Advertisement

ಸಮಾಜದ ಅಭ್ಯುದಯಕ್ಕೂ ಜ್ಞಾನ ಸಹಕಾರಿಯಾಗಲಿ

04:49 PM Sep 07, 2022 | Team Udayavani |

ಕಲಬುರಗಿ: ವಿದ್ಯಾರ್ಥಿ ದೆಸೆಯಲ್ಲಿ ಸಂಪಾದಿಸಿದ ಜ್ಞಾನ ಮತ್ತು ಕೌಶಲ ವೈಯಕ್ತಿಕ ಬದುಕಿಗೆ ಮಾತ್ರವಲ್ಲದೇ ಸಮಾಜದ ಅಭ್ಯುದಯಕ್ಕೂ ಸಹಕಾರಿಯಾಗಬೇಕು ಎಂದು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಾಜಿ ಅಧ್ಯಕ್ಷ ಡಾ|ಎ. ಎಸ್‌. ಕಿರಣಕುಮಾರ ಹೇಳಿದರು.

Advertisement

ನಗರದ ಹೈದ್ರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ (ಎಚ್‌ಕೆಇ) ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆದ 9ನೇ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿದರು. 75 ವರ್ಷಗಳ ಸುದೀರ್ಘ‌ ಅವಧಿಯಲ್ಲಿ ಭಾರತ ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕ ರಾಷ್ಟ್ರದ ಹೊಸ್ತಿಲಲ್ಲಿದೆ. ಇದಕ್ಕಾಗಿ ಹಿರಿಯರು ಸಾಕಷ್ಟು ಶ್ರಮಿಸಿದ್ದಾರೆ ಎಂದರು.

ದೇಶದ ಯುವ ಜನರು ಶಿಸ್ತಿನಿಂದ ಕಲಿಯುವ, ಯೋಜಿಸುವ, ಕಾರ್ಯಗತಗೊಳಿಸುವ ಬೌದ್ಧಿಕ ಸಾಮರ್ಥ್ಯದ ಹೊಸ್ತಿಲಲ್ಲಿ ಇದ್ದಾರೆ. ಅವರಿಗೆ ಸೂಕ್ತ ಅವಕಾಶ ದೊರೆತಲ್ಲಿ ಅದ್ಭುತಗಳನ್ನು ಸೃಷ್ಟಿಸಬಲ್ಲರು. ಸಾಮಾಜಿಕ ಬದಲಾವಣೆ ಮಾಡುವಂತ ಸಾಧನ, ವಿಜ್ಞಾನ ಮತ್ತು ತಂತ್ರಜ್ಞಾನ ನಮ್ಮಲ್ಲಿದೆ. ನಮ್ಮ ಹೊಸ ಆವಿಷ್ಕಾರ, ತಂತ್ರಜ್ಞಾನ ಸಮಾಜದ ಉಪಯೋಗಕ್ಕಾಗಿ ಮೀಸಲಿರಬೇಕು ಎಂದು ಹೇಳಿದರು.

ಸುಧಾರಿತ ತಂತ್ರಜ್ಞಾನ ಇಲ್ಲದ 1975ರ ಕಾಲಘಟ್ಟದಲ್ಲಿಯೂ ಡಾ|ವಿಕ್ರಂ ಸಾರಾಭಾಯಿ ಅವರು ಜನಸಾಮಾನ್ಯರಿಗೆ ನೆರವಾಗುವಂತಹ ಬಾಹ್ಯಾಕಾಶ ಯೋಜನೆ ರೂಪಿಸಿದ್ದರು. ರಷ್ಯಾ, ಫ್ರಾನ್ಸ್‌, ಜರ್ಮನಿ, ಅಮೆರಿಕದ ಸಹಾಯದಿಂದ ಸಂವಹನ ಸಂಪರ್ಕ, ಪ್ರಸರಣ, ಹವಾಮಾನ ಮುನ್ಸೂಚನೆ ಮತ್ತು ಭೂಮಿಯ ಮೇಲ್ವಿಚಾರಣೆ ಸಾಧಿಸಲಾಯಿತು ಎಂದು ನೆನಪಿಸಿಕೊಂಡರು.

ಇನ್ಫೊಕ್ರಾಫ್ಟ್‌ ಮುಖ್ಯ ಕಾರ್ಯನಿರ್ವಾಹಕ ರಾಜು ಬನ್ನೂರು ಮಾತನಾಡಿ, ಇಂದಿನ ಯುವ ಜನತೆ ಎಲ್ಲ ಅಡ್ಡಿ ಆತಂಕಗಳನ್ನು ಎದುರಿಸಿ ವಾಣಿಜ್ಯೋದ್ಯಮಿಗಳಾಗುವ ಸಾಹಸ ಇರುವಂತಹವರು. ಬಹುತೇಕರು ತಮ್ಮ ಜೀವನದ ನಿರ್ದಿಷ್ಟ ಗುರಿ ಏನು ಎನ್ನುವುದನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಕಂಡುಕೊಳ್ಳುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

Advertisement

ಪೋಷಕರ ಒತ್ತಡಕ್ಕೆ ಮಣಿದು ಉನ್ನತ ಹಂತದ ಶಿಕ್ಷಣಕ್ಕೆ ಹೋಗಬಾರದು. ಸರಿಯಾದ ಯೋಜನೆ ರೂಪಿಸಿಕೊಂಡು ಸಂಶೋಧನೆ, ಅಧ್ಯಯನ ಮತ್ತು ಬೋಧನೆಗಾಗಿ ಪ್ರವೇಶ ಪಡೆಯಿರಿ. ಒಂದು ನಿರ್ದಿಷ್ಟ ವಿಷಯದಲ್ಲಿ ಪರಿಣಿತಿ ಸಾಧಿಸಿದರೇ ವೃತ್ತಿ ಬದುಕಿಗೆ ಉತ್ತಮ ಎಂದು ಸಲಹೆ ನೀಡಿದರು.

ಹೈದ್ರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ|ಭೀಮಾಶಂಕ ಸಿ. ಬಿಲಗುಂದಿ ಮಾತನಾಡಿ, ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿದ ಶಿಕ್ಷಣ ಸಂಸ್ಥೆ ಎರಡನೇ ತಾಯಿ ಇದ್ದಂತೆ. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕೆ ಕಾಲೇಜು ಕ್ಯಾಂಪಸ್‌ನಲ್ಲಿ ಇನೋವೇಟಿವ್‌ ಲ್ಯಾಬ್‌, ಸ್ಟಾರ್ಟ್‌ಅಪ್‌, ಮಷಿನ್‌ ಲರ್ನಿಂಗ್‌, ಕೃತಕ ಬುದ್ಧಿಮತ್ತೆಯಂತ ಕೇಂದ್ರಗಳನ್ನು ತೆರೆಯ ಲಾಗಿದೆ. ಇವುಗಳನ್ನು ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.

ಕಂಪ್ಯೂಟರ್‌ ವಿಜ್ಞಾನ ವಿಭಾಗದಲ್ಲಿ ಬುಶ್ರಾ ನೌಶೀನ್‌ 7, ಎಲೆಕ್ಟ್ರಿಕಲ್‌ ವಿಭಾಗದಲ್ಲಿ ನಿಧಿ ಡೊಂಗರಗಾಂವಕರ್‌ 4, ಸಿವಿಲ್‌ ವಿಭಾಗದ ಮಹಾಲಕ್ಷ್ಮೀ 3 ಚಿನ್ನದ ಪದಕಗಳನ್ನು ಪಡೆದರು. 21 ವಿದ್ಯಾರ್ಥಿಗಳಿಗೆ 32 ಚಿನ್ನದ ಪದಕ ವಿತರಿಸಲಾಯಿತು. ಎಚ್‌ಕೆಇ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ|ಮಹದೇವಪ್ಪ ವಿ. ರಾಂಪೂರೆ, ಉಪಾಧ್ಯಕ್ಷ ಡಾ|ಶರಣಬಸಪ್ಪ ಆರ್‌. ಹರವಾಳ, ಕಾರ್ಯದರ್ಶಿ ಡಾ|ಜಗನ್ನಾಥ ಬಿ. ಬಿಜಾಪುರೆ, ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಖಂಡೇರಾವ್‌, ಡಾ|ಕೈಲಾಶ ಪಾಟೀಲ, ಸಾಯಿನಾಥ ಪಾಟೀಲ, ಪ್ರಾಚಾರ್ಯ ಡಾ|ಎಸ್‌.ಆರ್‌.ಮೀಸೆ, ಉಪ ಪ್ರಾಚಾರ್ಯರಾದ ಡಾ|ಭಾರತಿ ಹರಸೂರ, ಡಾ|ಕಲ್ಪನಾ, ಪರೀಕ್ಷಾ ವಿಭಾಗದ ಪ್ರೊ|ರವೀಂದ್ರ ಎಂ. ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next