ನಗರದ ಸೌಂದರ್ಯವನ್ನು ಹೆಚ್ಚಿಸುವ ಹಾಗೂ ಗಿಡಗಳನ್ನು ನೆಟ್ಟು ಪೋಷಿಸುವ ಉದ್ದೇಶದಿಂದ ಸ್ಥಳೀಯಾಡಳಿತ ನಗರದ ಮುಖ್ಯ ರಸ್ತೆಯ ಡಿವೈಡರ್ ಹಾಗೂ ಹೆದ್ದಾರಿಯ ಡಿವೈಡರ್‌ಗಳ ಮಧ್ಯೆ ನೆಟ್ಟಿರುವ ಗಿಡಗಳಿಂದ ಇದೀಗ ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ.
ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟಲು ಪ್ರಯತ್ನಿಸುವ ಜನರು ಡಿವೈಡರ್ ಮೇಲೆ ಹತ್ತಿ ಮತ್ತೂಂದು ಬದಿಯ ರಸ್ತೆಗೆ ಇಳಿಯುತ್ತಾರೆ. ಆದರೆ ಡಿವೈಡರ್ ಗಳ ಮಧ್ಯೆ ಗಿಡಗಳನ್ನು ನೆಟ್ಟು ಸೂಕ್ತ ನಿರ್ವಹಣೆ ಮಾಡದ ಹಿನ್ನಲೆಯಲ್ಲಿ ಅದು ಪೊದೆಗಳಾಗಿ ಬದಲಾಗಿದೆ. ಇದರಿಂದ ಪಾದಚಾರಿಗಳು ರಸ್ತೆ ಇಳಿಯುವುದು ವಾಹನ ಸವಾರರಿಗೆ ತಿಳಿಯುದಿಲ್ಲ. ಇದರಿಂದ ಅಪಘಾತಗಳಾಗುವ ಸಾಧ್ಯತೆ ಇದೆ.
ಡಿವೈಡರ್ ಗಳ ಮಧ್ಯೆ ಗಿಡಗಳನ್ನು ನೆಟ್ಟು ಪೋಷಿ ಸುವ ಯೋಜನೆ ಉತ್ತಮವಾಗಿದ್ದರೂ ಅದರ ಸೂಕ್ತ ನಿರ್ವಹಣೆ ಮಾಡದ ಹೊರತಾಗಿ ಇನ್ನೊಂದು ಸಮಸ್ಯೆ ಉದ್ಭವಿಸುತ್ತದೆ. ಪಾದಚಾರಿಗಳು ಮಾತ್ರವಲ್ಲದೆ ಬೀದಿ ನಾಯಿಗಳು ಅತ್ತಿತ್ತ ಓಡಾಡುತ್ತಿರುತ್ತದೆ. ಆದರೆ ಪೊದೆಗಳಾಗಿ ಬೆಳೆದ ಗಿಡಗ ಳಿಂದಾಗಿ ಆ ಭಾಗದಿಂದ ಬರುವ ಜನರು ಅಥವಾ ನಾಯಿಗಳು ಕಾಣಿಸುದಿಲ್ಲ. ಇದರಿಂದ ವಾಹನ ಸವಾರರು ಅದರಲ್ಲೂ ದ್ವಿಚಕ್ರ ವಾಹನ ಸವಾರರು ಪರದಾಡಬೇಕಾದ ಸ್ಥಿತಿ ಇದೆ.
ನಗರದ ಯೆಯ್ನಾಡಿ, ಕೊಟ್ಟಾರ, ಕಾಪಿಕಾಡ್ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಈ ಸಮಸ್ಯೆ ಎದುರಾಗುತ್ತಿದೆ. ಡಿವೈಡರ್ ಮಧ್ಯೆ ನೆಟ್ಟ ಗಿಡಗಳನ್ನು ಸರಿಯಾದ ಸಮಯಕ್ಕೆ ಕಟಾವು ಮಾಡಿಸದೆ ಇರುವುದರಿಂದ ಗಿಡಗಳ ಪೋಷಣೆಗೆ ತೊಡಕಾಗುತ್ತದೆ. ಅಲ್ಲದೆ ಪಾದಚಾರಿಗಳು ಕೂಡ ರಸ್ತೆ ದಾಟಲು ಹರಸಾಹಸ ಪಡಬೇಕಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರಗಿಸಬೇಕು ಎಂಬುದು ಸಾರ್ವಜನಿಕರ ಬೇಡಿಕೆ.
ಪ್ರಜ್ಞಾ ಶೆಟ್ಟಿ