ಪ್ರತೀ ಟನ್ ಕಬ್ಬಿಗೆ ಬೆಲೆ ನಿಗದಿ ವಿಷಯದಲ್ಲಿ ನಿರೀಕ್ಷೆಯಂತೆ ಕಬ್ಬು ಬೆಳೆಗಾರರ ಹೋರಾಟ ತೀವ್ರ ಸ್ವರೂಪ ಪಡೆದಿದೆ. ಬೆಲೆ ಸಮರ ಆರಂಭವಾಗುವ ಮೊದಲೇ ಅದನ್ನು ನಿವಾರಿಸಬೇಕಾಗಿದ್ದ ಸರಕಾರ ತೋರಿದ ಉದಾಸೀನ ಮನೋಭಾವ ಇವತ್ತು ರೈತ ಸಮುದಾಯ ಸರಕಾರದ ವಿರುದ್ಧ ಬಂಡೇಳುವಂತೆ ಮಾಡಿದೆ.
ಕಬ್ಬು ಬೆಳೆಗಾರರ ಹೋರಾಟಕ್ಕೆ ದಶಕಗಳ ಇತಿಹಾಸವೇ ಇದೆ. ಪ್ರತೀ ವರ್ಷ ಕಬ್ಬು ನುರಿಸುವ ಹಂಗಾಮು ಆರಂಭವಾಗುತ್ತಿದ್ದಂತೆ ಬೆಲೆ ನಿಗದಿ ಸಂಘರ್ಷ ಮರು ಹುಟ್ಟು ಪಡೆಯುತ್ತದೆ. ಆದರೆ ಇಷ್ಟು ವರ್ಷಗಳಿಂದ ಹೋರಾಟ ನಡೆಯುತ್ತ ಬಂದರೂ ಇದುವರೆಗೆ ಇದಕ್ಕೆ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂಬುದು ಅಷ್ಟೇ ಸತ್ಯ ಮತ್ತು ನೋವಿನ ಸಂಗತಿ. ರಾಜ್ಯದಲ್ಲಿ 78 ಸಕ್ಕರೆ ಕಾರ್ಖಾನೆಗಳಿದ್ದರೂ ಯಾವ ಕಾರ್ಖಾನೆಯೂ ಸರಕಾರದ ಹಿಡಿತದಲ್ಲಿಲ್ಲ. ಪ್ರಬಲ ಸಕ್ಕರೆ ಲಾಬಿಗೆ ಸರಕಾರವೇ ಮಣಿದಿರುವ ಪರಿಣಾಮ ಇವತ್ತು ಬಿಕ್ಕಟ್ಟು ಎದುರಾಗಿದೆ. ಉತ್ತರ ಪ್ರದೇಶ, ಪಂಜಾಬ್, ತಮಿಳುನಾಡು, ಗುಜರಾತ್‌ನಲ್ಲಿ ಪ್ರತೀವರ್ಷ ರಸಗೊಬ್ಬರ, ಮಾರುಕಟ್ಟೆ ಬೆಲೆ ಅನ್ವಯ ಕಬ್ಬಿಗೆ ಹೆಚ್ಚು ಬೆಲೆ ನಿಗದಿ ಮಾಡುತ್ತವೆ. ಅದೇ ರೀತಿ ರಾಜ್ಯ ಸರಕಾರ ಸಹ ಪ್ರತೀವರ್ಷ ಪ್ರತೀ ಟನ್‌ಗೆ ನ್ಯಾಯಯುತ ಬೆಲೆ ನಿಗದಿ ಮಾಡಿ ಅದನ್ನು ಕಠಿನ ಕಾನೂನು ರೂಪದಲ್ಲಿ ಜಾರಿಗೆ ತರಬೇಕು ಎಂಬುದು ರೈತರ ಆಗ್ರಹ.
ಕಬ್ಬು ಬೆಲೆ ನಿಗದಿಗೆ ನಾಲ್ಕು ತಿಂಗಳುಗಳಿಂದ ನಿರಂತರ ಹೋರಾಟ ನಡೆದಿದೆ. ಸಕ್ಕರೆ ಸಚಿವರು ನಾಲ್ಕು ಸಭೆ ಮಾಡಿದ್ದಾರೆ. ಸ್ವತಃ ಮುಖ್ಯಮಂತ್ರಿಗಳು ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲಕರ ಸಭೆ ಮಾಡಿದ್ದಾರೆ. ಪರಿಹಾರ ಮಾತ್ರ ಸಿಕ್ಕಿಲ್ಲ. ಸಂಪುಟದಲ್ಲಿ ನಾಲ್ಕೈದು ಸಚಿವರು ಸಕ್ಕರೆ ಕಾರ್ಖಾನೆಗಳ ಮಾಲಕರಾಗಿರುವುದರಿಂದ ಸರಕಾರಕ್ಕೆ ಕಠಿನ ಕಾನೂನು ರೂಪಿಸಲು ಸಾಧ್ಯವಾಗುತ್ತಿಲ್ಲ.
ಕಬ್ಬಿನಿಂದ ಸಕ್ಕರೆ ಜತೆಗೆ ಎಥೆನಾಲ್ ಸೇರಿದಂತೆ ಹಲವಾರು ಉಪ ಉತ್ಪನ್ನಗಳು ಬರುತ್ತಿವೆ. ಇವುಗಳ ಲಾಭದಲ್ಲಿ ರೈತರಿಗೂ ಅದರ ಪಾಲು ಕೊಡಬೇಕು ಎಂಬ ನಿಯಮ ಇದ್ದರೂ ಯಾವ ಸಕ್ಕರೆ ಕಾರ್ಖಾನೆಗಳು ಇದನ್ನು ಪಾಲನೆ ಮಾಡುತ್ತಿಲ್ಲ. ಜತೆಗೆ ದೇಶದಲ್ಲಿರುವ ಸಕ್ಕರೆ ನಿಯಂತ್ರಣ ಆದೇಶ-1966 ಕಾನೂನಿನಲ್ಲಿ ತಿದ್ದಪಡಿ ತಂದು ಎಥೆನಾಲ್‌ನಿಂದ ಬರುವ ಲಾಭದಲ್ಲಿ ರೈತರಿಗೂ ಕೊಡಬೇಕು ಎಂಬ ಅಂಶವನ್ನು ಸೇರಿಸಬೇಕೆಂಬ ಕಬ್ಬು ಬೆಳೆಗಾರರ ಆಗ್ರಹಕ್ಕೆ ಸರಕಾರ ಸ್ಪಂದಿಸಬೇಕಿದೆ.
ಹೋರಾಟ ಮುಂದುವರಿದಷ್ಟು ಹಾನಿಯಾಗುವುದು ರೈತರಿಗೇ ವಿನಾ ಸಕ್ಕರೆ ಕಾರ್ಖಾನೆಗಳು, ಸರಕಾರಕ್ಕಲ್ಲ. ಈ ಹಿಂದೆ ಹೋರಾಟಗಳು ನಡೆದಾಗ ಕಾರ್ಖಾನೆಗಳು ಮಣಿಯಲಿಲ್ಲ. ಸರಕಾರ ಸಹ ಸುಮ್ಮನಾಯಿತು. ಆಗ ಹೊಲದಲ್ಲಿ ಕಟಾವು ಆಗದೇ ಸಾಕಷ್ಟು ಕಬ್ಬು ಉಳಿಯಿತು. ಕೊನೆಗೆ ರೈತರು ಬೇರೆ ದಾರಿ ಕಾಣದೆ ಕಾರ್ಖಾನೆಗಳು ಕೊಟ್ಟ ಬೆಲೆಗೇ ಕಬ್ಬು ಸಾಗಿಸಿದರು.
ಈಗ ಅಂತಹ ಪರಿಸ್ಥಿತಿ ಬರದಂತೆ ಸರಕಾರ ಕಠಿನ ಕ್ರಮಕ್ಕೆ ಮುಂದಾಗಬೇಕು. ನ್ಯಾಯಯುತ ಬೆಲೆ ನಿಗದಿ ಮಾಡಿ ರೈತರ ಹೋರಾಟ ಕೊನೆಗೊಳಿಸಬೇಕು. ಪ್ರತೀ ವರ್ಷ ಸಮಸ್ಯೆ ಬರದಂತೆ ಕಾನೂನು ರೂಪಿಸಬೇಕು. ಕಾರ್ಖಾನೆಗಳ ಮೇಲೆ ನಿಯಂತ್ರಣ ಸಾಧಿಸಬೇಕು.