವೆಲ್ಲವೂ ವಿಫ‌ಲವಾಗಿರುವುದು ಸಮಸ್ಯೆಯ ಸಂಕೀರ್ಣತೆಯತ್ತ ಬೆಟ್ಟು ಮಾಡುತ್ತದೆ.

Advertisement

ಕಲಿಕಾ ಬಡತನ
ಕೊರೊನಾ ಮೊದಲನೇ ಅಲೆಯ ವೇಳೆ ಮುಚ್ಚಿದ ಶಾಲೆಗಳು (2020 ಮಾರ್ಚ್‌) ಸೋಂಕಿನ ಮೂರನೇ ಅಲೆ ತಗ್ಗಿದ ಬಳಿಕ (2022 ಫೆಬ್ರವರಿ) ತೆರೆದುಕೊಂಡಿವೆ. ಆದರೆ ಯಾವುದೂ ಮೊದಲಿನಂತಿಲ್ಲ. ಯುನೆಸ್ಕೋ ವರದಿಯ ಪ್ರಕಾರ ಮಕ್ಕಳ ಶಿಕ್ಷಣದ ಮೇಲೆ ಕೊರೊನಾ ವ್ಯತಿರಿಕ್ತ ಪರಿಣಾಮ ಬೀರಿದೆ. ಮಕ್ಕಳು ಈಗಿನ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕಾದ ಅನಿರ್ವಾಯತೆ ಎದುರಾಗಿದೆ. ಕೋವಿಡ್‌ನಿಂದಾಗಿ ಮಕ್ಕಳ ಶಿಕ್ಷಣ, ಕೌಶಲ, ಮಾನಸಿಕ ಮತ್ತು ದೈಹಿಕ ಆರೋಗ್ಯ ಏರುಪೇರಾಗಿದೆ. ಈ ಎಲ್ಲ ಅಂಶಗಳು ದೀರ್ಘ‌ಕಾಲ ಅವರನ್ನು ಕಾಡಲಿದೆ ಎನ್ನುವುದು ತಜ್ಞರ ಅಭಿಮತ.

ವಿಶ್ವ ಬ್ಯಾಂಕ್‌ ವರದಿಯ (2020) ಪ್ರಕಾರ ಕೊರೊನಾ ಸಾಂಕ್ರಾಮಿಕವು ಈಗಾಗಲೇ ಅಸ್ತಿತ್ವದಲ್ಲಿದ್ದ ಜಾಗತಿಕ ಕಲಿಕೆಯ ಬಿಕ್ಕಟ್ಟನ್ನು ವರ್ಧಿಸುತ್ತಿದೆ. ಇದು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿನ ಪ್ರಾಥಮಿಕ ಶಾಲಾ ವಯಸ್ಸಿನ ಮಕ್ಕಳ ಶೇಕಡಾವಾರು ಪ್ರಮಾಣ ವನ್ನು 53 ಪ್ರತಿಶತದಿಂದ 63 ಪ್ರತಿಶತಕ್ಕೆ ಹೆಚ್ಚಿಸ ಬಹುದು ಮತ್ತು ಇದು ಈ ಪೀಳಿಗೆಯ ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ಸಂಕಷ್ಟಕ್ಕೆ ತಳ್ಳಬಹುದು ಎಂದು ಎಚ್ಚರಿಸಿದೆ.
ಕೋವಿಡ್‌ನಿಂದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಕೆಲವು ಕುಟುಂಬಗಳಿಗೆ ಮಕ್ಕಳ ದುಡಿಮೆ ಕೂಡ ಜೀವನಾಧಾರವಾಗಿದೆ. ಬಡ ಕುಟುಂಬಗಳು ಉದ್ಯೋಗ ಆರಸಿ ಗುಳೆ ಹೋಗುವುದರಿಂದಾಗಿ ಮಕ್ಕಳು ಶಾಲೆ ಗಳಿಂದ ಹೊರಗುಳಿಯುತ್ತಾರೆ. ಮಕ್ಕಳ ಹೆತ್ತವರಲ್ಲಿರುವ ಜಾಗೃತಿಯ ಕೊರತೆಯೂ ಒಂದು ಮುಖ್ಯ ಕಾರಣವಾಗಿದೆ ಎನ್ನುತ್ತವೆ ಸಮೀಕ್ಷೆಗಳು. ಕೊರೊನಾ ಅವಧಿಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಡೆಯದ ಹಿನ್ನೆಲೆ ಮಕ್ಕಳ ಮನಃಸ್ಥಿತಿಯಲ್ಲಿ ಗಂಭೀರ ಬದಲಾವಣೆ ಆಗಿರುವುದೂ ಹಲವು ಮಕ್ಕಳು, ಶಾಲೆಗಳಿಂದ ದೂರ ಉಳಿಯಲು ಕಾರಣವಾಗಿದೆ. ಎಸೆಸೆಲ್ಸಿ ತೇರ್ಗಡೆಯಾದರೂ ಮುಂದಿನ ಶಿಕ್ಷಣಕ್ಕೆ ಹೋಗಲು ಬಯಸದ ವಿದ್ಯಾರ್ಥಿಗಳೂ ಇದ್ದಾರೆ. ಬಡತನ, ಅನಾರೋಗ್ಯ ಮುಂತಾದ ಕಾರಣಗಳಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂಬ ವರದಿಗಳು ನಿಜಕ್ಕೂ ಆಘಾತಕಾರಿ.

ನಿರಂತರ ಕಲಿಕೆ ಯಶಸ್ಸಿನ ಕೀಲಿಕೈ
ಶಿಕ್ಷಣ ಜೀವಿಸುವ ಹಕ್ಕಿನ ಅವಿಭಾಜ್ಯ ಅಂಗವಾಗಿದೆ.ಆದರೆ ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಸಂಭಾವ್ಯ ಕಲಿಕಾ ನಷ್ಟದ ಬಗ್ಗೆ ಬೆಟ್ಟು ಮಾಡುತ್ತಿದೆ. ದಾಖಲೆಗಳಲ್ಲಿ ಮಾತ್ರ ಮಕ್ಕಳು ಶಾಲೆಯಲ್ಲಿದ್ದಾರೆ. ಆದರೆ ಅವರು ಯಾವುದೇ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಲ್ಲ ಎಂಬ ವಿಶ್ಲೇಷಣೆಗಳು ಕರಾಳ ಸತ್ಯವನ್ನು ತೆರೆದಿಡುತ್ತಿದೆ. ಓದುವಂತಹ ಮೂಲಭೂತ ಕೌಶಲಗಳ ಕೊರತೆ ಉಂಟಾದರೆ ಭವಿಷ್ಯದಲ್ಲಿ ಶಾಲಾ ಪಠ್ಯಕ್ರಮ ಓದುವ ಮಕ್ಕಳ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬಾರದು.
ಕೌಶಲ ಎಂಬುದು ಪ್ರತೀ ಹೆಜ್ಜೆಯಲ್ಲೂ ಹೊಸತನ ಸಾಧಿಸುವುದು, ಕೌಶಲ ಚಲನಶೀಲವಾಗಿದೆ. ನಿರಂತರ ಪರಿಷ್ಕರಣೆ ಮಾಡಿಕೊಳ್ಳಬೇಕು. ನಿರಂತರ ಕಲಿಕೆ, ಅನ್ವೇಷಣೆ ಹಾಗೂ ಅಳವಡಿಕೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸಿನ ಕೀಲಿಕೈ. “ಭಾರತವನ್ನು ಜಗತ್ತಿನ ಕೌಶಲತಾಣವನ್ನಾಗಿ ಮಾಡುವ ಪ್ರಧಾನಮಂತ್ರಿ ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸ ಅತೀ ಮಹತ್ವದ್ದು.

ವೇಗತಡೆಯಾಗಲಿದೆ ಕಲಿಕಾ ಬಡತನ
ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಒಂದಾದ ಭಾರತದ ಆರ್ಥಿಕತೆಯ ಬೆಳವಣಿಗೆಗೆ ವೇಗತಡೆಯಾಗಿ ರೂಪಾಂತರಗೊಳ್ಳಲಿರುವ ಕಲಿಕಾ ಬಡತನವನ್ನು ಗಂಭೀರವಾಗಿ ಪರಿಗಣಿಸಿ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾಗಿದೆ.

ಜ್ಞಾನಕ್ಷೇತ್ರದಲ್ಲಿ ಪ್ರಪಂಚ ಇಂದು ಅಪಾರ ಬದಲಾವಣೆಗಳಿಗೆ ಒಳಗಾಗುತ್ತಿದೆ. ಕಲ್ಪನೆಗೂ ಎಟುಕದ ರೀತಿಯ ವೈಜ್ಞಾನಿಕ ಹಾಗೂ ತಾಂತ್ರಿಕ ಮುನ್ನಡೆಗಳ ಕಾಲದಲ್ಲಿ ಸಮಕಾಲೀನ ಕೌಶಲವರ್ಧನೆ ಬೆಳವಣಿಗೆಯ ಅಡಿಪಾಯ. ಬೆಳವಣಿಗೆಗೆ ಬದಲಾವಣೆ ಅಗತ್ಯ ಹಾಗೂ ಬದಲಾವಣೆ ಪ್ರಗತಿಪರ ಆಗಿರಬೇಕು. ಈ ಪ್ರಕ್ರಿಯೆಯ ಮೊದಲ ಹೆಜ್ಜೆಯೇ ಶಿಕ್ಷಣವಂಚಿತ ಮಕ್ಕಳನ್ನು ಗುರುತಿಸಿ, ಅವರನ್ನು ಮತ್ತೆ ಶಾಲೆಗಳತ್ತ ಕರೆತರಬೇಕು. ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣದಿಂದ ಪ್ರಾರಂಭಿಕ ಹಂತದಲ್ಲಿಯೇ ಮಕ್ಕಳು ಹೊರಗೆ ಉಳಿದರೆ ಅವರನ್ನು ಮತ್ತೆ ಕರೆತರುವುದು ಕಷ್ಟಕರ. ಅವರು ಬಾಲಕಾರ್ಮಿಕರಾಗುವ ಅಪಾಯವೂ ಇದ್ದೇ ಇದೆ.

ಜನಸಂಖ್ಯೆ ಸಂಪನ್ಮೂಲವಾಗಲಿ
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಕರೆತರಲು ಬರೀ ಸರಕಾರದ ಪ್ರಯತ್ನಗಳು ಸಾಕಾಗುವುದಿಲ್ಲ. ಸಮುದಾಯದ ಸಹಭಾಗಿತ್ವವೂ ಅಗತ್ಯ. ಪಾಲಕರು ಮಕ್ಕಳಿಗೆ ಹೆಚ್ಚಿನ ಗುಣಾತ್ಮಕ ಸಮಯವನ್ನು ನೀಡಬೇಕು. ಕಲಿಕೆಯತ್ತ ಆಸಕ್ತಿ ಹೆಚ್ಚಿಸಲು ಸೃಜನಶೀಲ ತಂತ್ರಗಳನ್ನು ಬಳಸಿ ಮಕ್ಕಳ ಮನೋವಿಕಾಸಕ್ಕೆ ಮೊದಲ ಆದ್ಯತೆಯನ್ನು ನೀಡಬೇಕು. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಜನಸಂಖ್ಯೆಯನ್ನು ಮಾನವ ಸಂಪನ್ಮೂಲವಾಗಿ ಪರಿವರ್ತಿಸುವ ಯೋಚನೆ ಹಾಗೂ ಯೋಜನೆಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಅರ್ಥಶಾಸ್ತ್ರ ನಮಗೆ ತಿಳಿಸುತ್ತದೆ. ಹೆಚ್ಚಿನ ಜನಸಂಖ್ಯೆ ದೇಶಕ್ಕೆ ಬಹು ಮುಖ್ಯ ಅವಕಾಶ ಮತ್ತು ಸವಾಲಾಗಿದೆ. ಮಕ್ಕಳಿಗೆ ಅಗತ್ಯ ಶಿಕ್ಷಣ ಹಾಗೂ ಕೌಶಲಗಳನ್ನು ಒದಗಿಸುವ ಮೂಲಕ ವಿಪುಲವಾಗಿರುವ ಯುವಜನತೆಯ ಸದ್ಬಳಕೆಯೇ ನಮ್ಮ ದೇಶದ ಅಭಿವೃದ್ಧಿಗಿರುವ ರಹದಾರಿ.


-ಡಾ| ಎ.ಜಯ ಕುಮಾರ ಶೆಟ್ಟಿ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next