Advertisement

ಸ್ವಾಯತ್ತೆಯ ಬೆಳಕಿನಲ್ಲಿ ದೇಗುಲಗಳು ಪ್ರಜ್ವಲಿಸಲಿ

11:30 PM Feb 07, 2022 | Team Udayavani |

ರಾಜ್ಯದಲ್ಲಿ ಹಿಂದೂ ಮಂದಿರಗಳನ್ನು ಸರಕಾರಿ ನಿಯಂತ್ರಣ ಕಕ್ಷೆಯಿಂದ ಮುಕ್ತವಾಗಿಸುವ ಚಿಂತನೆ ಸ್ವಾಗತಾರ್ಹ ಹಾಗೂ ಸಂವಿಧಾನದ ಸೆಕ್ಯುಲರಿಸಂನ ಆಶಯಕ್ಕೆ ಅನುಗುಣವಾಗಿದೆ. ಅಲ್ಪಸಂಖ್ಯಾಕ ಸಮುದಾಯದ ಆರಾಧನ ಕೇಂದ್ರಗಳಂತೆ ಬಹುಸಂಖ್ಯಾಕ ಹಿಂದೂಗಳಿಗೂ ಅದೇ ಸಾಮಾಜಿಕ ನ್ಯಾಯದ ಮಾಪನಕ್ಕೆ ಅನುಗುಣವಾಗಿ ತಮ್ಮದೇ ಮಂದಿರಗಳನ್ನು ನಡೆಸಿಕೊಂಡು ಬರುವ ಸ್ವಾತಂತ್ರ್ಯಕ್ಕೆ ಅನುವು ಮಾಡಿದಂತಾಗುತ್ತದೆ. ಅದೇ ರೀತಿ ಬ್ರಿಟಿಷ್‌ ಆಳ್ವಿಕೆಗೆ ಪೂರ್ವದ ಸುದೀರ್ಘ‌ ಕಾಲಘಟ್ಟದ ರಾಜ ಪ್ರಭುತ್ವದ ದಿನಗಳ ಪದ್ಧತಿಯಿಂದ ಜನತಂತ್ರೀಯ ಪರಿಧಿಗೆ ದೇಗುಲಗಳನ್ನು ಹಸ್ತಾಂತರಿಸಿದಂತಾಗುತ್ತದೆ. ತನ್ಮೂಲಕ ಸಹಸ್ರಾರು ವರ್ಷಗಳ ಆರಾಧನ ಪರಂಪರೆಗೆ ಉತ್ತಮ ವಾರಸುದಾರಿಕೆ ನಿರ್ಮಿಸಿದಂತಾಗುತ್ತದೆ ಹಾಗೂ ಕಾಲಚಕ್ರದ ಪರಿಭ್ರಮಣೆಗೆ ಸಂವಾದಿಯಾಗಿ ಹೊಸ ಶಕೆಯ ಶುಭಾರಂಭಕ್ಕೆ ನಾಂದಿ ಎನಿಸುತ್ತದೆ.

Advertisement

ಬ್ರಿಟಿಷ್‌ ಆಡಳಿತದ ದಿನಗಳಲ್ಲಿ ಕಂದಾಯ, ಅರಣ್ಯ ಹಾಗೂ ಧಾರ್ಮಿಕ ಇಲಾಖೆಗಳ ಹಿಡಿತವನ್ನು ಮೊದಲಿಗೆ “ಕಂಪೆನಿ’ ಸರಕಾರ ಹಾಗೂ ಆ ಬಳಿಕ ನೇರ ಇಂಗ್ಲೆಂಡಿನ ಆಡಳಿತ ಉದ್ದೇಶಪೂರ್ವಕವಾಗಿ ಬಿಗಿಗೊಳಿಸಿಕೊಂಡಿತ್ತು. ಒಂದೆಡೆ ಯುರೋಪಿನ ವೈವಿಧ್ಯ ಗುಂಪುಗಳ ಮಿಶನರಿಗಳಿಗೆ ಭಾರತವನ್ನು ಅದರಲ್ಲಿಯೂ ಗುಡ್ಡಗಾಡು ಪ್ರದೇಶವನ್ನು ಮುಕ್ತಗೊಳಿಸಿ, ತನ್ಮೂಲಕ ಸಾಮ್ರಾಜ್ಯಶಾಹಿತ್ವದ ಒಂದು ಅಂಗವಾಗಿಸಲು ಹಿಂದೂ ಮಂದಿರಗಳ ಮೇಲಿನ ಹಿಡಿತ ಅವರಿಗೆ ಅಗತ್ಯವೂ ಇತ್ತು.

1947ರ ಬಳಿಕ ಬ್ರಿಟಿಷ್‌ ಶಾಹಿತ್ವದ ಧೋರ ಣೆಯ ಚಿಂತನೆಯಲ್ಲೇ ಸ್ವಾತಂತ್ರ್ಯೋತ್ತರ ಭಾರತದ ರಾಜ್ಯ ಸರಕಾರಗಳು ತಂತಮ್ಮ ರಾಜ್ಯದೊಳಗಿನ ದೇವಾಲಯಗಳನ್ನು ಮಾತ್ರ ತಮ್ಮ ಸುಪರ್ದಿ ಯಲ್ಲಿರಿಸಿಕೊಂಡಿತು ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಸಂಪೂರ್ಣ ಖರ್ಚು ವೆಚ್ಚವನ್ನೂ ದೇವಾಲಯಗಳೇ ಭರಿಸುವುದರೊಂದಿಗೆ ಅಪಾರ ಹುಂಡಿ ಧನದ ಮೇಲೆಯೂ ಸಂಪೂರ್ಣ ನಿಯಂತ್ರಣ ಮುಂದುವರಿಸಿತು. ಧಾರ್ಮಿಕ ಎಂಡೋಮೆಂಟ್‌ಗೂ, ಧಾರ್ಮಿಕ ಸಂಸ್ಥೆಗಳು ಸಮವರ್ತಿ ಪಟ್ಟಿಯ 28ನೇ ಅಧಿಕಾರ ಬಿಂದುವೆನಿಸಿ ಭಾರತ ಸಂವಿಧಾನದಲ್ಲಿ ಮೂಡಿ ಬಂತು.

ಸ್ವಾಯತ್ತೆ ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್‌
ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ವಿಧಿಯನ್ವಯ ಯಾವುದೇ ಪಂಥ ಅಥವಾ ಅದರ ಒಳ ಪಂಗಡಗಳಿಗೆ ತಮ್ಮದೇ ಧಾರ್ಮಿಕ ಸಂಸ್ಥೆಯನ್ನು ಸ್ಥಾಪಿಸುವ ಮತ್ತು ನಡೆಸಿ ಕೊಂಡು ಬರುವ ಸ್ವಾತಂತ್ರ್ಯ ನೀಡಲಾಗಿದೆ ಮತ್ತು ಇದನ್ನು ಮುಸ್ಲಿಂ, ಕ್ರೈಸ್ತ, ಜೈನ್‌, ಸಿಕ್ಖ್, ಪಾರ್ಸಿ, ಬೌದ್ಧ ಸಂಪ್ರದಾಯಕ್ಕೆ ಸಮಗ್ರವಾಗಿ ಅನುವುಗೊಳಿಸಲಾಯಿತು. ಅದೇ ರೀತಿ ಹಿಂದೂ ಧರ್ಮದ ನಿರ್ದಿಷ್ಟ ಜಾತಿ, ಸಮುದಾಯದ ದೇವಾಲಯಗಳಿಗೆ, ವಂಶ ಪಾರಂಪರಿಕ ಮಂದಿರಗಳಿಗೆ ಹಾಗೂ ಮಠಗಳಿಗೆ ಈಗಾಗಲೇ ಅನ್ವಯಿಸಿ, ಕರ್ನಾಟಕ ಸರಕಾರದ ಮುಜರಾಯಿ ಇಲಾಖೆಯಿಂದ ಹೊರಗೆ ಸ್ವಾಯತ್ತೆಯ ಪರಿಧಿ ನಿರ್ಮಿಸಿಕೊಡಲಾಗಿದೆ. ಮೂಲ್ಕಿ ವೆಂಕಟರಮಣ ದೇವರು v/s ಮೈಸೂರು ರಾಜ್ಯ ಸರಕಾರ ‌(1958)ದ‌ ಮೊಕದ್ದಮೆಯ ತೀರ್ಪಿನಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯ ಈ ಬಗ್ಗೆ ಸ್ಪಷ್ಟ ತೀರ್ಪನ್ನು ಇತ್ತಿದೆ. ಈ ತೆರನಾದ ಸ್ವಾಯತ್ತೆ ಹೊಂದಿದ ಯಾವುದೇ ಮತೀಯ, ಪಂಥೀಯ ಧಾರ್ಮಿಕ ಸಂಸ್ಥೆಗಳಲ್ಲಿ ಅವ್ಯವಹಾರ ಆಗದಂತೆ, ಶಾಸನಬದ್ಧ ಸುಸೂತ್ರತೆಯನ್ನು ಕಾಪಿಡುವಲ್ಲಿ ಸಂವಿಧಾನದ 26ನೇ ವಿಧಿಯನ್ವಯ ಸರಕಾರಕ್ಕೆ ಸಾರ್ವಭೌಮ ಅಧಿಕಾರ ಇದ್ದೇ ಇದೆ. ಸ್ಥಳೀಯ ಸರಕಾರಗಳು ನಡೆಯುವ ರೀತಿಯಲ್ಲೇ ಭಕ್ತ ಜನತೆಯಿಂದಲೇ ಸ್ವಾಯತ್ತೆಯ ಪರಿಧಿಯನ್ನು ಶಾಸನಾತ್ಮಕವಾಗಿ ರಾಜ್ಯ ಸರಕಾರ ನಿರ್ಮಿಸಬೇಕು. ದೇಗುಲಗಳ ಜೀರ್ಣೋದ್ಧಾರ, ಬ್ರಹ್ಮಕಲಶ ಉತ್ಸಾವಾದಿಗಳನ್ನು ಈಗಲೂ ಆಯಾಮ ಗ್ರಾಮ, ಮಾಗಣೆ ಇತ್ಯಾದಿ ಪರಿಸರದ ಜನತೆಯೇ ಉತ್ಸಾಹದಿಂದ ಮುಂದೆ ಬಂದು ನಡೆಸುವುದನ್ನು ಮನಗಾಣಬಹುದು. ಇಲ್ಲಿನ ಭಕ್ತ ಜನತೆಯ ವಂತಿಗೆ, ಕಾಣಿಕೆಯನ್ನು ಯಥಾವತ್ತಾಗಿ ಧಾರ್ಮಿಕ ಕಾರ್ಯಗಳಿಗೆ ಸದ್ವಿನಿಯೋಗಗೊಳಿಸಲು ನಿಬಂಧನೆಗಳನ್ನು ರೂಪಿಸಬಹುದು. ಅಯೋಧ್ಯೆ, ಕಾಶಿ, ಕೇದಾರ ನಾಥಗಳ ಅಭಿವೃದ್ಧಿ ಮಾದರಿಯಲ್ಲಿ ಈ ನಮ್ಮ ರಾಜ್ಯದ ಸಹಸ್ರಾರು ಮಂದಿರಗಳು ಆಯಾಯ ಪ್ರಾದೇಶಿಕ ಜನರ ಹೊಸ ಹುರುಪಿನ ಫ‌ಲಶ್ರುತಿಯಾಗಿ ಅಭಿವೃದ್ಧಿ ಕಾಣಲು ಇದು ಪೂರಕ ಎನಿಸಲಿದೆ.

ಧನಾತ್ಮಕ ಕಾರ್ಯಕ್ಷೇತ್ರಕ್ಕೆ ಜೀವಂತಿಕೆ
ನಾಡಿನ ಸಹಸ್ರಾರು ದೇಗುಲಗಳ ಹುಂಡಿಯ ಹಣವನ್ನು ಆಯಾಯ ಮಂದಿರಗಳ ಧಾರ್ಮಿಕ ಪುನರುಜ್ಜೀವನಕ್ಕೆ ತೊಡಗಿಸಲು ಹತ್ತಾರು ಉತ್ತಮ ದಾರಿಗಳಿವೆ. ಎಳೆಯರ ಧಾರ್ಮಿಕ ಶಿಬಿರಗಳು, ವಿದ್ವಾಂಸರಿಂದ ಅರ್ಥವತ್ತಾದ ಉಪನ್ಯಾಸ ಮಾಲಿಕೆ, ಯಕ್ಷಗಾನ, ಹರಿಕಥೆ, ಶಾಸ್ತ್ರೀಯ ನೃತ್ಯ ಮುಂತಾದ ಸದಭಿರುಚಿಯ ಸಾಂಸ್ಕೃತಿಕ ವೈವಿಧ್ಯಗಳ ಪ್ರಸರಣಕ್ಕೆ ದೇವಸ್ಥಾನಗಳಿಗೆ ಮುಕ್ತ ಅವಕಾಶ ದೊರಕುತ್ತದೆ. ಅದೇ ರೀತಿ ಚಿತ್ರಕಲೆ, ಶಿಲ್ಪಕಲೆ, ದಾರು ಕಲೆ, ವಾದ್ಯ ವೈವಿಧ್ಯಗಳ ಕಲಿಕೆಗೆ ಪ್ರೋತ್ಸಾಹ ನೀಡುವಲ್ಲಿಯೂ ಸುಯೋಗ್ಯ ಪಥ ದೇಗುಲಗಳ ಆಡಳಿತಕ್ಕೆ ಕಲ್ಪಿಸಿದಂತಾಗುತ್ತದೆ ಮಾತ್ರವಲ್ಲ, ದೇವರ ಕಾಡು, ನಾಗಬನ, ಕೆರೆ, ಬಾವಿ, ಸರೋವರಗಳ ಹಾಗೂ ಪುಣ್ಯ ನದಿಗಳ ತಟಾಕಗಳ ಅಭಿವೃದ್ಧಿ, ನವಗ್ರಹ ವನ, ಅಶ್ವತ್ಥ, ಬಿಲ್ವ ಪತ್ರೆಗಳಂತಹ ನೂರಾರು ವೃಕ್ಷಗಳ ಬೆಳೆಸುವಿಕೆ- ಈ ಎಲ್ಲ ಧನಾತ್ಮಕ ಕಾರ್ಯಕ್ಷೇತ್ರಕ್ಕೆ ಜೀವಂತಿಕೆ ತುಂಬಲು ಪ್ರೇರಕ ಎನಿಸೀತು. ಈಗಾಗಲೇ ಇಂತಹ ಸಾಧ್ಯತೆಗಳನ್ನು ಸಾಕ್ಷಾತ್ಕರಿಸಿ ಸಮಗ್ರ ಸಮಾಜದ ಅಭಿವೃದ್ಧಿಗೆ ಸಾಕ್ಷಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ, ಆದಿಚುಂಚನಗಿರಿ, ಸಿದ್ಧಗಂಗಾ, ಶೃಂಗೇರಿ, ಉಡುಪಿ, ಸುತ್ತೂರುನಂತಹ ಹಲವಾರು ಪುಣ್ಯಧಾಮಗಳ ಆಡಳಿತ ವೈಖರಿ, ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯಗಳು ಎಂಥವರನ್ನು ಬೆರಗುಗೊಳಿಸುವಂತಹದು. ಇಂತಹ ಮಹತ್‌ ಸಾಧನೆ ಧಾರ್ಮಿಕ ಪಥಗಾಮಿತ್ವಕ್ಕೆ, ಸ್ವಾಯತ್ತೆಯ ಪರಿಧಿ ತೀರಾ ಅತ್ಯಗತ್ಯ. ಸರಕಾರೀ ವಲಯದ ರಾಜಕೀಯ ಹಾಗೂ ಅಧಿಕಾರಶಾಹಿತ್ವದಿಂದ, ಹೊರಾವರಣದಲ್ಲೇ ದೇಗುಲಗಳ ಪ್ರಾಂಗಣಗಳ ಇರುವಿಕೆ ಭವಿಷ್ಯದ ಹೊಸಬೆಳಕು ಎಂಬು ದಾಗಿ ವಿಶ್ಲೇಷಿಸಬಹುದಾಗಿದೆ. ವ್ಯಕ್ತಿಗತ ಸ್ವಾರ್ಥ, ಗುಂಪುಗಾರಿಕೆ, ಸ್ಥಳೀಯ ರಾಜಕೀಯ, ಜಾತಿ ಪ್ರಭೇದಗಳು ಈ ಎಲ್ಲ ಸಾಮಾಜಿಕ ನ್ಯೂನತೆಗಳ ಪ್ರತಿಫ‌ಲನ ಹಾಗೂ ತತ್ಪರಿಣಾಮ 63ರ ಬದಲು 36ರ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ‘Perfection is divine and err is human’ ಎನ್ನುವ ಚಿಂತನೆಯ ನೆಲೆಯಲ್ಲಿಯೇ, ಸುಯೋಗ್ಯ ನಿಬಂಧನೆಗಳ ಬೆಳಕಿನಲ್ಲಿ ಸ್ಥಳೀಯ ಕಾರ್ಯಶೀಲತೆಗೆ ಧಾರ್ಮಿಕ ಮಂದಿರಗಳ ಕದ ತೆರೆಯಬೇಕಾಗಿದೆ! ಸ್ವೇಚ್ಛೆ ಅಲ್ಲ ಸ್ವಾಯತ್ತೆಯ ಬೆಳಕಿನಲ್ಲಿ ದೇವಮಂದಿರದ ಕಳಶಗಳು ಝಗಝಗಿಸಲಿ ಎಂಬ ಶುಭದೊಸಗೆ ಪಡಿ ಮೂಡಿಸಬಹುದಾಗಿದೆ.

Advertisement

ಭಕ್ತರ ವಂತಿಗೆ ಸದ್ವಿನಿಯೋಗವಾಗಲಿ
ಸ್ಥಳೀಯ ಸರಕಾರಗಳು ನಡೆಯುವ ರೀತಿಯಲ್ಲೇ ಭಕ್ತ ಜನತೆಯಿಂದಲೇ ದೇಗುಲಗಳ ಸ್ವಾಯತ್ತೆಯ ಪರಿಧಿಯನ್ನು ಶಾಸನಾತ್ಮಕವಾಗಿ ರಾಜ್ಯ ಸರಕಾರ ನಿರ್ಮಿಸಬೇಕು. ದೇಗುಲಗಳ ಜೀರ್ಣೋದ್ಧಾರ, ಬ್ರಹ್ಮಕಲಶ ಉತ್ಸಾವಾದಿಗಳನ್ನು ಈಗಲೂ ಆಯಾಮ ಗ್ರಾಮ, ಮಾಗಣೆ ಇತ್ಯಾದಿ ಪರಿಸರದ ಜನತೆಯೇ ಉತ್ಸಾಹದಿಂದ ಮುಂದೆ ಬಂದು ನಡೆಸುವುದನ್ನು ಮನಗಾಣಬಹುದು. ಇಲ್ಲಿನ ಭಕ್ತ ಜನತೆಯ ವಂತಿಗೆ, ಕಾಣಿಕೆಯನ್ನು ಯಥಾವತ್ತಾಗಿ ಧಾರ್ಮಿಕ ಕಾರ್ಯಗಳಿಗೆ ಸದ್ವಿನಿಯೋಗಗೊಳಿಸಲು ನಿಬಂಧನೆಗಳನ್ನು ರೂಪಿಸಬಹುದು. ಅಯೋಧ್ಯೆ, ಕಾಶಿ, ಕೇದಾರನಾಥಗಳ ಅಭಿವೃದ್ಧಿ ಮಾದರಿಯಲ್ಲಿ ಈ ನಮ್ಮ ರಾಜ್ಯದ ಸಹಸ್ರಾರು ಮಂದಿರಗಳು ಆಯಾಯ ಪ್ರಾದೇಶಿಕ ಜನರ ಹೊಸ ಹುರುಪಿನ ಫ‌ಲಶ್ರುತಿಯಾಗಿ ಅಭಿವೃದ್ಧಿ ಕಾಣಲು ಇದು ಪೂರಕ ಎನಿಸಲಿದೆ.

– ಡಾ| ಪಿ.ಅನಂತಕೃಷ್ಣ ಭಟ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next