Advertisement

ಸರ್ಕಾರ ತೀರ್ಮಾನ ಹಿಂಪಡೆಯಲಿ

07:21 PM Mar 21, 2018 | Team Udayavani |

ದಾವಣಗೆರೆ: ಲಿಂಗಾಯತ-ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಸಂಬಂಧ ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನದ ಬಗ್ಗೆ ಪುನರ್‌ ಪರಿಶೀಲಿಸಬೇಕು ಎಂದು ರಂಭಾಪುರಿ ಜಗದ್ಗುರು ಡಾ| ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ. ಮಂಗಳವಾರ ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಿದ ನಂತರ ರೇಣುಕಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಲಿಂಗಾಯತ-ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ನ್ಯಾಯಮೂರ್ತಿ ನಾಗಮೋಹನದಾಸ್‌ ಸಮಿತಿ ಸಲ್ಲಿಸಿರುವ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವ ತೀರ್ಮಾನ ಹಿಂಪಡೆಯುವ ಮೂಲಕ ವೀರಶೈವ-ಲಿಂಗಾಯತ ಸಮಾಜ ಒಗ್ಗೂಡಿಸುವ ಕೆಲಸ ಮಾಡಬೇಕು ಎಂದರು.

Advertisement

ವೀರಶೈವ-ಲಿಂಗಾಯತ ಸಮಾಜವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಘಟಿಸಿದರು ಎಂಬ ಅಪಕೀರ್ತಿ, ಕಳಂಕದಿಂದ ಹೊರ ಬರಲು ಸಮಾಜ ಒಗ್ಗೂಡಿಸುವ ಕೆಲಸ ಮಾಡಬೇಕು. ಸರ್ಕಾರ ಮಾಡಿರುವಂತಹ ತಪ್ಪನ್ನು ಸರಿಪಡಿಸಬೇಕು. ಕೇಂದ್ರಕ್ಕೆ ಶಿಫಾರಸು ಮಾಡಿರುವ ತೀರ್ಮಾನಕ್ಕೆ ಅಂಟಿಕೊಂಡಲ್ಲಿ ಶಾಂತಿಯುತ ಮತ್ತು ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಧರ್ಮದ ವಿಚಾರವಾಗಿ ಸರ್ಕಾರ ಬಹಳ ಆತುರವಾಗಿ ನಡೆದುಕೊಂಡಿದೆ. ಎರಡು ತಿಂಗಳಲ್ಲಿ ಆತುರಾತುರವಾಗಿ ವರದಿ 
ಪಡೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಕಳಸಾ-ಬಂಡೂರಿ ಸಮಸ್ಯೆ ಬಗೆಹರಿದಿಲ್ಲ. ಕಾವೇರಿ ಜಲ ವಿವಾದವೂ ಇದೆ. ಓಡಾಡಲು
ಸರಿಯಾದ ರಸ್ತೆ, ಕುಡಿಯಲು ನೀರಿಲ್ಲ. ಅಂತಹ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಗಮನ ಕೊಡುವ ಬದಲು
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಲವೇ ಕೆಲವು ಮಠಾಧಿಧೀಶರು, ಸ್ವತಂತ್ರ ಲಿಂಗಾಯತ ಧರ್ಮ ಪ್ರತಿಪಾದಕರ ಒತ್ತಡಕ್ಕೆ ಮಣಿದು
ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿರುವುದು ಯಾವ ದೃಷ್ಟಿಯಿಂದಲೂ ಸರಿ ಅಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಮೂಲ
ಪರಂಪರೆ, ಸಂಸ್ಕೃತಿಗೆ ಧಕ್ಕೆ ತಂದವರಿಗೆ ನಾಡಿನ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ವೀರಶೈವ ಧರ್ಮ ಅತ್ಯಂತ ಪ್ರಾಚೀನ ಧರ್ಮವಾಗಿದೆ. ಇತಿಹಾಸ, ಪರಂಪರೆ ಅಪೂರ್ವವಾಗಿವೆ. ವೀರಶೈವ ಧರ್ಮದ ಆದರ್ಶವನ್ನು ಮೆಚ್ಚಿ 12ನೇ ಶತಮಾನದಲ್ಲಿ ಶೈವಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಬಸವಣ್ಣನವರೇ ವೀರಶೈವ ಧರ್ಮವನ್ನು ಅಪ್ಪಿಕೊಂಡು ಮತ್ತಷ್ಟು ಬೆಳೆಸಿದರು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಲಿಂಗಾಯತ-ವೀರಶೈವ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದು ವ್ಯರ್ಥ ಪ್ರಯತ್ನ, ಕೇಂದ್ರಕ್ಕೆ ಶಿಫಾರಸು ಮಾಡಿರುವುದು ಕಣ್ಣೊರೆಸುವ ತಂತ್ರ. ಅದರಿಂದ ಬಡವರಿಗೆ ಯಾವುದೇ ಪ್ರತಿಫಲ ಸಿಕ್ಕುವುದೇ ಇಲ್ಲ ಎಂದರು.

ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ವೀರಶೈವರನ್ನು ಹೊರಗಿಟ್ಟು ಹೋರಾಟ ಮಾಡಲಾಗಿತ್ತು. ಸರ್ಕಾರಕ್ಕೆ ಲಿಂಗಾಯತರಿಗೆ
ಮಾತ್ರ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ಕೊಡುವ ಇರಾದೆ ಇತ್ತು. ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಸಚಿವರಾದ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಈಶ್ವರ ಖಂಡ್ರೆ ವೀರಶೈವರ ಪರ ಧ್ವನಿ ಎತ್ತಿದ್ದಕ್ಕಾಗಿ ಲಿಂಗಾಯತ ಜೊತೆಗೆ ವೀರಶೈವ ಪದ ಸೇರಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದರು. ಸಂಪುಟ ಸಭೆ ಕೈಗೊಂಡಿರುವ ನಿರ್ಣಯದಲ್ಲಿ ಬಸವತತ್ವ ಪಾಲಿಸುವವರು, ಬಸವಣ್ಣನವರನ್ನು ಧರ್ಮ ಗುರುವನ್ನಾಗಿ ಸ್ವೀಕರಿಸಿರುವವರು, ವಚನ ಸಾಹಿತ್ಯವನ್ನು ಧರ್ಮ ಗ್ರಂಥ ಎಂಬುದಾಗಿ ನಂಬಿರುವವರು ಲಿಂಗಾಯತ-ವೀರಶೈವ ಧರ್ಮದ ಅಡಿಯಲ್ಲಿ ಸೌಲಭ್ಯ ಪಡೆಯಬಹುದೆಂಬ ಅಡಿ ಟಿಪ್ಪಣಿ ಬರೆದಿದೆ ಎನ್ನಲಾಗಿದೆ. ಬಸವಣ್ಣನವರಿಗಿಂತ ಮುಂಚೆಯೇ ವೀರಶೈವ ಧರ್ಮ ಇತ್ತು ಎಂಬ ಸತ್ಯ ಸಂಗತಿಯನ್ನೇ ಮರೆಮಾಚಲಾಗಿದೆ ಎಂದರು.

ವೀರಶೈವ ಧರ್ಮದ ಬಗ್ಗೆ ಸಾವಿರಾರು ಪುಟದ ದಾಖಲೆಯನ್ನು ತಜ್ಞರ ಸಮಿತಿಗೆ ನೀಡಿದ್ದರೂ ಅದನ್ನು ಕಡೆಗಣಿಸಿ, ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ಹೋರಾಟ ಮಾಡುತ್ತಿರುವವರು ನೀಡಿರುವ ದಾಖಲೆಯ ಮೇಲೆ ಸಮಿತಿ ವರದಿ ತಯಾರಿಸಿದೆ. ತಜ್ಞರ ಸಮಿತಿಯಲ್ಲಿದ್ದವರೆಲ್ಲ ಸಂಸ್ಕೃತದ ಗಂಧ-ಗಾಳಿಯೂ ಗೊತ್ತಿಲ್ಲದವರು ಹಾಗೂ ನಾಸ್ತಿಕರು. ಪಂಚಪೀಠಗಳನ್ನು ಜನವಾಹಿನಿಯಿಂದ ಹಿಂದೆ ಸರಿಸುವ ಹುನ್ನಾರ ಸಮಿತಿ, ವರದಿಯ ಹಿಂದೆ ಅಡಗಿದೆ. ಕೆಲವೇ ಕೆಲ ಮಠಾಧೀಶರ ಒತ್ತಡಕ್ಕೆ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಯಾವ ಕಾರಣಕ್ಕೂ ಒಪ್ಪಿಕೊಳ್ಳುವುದೇ ಇಲ್ಲ ಎಂದರು. 

ಬಹುಮಾನ ಕೊಡಲು ಸಿದ್ಧ
ಮಾ.23ರಂದು ಅಖೀಲ ಭಾರತ ವೀರಶೈವ ಮಹಾಸಭಾ ತೆಗೆದುಕೊಳ್ಳುವ ತೀರ್ಮಾನದ ಬಗ್ಗೆ ಆಶಾಭಾವನೆ ಇದೆ.
ಮಹಾಸಭಾದ ತೀರ್ಮಾನದ ಆಧಾರದಲ್ಲಿ ರಾಷ್ಟ್ರೀಯ ವೀರಶೈವ ಮಠಾಧೀಶರ ಪರಿಷತ್‌ ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸಲಿದೆ. ಲಿಂಗಾಯತ ಧರ್ಮದಲ್ಲಿ 99 ಉಪಜಾತಿಗಳಿವೆ ಎಂದು ಹೇಳಿಕೊಳ್ಳಲಾಗುತ್ತಿದೆ. 99 ಉಪ ಜಾತಿಯವರು ಈಗಾಗಲೇ ಸರ್ಕಾರದ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಅವರು ತಾವು ಲಿಂಗಾಯತರು ಎಂದು ಘೋಷಣೆ ಮಾಡಿಕೊಂಡಲ್ಲಿ ತಾವು ಅವರು ಕೇಳಿದ ಬಹುಮಾನ ಕೊಡಲಿದ್ದೇವೆ. ಸರ್ಕಾರ ಬಹುಸಂಖ್ಯಾತ ವೀರಶೈವ-ಲಿಂಗಾಯತರನ್ನು ಅಲ್ಪಸಂಖ್ಯಾತರನ್ನಾಗಿ ಮಾಡಿದೆ. ಮುಸ್ಲಿಂ ಸಮಾಜ ಒಳಗೊಂಡಂತೆ ಇತರೆ ಸಮಾಜದ ಸೌಲಭ್ಯ ಪಡೆಯಲು ಮುಂದಾದಲ್ಲಿ ಅವರಿಂದಲೂ ವಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

ವೀರಶೈವರು ಮತ್ತು ಲಿಂಗಾಯತರು ಒಂದೇ ನಾಣ್ಯದ ಎರಡು ಮುಖ. ಗಂಡ-ಭೇರುಂಡ, ಭಾರತ-ಇಂಡಿಯಾ, ಶಿವ-ಶಂಕರ ಹೇಗೆ
ಒಂದೆಯೋ. ಬೇರ್ಪಡಿಸಲಿಕ್ಕೆ ಆಗುವುದಿಲ್ಲವೋ ಅದೇ ರೀತಿ ವೀರಶೈವ- ಲಿಂಗಾಯತರನ್ನು ಬೇರ್ಪಡಿಸುವ ನಿರ್ಧಾರವನ್ನು ಯಾರೂ
ಒಪ್ಪಲೂ ಸಾಧ್ಯವೇ ಇಲ್ಲ. ಸಿದ್ದ ಮತ್ತು ರಾಮಯ್ಯ ಬೇರೆ ಬೇರೆ ಎಂದರೆ ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಕೊಳ್ಳುವರೇ?

 ರಂಭಾಪುರಿ ಜಗದ್ಗುರು ಡಾ| ವೀರಸೋಮೇಶ್ವರ ಶಿವಾಚಾರ್ಯ ಶ್ರೀ

Advertisement

Udayavani is now on Telegram. Click here to join our channel and stay updated with the latest news.

Next