ಶಹಾಬಾದ: ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಮಹಾತ್ವಾಕಾಂಕ್ಷಿ ಜಲ ಜೀವನ ಮಿಷನ್ ಯೋಜನೆ ಸಂಪೂರ್ಣ ಸದ್ಭಳಕೆಯಾಗಲಿ ಎಂದು ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ ಮರತೂರ ಹೇಳಿದರು.
ಹೊನಗುಂಟಾ ಗ್ರಾಮದಲ್ಲಿ ಗ್ರಾಪಂ ವತಿಯಿಂದ ಜಲ ಜೀವನ ಮಿಷನ್ ಯೋಜನೆ ಮೂಲಕ ಗ್ರಾಮಗಳಲ್ಲಿ ಕುಡಿಯುವ ನೀರು ಒದಗಿಸುವ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗ್ರಾಮೀಣ ಭಾಗದ ಎಲ್ಲ ಮನೆಗಳಿಗೂ ನಲ್ಲಿ ನೀರು ಪೂರೈಸಲು ಗುರಿ ಹೊಂದಲಾಗಿದೆ. ಈ ಯೋಜನೆಯಡಿಯಲ್ಲಿ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರು ಅವರ ಮನೆ ಬಾಗಿಲಿಗೆ ತಲುಪಲಿದೆ. ಇದರಿಂದ ಅಲೆದಾಡುವುದು ತಪ್ಪುತ್ತದೆ. ಅಲ್ಲದೇ, ಗ್ರಾಮೀಣ ಪ್ರದೇಶದ ಜನತೆಗೂ ಅನುಕೂಲವಾಗುತ್ತದೆ. ಮತಕ್ಷೇತ್ರದ ಜನತೆಗೆ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಸತತ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೇ ಈಗಾಗಲೇ ಗ್ರಾಮದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಒದಗಿಸಿದ್ದಾರೆ. ಗ್ರಾಮದಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿ ಆಗಿದೆ ಎಂಬ ಸಂತಸ ಭಾವ ನನಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಭೀಮಬಾಯಿ ಮಲ್ಲಪ್ಪ ರಸ್ತಾಪುರ ಕಾಮಗಾರಿಗೆ ಚಾಲನೆ ನೀಡಿದರು. ಗ್ರಾಪಂ ಉಪಾಧ್ಯಕ್ಷ ತಿಪ್ಪಣ್ಣ ಚಡಬಾ, ಮುಖಂಡರಾದ ರುದ್ರಗೌಡ ಮಾಲಿ ಪಾಟೀಲ, ದೇವೇಂದ್ರ ಕಾರೊಳ್ಳಿ, ಪೀರಪಾಶಾ, ನಜೀರ್ ಪಟೇಲ್, ಸಾಬಣ್ಣ ಕೊಲ್ಲೂರ್, ಮಲ್ಕಪ್ಪ ಮುದ್ದಾ, ಗ್ರಾಪಂ ಸದಸ್ಯರು ಇದ್ದರು.