Advertisement

ಪರಿಣಿತರ ಜ್ಞಾನ ಸಮಾಜದ ಒಳಿತಿಗೆ ಬಳಕೆಯಾಗಲಿ

01:02 PM Mar 13, 2022 | Team Udayavani |

ಬೀದರ: ವಿವಿಧ ಕ್ಷೇತ್ರಗಳ ಪರಿಣಿತರ ಜ್ಞಾನ ಸಮಾಜದ ಒಳಿತಿಗೆ ಬಳಕೆಯಾಗಬೇಕು ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಹೇಳಿದರು.

Advertisement

ನಗರದ ಕರ್ನಾಟಕ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರೊ| ಬಿ.ಜಿ. ಮೂಲಿಮನಿ ಫೌಂಡೇಶನ್‌ ಉದ್ಘಾಟಿಸಿ ಮಾತನಾಡಿದ ಅವರು, ಪರಿಣಿತರು ಹಾಗೂ ಸಂಪನ್ಮೂಲ ವ್ಯಕ್ತಿಗಳು ತಮ್ಮ ಜ್ಞಾನ ವಿದ್ಯಾರ್ಥಿಗಳು, ಯುವಕರಿಗೆ ಧಾರೆ ಎರೆಯಬೇಕು. ಈ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದರು.

ಪ್ರೊ| ಬಿ.ಜಿ. ಮೂಲಿಮನಿ ಶಿಕ್ಷಣ ತಜ್ಞರಾಗಿದ್ದಾರೆ. ಕಲ್ಯಾಣ ಕರ್ನಾಟಕದ ಬಗ್ಗೆ ಅಪಾರ ಕಳಕಳಿ ಹೊಂದಿದ್ದಾರೆ. ನಿವೃತ್ತಿ ನಂತರ ಸ್ವಂತ ಊರಲ್ಲೇ ನೆಲೆಸಿದ್ದಾರೆ. ಅವರ ಹೆಸರಲ್ಲಿ ಸ್ಥಾಪಿಸಿರುವ ಫೌಂಡೇಶನ್‌ ಈ ಭಾಗದ ಶೈಕ್ಷಣಿಕ ವಿಕಾಸಕ್ಕೆ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ದಯಾನಂದ ಅಗಸರ ಮಾತನಾಡಿ, ಮೂಲಿಮನಿ ಫೌಂಡೇಶನ್‌ ಜ್ಞಾನ ದಾಸೋಹಕ್ಕೆ ಮುಂದಾಗಿರುವುದು ಪ್ರಶಂಸನೀಯ ಎಂದರು.

ಮೂಲಿಮನಿ ಫೌಂಡೇಶನ್‌ ಸಂಸ್ಥಾಪಕ ಗೌರವಾಧ್ಯಕ್ಷ ಪ್ರೊ| ಬಿ.ಜಿ. ಮೂಲಿಮನಿ ಮಾತನಾಡಿ, ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಮಾಜ ನೆರವಾಗಬೇಕಿದೆ. ಆರ್ಥಿಕ ಸಮಸ್ಯೆಯಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಿದೆ. ಫೌಂಡೇಶನ್‌ ಈ ದಿಸೆಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.

Advertisement

ಸಾಹಿತಿ ಮಲ್ಲಿಕಾರ್ಜುನ ಮೂಲಿಮನಿ ರಚಿತ “ಸಮಕಾಲೀನ ಜಗತ್ತಿನಲ್ಲಿ ಸ್ವಾಮಿ ವಿವೇಕಾನಂದರ ಪ್ರಸ್ತುತತೆ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಅವರು, ಯುವಕರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂದು ಹೇಳಿದರು.

ಫೌಂಡೇಶನ್‌ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಫೌಂಡೇಶನ್‌ ಧ್ಯೇಯೋದ್ದೇಶ ವಿವರಿಸಿದರು. ಕೆಆರ್‌ಇ ಸಂಸ್ಥೆ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿದರು. ಈ ವೇಳೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಬೀದರ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ್‌, ಕೆಆರ್‌ಇ ಟ್ರಸ್ಟ್‌ ಅಧ್ಯಕ್ಷ ಬಸವರಾಜ ಪಾಟೀಲ ಅಷ್ಟೂರು, ಗುಲಬರ್ಗಾ ವಿವಿ ನಿವೃತ್ತ ಕುಲಸಚಿವ ಪ್ರತಾಪಸಿಂಗ್‌ ತಿವಾರಿ, ಸಿ.ಎಂ. ಶೆಟಕಾರ, ನಿವೃತ್ತ ಕರ್ನಲ್‌ ಶರಣಪ್ಪ ಸಿಕೇನಪುರ, ಕಲಬುರಗಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಲಕ್ಷ್ಮೀನಾರಾಯಣ, ಪ್ರಾಚಾರ್ಯ ಡಾ| ಎಸ್‌.ಎಂ. ಚಲುವಾ, ಬಿ.ಎಸ್‌. ಕುದರೆ, ಪ್ರೊ| ಎಸ್‌.ಬಿ. ಸಜ್ಜನಶೆಟ್ಟಿ, ಪ್ರೊ| ದೇವೇಂದ್ರ ಕಮಲ್‌, ಶಿಕ್ಷಣ ಸಂಸ್ಥೆಗಳ ಪ್ರಮುಖರು, ಗಣ್ಯರು ಇದ್ದರು. ವೀಣಾ ಜಲಾದೆ ನಿರೂಪಿಸಿದರು. ಓಂಕಾರ ಮಾಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next