Advertisement

ವಿಧಾನಸಭಾಧ್ಯಕ್ಷರಿಗೆ ಪರಮೋಚ್ಛ ಅಧಿಕಾರವಿರಲಿ

07:31 AM May 29, 2020 | Lakshmi GovindaRaj |

ಬೆಂಗಳೂರು: ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹತೆ ಸಂಬಂಧ ವಿಧಾನಸಭಾಧ್ಯಕ್ಷರಿಗೆ ಪರಮೋಚ್ಛ ಅಧಿಕಾರವಿರಬೇಕು. ಕಾಲಮಿತಿಯಲ್ಲಿ ಅನರ್ಹತೆ ಪ್ರಕರಣಗಳ ವಿಚಾರಣೆ ಮುಗಿಯಬೇಕು. ರಾಜೀನಾಮೆ ನೀಡಿದ ಶಾಸಕರು  ಮರುಚುನಾವಣೆಗೆ ಸ್ಪರ್ಧಿಸದಂತೆ ಹಾಗೂ ಅವರ ಕುಟುಂಬ ವರ್ಗದವರು ಸ್ಪರ್ಧಿಸದಂತೆ ತಿದ್ದುಪಡಿ ತರಬೇಕು ಎಂದು ಸಂಸದೀಯ ಗಣ್ಯರು ಅಭಿಪ್ರಾಯ ಪಟ್ಟಿದ್ದಾರೆಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ  ಕಾಗೇರಿ ಹೇಳಿದರು.

Advertisement

ಪಕ್ಷಾಂತರ ನಿಷೇಧ ಕಾಯ್ದೆಯ ಸಂವಿಧಾನದ  10ನೇ ಅನುಸೂಚಿಯಡಿ ಪೀಠಾಸೀನಾಧಿಕಾರಿಗಳ ಅಧಿಕಾರಗಳು ಮತ್ತು ಅದರಡಿ ರಚಿಸಲಾದ ನಿಯಮಗಳ ಮರುಪರಿಶೀಲನೆ ಸಂಬಂಧ ಸಂಸ  ದೀಯ ಗಣ್ಯರೊಂದಿಗೆ ಗುರುವಾರ ಸಭೆ  ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ 25 ಸಂಸದೀಯರೊಂದಿಗೆ ಸಮಾಲೋಚನೆ ನಡೆಸಲಾಗಿದೆ.

ಪ್ರಸಕ್ತ ರಾಜಕೀಯ ಪರಿಸ್ಥಿತಿ,  ರಾಜಕೀಯ ಪಕ್ಷಗಳು, ಚುನಾವಣಾ ಆಯೋಗ, ನ್ಯಾಯಾಂಗ ವ್ಯವಸ್ಥೆ ಬಗ್ಗೆಯೂ ಗಣ್ಯರು ಅಭಿಪ್ರಾಯ ನೀಡಿದ್ದಾರೆ. ಶಾಸಕಾಂಗದ ಘನತೆ, ಗೌರವವನ್ನೂ ಕಾಪಾಡುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ ಚುನಾವಣೋತ್ತರ  ಮೈತ್ರಿಗೂ ಅವಕಾಶ ನೀಡಬಾರದೆಂಬ ಸಲಹೆ ಕೇಳಿಬಂದಿದೆ ಎಂದು ಹೇಳಿದರು. ಅನರ್ಹತೆ ವಿಚಾರದಲ್ಲಿ ನ್ಯಾಯಾಂಗದ ಹಸ್ತಕ್ಷೇಪವಿರಬಾರದು. ಸ್ಪೀಕರ್‌ಗೆ ಪರಮಾಧಿಕಾರವಿರಬೇಕೆಂದು ಎಲ್ಲರೂ ಅಭಿಪ್ರಾಯ ಪಟ್ಟಿದ್ದಾರೆ. ಜೂನ್‌  10ರೊಳಗೆ ಸಾರ್ವಜನಿಕರು ವಿಧಾನಸಭೆಯ ಕಾರ್ಯ  ದರ್ಶಿಗಳಿಗೆ ತಮ್ಮ ಅಭಿಪ್ರಾಯ ನೀಡಬೇಕು. ಜೂ.5ರಂದು ಪರಿಷತ್‌ ಸದಸ್ಯರೊಂದಿಗೆ ಚರ್ಚಿಸಲಾಗುವುದು ಎಂದರು.

ವರದಿ ಸಲ್ಲಿಸಲು ಸೂಚಿಸಲಾಗಿದೆ – ಕಾಗೇರಿ:  ಕಾಯ್ದೆಯನ್ನು ಇನ್ನಷ್ಟು ಕಠಿಣಗೊಳಿಸಲು ಲೋಕಸಭಾಧ್ಯಕ್ಷರಾದ ಅಖೀಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನದ ಅಧ್ಯಕ್ಷರಾದ ಓಂ ಬಿರ್ಲಾ ಅವರು ರಾಜಸ್ಥಾನದ  ವಿಧಾನಸಭಾಧ್ಯಕ್ಷ‌ ಡಾ.ಸಿ.ಪಿ.ಜೋಷಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದಾರೆ. ಆ ಸಮಿತಿ ಸದಸ್ಯನಾದ ನನಗೆ ಕಾಯ್ದೆ ಬದಲಾವಣೆಯ ಅಂಶಗಳ ಬಗ್ಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಆ ಹಿನ್ನೆಲೆಯಲ್ಲಿ ಸಭೆ ಆಯೋಜಿಸಲಾಗಿದೆ  ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸಭೆಯಲ್ಲಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಆರೋಗ್ಯಕರ ಜನತಾಂತ್ರಿಕ ವ್ಯವಸ್ಥೆಗೆ ಪಕ್ಷಾಂತರ ಒಂದು ಶಾಪ. 1960ರ ದಶಕದಲ್ಲಿ ಆರಂಭವಾದ  ಪಕ್ಷಾಂತರ  ಪಿಡುಗಿನಿಂದ ದೇಶದ ಉದ್ದಗಲಕ್ಕೆ ಅನೇಕ ಸರ್ಕಾರಗಳು ಅಧಿಕಾರ ಕಳೆದುಕೊಳ್ಳಬೇಕಾಯಿತು. ಕೇಂದ್ರದಲ್ಲಿ ಅಧಿಕಾರ ಹಿಡಿದ ರಾಜಕೀಯ ಪಕ್ಷಗಳು ತಮ್ಮ ತಾಳಕ್ಕೆ ಕುಣಿಯದ ರಾಜ್ಯ ಸರ್ಕಾರಗಳನ್ನು ಪಕ್ಷಾಂತರಕ್ಕೆ ಪ್ರಚೋದಿಸಿ  ಉರುಳಿಸುತ್ತಿದ್ದುದು ಸಾಮಾನ್ಯ ಪ್ರಕ್ರಿಯೆಯಾಗಿತ್ತು. ಇಂತಹ ಸಂದರ್ಭದಲ್ಲಿ 1985ರಲ್ಲಿ ಅಂದಿನ ಪ್ರಧಾನಿ ರಾಜೀವ್‌ಗಾಂಧ ಸರ್ಕಾರ 52ನೇ ತಿದ್ದುಪಡಿ ಮೂಲಕ 10ನೇ ಅನುಸೂಚಿ ಅನ್ವಯ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೊಳಿಸಿತು  ಎಂದು ಹೇಳಿದರು.

Advertisement

ಅನರ್ಹರಿಗೆ 10 ವರ್ಷ ಚುನಾವಣೆಗೆ ಸ್ಪರ್ಧೆ ಬೇಡ: ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕರನ್ನು ಸದಸ್ಯತ್ವದಿಂದ ಅನರ್ಹಗೊಳಿಸುವ ಅಧಿಕಾರ ವಿಧಾನಸಭಾಧ್ಯಕ್ಷರಿಗೇ ಇರಬೇಕು. ಅನರ್ಹಗೊಂಡವರು 10 ವರ್ಷ ಚುನಾವಣೆಗೆ  ಸ್ಪರ್ಧಿಸಲು, ಯಾವುದೇ ರಾಜಕೀಯ ಅಧಿಕಾರ  ಅನುಭವಿಸಲು ಅವಕಾಶವಿರಬಾರದೆಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಪಕ್ಷಾಂತರ ನಿಷೇಧ ಕಾಯ್ದೆ ನಿಯಮಗಳ ಮರು ಪರಿಶೀಲನೆಗೆ ಅಭಿಪ್ರಾಯ  ಸಂಗ್ರಹಕ್ಕಾಗಿ ವಿಧಾನಸಭಾಧ್ಯಕ್ಷರು ಗುರುವಾರ ನಡೆಸಿದ ಸಂಸದೀಯ ಗಣ್ಯರ ಸಭೆಯಲ್ಲಿ ಪಾಲ್ಗೊಂಡ ಬಳಿಕ ಪ್ರತಿಕ್ರಿಯಿಸಿ, ಕಾಯ್ದೆಯಲ್ಲಿನ ಕೆಲ ನ್ಯೂನತೆ ಬಗ್ಗೆ ಚರ್ಚಿಸಲು ಸಮಿತಿ ರಚನೆಯಾಗಿದ್ದು, ಅದರಂತೆ ವಿಧಾನಸಭಾಧ್ಯಕ್ಷರು ಅಭಿಪ್ರಾಯ ಕೇಳಿದ್ದಾರೆ. ಪಕ್ಷಾಂತರ ನಿಷೇಧ  ಕಾಯ್ದೆಯಡಿ ಅನರ್ಹಗೊಂಡವರು ಎರಡು ಚುನಾವಣೆಗೆ ಸ್ಪರ್ಧಿಸಬಾರದು ಹಾಗೂ ಅವರಿಗೆ ಯಾವುದೇ ಅಧಿಕಾರ ಕೊಡಬಾರದು ಎಂದು ನಾನು ಸ್ಪಷ್ಟವಾಗಿ ಅಭಿಪ್ರಾಯ  ಹೇಳಿದ್ದೇನೆಂದು ತಿಳಿಸಿದರು.

ಶಾಸಕರು, ಪರಿಷತ್‌ ಸದಸ್ಯರೊಂದಿಗೆ ಸಾರ್ವಜನಿಕ ಅಭಿಪ್ರಾಯವನ್ನೂ ಸಂಗ್ರಹಿಸುವುದಾಗಿ ಸ್ಪೀಕರ್‌ ಹೇಳಿದ್ದಾರೆ. ಒಟ್ಟಾರೆ ಪಕ್ಷಾಂತರ ಕಾಯ್ದೆ ಯಾವುದೇ ನ್ಯೂನತೆ ಇಲ್ಲದೆ ಪಕ್ಷಾಂತರ ಮಾಡಿದವರಿಗೆ   ಶಿಕ್ಷೆಯಾಗುವಂತಾಗಬೇಕು. ಪ್ರಜಾಪ್ರಭುತ್ವದ ಬೇರುಗಳಿಗೆ ಪಕ್ಷಾಂತರ ಮಾರಕವಾಗಿದೆ. ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿ ಮಾಡುವ ಕೆಲಸ ಮಾಡಬೇಕೆಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.