Advertisement

ನಮ್ಮದೇ ಬಣ್ಣದ ಜಗತ್ತಿಗೆ ಅವಕಾಶ ನೀಡೋಣ…!

08:16 PM Sep 16, 2020 | Karthik A |

ಬದುಕು ಎಂಬುದು ಬಣ್ಣದಂತೆ. ವೈವಿಧ್ಯಮಯವಾದ ಮತ್ತು ಕಣ್ಣಿಗೆ ರಂಗು ತರುವ ಬಣ್ಣಗಳು ನಮಗೆ ಇಷ್ಟವಾಗುತ್ತವೆ.

Advertisement

ಜೀವನದಲ್ಲಿ ಕನಸು, ಬಯಕೆಗಳು ಕೂಡ ಬಣ್ಣದಂತೆ ರಂಗು ರಂಗಾಗಿರುತ್ತವೆ. ಕನಸುಗಳು ಕನಸಾಗಿರದೇ ಗುರಿಗಳಾಗುತ್ತವೆ.

ಬದುಕನ್ನು ಮತ್ತಷ್ಟು ಎಚ್ಚರಗೊಳಿಸುತ್ತವೆ. ಅದಕ್ಕೆ ಹಿರಿಯರು ಹೇಳಿದ್ದು, ಕನಸು ಕಾಣದ ವ್ಯಕ್ತಿ ಬದುಕಿದ್ದು ವ್ಯರ್ಥ ಎಂದು.

ನಮ್ಮ ಬಾಲ್ಯವೂ ಪೋಷಕರ ಮಾರ್ಗದರ್ಶನ, ಇಚ್ಛೆಯ ಮೇರೆಗೆ ಸಾಗುತ್ತಿರುತ್ತದೆ. ಏತನ್ಮಧ್ಯೆ ನಮ್ಮಲ್ಲೊಂದು ಕನಸು, ಗುರಿಗಳು ನವಿಲಿನಂತೆ ಗರಿಬಿಚ್ಚಿ ನರ್ತಿಸುತ್ತವೆ. ಆ ಕನಸುಗಳು ನಿಲುಕದ ನಕ್ಷತ್ರವಾಗಿದ್ದರೂ ಕೂಡ ನಾವು ಆಕಾಶಕ್ಕೆ ಏಣಿ ಹಾಕಿ ನಕ್ಷತ್ರವನ್ನು ಹಿಡಿಯಲು ಯತ್ನಿಸುತ್ತೇವೆ. ಅಂದರೆ ಆ ಕನಸುಗಳ ಸಾಕಾರಕ್ಕೆ ಬದುಕಿನ ಭಾಗವಾಗಿ ಸಂಘರ್ಷಕ್ಕಿಳಿಯುತ್ತೇವೆ.

ಬದುಕಿನಲ್ಲಿ ಅಂದೆಂಥಾ ಕನಸುಗಳು ಅವು… ಒಮ್ಮೆ ನೆನಪಿಸಿಕೊಂಡರೆ ಮೈ ರೋಮಾಂಚನಗೊಳ್ಳುತ್ತದೆ. ದಿನ ಬೆಳಿಗಿನಲ್ಲಿ ಹೂ ಅರಳಿದಂತೆ ನನ್ನಲ್ಲೂ ಕೂಡ ಹೊಸ ಬಗೆಯ ಕನಸುಗಳು ಹುಟ್ಟುತ್ತಿದ್ದವು. ಅವುಗಳ ಪಟ್ಟಿ ಹೇಳುತ್ತಾ ಹೊರಟರೆ ಚೀನದ ಮಹಾಗೋಡೆಯಗಿಂತಲೂ ಉದ್ದವಾಗಬಹುದೇನೋ.!

Advertisement

ಮನೆಯವರು ನಾನು ಟೀಚರ್‌, ಎಂಜಿನಿಯರ್‌, ಡಾಕ್ಟರ್‌, ಪೊಲೀಸ್‌, ಹೀಗೆ ಏನೆಲ್ಲ ಆಗಬೇಕೆಂದು ಅವರು ಆಶಿಸುತ್ತಾರೆ. ಆದರೆ ನಮ್ಮ ಆಲೋಚನೆಗಳೇ ಕಾಮನಬಿಲ್ಲಿನಂತೆ ವಿಭಿನ್ನವಾಗಿರುತ್ತವೆ. ಅದೊಮ್ಮೆ ನನ್ನ ಶಾಲಾ ದಿನಗಳಲ್ಲಿ ನನ್ನ ಶಿಕ್ಷಕರ ಪಾಠಕ್ಕೆ ಮಂತ್ರಮುಗ್ಧಳಾಗಿದ್ದೆ. ಇವರಂತೆ ನಾನು ಕೂಡ ಪಾಠ ಪಾಠಬೇಕು ಎಂಬ ಅಭಿಲಾಶೆ ನನ್ನಲ್ಲಿ ಮೊಳಕೆಯೊಡೆದು ನಾನು ಬೆಳೆದು ದೊಡ್ಡವಳಾದ ಮೇಲೆ ಟೀಚರ್‌ ಆಗಬೇಕೆಂಬ ಬಯಕೆ ನನ್ನಲ್ಲಿ ಚಿಗುರೊಡೆಯಿತು. ಆದರೆ ಚಿಗುರೊಡೆದು ಆ ಬಯಕೆ ಇದ್ದದ್ದು ಮೂರೇ ದಿನ. ಇನ್ನು ಮುಂದುವರಿದು ನಾನು ಮಾತಿನ ಮಲ್ಲಿ. ಸದಾ ಮಾತಿನಲ್ಲಿ ತೇಲಿಸಿ, ಮಂತ್ರಮುಗ್ಧರನ್ನಾಗಿ ಮಾಡುವ ಶಕ್ತಿ ನನ್ನಲ್ಲಿದೆ ಎಂದು ಕೆಲವರು ಶಭಾಷ್‌ಗಿರಿ ಕೊಟ್ಟು ನೀನು ಮುಂದೆ ಲಾಯರ್‌ ಆಗು ಎಂದಾಗಲೇ ನನಗೆ ಲಾಯರ್‌ ಆಗಬೇಕೆಂಬ ಮತ್ತೂಂದು ಕನಸು ಹುಟ್ಟಿತ್ತು. ಅದಕ್ಕೊಂದಿಷ್ಟು ದಿನ ತಯಾರಿ ನಡೆಸಿದೆ. ಈ ಕನಸು ಕೂಡ ಹಗಲಗನಸಾಗೇ ಉಳಿಯಿತು ಎಂಬುದು ಬೇರೆ ಮಾತು.

ಮಧ್ಯದಲ್ಲಿ ಮತ್ಯಾರೋ ನಮ್ಮ ಏಳ್ಗೆಯನ್ನು ಬಯಸುವವರು ನೀನು ಐಎಎಸ್‌, ಕೆಎಎಸ್‌ ಪರೀಕ್ಷೆ ಬರೆದು ಉನ್ನತ ಅಧಿಕಾರಿ ಸೇವೆ ಮಾಡು ಎಂಬ ಸಲಹೆ ನನ್ನ ಮೆದುಳಿಗೇರಿತು. ಇದಕ್ಕೂಂದು ಪ್ರಯತ್ನ ಮಾಡೋಣಾ ಎಂದು ತಯಾರಿಗೆ ನಿಂತೆ. ಇನ್ನು ಕೆಲವರು ನೀನು ನೋಡಲು ತುಂಬಾ ಸುಂದರವಾಗಿದ್ದೀಯಾ ಧಾರಾವಾಹಿಯಲ್ಲಿ ನಟನೆಗೆ ಸೇರಿಕೋ ಎಂದು ಇನ್ನೊಂದು ಮಾತು ಕೇಳಿಬಂತು. ಇವೆಲ್ಲವು ಒಂದು ಕ್ಷಣ ಗೀಳು ಎನಿಸಿದರೂ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ, ನಮ್ಮ ಆಲೋಚನೆಗೂ ಮೀರಿದಂತೆ ನಮ್ಮದೇ ಬಣ್ಣ ಬಣ್ಣದ ಕನಸುಗಳು ಒಂದು ಕಡೆ ಮೈಗೂಡಿರುತ್ತವೆ.

ಮನುಷ್ಯರಾಗಿ ಹುಟ್ಟಿರುವ ನಾವು ಈ ಅವಕಾಶವನ್ನು ನಮ್ಮ ಇಷ್ಟ-ಕಷ್ಟಗಳ ನಡುವೆ, ಕನಸು-ನನಸುಗಳ ನಡುವೆಯೇ ಕಳೆಯಬೇಕು. ನಾವು ಕಂಡತಂಹ ಕನಸು ನನಸಾಗುತ್ತದೆಯೋ ಇಲ್ಲೋ ಗೊತ್ತಿಲ್ಲ ಆದರೆ ಅದರ ಸಾಕಾರಕ್ಕೆ ನಮ್ಮ ನಿರಂತರ ಪ್ರಯತ್ನ ಮತ್ತು ಶ್ರಮ ಇರಲೇಬೇಕು. ಜತೆಗೆ ಆ ಕನಸಿನಲ್ಲಿಯೇ ಎಲ್ಲವನ್ನೂ ಅನುಭವಿಸಬೇಕು. ನಮ್ಮ ಆಲೋಚನೆಗಳನ್ನು ನಾವು ಸ್ವಲ್ಪ ಮಟ್ಟಿಗಾದರೂ ತಲುಪಿದರೆ ಅದುವೇ ಜೀವನದ ಸಾರ್ಥಕ.

ನಾನು ಕಂಡ ಇಷ್ಟು ಕನಸುಗಳು ನಡುವೇ ಈಗ ಹೊಸದೊಂದು ಹುಟ್ಟಿಕೊಂಡಿದೆ. ಈ ಕನಸು, ಬಯಕೆ ನನ್ನನ್ನು ತುಂಬಾ ಕಾರ್ಯಪ್ರವೃತ್ತಳಾನ್ನಾಗಿ ಮಾಡಿದೆ. ಮನೆಯಲ್ಲಿ ಟಿವಿ ಸುದ್ದಿಗಳನ್ನು ನೋಡುತ್ತಿದ್ದ ನನಗೆ ಸುದ್ದಿ ಆ್ಯಂಕರ್‌ಗಳನ್ನು ನನ್ನನ್ನು ತುಂಬಾ ಆಕರ್ಷಿಸಿದ್ದಾರೆ. ಅಂತೆಯೇ ಹಿತೈಷಿಗಳ್ಳೋರ್ವರ ಸಲಹೆ ಮೇರೆಗೆ ನಾನು ಪತ್ರಿಕೋದ್ಯಮದಲ್ಲಿ ಶಿಕ್ಷಣ ಪಡೆಯುತ್ತಿದ್ದೇನೆ. ಕನಸಿನ ಸಾಕಾರಕ್ಕೆ ಹೆಜ್ಜೆ ಇಡುತ್ತಿದ್ದೇನೆ. ಹೀಗೆ ಪ್ರತಿಯೋಬ್ಬರೂ ಕೂಡ ನಾನು ಅವರಂತೆ ಆಗಬೇಕು, ಇವರಂತೆ ಆಗಬೇಕು ಎಂದುಕೊಳ್ಳುತ್ತಾರೆ. ಅದು ತಪ್ಪಲ್ಲ, ಆದರೆ ಅವರಂತೆಯೇ ಆಗುವ ಬದಲು ನಮ್ಮ ಗುರಿ ಸಾಧನೆಯ ಹಾದಿಯಲ್ಲಿ ಅವರಲ್ಲಿರುವ ಒಳ್ಳೆಯ ವಿಚಾರಗಳನ್ನು ಮೈಗೂಡಿಸಿಕೊಳ್ಳೋಣ. ಅದರ ಮೂಲಕ ನಮ್ಮದೇ ಕನಸಿನ ಸಾಕಾರದಲ್ಲಿ ತೊಡಗಿ ಅವರಿಗಿಂತ ವಿಶಿಷ್ಟ ಎನಿಸಿಕೊಳ್ಳೊಣ. ಆಕಾಶಕ್ಕೆ ಏಣಿ ಹಾಕೋದು ತಪ್ಪಲ್ಲ, ಅದು ಬೀಳದಂತೆ ಕಾಯ್ದುಕೊಳ್ಳುವುದೇ ನಮ್ಮ ಜಾಣತನವಾಗಿರುತ್ತದೆ.


ಪೂರ್ಣಿಮಾ ಹಿರೇಮಠ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ.

 

 

Advertisement

Udayavani is now on Telegram. Click here to join our channel and stay updated with the latest news.

Next