Advertisement

ತೋಟ-ಗದ್ದೆಗಳಲ್ಲೇ ನಡೆಯಲಿ ಸಂಶೋಧನೆ: ಡಾ|ಪ್ರಕಾಶ ಭಟ್‌

02:27 PM Feb 15, 2023 | Team Udayavani |

ಧಾರವಾಡ: ಕೃಷಿಯ ಸಮಸ್ಯೆಗಳು ಕೃಷಿಯೊಳಗಿಲ್ಲ. ನಮ್ಮ ಇಂದಿನ ಅಭಿವೃದ್ಧಿಯ ಮಾದರಿಯೊಳಗಿದೆ ಎಂದು ಚಿಂತಕ ಡಾ| ಪ್ರಕಾಶ ಭಟ್‌ ಹೇಳಿದರು. ಕವಿಸಂನಲ್ಲಿ ಸಾಹಿತ್ಯ ಮಂಟಪದಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೃಷ್ಣಮೂರ್ತಿ ಬಿಳಿಗೆರೆ ಅವರ “ಮಣ್ಣು ಕಥನ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

Advertisement

ಅರಿವು, ಜ್ಞಾನ, ತಿಳಿವು ಎಲ್ಲವೂ ಕೇವಲ ಪುಸ್ತಕಗಳಲ್ಲಿ ಮಾತ್ರ ಇಲ್ಲ ಅನ್ನುವ ಮಹಾಸತ್ಯವನ್ನು ಪುಸ್ತಕದ ರೂಪದಲ್ಲಿಯೇ ಹೇಳುವ ದುರಂತ ನಮ್ಮದಾಗಿದೆ. ಮಣ್ಣು ಕೇವಲ ಒಂದು ಭೌತಿಕ ವಸ್ತುವಲ್ಲ. ಅದೊಂದು ದೊಡ್ಡ ಜೀವ ಸಮುದಾಯ. ಮಳೆ ಮತ್ತು ಮಣ್ಣುಗಳ ನಡುವಿನ ಸಂಬಂಧ ನಮ್ಮ ಶಿಕ್ಷಣ ನಮಗೆ ಕಲಿಸುವುದಿಲ್ಲ.

ಇದು ಬದಲಾಗಬೇಕು. ಇದಲ್ಲದೇ ನಮ್ಮ ಸಂಶೋಧನೆಗಳು ಕೇವಲ ಪ್ರಯೋಗಾಲಯದಲ್ಲಿ ಮಾತ್ರವಲ್ಲ, ಹೊಲ, ತೋಟ, ಗದ್ದೆಗಳಲ್ಲಿ ನಡೆಯಬೇಕು. ಹೊಸ ಪ್ರಯೋಗ-ಪ್ರಯತ್ನಗಳನ್ನು ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ದೊಡ್ಡ ರೈತರು ಮಾಡಬೇಕು. ಆ ಜವಾಬ್ದಾರಿ ಅವರ ಮೇಲಿದೆ ಎಂದರು.

ಪುಸ್ತಕ ಪರಿಚಯಿಸಿದ ಡಾ| ಚೆನ್ನಪ್ಪ ಅಂಗಡಿ ಮಾತನಾಡಿ, ಕೃಷ್ಣಮೂರ್ತಿ ಬಿಳಿಗೆರೆ ವಿಶಿಷ್ಟವಾದ ಜೀವಪರವಾದ ಭಾಷೆಯಲ್ಲಿ ಈ ಮಣ್ಣು ಕಥನ ಪುಸ್ತಕವನ್ನು ಬರೆದಿದ್ದಾರೆ. ಮಣ್ಣು ಎಂಬುದನ್ನು ಅವಜ್ಞೆ ಮಾಡದೆ ಇಂದು ಅತ್ಯಂತ ಆಧುನಿಕ ವೈಜ್ಞಾನಿಕ ಸಂಶೋಧನೆಗಳ ಪ್ರಕಾರವೂ ಮಣ್ಣು ಎಷ್ಟು ಅದ್ಭುತ ಸಂಗತಿಯೆಂಬುದನ್ನು ಅರಿತು ಕೃಷಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಪುಸ್ತಕದಲ್ಲಿ ಇತಿಹಾಸ, ಪುರಾಣ ಹಾಗೂ ವರ್ತಮಾನ ಎಲ್ಲವೂ ಇದೆ. ಅಕ್ಷರ ಸಾಕ್ಷರತೆಯ ಜತೆಗೆ ಇಂದು ನಾವು ಜಲಸಾಕ್ಷರತೆಯನ್ನು ಕೂಡ ಕಲಿಯಬೇಕಾಗಿದೆ ಎಂದು ಹೇಳಿದರು.

ಪ್ರಕಾಶಕರಾದ ಮಂಜುಳಾದೇವಿ ಮಾತನಾಡಿ, ಇಂದು ಮೊಬೈಲ್‌ ಯುಗದಲ್ಲಿ ಪುಸ್ತಕ ಕೊಂಡು ಓದುವ ಸಂಸ್ಕೃತಿ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. 1995ರಿಂದ ಪ್ರಾರಂಭಿಸಿ ನಮ್ಮ ಪ್ರಕಾಶನದ ವತಿಯಿಂದ ಈವರೆಗೆ 40 ಪುಸ್ತಕ ಪ್ರಕಟಿಸಿದ್ದೇವೆ. ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವ ಹಾಗೆ ಪಾಲಕರು, ಶಿಕ್ಷಕರು ಪ್ರೇರೇಪಿಸಬೇಕು ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಡಾ| ಸಿದ್ಧನಗೌಡ ಪಾಟೀಲ ಮಾತನಾಡಿ, ಇಂದು ನಾವು ವಿಷಪೂರಿತ ಆಹಾರ ಸೇವಿಸುತ್ತಿದ್ದೇವೆ. ಸಾವಯವ ಆಹಾರ ಚಳವಳಿ ಬೆಳೆಸಬೇಕಿದೆ. ಇದು ಕೇವಲ ಮಣ್ಣು ಕಥನ ಅಲ್ಲ. ಇದು ನೀರು ಕಥನವೂ ಹೌದು. ಪರಿಸರಸ್ನೇಹಿ ಕೃಷಿಯ ಯಶೋಗಾಥೆಗಳಿಗೆ ಸರಕಾರ ಪೋಷಕ
ನೀತಿ ರೂಪಿಸಿ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಹೇಳಿದರು.

ಕವಿಸಂ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಪ್ರೊ| ಮಾಲತಿ ಪಟ್ಟಣಶೆಟ್ಟಿ, ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಡಾ| ಮಹೇಶ ಹೊರಕೇರಿ, ರಾಜೇಂದ್ರ ಪೋದ್ದಾರ, ಸಿ.ಯು. ಬೆಳ್ಳಕ್ಕಿ, ನಿಂಗಣ್ಣ ಕುಂಟಿ, ಡಾ| ಸಂಗಮನಾಥ ಲೋಕಾಪುರ, ಮಹಾಂತೇಶ ನರೇಗಲ್‌, ಎಂ.ಎಂ. ಚಿಕ್ಕಮಠ, ಎಫ್‌.ಬಿ. ಕಣವಿ, ಅಶೋಕ ನಿಡವಣಿ, ಶಂಭಯ್ಯ ಹಿರೇಮಠ ಇದ್ದರು. ಡಾ| ಸಂಜೀವ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿ, ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next