ಗುಳೇದಗುಡ್ಡ: ರೈತರು ಅನೇಕ ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಸರ್ಕಾರದ ಯೋಜನೆ ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಕೋಟೆಕಲ್ ಪಿಕೆಪಿಎಸ್‌ನಿಂದ ಗೋದಾಮು ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ ಎಂದು ಕಾಶಿ ಪೀಠದ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ತೋಗುಣಶಿ ಗ್ರಾಮದ ಹತ್ತಿರ ಕೋಟೆಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 6.97 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಕೃಷಿ ಉತ್ಪನ್ನಗಳ ಶೇಖರಣೆ ಗೋದಾಮು, ಒಣಗಿಸುವ ವೇದಿಕೆ, 60 ಎಂಟಿ ಸಾಮರ್ಥ್ಯದ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪಿಕೆಪಿಎಸ್ ಕೇಂದ್ರ ಸರ್ಕಾರದ ಯೋಜನೆಯಡಿ ಗೋದಾಮು ಮಾಡುತ್ತಿದ್ದು, ರೈತರು ಇದರ ಲಾಭ ಪಡೆದುಕೊಳ್ಳಬೇಕು. ಹನಮಂತ ಮಾವಿನಮರದ ಕಾರ್ಯಕ್ಷಮತೆಯಿಂದ ಈ ಭಾಗದಲ್ಲಿ ರೈತರಿಗೆ ಅನುಕೂಲವಾಗುವ ಕೃಷಿ ಸಲಕರಣೆಗಳ ಸಂಗ್ರಹ ಗೋದಾಮು ಮಾಡಲು ಮುಂದಾಗಿರುವುದು ಶ್ಲಾಘನೀಯ ಎಂದರು.
ಕೋಟೆಕಲ್- ಗುಳೇದಗುಡ್ಡ ಹೊಳೆಹುಚ್ಚೇಶ್ವರ ಸಂಸ್ಥಾನ ಮಠದ ಹೊಳೆಹುಚ್ಚೇಶ್ವರ ಮಹಾಸ್ವಾಮಿಗಳು, ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಪಿಕೆಪಿಎಸ್ ಅಧ್ಯಕ್ಷ ಮಹಾಗುಂಡಪ್ಪ ಸುಂಕದ, ಉಪಾಧ್ಯಕ್ಷ ಪರಶುರಾಮ ನಾಗಪ್ಪ ಜೋಗಿನ ಆಡಳಿತ ಮಂಡಳಿ ನಿರ್ದೇಶಕರಾದ ಯಲಗುರದಪ್ಪ ತೊಗಲಂಗಿ, ಸಂಗಪ್ಪ ಹಡಪದ ನೀಲಪ್ಪ ಅಬಕಾರಿ, ಬಸಪ್ಪ ಅಣ್ಣಪ್ಪಗೌಡ್ರ ನಾಗಪ್ಪ ಮುರಗೋಡ, ಮೇಘಪ್ಪ ಲಮಾಣಿ, ರಾಘವೇಂದ್ರ ಬಳಿಗೇರ, ಸಂಗಪ್ಪ ಚಟ್ಟೇರ, ಗಂಗಮ್ಮ ಮಂತ್ರಿ, ಯಮನವ್ವ ರಗಟಿ, ಮುಖ್ಯ ಕಾರ್ಯ ನಿರ್ವಾಹಕ ಚಂದ್ರಮೋಹನ ಕಲ್ಯಾಣಿ, ಸಂತೋಷ ನಾಯನೇಗಲಿ, ಹರೀಶ ಗೌಡರ ಸೇರಿದಂತೆ ಮುಂತಾದವರು ಇದ್ದರು.