Advertisement
ಪ್ರತ್ಯೇಕ ಧರ್ಮದ ಬೇಡಿಕೆಗೆ ನಿಮ್ಮ ಸಮ್ಮತಿ ಇದೆಯೇ ?ಪ್ರತ್ಯೇಕ ವೀರಶೈವ ಲಿಂಗಾಯತ ಧರ್ಮ ಬೇಡುವುದರಲ್ಲಿ ಯಾವುದೇ ಅರ್ಥವಿಲ್ಲ. ಈಗ ನಡೆಯುತ್ತಿರುವುದು ವ್ಯರ್ಥ ಪ್ರಯತ್ನ. ಈಗಾಗಲೇ ವೀರಶೈವ ಲಿಂಗಾಯತ ಧರ್ಮದ ಬೇಡಿಕೆಗೆ ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಇದೀಗ ಲಿಂಗಾಯತ ಧರ್ಮಕ್ಕೆ ಬೇಡಿಕೆ ಇಟ್ಟರೂ ಕೇಂದ್ರ ಸರ್ಕಾರ ತಿರಸ್ಕರಿಸುತ್ತದೆ. ಲಿಂಗಾಯತ ಬೇರೆ ವೀರಶೈವ ಬೇರೆ ಎಂದು ಸಮಾಜದಲ್ಲಿ ಒಡಕು ಉಂಟು ಮಾಡಲು ಈ ಪ್ರಯತ್ನ ನಡೆಯುತ್ತಿದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ.
ನಾವು ಮೊದಲಿನಿಂದಲೂ ಹಿಂದೂ ಧರ್ಮದ ಭಾಗವಾಗಿದ್ದೇವೆ. ಮುಂದೆಯೂ ಹಿಂದೂ ಧರ್ಮದ ಭಾಗವಾಗಿರುತ್ತೇವೆ. ವೀರಶೈವವೂ ಹಿಂದೂ ಧರ್ಮದ ಒಂದು ಭಾಗವಾಗಿಯೇ ಬೆಳೆದು ಬಂದಿದೆ. ವೀರಶೈವರು ಹಿಂದೂ ಧರ್ಮದ ಎಲ್ಲ ಆಚರಣೆಗಳನ್ನು ಮಾಡಿಕೊಂಡು ಬಂದಿದ್ದಾರೆ. ಹಿಂದೂ ಧರ್ಮವನ್ನು ಸಂಪೂರ್ಣವಾಗಿ ತಿರಸ್ಕರಿಸುವ ಬದಲು ಅದರಲ್ಲಿನ ಕೆಲವು ಅನಿಷ್ಠ ಪದ್ದತಿಗಳ ಆಚರಣೆ ಕೈ ಬಿಡಬೇಕು. ಕೆಟ್ಟ ಆಚರಣೆಗಳನ್ನು ಕೈ ಬಿಡಲು ಬೇಡ ಅಂದಿಲ್ಲ. ಲಿಂಗಾಯತ ಧರ್ಮ ಬೇಕು ಅನ್ನುವವರು ದೇವಸ್ಥಾನಗಳಿಗೆ ಹೋಗುತ್ತಾರೆ. ಪೂಜೆ ಪುನಸ್ಕಾರ ಮಾಡುತ್ತಾರೆ. ಅದೆಲ್ಲ ಹಿಂದೂ ಧರ್ಮದ ಭಾಗವಲ್ಲವೇ? ಪ್ರತ್ಯೇಕ ಧರ್ಮ ಬೇvವೆಂದರೆೆ, ನಿಮ್ಮ ಬೇಡಿಕೆ?
ಕಾನೂನು ತಜ್ಞರ ಪ್ರಕಾರ ಪ್ರತ್ಯೇಕ ಧರ್ಮದ ಬೇಡಿಕೆಗೆ ಮಾನ್ಯತೆಯೂ ಸಿಗುವುದಿಲ್ಲ. ಅದರ ಬದಲು ವೀರಶೈವ ಲಿಂಗಾಯತ ಸಮುದಾಯಕ್ಕೆ ವಿಶೇಷ ಮೀಸಲಾತಿ ನೀಡಬೇಕು. ಈಗಿರುವ 3ಬಿ ಪ್ರವರ್ಗದ ಬದಲು, ವೀರಶೈವ ಲಿಂಗಾಯತ ಸಮುದಾಯಕ್ಕೆ 2ಬಿ ಅಥವಾ ಪ್ರತ್ಯೇಕವಾದ ಮೀಸಲಾತಿ ನೀಡಿ ಶೇ 15 ರಿಂದ 20 ಪ್ರಮಾಣ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ನೀಡಲಿ. ನಮ್ಮ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿ ನಿಲಯಗಳನ್ನು ತೆರೆಯಲಿ, ಸ್ಪರ್ಧಾತ್ಮಕ ಪರೀಕ್ಷೆಗೆ ವಿಶೇಷ ತರಬೇತಿ ಕೇಂದ್ರಗಳನ್ನು ಸರ್ಕಾರ ತೆರೆಯಬೇಕು.
Related Articles
ಪಂಚ ಪೀಠಾಧೀಶರಿಗೆ ಪರಂಪರೆ ಇದೆ. ಪಂಚಪೀಠಗಳು ಮೊದಲಿನಿಂದಲೂ ಸಮಾಜದ ಉನ್ನತ ಸ್ಥಾನದಲ್ಲಿವೆ. ಆದರೆ, ಈಗ ಸಮಾಜ ಹಾಳಾಗುತ್ತಿರುವುದು ಕಂಡು ನಾವು ನಮ್ಮ ಸ್ಥಾನಮಾನವನ್ನೂ ಲೆಕ್ಕಿಸದೆ ಸಮುದಾಯದ ಒಳಿತಿಗೆ ಎಲ್ಲರ ಜೊತೆ ಸಮಾಲೋಚನೆಗೆ ಆಗಮಿಸಿದ್ದೇವೆ. ಸಮಾಜದ ಒಳಿತಿಗೆ ನಮ್ಮ ಪರಂಪರೆಯ ಆಚರಣೆಯನ್ನು ಬದಿಗಿಟ್ಟು, ಎಲ್ಲರೊಂದಿಗೆ ಸಮಾನವಾಗಿ ವೇದಿಕೆ ಹಂಚಿಕೊಂಡು ಸಮಾಜದ ಪರ ಕೆಲಸ ಮಾಡುತ್ತಿದ್ದೇವೆ.
Advertisement
ನೀವು ಅಡ್ಡಪಲ್ಲಕ್ಕಿ ಉತ್ಸವ ಮಾಡಿಸಿಕೊಳ್ಳುವುದು ಶೋಷಣೆಯಲ್ಲವೇ ?ಅಡ್ಡ ಪಲ್ಲಕ್ಕಿ ಉತ್ಸವ ಮಾಡಿಸಿಕೊಳ್ಳುವುದು ಮೊದಲಿನಿಂದಲೂ ಬಂದಿರುವ ಪರಂಪರೆ, ಭಕ್ತರು ತಮ್ಮ ಇಚ್ಚೆಯಂತೆ ಅಡ್ಡಪಲ್ಲಕ್ಕಿ ಉತ್ಸವ ಮಾಡುತ್ತಾರೆ. ಇತ್ತೀಚೆಗೆ ನಾವೆಲ್ಲವನ್ನೂ ಸರಳೀಕರಿಸಿದ್ದೇವೆ. ಪಂಚ ಪೀಠಾಧೀಶರು ಹೊಸದಾಗಿ ಒಂದು ಊರಿಗೆ ಹೋಗಬೇಕಾದರೆ, ಅಡ್ಡ ಪಲ್ಲಕ್ಕಿ ಉತ್ಸವ ನಡೆಯುತ್ತಿತ್ತು. ಈಗ ಪಲ್ಲಕ್ಕಿ ಬದಲು ರಥ ಅಥವಾ ಪಾದಯಾತ್ರೆಯ ಮೂಲಕವೂ ತೆರಳುತ್ತೇವೆ. ಯಾವುದಕ್ಕೂ ನಿರ್ಬಂಧ ಇಲ್ಲ. ಭಕ್ತರು ಅವರ ಮನಶಾಂತಿಗೆ ಅಡ್ಡ ಪಲ್ಲಕ್ಕಿ ಉತ್ಸವ ನಡೆಸುತ್ತಾರೆ. ಅದಕ್ಕೆ ನಮ್ಮ ಒತ್ತಾಯವೇನೂ ಇಲ್ಲ. ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಕ ಅಲ್ವಾ ?
ಲಿಂಗಾಯತ ಅನ್ನೋದು ಧರ್ಮವೇ ಅಲ್ಲ. ಬಸವಣ್ಣನ ವಚನಗಳಲ್ಲಿ ಲಿಂಗಾಯತ ಪದವೇ ಪ್ರಯೋಗವಾಗಿಲ್ಲ. ಬಸವಣ್ಣ ಧರ್ಮ ಸ್ಥಾಪಕ ಅಲ್ಲ. ಧರ್ಮ ಪ್ರಚಾರಕ. ಬಸವಣ್ಣ ತನ್ನ ವಚನಗಳಲ್ಲಿ ವೇದ, ಆಗಮಗಳ ಉದಾಹರಣೆ ನೀಡಿದ ಮೇಲೆ ಆತ ಹಿಂದೂ ಅಲ್ಲ ಎಂದು ಹೇಗೆ ಹೇಳುತ್ತೀರಿ? ಬಸವಣ್ಣ ಯಾವತ್ತೂ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಹೇಳಿಲ್ಲ. ಶೈವನಿದ್ದೆ ವೀರಶೈವನಾದೆ ಎಂದು ಬಸವಣ್ಣ ಹೇಳಿದ್ದಾನೆ. ಬಸವಾದಿ ಶರಣರ ಯಾವ ವಚನದಲ್ಲಿಯೂ ಲಿಂಗಾಯತ ಧರ್ಮ ಎಂದು ಹೇಳಿಕೊಂಡಿಲ್ಲ. ಬಸವಣ್ಣ ವೀರಶೈವ ಸಮಾಜ ಸುಧಾರಕ ಅಷ್ಟೇ. ವೀರಶೈವ ಮಹಾಸಭೆಯವರೇ ಪ್ರತ್ಯೇಕ ಧರ್ಮ ಬೇಕು ಅಂತಿದಾರಲ್ಲಾ ?
ಹೌದು. ಅವರು ಮೊದಲಿನಿಂದಲೂ ವೀರಶೈವ ಲಿಂಗಾಯತ ಸೇರಿ ಪ್ರತ್ಯೇಕ ಧರ್ಮ ಬೇಕು ಎಂದು ಕೇಳುತ್ತಿದ್ದಾರೆ. ಈ ವಿಷಯದಲ್ಲಿ ಅವರೊಂದಿಗೆ ನಮ್ಮ ಭಿನ್ನಾಭಿಪ್ರಾಯವಿದೆ. ಈಗಾಗಲೇ ಮಹಾಸಭೆಯ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿರುವುದರಿಂದ ವ್ಯರ್ಥ ಪ್ರಯತ್ನ ಮಾಡುವುದನ್ನು ಬಿಟ್ಟು ಸಮಾಜದ ಹಿಂದುಳಿದವರಿಗೆ ಮೀಸಲಾತಿ ಸವಲತ್ತು ಕೊಡಿಸುವ ಪ್ರಯತ್ನ ಮಾಡುವಂತೆ ಅವರ ಮನವೊಲಿಸುತ್ತೇವೆ. ಸೆಪ್ಟೆಂಬರ್ 4ರಂದು ಮಹಾಸಭೆಯವರನ್ನು ಕರೆದು ಮಾತನಾಡುತ್ತೇವೆ. ಪ್ರತ್ಯೇಕ ಧರ್ಮದ ಬೇಡಿಕೆ ಹಿಂದೆ ರಾಜಕೀಯ ಲಾಭದ ಲೆಕ್ಕಾಚಾರ ಇದೆಯಾ ?
ಖಂಡಿತ ಹೌದು. ಇದುವರೆಗೂ ಯಾವುದೇ ಸರ್ಕಾರಗಳು ಮಾಡದಿರುವ ಪ್ರಯತ್ನವನ್ನು ಈಗ ಚುನಾವಣೆ ಒಂದು ವರ್ಷ ಬಾಕಿ ಇರುವಾಗ ಮಾಡುತ್ತಿರುವುದರ ಹಿಂದೆ ರಾಜಕಾರಣದ ವಾಸನೆ ಹೊಡೆೆಯುತ್ತಿದೆ. ಸಿದ್ದರಾಮಯ್ಯ ಅವರಿಗೆ ವೀರಶೈವ ಲಿಂಗಾಯತರ ಮೇಲೆ ಅಷ್ಟೊಂದು ಅಭಿಮಾನ ಇದ್ದರೆ, ನಮ್ಮ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿ ಕೊಡಲಿ. ನಮ್ಮ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಉಚಿತ ಹಾಸ್ಟೆಲ್‌ಗಳನ್ನು ಕಟ್ಟಿಕೊಡಲಿ. ಲಿಂಗಾಯತ ಪ್ರತ್ಯೇಕ ಧರ್ಮ ಆದರೆ, ಸಮಾಜಕ್ಕೆ ಅನುಕೂಲ ಆಗುವುದಿಲ್ಲವಾ ?
ಮೊದಲಿಗೆ ಲಿಂಗಾಯತ ಅನ್ನೋದು ಧರ್ಮವೇ ಅಲ್ಲ. ಈಗ ಲಿಂಗಾಯತರು ಎಂದು ಹೇಳುವವರನ್ನು ಕೇಳಿ ಅವರ ಮನೆ ದೇವರು ಯಾರು ಎಂದು ಎಲ್ಲರೂ ತಮ್ಮ ಮನೆ ದೇವರ ಹೆಸರು ಹೇಳುತ್ತಾರೆ. ಲಿಂಗ ಪೂಜೆ ಮಾಡುತ್ತೇವೆ ಎನ್ನುವವರಿಗೆ ಮನೆದೇವರು ಏಕೆ ಬೇಕು? ಎಂ.ಬಿ. ಪಾಟೀಲರು, ಹೊರಟ್ಟಿ ತಮಗೆ ಯಾವುದೇ ಮನೆ ದೇವರಿಲ್ಲ. ತಾವು ಯಾವುದೇ ದೇವಸ್ಥಾನಕ್ಕೆ ಹೋಗುವುದಿಲ್ಲ ಎಂದು ಹೇಳಲಿ ನೋಡೋಣ. ಪ್ರತ್ಯೇಕ ಧರ್ಮ ಘೋಷಣೆಯಾಗುವುದರಿಂದ ಸಮುದಾಯಕ್ಕೆ ಯಾವುದೇ ರೀತಿಯ ಲಾಭವಿಲ್ಲ. ಅಲ್ಪ ಸಂಖ್ಯಾತರ ಮಾನ್ಯತೆ ಸಿಗುವುದರಿಂದ ಶಿಕ್ಷಣ ಸಂಸ್ಥೆ ನಡೆಸುವವರಿಗೆ ಅನುಕೂಲವಾಗಲಿದೆ. ಅದಕ್ಕಾಗಿಯೇ ಎಂ.ಬಿ. ಪಾಟೀಲರು ಮುಂದೆ ನಿಂತು ಮಾಡುತ್ತಿದ್ದಾರೆ. ಅವರು ತಮ್ಮ ಸಂಸ್ಥೆಯಲ್ಲಿ ಎಷ್ಟು ಜನ ವೀರಶೈವ ಲಿಂಗಾಯತರಿಗೆ ಉಚಿತ ಶಿಕ್ಷಣ ನೀಡಿದ್ದಾರೆ. ಎಲ್ಲರಿಂದಲೂ ಡೊನೇಶನ್ ಪಡೆದುಕೊಂಡೇ ಸೀಟ್ ನೀಡಿದ್ದಾರೆ. ಯಾರೋ ವ್ಯಾಪಾರಿಗಳ ಅನುಕೂಲಕ್ಕಾಗಿ ಧರ್ಮ ಮಾಡುವ ಬದಲು ಸಮಾಜದಲ್ಲಿನ ಬಡವರಿಗೆ ಅನಕೂಲವಾಗಲಿ ಎನ್ನುವುದು ನಮ್ಮ ವಾದ. ವೀರಶೈವ ಮಹಾಸಭೆಯ ಹೆಸರು ಬದಲಾಯಿಸುವಂತೆ ಲಿಂಗಾಯತರು ಬೇಡಿಕೆ ಇಟ್ಟಿದ್ದಾರಲ್ಲಾ ?
ಅದನ್ನು ಯಾವುದೇ ಕಾರಣಕ್ಕೂ ನಾವು ಮಾಡಿ ಕೊಡುವುದಿಲ್ಲ. ಹಾನಗಲ್ ಕುಮಾರಸ್ವಾಮಿಗಳ ಇಚ್ಚೆಯಂತೆ ಮಹಾಸಭೆ ನಡೆಯುತ್ತಿದೆ. ಲಿಂಗಾಯತರು ಬೇಕೆಂದರೆ ಪ್ರತ್ಯೇಕ ಸಭೆ ಮಾಡಿಕೊಳ್ಳಲಿ. ಪಂಚಾಚಾರ್ಯರು ಬಸವಣ್ಣನಿಗೆ ಗೌರವ ಕೊಡದಿರುವುದಕ್ಕೆ ಪ್ರತ್ಯೇಕ ಧರ್ಮದ ಬೇಡಿಕೆ ಹುಟ್ಟಿಕೊಂಡಿತು ಎನ್ನೋ ಮಾತಿದೆಯಲ್ಲಾ?
ಪಂಚಾಚಾರ್ಯರು ಮೊದಲು ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಬಸವಣ್ಣ ಆ ಮೇಲೆ ಬಂದು ಸಮಾಜ ಸುಧಾರಣೆ ಮಾಡಿದ್ದಾನೆ. ಹಾಗಂತ ನಾವ್ಯಾರೂ ಬಸವಣ್ಣನನ್ನು ಕಡೆಗಣಿಸಿಲ್ಲ. ಉದ್ದೇಶ ಪೂರ್ವಕವಾಗಿಯೇ ಬಸವಣ್ಣ ಗುರು ಪರಂಪರೆಗಿಂತ ಹೆಚ್ಚು ಎನ್ನುವ ಪ್ರಯತ್ನ ನಡೆಸಿದಾಗ ಆ ರೀತಿಯ ಬೆಳವಣಿಗೆ ಆಗಿರುತ್ತದೆ. ಆಚಾರ್ಯರು ಮತ್ತು ಬಸವಣ್ಣ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕೆನ್ನುವುದೇ ನಮ್ಮ ಪ್ರಯತ್ನ. ಪ್ರತ್ಯೇಕ ಧರ್ಮ ಕೇಳುವರ ಮನವೊಲಿಸುತ್ತೀರಾ?
ಮೊದಲು ಮಹಾಸಭೆಯವರನ್ನು ಕರೆದು ಮನವೊಲಿ ಸುತ್ತೇವೆ. ನಂತರ ಲಿಂಗಾಯತ ಧರ್ಮ ಬೇಡಿಕೆ ಇಡುವವರ ಜೊತೆಗೆ ಮಾತನಾಡುತ್ತೇವೆ. ನಮ್ಮೊಂದಿಗೆ ಬಹುತೇಕ ವಿರಕ್ತ ಮಠಾಧೀಶರಿದ್ದಾರೆ. ಕೆಲವೇ ಸ್ವಾಮೀಜಿಗಳು ವೈಯಕ್ತಿಕ ಲಾಭಕ್ಕಾಗಿ ಅವರೊಂದಿಗೆ ಸೇರಿಕೊಂಡಿದ್ದಾರೆ. ಅದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಮೀಸಲಾತಿ ಲಾಭಕ್ಕಾಗಿಯೇ ಪ್ರತ್ಯೇಕ ಧರ್ಮದ ಬೇಡಿಕೆ ಇದೆ. ನೀವೂ ಅದನ್ನೇ ಕೇಳುತ್ತಿದ್ದೀರಲ್ಲಾ ?
ಈಗಿರುವ ವ್ಯವಸ್ಥೆಯಲ್ಲಿ ಧರ್ಮಾಧಾರಿತ ಹಾಗೂ ಜಾತಿಯಾಧಾರಿತ ಮೀಸಲಾತಿ ವ್ಯವಸ್ಥೆ ಇದೆ. ಈ ವ್ಯವಸ್ಥೆ ಹೋಗಬೇಕು ಎನ್ನುವುದು ನಮ್ಮ ಬಯಕೆ. ಆರ್ಥಿಕತೆಯ ಆಧಾರದಲ್ಲಿ ಮೀಸಲಾತಿ ದೊರೆಯಬೇಕು. ಆಗ ಸಮಾಜದಲ್ಲಿ ಮೇಲು ಕೀಳು ಎಂಬ ಭಾವನೆ ನಿವಾರಣೆಯಾಗುತ್ತದೆ. ಜಾತಿಯಾಧಾರಿತ ಮೀಸಲಾತಿ ಬಹಳ ದಿನ ಉಳಿಯುವುದಿಲ್ಲ. ತಲಾಖ್‌ನಂತೆ ಇದೂ ಒಂದು ದಿನ ಅಂತ್ಯ ಕಾಣುತ್ತದೆ. ಹಿಂದೂ ಧರ್ಮ ಜಡ್ಡು ಗಟ್ಟಿದೆ ಅಂತಾರಲ್ವ…
ಹಿಂದೂ ಧರ್ಮದಲ್ಲಿ ಎಲ್ಲವೂ ಕೆಟ್ಟದ್ದಿಲ್ಲ. ಕೆಲವು ಅನಿಷ್ಠ ಪದ್ದತಿಗಳಿವೆ. ಹಾಗಂತ ಸಂಪೂರ್ಣ ಧರ್ಮ ಕೆಟ್ಟಿದೆ ಎಂದು ಹೇಳುವುದು ಸರಿಯಲ್ಲ. ನಿಮ್ಮ ಸಭೆಗೆ ಬಿಜೆಪಿ ಪರೋಕ್ಷ ಬೆಂಬಲವಿತ್ತು ಅನ್ನುವ ಆರೋಪ ಕೇಳಿ ಬರುತ್ತಿದೆಯಲ್ಲಾ?
ನಾವು ನಡೆಸಿದ ಸಭೆಗೆ ಯಾವುದೇ ರಾಜಕಾರಣಿ ಅಥವಾ ಯಾವುದೇ ಪಕ್ಷದ ಬೆಂಬಲ ಇಲ್ಲ. ನಾವು ಸ್ವಾಮೀಜಿಗಳೆಲ್ಲರೂ ಧರ್ಮ ಒಡೆದು ಹೋಗುತ್ತಿರುವುದರಿಂದ ಈ ಸಂದರ್ಭದಲ್ಲಿ ಮಾತನಾಡದೇ ಹೋದರೆ ಹಾಳಾಗಿ ಹೋಗುತ್ತದೆ ಎಂದು ನಾವೇ ಸ್ವಂತ ಖರ್ಚಿನಿಂದ ಹಣ ಹಾಕಿಕೊಂಡು ಬಂದಿದ್ದೆವು. ಎಲ್ಲ ಸ್ವಾಮೀಗಳೂ ಕೂಡ ಹಾಗೇ ಸಭೆಗೆ ಬಂದಿದ್ದರು. ಇದರ ಹಿಂದೆ ಯಾವ ಪಕ್ಷದ ಬೆಂಬಲವೂ ಇಲ್ಲ. ಸಚಿವರಿಗಿಲ್ಲೇನು ಕೆಲಸ?
ಸಚಿವರಾಗಿರುವ ಎಂ.ಬಿ. ಪಾಟೀಲ್, ವಿನಯ ಕುಲಕರ್ಣಿ, ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿಗೆ ಧರ್ಮದ ಬಗ್ಗೆ ಮಾತನಾಡಲು ಏನು ಕೆಲಸ ಇದೆ ಇಲ್ಲಿ? ಸಚಿವರಾದವರಿಗೆ ಇದೆಲ್ಲ ಏಕೆ ಬೇಕು? ಇದರ ಹಿಂದೆ ಸಮಾಜ ಒಡೆಯುವ ಪ್ರಯತ್ನ ನಡೆಯುತ್ತಿದೆ. ಲಿಂಗಾಯತ ವೀರಶೈವ ಸಮಾಜ ಒಂದಾಗಿ ಯಾವುದೇ ಒಂದು ಪಕ್ಷಕ್ಕೆ ಬೆಂಬಲ ನೀಡಿದರೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಈ ಪ್ರಯತ್ನ ನಡೆಯುತ್ತಿದೆ. ಸಂದರ್ಶನ: ಶಂಕರ ಪಾಗೋಜಿ