Advertisement

electricity ಒದಗಿಸುವ ಬಗ್ಗೆ ಸರಕಾರ ಗಮನ ಹರಿಸಲಿ

12:24 AM Jun 19, 2023 | Team Udayavani |

ರಾಜ್ಯದಲ್ಲಿ ಈಗಾಗಲೇ ಮುಂಗಾರು ಹಂಗಾಮು ಆರಂಭವಾಗಿದ್ದರೂ, ಬಹುತೇಕ ಕಡೆಗಳಲ್ಲಿ ಮಳೆ ಸರಿಯಾಗಿ ಆಗಿಯೇ ಇಲ್ಲ. ಬಿಪರ್‌ಜಾಯ್‌ ಚಂಡಮಾರುತದ ಪ್ರಭಾವದಿಂದ ಮುಂಗಾರು ಮಳೆ ಆಗಮನವಾಗುವಲ್ಲಿ ಸ್ವಲ್ಪ ವಿಳಂಬವೂ ಆಗಿದೆ. ರಾಜ್ಯದ ಹಲವಾರು ಕಡೆಗಳಲ್ಲಿ ಬಿತ್ತಿದ ಬೆಳೆಯೂ ಒಣಗುವ ಸ್ಥಿತಿಗೆ ಬಂದಿದೆ. ಇಷ್ಟೇ ಅಲ್ಲ, ಸುಮಾರು ಕಡೆಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಕಂಡು ಬಂದಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸ್ಥಿತಿ ಉದ್ಭವವಾಗುತ್ತಿದೆ.

Advertisement

ಮೇ ಮಾಸಾಂತ್ಯದಲ್ಲೇ ಬರಬೇಕಿದ್ದ ಮುಂಗಾರು ಜೂನ್‌ ಎರಡನೇ ವಾರ ರಾಜ್ಯದ ಕರಾವಳಿಗೆ ಪ್ರವೇಶವಾಗಿದೆ. ಜತೆಗೆ ಕೇರಳಕ್ಕೆ ಆಗಮನವಾಗಿದ್ದೂ ತುಸು ತಡವಾಗಿಯೇ. ಮುಂಗಾರು ಮಳೆ ಚೆನ್ನಾಗಿ ಆದರಷ್ಟೇ ದೇಶದ ರೈತ ಖುಷಿಯಿಂದ ಇರಲು ಸಾಧ್ಯ. ಇದು ಅನಾದಿ ಕಾಲದಿಂದಲೂ ಪಾಲನೆಯಾಗಿರುವ ಸತ್ಯ. ಒಂದೊಮ್ಮೆ ಮುಂಗಾರು ಸರಿಯಾಗಿ ಬರದಿದ್ದರೆ ರೈತರು ಮತ್ತು ಜನರ ಕಷ್ಟ ಹೇಳತೀರದು.

ಸಾಮಾನ್ಯವಾಗಿ ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ ಸೇರಿ ಇಷ್ಟೊತ್ತಿಗೆ ಉತ್ತಮವಾಗಿ ಮಳೆಯಾಗಿರಬೇಕಾಗಿತ್ತು. ಡ್ಯಾಂಗಳಲ್ಲಿ ಒಂದಿಷ್ಟಾದರೂ ಮಳೆ ನೀರು ಸಂಗ್ರಹವಾಗಿರಬೇಕಾಗಿತ್ತು. ಇದುವರೆಗೆ ರಾಜ್ಯದ ಯಾವುದೇ ಜಲಾಶಯಗಳಿಗೆ ನೀರು ಹರಿದುಬಂದ ಹಾಗೆ ಕಾಣಿಸುತ್ತಿಲ್ಲ. ಬಹುತೇಕ ಜಲಾಶಯಗಳು ಬತ್ತುತ್ತಿರುವುದನ್ನು ನೋಡುತ್ತಿದ್ದೇವೆ. ಹೀಗಾಗಿ ಕುಡಿಯುವ ನೀರಿಗೆ ತತ್ವಾರ ಕಂಡು ಬರುತ್ತಿದೆ.

ಇನ್ನು ವಿದ್ಯುತ್‌ ಉತ್ಪಾದನೆ ವಿಚಾರದಲ್ಲೂ ಸಮಸ್ಯೆಯಾಗುತ್ತಿದೆ. ಜಲಾಶಯಗಳು ಖಾಲಿಯಾಗುತ್ತಿರುವುದರಿಂದ ಜಲವಿದ್ಯುತ್‌ ಉತ್ಪಾದನೆ ಕುಂಠಿತವಾಗಿದೆ. ಆಲಮಟ್ಟಿಯಲ್ಲಿ ಇರುವ 6 ಘಟಕಗಳಿಂದ 290 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಇನ್ನು ರಾಜ್ಯದ ಶೇ.25ರಷ್ಟು ವಿದ್ಯುತ್‌ ಬೇಡಿಕೆ ಪೂರೈಸುವ ಶರಾವತಿ ಕಣಿವೆ ವಿದ್ಯುದಾಗಾರಗಳು ಮಳೆ ಬರದೇ ಹೋದರೆ ಇನ್ನು 20 ದಿನಗಳಲ್ಲಿ ಕೆಲಸ ಸ್ಥಗಿತಗೊಳಿಸಲಿವೆ. ಈಗಾಗಲೇ ಅನೇಕ ಘಟಕಗಳು ಬಂದ್‌ ಆಗಿವೆ. ಅತ್ತ ಶಿವನಸಮುದ್ರದಲ್ಲಿಯೂ 14 ಮೆ.ವ್ಯಾ. ವಿದ್ಯುತ್‌ ಅಷ್ಟೇ ಉತ್ಪಾದನೆಯಾಗುತ್ತಿದೆ. ಆರು ಘಟಕಗಳಲ್ಲಿ ನಾಲ್ಕು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಮಾಣಿಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದು, 50 ದಿನಗಳಿಂದ ವಿದ್ಯುತ್‌ ಉತ್ಪಾದನೆ ಸ್ಥಗಿತವಾಗಿದೆ. ತುಂಗಾ-ಭದ್ರಾ ಜಲಾಶಯಕ್ಕೆ ನೀರು ಹರಿದು ಬರುತ್ತಿಲ್ಲ. ಹಿಡಕಲ್‌-ಮಲಪ್ರಭಾದಲ್ಲಿ ಸದ್ಯ 4.16 ಟಿಎಂಸಿ ಅಡಿ ಮಾತ್ರ ನೀರಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 8.4 ಟಿಎಂಸಿ ಅಡಿ ನೀರಿತ್ತು.

ವಿದ್ಯುತ್‌ ಉತ್ಪಾದನೆ ಕಡಿಮೆಯಾಗಿರುವ ನಡುವೆಯೇ ವಿದ್ಯುತ್‌ ದರ ಹೆಚ್ಚಳದ ವಿಚಾರವೂ ಕೈಗಾರಿಕೆಗಳು ಮತ್ತು ಜನಸಾಮಾನ್ಯರ ಕೈ ಸುಡುತ್ತಿದೆ. ಕೆಲವು ಕೈಗಾರಿಕ ಸಂಘಗಳು ಇದೇ 22ಕ್ಕೆ ಬಂದ್‌ಗೂ ಕರೆ ನೀಡಿವೆ. ಹೀಗಾಗಿ ರಾಜ್ಯ ಸರಕಾರವು, ವಿದ್ಯುತ್‌ ಬಳಕೆದಾರರ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಳ್ಳಬೇಕು. ವಿದ್ಯುತ್‌ ಬೇಡಿಕೆಗೆ ಸಂಬಂಧ ಪರ್ಯಾಯ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಜನಸಾಮಾನ್ಯರ ಜತೆಗೆ ಕೈಗಾರಿಕೋದ್ಯಮಿಗಳಿಗೂ ಸಮಸ್ಯೆಯಾಗುತ್ತದೆ. ಇದರ ನಡುವೆಯೇ ಜನಸಾಮಾನ್ಯರೂ ವಿದ್ಯುತ್‌ ಅನ್ನು ಹಿತಮಿತವಾಗಿ ಬಳಕೆ ಮಾಡುವುದನ್ನು ರೂಪಿಸಿಕೊಂಡರೆ ಉತ್ತಮ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಾಗುವುದು ನಿಶ್ಚಿತ. ಹಾಗೆಯೇ ಈಗಾಗಲೇ ಹೆಚ್ಚಳವಾಗಿರುವ ವಿದ್ಯುತ್‌ ದರವನ್ನು ಕಡಿತ ಮಾಡುವ ಬಗ್ಗೆಯೂ ರಾಜ್ಯ ಸರಕಾರ ಪುನರ್‌ಪರಿಶೀಲನೆ ಮಾಡಿದರೆ ಒಳಿತಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next