Advertisement

ಅಧಿಕಾರಿಗಳು ಮುತುವರ್ಜಿಯಿಂದ ಕೆಲಸ ನಿರ್ವಹಿಸಲಿ: ಗೌತಮ

02:59 PM Mar 29, 2018 | Team Udayavani |

ಬೀದರ: ಜಿಲ್ಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವ ಪ್ರತಿಯೊಬ್ಬರಿಗೂ ಮತದಾರರ ಗುರುತಿನ ಚೀಟಿ ವಿತರಿಸುವ ಅಭಿಯಾನ  ಹಮ್ಮಿಕೊಳ್ಳಲಾಗುತ್ತಿದೆ. ಅಧಿಕಾರಿಗಳು ಈ ಬಗ್ಗೆ ಹೆಚ್ಚು ಮುತುವರ್ಜಿವಹಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಚುನಾವಣಾ ತರಬೇತಿ ಅಧಿಕಾರಿ ಡಾ|ಗೌತಮ ಅರಳಿ ಹೇಳಿದರು.

Advertisement

ನಗರದ ರಂಗ ಮಂದಿರದಲ್ಲಿ ಚುನಾವಣೆ ಅಧಿಕಾರಿ ಮತ್ತು ಸಿಬ್ಬಂದಿಗಾಗಿ ನಡೆದ ಚುನಾವಣಾ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಹಾಗಾಗಿ ಸರ್ಕಾರದ ಯಾವುದೇ ಜಾಹೀರಾತು ಫಲಕಗಳು ಇಲ್ಲದಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಚುನಾವಣೆಗೆ ಅಗತ್ಯವಿರುವಷ್ಟು ಮಾತ್ರ ಸಿಬ್ಬಂದಿ ಲಭ್ಯವಿದ್ದು, ಅನಾರೋಗ್ಯಕ್ಕೆ ಒಳಗಾದವರನ್ನು ತಪಾಸಣೆ ನಡೆಸಿ ವಿನಾಯಿತಿ ನೀಡಲಾಗಿದೆ. ಯಾರಾದರೂ ಸುಳ್ಳು ನೆಪ ಹೇಳಿ ಚುನಾವಣೆ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಯತ್ನಿಸುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಮತದಾನದ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸಲು ಜಿಲ್ಲಾಡಳಿತ, ಸ್ವೀಪ್‌ ಸಮಿತಿಯಿಂದ ಹಲವು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪ್ರಬಂಧ, ಚಿತ್ರಕಲೆ ಸ್ಪರ್ಧೆ ಹಾಗೂ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗುತ್ತಿದೆ.

ಕಾಲೇಜುಗಳಲ್ಲಿ ಕ್ಯಾಂಪಸ್‌ ಅಂಬಾಸಿಡರ್‌ ಗಳನ್ನು ನೇಮಿಸಲಾಗಿದೆ. ಜನರಿಗೆ ಚುನಾವಣೆ ಬಗ್ಗೆ ತಿಳಿವಳಿಕೆ ಮೂಡಿಸಲು ಬೂತ್‌ ಮಟ್ಟದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಚುನಾವಣೆಯಲ್ಲಿ ನೂರ ಪ್ರತಿಶತ ಮತದಾನವಾಗಲು ಪ್ರಯತ್ನಿಸಬೇಕು ಎಂದು ಹೇಳಿದರು.

ಈ ಚುನಾವಣೆಯಲ್ಲಿ ಇವಿಎಂ ಯಂತ್ರದ ಜತೆಗೆ ವಿವಿ ಪ್ಯಾಟ್‌(ಮತದಾನ ಖಾತ್ರಿ ಯಂತ್ರ) ಪರಿಚಯಿಸಲಾಗಿದೆ. ಇದು ಮತದಾನದಾನದ ಬಳಿಕ ಮತ ಯಾವ ಚಿಹ್ನೆಗೆ ಹೋಗಿದೆ ಎಂಬ ಮಾಹಿತಿ ತೋರಿಸುತ್ತದೆ. ಈ ಯಂತ್ರವನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಿದೆ. ಚುನಾವಣೆ ಸಿಬ್ಬಂದಿ ಯಾವುದೇ ಕಾರಣಕ್ಕೂ ಮಾನಸಿಕ ಒತ್ತಡಕ್ಕೆ ಒಳಗಾಗದೇ ಶಾಂತತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.

Advertisement

ಅಂಗವಿಕಲರು ಸುಲಭವಾಗಿ ಮತದಾನ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಮತಗಟ್ಟೆ ಕೇಂದ್ರಗಳಲ್ಲಿ ಗಾಲಿ ಕುರ್ಚಿಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಿಳೆಯರು, ಯುವ ಮತದಾರರು, ಅಂಗವಿಕಲರು, ಮಂಗಳಮುಖೀಯರು ಹೆಚ್ಚಿನ ಪ್ರಮಾಣದಲ್ಲಿ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ
ಕಾರ್ಯಕ್ರಮದಲ್ಲಿದ್ದರು

Advertisement

Udayavani is now on Telegram. Click here to join our channel and stay updated with the latest news.

Next