ನ್ಯಾಯಾಲಯದ ಆದೇಶದಂತೆ ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯ ರ್‍ಯಾಂಕ್ ಪಟ್ಟಿಯನ್ನು ಪರಿಷ್ಕರಿಸಿ ಪ್ರಕಟಿಸುವ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ವೇನೋ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದೆ. ಈ ಪರಿಷ್ಕೃತ ಪಟ್ಟಿ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಸಮಾಧಾನ ತಂದಿರಬಹುದು. ಆದರೆ ದೊಣ್ಣೆಯ ಪೆಟ್ಟು ತಿಂದಿರುವವರು ಪ್ರಸಕ್ತ ಸಾಲಿನ ವಿದ್ಯಾರ್ಥಿಗಳು.
ಈ ಬಾರಿಯ ಸಿಇಟಿ ಫಲಿತಾಂಶ ಪ್ರಕಟನೆ ವೇಳೆ ಪುನರಾವರ್ತಿತ ವಿದ್ಯಾರ್ಥಿಗಳನ್ನು ಪರಿಗಣಿಸದೆ ರ್‍ಯಾಂಕ್ ಪಟ್ಟಿಯನ್ನು ಬಿಡುಗಡೆ ಮಾಡಿದ ಕೆಇಎ ಈ ಎಲ್ಲ ಗೊಂದಲಕ್ಕೆ ನಾಂದಿ ಹಾಡಿತ್ತು. ಕಳೆದೆರಡು ವರ್ಷಗಳಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಸಿಇಟಿ ಪ್ರಕ್ರಿಯೆಯಲ್ಲಿ ಗೊಂದಲ ಸೃಷ್ಟಿ ಯಾಗಿತ್ತು. ಆದರೆ ಈ ಬಾರಿ ಶೈಕ್ಷಣಿಕ ಚಟುವಟಿಕೆಗಳು, ಪರೀಕ್ಷೆಗಳು, ಸಿಇಟಿ ಪ್ರಕ್ರಿಯೆಗಳು ಎಲ್ಲವೂ ಸುಗಮವಾಗಿಯೇ ನಡೆದಿದ್ದವು. ಹಾಗಾಗಿ ಪರೀಕ್ಷೆ- ಮೌಲ್ಯಮಾಪನ ಎಲ್ಲವೂ ಎಂದಿನಂತೆ ನಡೆದಿತ್ತು. ಆದರೆ ಈ ಬಾರಿ ಸಿಇಟಿಗೆ ಭಾರೀ ಸಂಖ್ಯೆಯಲ್ಲಿ ಪುನರಾವರ್ತಿತ ವಿದ್ಯಾರ್ಥಿಗಳು ನೋಂದಣಿ ಮಾಡಿ ಕೊಂಡಿದ್ದರು. ಆದರೆ ರ್‍ಯಾಂಕ್ ಪಟ್ಟಿ ಬಿಡುಗಡೆ ಸಂದರ್ಭದಲ್ಲಿ ಕೆಇಎ ಈ ವಿದ್ಯಾರ್ಥಿಗಳನ್ನು ಪರಿಗಣಿಸಲಿಲ್ಲ. ಇದರಿಂದ ಬೇಸರಗೊಂಡ ಪುನ ರಾವರ್ತಿತ ವಿದ್ಯಾರ್ಥಿಗಳು ಮತ್ತವರ ಹೆತ್ತವರು ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ಪುನ ರಾವರ್ತಿತ ವಿದ್ಯಾರ್ಥಿಗಳನ್ನೂ ಪರಿಗಣಿಸಿ ಹೊಸ ರ್‍ಯಾಂಕ್ ಪಟ್ಟಿ ಬಿಡುಗಡೆ ಮಾಡುವಂತೆ ಆದೇಶಿಸಿತು. ಆರಂಭದಲ್ಲಿ ಕೆಇಎ ಮತ್ತು ರಾಜ್ಯ ಸರಕಾರ ಸುಪ್ರೀಂನ ಮೆಟ್ಟಿಲೇರುವ ತೀರ್ಮಾನಕ್ಕೆ ಬಂದಿತ್ತಾದರೂ ಕೊನೆಯಲ್ಲಿ ಪರಿಷ್ಕೃತ ರ್‍ಯಾಂಕಿಂಗ್ ಪಟ್ಟಿ ಬಿಡುಗಡೆಗೊಳಿಸಿ ಕೈತೊಳೆದುಕೊಂಡಿದೆ.
ಶಿಕ್ಷಣ ಇಲಾಖೆ ಮತ್ತು ಕೆಇಎಯ ಈ ಗೊಂದಲಕಾರಿ ನಡೆಗಳಿಂದ ವಿದ್ಯಾರ್ಥಿಗಳು ಬವಣೆ ಪಡುವಂತಾಗಿದೆ. ಸಿಇಟಿ ಫಲಿತಾಂಶ ಪ್ರಕಟವಾದಂದಿನಿಂದಲೂ ವಿದ್ಯಾರ್ಥಿಗಳಲ್ಲಿ ಅತಂತ್ರ ಭಾವ ಆರಂಭವಾಗಿತ್ತು. ಈ ಮಧ್ಯೆ ಖಾಸಗಿ ಡೀಮ್ಡ್ ವಿವಿಗಳು ಹಾಗೂ ಕೆಲವು ಖಾಸಗಿ ಕಾಲೇಜುಗಳು ತಮ್ಮ ಪಾಲಿನ ಸೀಟುಗಳಿಗೆ ಪ್ರವೇಶ ನೀಡಿ ಶೈಕ್ಷಣಿಕ ವರ್ಷವನ್ನು ಆರಂ ಭಿಸಿದವು. ಇದರಿಂದ ಸರಕಾರಿ ಸಿಇಟಿ ಪ್ರವೇಶಕ್ಕೆ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಈ ಬಾರಿ ಶೈಕ್ಷಣಿಕ ವರ್ಷ ಆರಂಭವಾಗುತ್ತದೋ ಇಲ್ಲವೋ ಎಂಬ ಆತಂಕವೂ ಹೆಚ್ಚಾಗಿತ್ತು. ಈ ಆತಂಕವನ್ನು ಕೆಇಎ ಪರಿಷ್ಕೃತ ಪಟ್ಟಿ ಕೊಂಚಮಟ್ಟಿಗೆ ಮುಂದೂಡಿರಬಹುದು. ಆದರೆ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ನ್ಯಾಯ ಮರೀಚಿಕೆಯಾಗಿಯೇ ಇದೆ. ಈಗ ಇಡೀ ಪ್ರಕ್ರಿಯೆ ಆರಂಭಗೊಳ್ಳಬೇಕಿದೆ. ಈಗಾಗಲೇ ನಿಗದಿತ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಜ್ಜಾಗಿರುವ ಸಹಸ್ರಾರು ವಿದ್ಯಾರ್ಥಿಗಳನ್ನು ಮಾನ ಸಿಕವಾಗಿ ಕುಗ್ಗುವಂತೆ ಮಾಡಿದೆ. ಇದು ಬಡ ಹಾಗೂ ಉತ್ತಮ ಶ್ರೇಣಿಯ ವಿದ್ಯಾರ್ಥಿಗಳ ಸಂಕಷ್ಟವನ್ನು ಹೆಚ್ಚಿಸಿದೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳು “ಪಾಲಿಗೆ ಬಂದದ್ದು ಪಂಚಾಮೃತ’ ಎಂಬಂತೆ ತಮಗೆ ಪ್ರವೇಶ ಸಿಕ್ಕ ಕಾಲೇಜುಗಳಿಗೆ ಸೇರಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳುವ ಅನಿವಾರ್ಯ ಸ್ಥಿತಿಯನ್ನು ಕೆಇಎ ನಿರ್ಮಿಸಿದೆ.
ರಾಜ್ಯ ಸರಕಾರ ಪುನರಾವರ್ತಿತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಯೋಚಿಸಿದಂತೆಯೇ ಸಾವಿರಾರು ರ್‍ಯಾಂಕ್‌ಗಳ ಏರುಪೇರಿಗೆ ಗುರಿಯಾದ ಬಡ ವಿದ್ಯಾರ್ಥಿಗಳ ಸಹಾಯಕ್ಕೂ ನಿಲ್ಲಬೇಕು. ಮಧ್ಯಮ ಪರಿಹಾರವನ್ನು ಹುಡುಕಬೇಕು. ಜತೆಗೆ ಇನ್ನು ಮುಂದಾದರೂ ಇಂತಹ ಲೋಪಗಳು ಘಟಿಸದಂತೆ ಅಧಿಕಾರಶಾಹಿಗೆ ತಿಳಿ ಹೇಳಬೇಕು.