ಚಳ್ಳಕೆರೆ: ಪ್ರತಿಯೊಬ್ಬ ವಿದ್ಯಾರ್ಥಿಯೂ ಶೈಕ್ಷಣಿಕ ಪ್ರಗತಿ ಸಾಧಿಸಲು ದೃಢ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ತನ್ನ ಭವಿಷ್ಯಕ್ಕಾಗಿ ಗುರಿಯನ್ನಿಟ್ಟುಕೊಂಡು ಗುರಿ ಸಾಧನೆಗಾಗಿ ಎಲ್ಲರೊಂದಿಗೆ ಸೇರಿ ಶ್ರಮಿಸಬೇಕು ಎಂದು ಶಾಸಕ ಟಿ. ರಘುಮೂರ್ತಿ ಕರೆ ನೀಡಿದರು.
ಶನಿವಾರ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾ, ಸಾಂಸ್ಕೃತಿಕ, ಎನ್ ಎಸ್‌ಎಸ್ ಹಾಗೂ ರೋವರ್ ಘಟಕದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದೆ. ಇದನ್ನು ಬಳಸಿಕೊಂಡು ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದು ಕಾಲೇಜಿಗೆ ಕೀರ್ತಿ ತರಬೇಕೆಂದರು.
ಕಾಲೇಜಿನ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಇಲ್ಲಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ನೀಡಿದ ಸಲಹೆಗಳನ್ನು ಆಧರಿಸಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿವಿದ್ಯಾರ್ಥಿಗಳಿಗೆ ಪ್ರಯೋಗಾಲಯವೂ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಆದರೆ ವಿದ್ಯಾರ್ಥಿಗಳು ಮಾತ್ರ ಕಲಿಕೆಯನ್ನು ಲಘುವಾಗಿ ಸ್ವೀಕರಿಸಿರುವುದು ಕಂಡುಬರುತ್ತಿದೆ. ಕೆಲವೇ ದಿನಗಳಲ್ಲಿ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳು ಶೈಕ್ಷಣಿಕ ವಿಚಾರಗಳ ಬಗ್ಗೆ ಪ್ರಾಂಶುಪಾಲರು ಹಾಗೂ ಸಂಬಂಧಪಟ್ಟ ಉಪನ್ಯಾಸಕರೊಂದಿಗೆ ಸೌಹಾರ್ದಯವಾಗಿ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಎನ್‌ಎಸ್‌ಎಸ್ ಅಧಿಕಾರಿ ಬಿ. ಶಾಂತಕುಮಾರಿ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಎನ್ ಎಸ್‌ಎಸ್ ಶಿಬಿರ ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಸ್ವತ್ಛತೆಯೂ ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಗ್ರಾಮೀಣ ಭಾಗದ ಜನರು ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಸೇವಾ ಮನೋಭಾವಕ್ಕೆ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರ ವರ್ಗ, ಗ್ರಾಮಸ್ಥರು ನೀಡಿದ ಸಹಕಾರದಿಂದ ರೇಣುಕಾಪುರ ಮತ್ತು ದೊಡ್ಡೇರಿ ಗ್ರಾಮಗಳಲ್ಲಿ ಹಮ್ಮಿಕೊಂಡ ಎನ್‌ಎಸ್‌ಎಸ್ ಶಿಬಿರ ರಾಜ್ಯಮಟ್ಟದಲ್ಲಿ ಹೆಸರುಗಳಿಸಲು ಸಾಧ್ಯವಾಯಿತು ಎಂದು ಸಂತಸ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪಿಯು ಬೋರ್ಡ್‌ನ ನಿವೃತ್ತ ಜಂಟಿ ನಿರ್ದೇಶಕ (ಪರೀಕ್ಷಾಂಗ) ಪಿ.ಎನ್. ಕೃಷ್ಣಪ್ರಸಾದ್ ಮಾತನಾಡಿ, ಕಲಿಕೆಯ ಬಗ್ಗೆ ಹೆಚ್ಚು ಆಸಕ್ತಿವುಳ್ಳವನು ಮಾತ್ರ ನಿರೀಕ್ಷಿತ ಗುರಿತಲುಪಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳೂ ಸೇರಿದಂತೆ ಪ್ರಾಧ್ಯಾಪಕರು ಸಹ ಪಠ್ಯಪುಸ್ತಕ ಓದಿ ಅರ್ಥೈಸಿ ಕೊಳ್ಳಬೇಕಿದೆ. ಜಂಟಿ ನಿರ್ದೇಶಕನಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಹಲವಾರು ಎಡರುತೊಡರುಗಳನ್ನು ಎದುರಿಸಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲು ಸಾಧ್ಯವಾಯಿತು. ಶಾಸಕ ಟಿ. ರಘುಮೂರ್ತಿಯವರು ಈಗಾಗಲೇ ಸುಮಾರು 4.50 ಕೋಟಿ ರೂ.ಗಳನ್ನು ಈ ಕಾಲೇಜಿಗೆ ನೀಡಿದ್ದಾರೆಂದರು.
ಅದ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಂ. ರವೀಶ್ ಮಾತನಾಡಿ, ವಿದ್ಯಾರ್ಥಿಗಳ ಫಲಿತಾಂಶವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ವಿಶೇಷ ತರಗತಿಗಳ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಕಾಲೇಜಿಗೆ ಅವಶ್ಯವಿರುವ ಹಲವಾರು ವ್ಯವಸ್ಥೆಗಳನ್ನು ಶಾಸಕ ಟಿ. ರಘುಮೂರ್ತಿಯವರು ಮಾಡಿಕೊಟ್ಟಿದ್ದಾರೆ. ಫಲಿತಾಂಶವನ್ನು ಉತ್ತಮ ಪಡಿಸಲು ಎಲ್ಲರೂ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಕಾಲೇಜಿನ ವಿವಿಧ ಭಾಗಗಳಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ನಿವೃತ್ತ ಉಪನ್ಯಾಸಕಿ ಸಿ.ವಿ. ರುಕ್ಮಿಣಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ ಆಂಜಿನಪ್ಪ, ಉಪಾಧ್ಯಕ್ಷೆ ಆರ್. ಮಂಜುಳಾ, ಸದಸ್ಯ ಬಿ.ಟಿ.ರಮೇಶ್ ಗೌಡ, ದೊಡ್ಡೇರಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಣ್ಣ, ಗಂಗಾಧರಪ್ಪ, ವೆಂಕಟೇಶ, ಎಸ್. ಕೋಣಪ್ಪ, ಮಲ್ಲಿಕಾರ್ಜುನ್, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್. ಲಕ್ಷ್ಮಣ್, ಇತಿಹಾಸ ಪ್ರಾಧ್ಯಾಪಕ ಕೆ.ವಿ. ಚಂದ್ರಶೇಖರ್, ವಸಂತಕುಮಾರ್, ಶ್ರೀನಿವಾಸ್, ಜಬೀವುಲ್ಲಾ, ಪುಷ್ಪಲತಾ ಮುಂತಾದವರು ಭಾಗವಹಿಸಿದ್ದರು.