ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪುನಾರಚನೆ ಆಗಬೇಕು ಎನ್ನುವುದು ಐವತ್ತೇಳು ವರ್ಷಗಳ ಬೇಡಿಕೆ. ಭದ್ರತಾ ಮಂಡಳಿಯನ್ನು 1945ರ ಅ.24ರಂದು ಸ್ಥಾಪಿಸಲಾಯಿತು. ಅದರ ಬಳಿಕ 1965ರಲ್ಲಿ ಶಾಶ್ವತ ಸದಸ್ಯರಲ್ಲದ ರಾಷ್ಟ್ರಗಳ ಸಂಖ್ಯೆಯನ್ನು ಆರರಿಂದ ಹತ್ತಕ್ಕೆ ಹೆಚ್ಚಳ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ನಂತರ ಯಾವುದೇ ಪ್ರಮುಖ ಬದಲಾವಣೆಗಳನ್ನು ಭದ್ರತಾ ಮಂಡಳಿಯಲ್ಲಿ ತರಲಾಗಿಲ್ಲ ಎನ್ನುವುದು ಹಗಲಿನಷ್ಟೇ ಸತ್ಯ.
ದಶಕಗಳ ಕಾಲದಿಂದ ಭಾರತಕ್ಕೆ ಭದ್ರತಾ ಮಂಡಳಿಯ ಶಾಶ್ವತ ಸ್ಥಾನಮಾನ ಹೊಂದಲು ಅರ್ಹತೆ ಇದೆ. ಅದಕ್ಕೆ ನಮ್ಮ ಬೆಂಬಲ ಇದೆ ಎಂದು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳ ಸರ್ಕಾರಿ ಮುಖ್ಯಸ್ಥರು ನವದೆಹಲಿಗೆ ಬಂದಾಗ ಅಥವಾ ನಮ್ಮ ದೇಶದ ಪ್ರಧಾನಿ, ವಿದೇಶಾಂಗ ಸಚಿವರು ಆಯಾ ದೇಶಗಳಿಗೆ ಪ್ರವಾಸ ಕೈಗೊಂಡಾಗ ಚರ್ಚೆಗೆ ಬರುತ್ತದೆ. ನಂತರ ಅಲ್ಲಿಗೇ ತಣ್ಣಗಾಗಿ ಬಿಡುತ್ತದೆ.
ಪ್ರಸಕ್ತ ಸಾಲಿನಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅಮೆರಿಕ ಪ್ರವಾಸದಲ್ಲಿ ಇದ್ದಾರೆ. ವರ್ಷಾಂತ್ಯಕ್ಕೆ ಭಾರತ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದೆ. ಆಗ ಭದ್ರತಾ ಮಂಡಳಿಯ ಆಮೂಲಾಗ್ರ ಬದಲಾವಣೆ, ಉಗ್ರ ನಿಗ್ರಹ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಡಿಸೆಂಬರ್‌ಗೂ ಒಂದು ವಿಶೇಷತೆ ಇದೆ. ಭದ್ರತಾ ಮಂಡಳಿಯ ಶಾಶ್ವತವಲ್ಲದ ಸ್ಥಾನಮಾನ ಹೊಂದಿರುವ ವಿಭಾಗದ ಎರಡನೇ ವರ್ಷದ ಕೊನೇಯ ತಿಂಗಳು ಭಾರತಕ್ಕೆ ಇದೆ. ಹೀಗಾಗಿ, ಪುನಾರಚನೆ ಮತ್ತು ಉಗ್ರ ನಿಗ್ರಹ ಕಾರ್ಯತಂತ್ರ ನಿಟ್ಟಿನಲ್ಲಿ ಜಗತ್ತಿಗೆ ಅತ್ಯಂತ ನಾಜೂಕಿನಿಂದ ಮತ್ತು ಅಷ್ಟೇ ಸ್ಪಷ್ಟವಾಗಿ ನಿಲುವು ಪ್ರತಿಪಾದನೆ ಮಾತ್ರವಲ್ಲ ಅದನ್ನು ಅನುಷ್ಠಾನಗೊಳಿಸುವ ಚಾಕಚಕ್ಯತೆಯನ್ನು ಕೇಂದ್ರ ಸರ್ಕಾರ ಪ್ರದರ್ಶಿಸಬೇಕು.
ಭಾರತ ನಮ್ಮ ವಿಶೇಷ ಪಾಲುದಾರ ಎಂದು ಆಗಾಗ ಅಮೆರಿಕ ಸರ್ಕಾರ ಹೇಳಿಕೊಳ್ಳುತ್ತಿದೆ. ಸದ್ಯ ಅಮೆರಿಕ ಪ್ರವಾಸದಲ್ಲಿ ಇರುವ ಸಚಿವ ಜೈಶಂಕರ್ ಅವರ ಬಳಿ ಭದ್ರತಾ ಮಂಡಳಿ ಪುನಾರಚನೆ ಆಗಬೇಕು. ಈ ನಿಟ್ಟಿನಲ್ಲಿ ಭಾರತದ ವಾದಕ್ಕೆ ಬೆಂಬಲವನ್ನು ಅಧ್ಯಕ್ಷ ಜೋ ಬೈಡೆನ್ ನೀಡಿದ್ದಾರೆಂದು ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್ ಹೇಳಿದ್ದಾರೆ. ಅ ಮಾತು ಹುಸಿಯಾಗದಂತೆ, ಅನುಷ್ಠಾನ ಮಾಡಿಸುವ ಹೊಣೆ ಕೇಂದ್ರದ ಮೇಲೆ ಇದೆ.
1950ರ ದಶಕದ ಪಾಶ್ಚಿಮಾತ್ಯ ರಾಜಕೀಯ ಚಿಂತನೆಗಳು, ನಿಯಂತ್ರಣ ಈಗ ಭಾರತ ಮೇಲೆ ಇಲ್ಲ. ಜಗತ್ತು ಭಾರತದ ಮಾತುಗಳನ್ನು ಕೇಳುತ್ತಿದೆ ಎನ್ನುತ್ತಿರುವಾಗ ಚೀನಾದ ಕುಟಿಲೋಪಾಯವನ್ನು ಛೇದಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸಹಪಂಕ್ತಿಯ ಸದಸ್ಯನಾಗಲು ಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಿಕೊಳ್ಳಬೇಕು. ಯಾವುದೇ ನಿಯಮ, ಕಾನೂನುಗಳು ಬದಲಾವಣೆಯಾಗಿರುವ ಕಾಲಕ್ಕೆ ತಕ್ಕಂತೆ ತಿದ್ದುಪಡಿಗೊಳ್ಳಬೇಕು. ಇಲ್ಲದೇ ಹೋದಲ್ಲಿ ಅಂಥ ಸಂಸ್ಥೆಯ ಅಸ್ತಿತ್ವ ಕೇವಲ ಅಲಂಕಾರಿಕವಾಗುತ್ತದೆ.
ಇದೇ ವಾದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಅನ್ವಯವಾಗುತ್ತದೆ. ಭಾರತಕ್ಕೆ ಶಾಶ್ವತ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಬೇಕಾದ ಕಾರ್ಯತಂತ್ರವನ್ನು ರೂಪಿಸಲೇಬೇಕು. ಆ ಸಂದರ್ಭದಲ್ಲಿ ಕಿಡಿಗೇಡಿತನವನ್ನು ಕೆಲವು ರಾಷ್ಟ್ರಗಳು ಪ್ರದರ್ಶನ ಮಾಡಬಹುದು. ಅದಕ್ಕೆ ಸೂಕ್ತ ತಿರುಗೇಟನ್ನು ಕೇಂದ್ರ ನೀಡಬೇಕು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಶಾಶ್ವತ ಸದಸ್ಯತ್ವ ಪಡೆದರೆ, ದಕ್ಷಿಣ ಏಷ್ಯಾದಲ್ಲಿನ ಕೆಲವೊಂದು ಅಪಸವ್ಯಗಳನ್ನು ತಡೆಯಬಹುದು.