ರಾಯಚೂರು: ಸ್ಥಳಿಯ ಸಂಸ್ಥೆಗಳು ಸೇರಿದಂತೆ ವಿವಿಧೆಡೆ ಮಾಜಿ ಸೈನಿಕರಿಗೆ ರಾಜಕೀಯ ಮೀಸಲಾತಿ ಕಲ್ಪಿಸಬೇಕು. ವಿಧಾನ ಪರಿಷತ್ ಗೆ ಕ್ರೀಡಾಪಟು, ಚಿತ್ರನಟರಿಗೆ ಸೇರಿ ವಿವಿಧ 12 ಕ್ಷೇತ್ರಗಳ ಸಾಧಕರನ್ನು ಪರಿಗಣಿಸಿದಂತೆ ಮಾಜಿ ಸೈನಿಕರಿಗೂ ಪರಿಷತ್ ಚುನಾವಣೆಗೆ ಪರಿಗಣಿಸಬೇಕು ಎಂದು ಕರ್ನಾಟಕ ರಾಜ್ಯ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎನ್.ಕೆ.ಶಿವಣ್ಣ ತಿಳಿಸಿದರು.
ನಗರದ ಐಎಂಎಲ್ ಸಭಾಂಗಳದಲ್ಲಿ ಭಾನುವಾರ ಜಿಲ್ಲಾ ಮಾಜಿ ಸೈನಿಕರ ಸಂಘದ 11ನೇ ಸಂಸ್ಥಾಪನಾ ದಿನಾಚರಣೆ ಹಾಗೂ ನೂತನ ಜಿಲ್ಲಾ ಘಟಕದ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
ರಾಜಕೀಯ ಮೀಸಲಾತಿ, ನಿವೇಶನ ಹಾಗೂ ಮಕ್ಕಳಿಗೆ ಶಿಕ್ಷಣಕ್ಕೆ ಶುಲ್ಕದಲ್ಲಿ ರಿಯಾಯಿತಿ ನೀಡಬೇಕು ಎಂದು ಒತ್ತಾಯಿಸಿ ಮಾಜಿ ಸೈನಿಕರು ರಾಜ್ಯ ಮಟ್ಟದಲ್ಲಿ ಸಂಘಟನಾತ್ಮಕವಾಗಿ ಹೋರಾಟ ನಡೆಸಬೇಕಿದೆ. ನಿವೃತ್ತ ಸೈನಿಕರಿಗೆ ಸರ್ಕಾರ ಕನಿಷ್ಠ ಸೌಲಭ್ಯ ಕೂಡ ನಿರ್ಲಕ್ಷ್ಯ ವಹಿಸುತ್ತವೆ. ರಾಜಕೀಯ ನಾಯಕರು ಹಾರ ಹಾಕಿ ಸನ್ಮಾನ ಮಾಡುತ್ತಾರೆ. ಆದರೆ, ಅವರ ಸಮಸ್ಯೆಗಳಿಗೂ ಸ್ಪಂದಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಸೈನಿಕರು ತಮ್ಮ ಮಕ್ಕಳಿಗೆ ಶೈಕ್ಷಣಿಕ, ಆರ್ಥಿಕ ವೆಚ್ಚ ಸರಿದೂಗಿಸಲು ಸಮಸ್ಯೆ ಎದುರಿಸುತ್ತಿದ್ದಾರೆ. ಅನೇಕರಿಗೆ ಸ್ವಂತ ನಿವೇಶನವಿಲ್ಲ. ಬ್ಯಾಂಕ್ ಸಾಲ, ಉದ್ಯೋಗ ಸಿಗುತ್ತಿಲ್ಲ. ನಿವೃತ್ತಿಯ ನಂತರ ನೆಮ್ಮದಿ ಜೀವನ ಕಳೆಯಲು ಅನೇಕ ಸವಾಲುಗಳು ಎದುರಿಸುವಂತಾಗಿದೆ ಎಂದರು.
ಸೈನಿಕರ ಸಂಘದ ಮಾಜಿ ಗೌರವಾಧ್ಯಕ್ಷ ವಿಜಯಾನಂದ ಮಾತನಾಡಿ, ಜಿಲ್ಲೆಯಲ್ಲಿ ಮಾಜಿ ಸೈನಿಕರ ವಿವಿಧ ಕಾರ್ಯಚಟುವಟಿಕೆ ನಿರ್ವಹಿಸಲು ಭವನವಿಲ್ಲ. ಸರ್ಕಾರ ಸೂಕ್ತ ಸ್ಥಳ ನೀಡಿ ಭವನ ನಿರ್ಮಿಸಲಿ ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಿಗೆ ಹಾಗೂ ಕುಟುಂಬಕ್ಕೆ ಸನ್ಮಾನಿಸಲಾಯಿತು. ರಾಮಕೃಷ್ಣ ಆಶ್ರಮದ ವೇದಾನಂದ ಸ್ವಾಮೀಜಿ, ಮಾಜಿ ಜಿಲ್ಲಾಧ್ಯಕ್ಷ ಸುಂದರ್‌ಸಿಂಗ್, ಉಪಾಧ್ಯಕ್ಷ ಕಿಶನ್ ಪ್ರಸಾದ್, ಕೆ.ಎಸ್. ರಾವ್, ಬೆಳಗಾವಿಯ ಅಧ್ಯಕ್ಷ ಕುಮಾರ ಹಿರೇಮಠ, ಕಲಬುರಗಿ ವಿಭಾಗದ ಸೈನಿಕ ಕಲ್ಯಾಣಾಧಿ ಕಾರಿ ಕೃಷ್ಣಾ, ವೀರನಾರಿ ಘಟಕದ ಅಧ್ಯಕ್ಷೆ ರಜನಿ ಸುಬ್ಬಯ್ಯ, ಎನ್‌ಸಿಸಿಯ ನೌಶದ್ ಅಲಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಭೀಮಣ್ಣ ನಾಯಕ, ಉದ್ಯಮಿ ಕೊಂಡಾ ಕೃಷ್ಣಮೂರ್ತಿ, ನಗರಸಭೆ ಸದಸ್ಯ ಸಾಜಿದ್ ಸಮೀರ್, ಮುಖಂಡ ಅಸ್ಲಂಪಾಷಾ ಪಾಲ್ಗೊಂಡಿದ್ದರು.