ಇಳಕಲ್ಲ: ಪ್ರಸಕ್ತ ಮುಂಗಾರು ಮಳೆಯಿಂದ ರಾಜ್ಯದಲ್ಲಿ ಉತ್ತಮ ಬೇಳೆ ಬರುವ ಲಕ್ಷಣಗಳಿದ್ದು, ಕಾರಣ ಗೊಬ್ಬರ ವ್ಯಾಪಾರಸ್ಥರು ರೈತರಿಗೆ ಬಿತ್ತನೆ ವೇಳೆಯಲ್ಲಿ ಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಸಿದ್ದಪ್ಪ ಪಟ್ಟಿಹಾಳ ಹೇಳಿದರು.
ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ಹುನಗುಂದ ಹಾಗೂ ಇಳಕಲ್ಲ ತಾಲೂಕು ಗೊಬ್ಬರ ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿದ ಅವರು, ಎರಡು ತಾಲೂಕಿನ ವ್ಯಾಪಾರಸ್ಥರು ನಿಮ್ಮ ಹಳೆಯ ಸ್ಟಾಕ್ ಗೊಬ್ಬರವನ್ನು ರೈತರಿಗೆ ಹಳೆಯ ದರದಲ್ಲಿ ಮಾರಾಟ ಮಾಡಿ. ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಅಂಥವರ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಎಚ್ಚರಿಸಿದರು.
ಮುಂದಿನ ಮುಂಗಾರು ವೇಳೆಗೆ ನಿಮಗೆ ಎಷ್ಟು ಗೊಬ್ಬರ ಬೇಕು ಎಂಬುದನ್ನು ಗೊಬ್ಬರ ಕಂಪನಿಗಳಲ್ಲಿ ಈಗಲೆ ಇಂಡೆಂಟ್ ಹಾಕಿರಿ. ಅವರು ಗೊಬ್ಬರ ಪೂರೈಸದಿದ್ದರೆ ಕೂಡಲೆ ನನಗೆ ತಿಳಿಸಿ. ನಿಮ್ಮ ವ್ಯಾಪಾರ ವಹಿವಾಟುಗಳನ್ನು ಆನ್‌ಲೈನ್ ಪೇಮೆಂಟ್‌ನಲ್ಲೆ ಮಾಡಿಕೊಳ್ಳಿ, ಇದಕ್ಕೆ ಸಂಬಂಧಿ ಸಿದಂತೆ ರೈತರಿಗೂ ಮಾಹಿತಿ ತಿಳಿಸಬೇಕು ಎಂದು ಹೇಳಿದರು.
ಹುನಗುಂದ ಹಾಗೂ ಇಳಕಲ್ಲ ತಾಲೂಕು ಗೊಬ್ಬರ ವ್ಯಾಪಾರಸ್ಥರ ಸಂಘದ ಅದ್ಯಕ್ಷ ಬಸವರಾಜ ಮಠದ ಮಾತನಾಡಿ, ರೈತರಿಗೆ ಗೊಬ್ಬರ ಮಾರಾಟ ಮಾಡುವಾಗ ಥರಮಲ್ (ಬಿಲ್)ಮಶಿನ್‌ಗಳು ಸರಿಯಾಗಿ ಕಾರ್ಯ ಮಾಡದೇ ವ್ಯಾಪಾರ ಮಾಡುವಲ್ಲಿ ತೊಂದರೆ ಆಗುತ್ತಿದೆ. ಅಲ್ಲದೇ ಎಲ್ಲ ರೈತರಿಗೂ ಆನ್‌ಲೈನ್ ಪೇಮೆಂಟ್ ಮಾಡಲು ಬರುವುದಿಲ್ಲ ಎಂದು ವ್ಯಾಪಾರಸ್ಥ ಸಮಸ್ಯೆಗಳನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.
ಸಭೆಯಲ್ಲಿದ್ದ 30ಕ್ಕೂ ಹೆಚ್ಚು ವ್ಯಾಪಾರಸ್ಥರು ತಮ್ಮ ಸಮಸ್ಯೆಗಳನ್ನು ಅ ಧಿಕಾರಿಗಳಿಗೆ ತಿಳಿಸಿದರು. ನಂತರ ಕೃಷಿ ಅಧಿಕಾರಿ ವ್ಯಾಪಾರಸ್ಥರ ಎಲ್ಲ ಸಮಸ್ಯಗಳಿಗೂ ಪರಿಹಾರ ಸೂಚಿಸಿದರು. ಸಂಘದ ಕಾರ್ಯದರ್ಶಿ ಮಹೇಶ ಪಟೇಲ ಸ್ವಾಗತಿಸಿದರು.