ಚಿಕ್ಕಬಳ್ಳಾಪುರ: ಜಿಲ್ಲೆಗೆ ಅನುಷ್ಠಾನಗೊಳ್ಳುತ್ತಿರುವ ಹೆಬ್ಟಾಳ ಹಾಗೂ ನಾಗವಾರ ಏತ ನೀರಾವರಿ ಯೋಜನೆಯಿಂದ ಜಿಲ್ಲೆಯ 1800 ಕೆರೆಗಳಿಗೂ ನೀರು ಹರಿಸುವ ಕೆಲಸವನ್ನು ಸರ್ಕಾರ ಪ್ರಾಮಾಣಿಕವಾಗಿ ಮಾಡಬೇಕೆಂದು ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ ಆಗ್ರಹಿಸಿದರು.
ನಗರದ ಹೊರ ವಲಯದ ಕಂದವಾರ ಕೆರೆಗೆ ಹೆಚ್‌ಎನ್ ವ್ಯಾಲಿ ನೀರು ಹರಿಯುತ್ತಿರುವ ಬಂಡಹಳ್ಳಿ ಸಮೀಪದ ತೆರೆದ ಕಾಲುವೆಗೆ ವಿಶೇಷ ಪೂಜೆ ಸಲ್ಲಿಸಿ ಕುರಿ ಬಲಿಕೊಟ್ಟ ಬಳಿಕ ನೆರೆದಿದ್ದ ರೈತರನ್ನು ಉದ್ದೇಶಿಸಿ ಮಾತನಾಡಿ, ಹೆಚ್‌ಎನ್ ವ್ಯಾಲಿ ಯೋಜನೆ ಅನುಷ್ಠಾನದ ಹಿಂದೆ ರಾಜ್ಯ ರೈತ ಸಂಘದ ಹೋರಾದ ಪ್ರಮುಖ ಪಾತ್ರ ವಹಿಸಿದೆ ಎಂದರು.
26 ವರ್ಷಗಳಿಂದ ಹೋರಾಟ: ಬರಪೀಡಿತ ಭಾಗದ ನೀರಿನ ಸಮಸ್ಯೆ ನಿವಾರಿಸುವಂತೆ ಸುಮಾರು 26 ವರ್ಷಗಳಿಂದ ನಾನಾ ರೀತಿಯ ಹೋರಾಟ ನಡೆಸಲಾಗಿದೆ. ಪಕ್ಷಾತೀತ, ಜಾತ್ಯತೀತವಾಗಿ ಜನಪರ, ರೈತಪರ ಎಲ್ಲಾ ಸಂಘಟನೆಗಳು ನೀರಿನ ಹೋರಾಟದಲ್ಲಿ ಭಾಗಿಯಾಗಿವೆ. ಎಲ್ಲರ ಹೋರಾಟದ ಪ್ರತಿಫಲವಾಗಿ ಪ್ರಸ್ತುತ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗಿದೆ ಎಂದರು.
ಯೋಜನೆಯಿಂದ ಪ್ರಥಮವಾಗಿ ಹರಿಯುತ್ತಿರುವ ನೀರಿಗೆ ಪೂಜೆ ಸಲ್ಲಿಸಿ ಸ್ವಾಗತಿಸುವುದು ರೈತ ಸಂಘದ ಕರ್ತವ್ಯವಾಗಿದೆ. ಕೆರೆ ತುಂಬಿಸುವ ಈ ಯೋಜನೆಯಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಕೂಡಲೇ ಜಿಲ್ಲೆಯಲ್ಲಿ ಇತರೆ ಕೆರೆಗಳಿಗೆ ಹಸಿಲು ಜಿಲ್ಲಾಡಳಿತ ಯೋಜನಾ ಬದ್ಧವಾಗಿ ಕೆರೆಗಳ ಅಭಿವೃದ್ಧಿಗೆ ಮುಂದಾಗಬೇಕೆಂದರು.
ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಜಿಲ್ಲಾಧ್ಯಕ್ಷ ರಾಮನಾಥ್, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ, ಚಿಂತಾಮಣಿ ತಾಲೂಕು ಅಧ್ಯಕ್ಷ ಸೀಕಲ್ಲು ರಮಣರೆಡ್ಡಿ, ರಾಜ್ಯ ಸಂಚಾಲಕ ಬಾಗೇಪಲ್ಲಿ ಲಕ್ಷ್ಮಣರೆಡ್ಡಿ, ಪದಾಧಿಕಾರಿಗಳಾದ ಮುನಿನಂಜಪ್ಪ, ನಾರಾಯಣಸ್ವಾಮಿ, ರಾಮಚಂದ್ರಪ್ಪ, ಕಿಶೋರ, ಕೃಷ್ಣಪ್ಪ, ವೇಣುಗೋಪಾಲ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ರೈತರು, ಮಹಿಳೆಯರು ಪಾಲ್ಗೊಂಡಿದ್ದರು.
ಮೆರವಣಿಗೆ: ಎಚ್‌ಎನ್ ವ್ಯಾಲಿ ಯೋಜನೆಯ ಸಂಸ್ಕರಿತ ನೀರು ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಗೆ ಹರಿಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳ ನೇತೃತ್ವದಲ್ಲಿ ಸಾವಿರಾರು ರೈತರು ಹಾಗೂ ಮಹಿಳೆಯರು ಬಂಡಹಳ್ಳಿ ಕೆನಾಲ್ ಬಳಿ ಕುರಿ ಬಲಿ ನೀಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮೊದಲು ತಿರ್ನಹಳ್ಳಿ ಕ್ರಾಸ್‌ನಿಂದ ಕಳಶ, ತಂಬಿಟ್ಟು ಆರತಿಯೊಂದಿಗೆ ಬಂಡಹಳ್ಳಿ ಕೆನಾಲ್‌ವರೆಗೂ ಮೆರವಣಿಗೆ ನಡೆಸಿದರು.