ದಾವಣಗೆರೆ: ರೈತರ ಸಮಸ್ಯೆಗಳ ಚರ್ಚೆಗೆ ಸಂಸತ್‌ನ ವಿಶೇಷ ಅಧಿವೇಶನ ನಡೆಸುವುದು, ಡಾ| ಸ್ವಾಮಿನಾಥನ್ ವರದಿ ಹಾಗೂ ಋಣಮುಕ್ತ ಕಾಯ್ದೆ ಜಾರಿ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನವದೆಹಲಿಯಲ್ಲಿನ ರೈತರ ಹೋರಾಟ ಬೆಂಬಲಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು) ಮುಖಂಡರು, ಕಾರ್ಯಕರ್ತರು ಶುಕ್ರವಾರ ಪ್ರತಿಭಟಿಸಿದ್ದಾರೆ.
ಜಯದೇವ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು, ದೇಶದ ಕೋಟ್ಯಾಂತರ ಅನ್ನದಾತರ ಬೇಡಿಕೆ ಈಡೇರಿಸಲು ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಲು ಕೋರಿ ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ನರೇಂದ್ರ ಮೋದಿ ಪ್ರಧಾನಿ ಆಗುವ ಮುನ್ನ ಡಾ| ಸ್ವಾಮಿನಾಥನ್‌ರವರ ಕೃಷಿ ಆಯೋಗದ ಸಲಹೆಯಂತೆ ಉತ್ಪಾದನಾ ವೆಚ್ಚಕ್ಕೆ ಶೇ. 50ರಷ್ಟು ಲಾಭಾಂಶ ಸೇರಿಸಿ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಲೆ ನಿಗದಿ, ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಬಡ್ಡಿರಹಿತ, ಕಡಿಮೆ ಬಡ್ಡಿ ಸಾಲ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷದ ನಂತರವೂ ಯಾವುದೇ ಭರವಸೆ ಈಡೇರಿಸಿಲ್ಲ. ಮೋದಿಯವರದ್ದು ಬರೀ ಬಾಯಿ ಮಾತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಸರ್ಕಾರಗಳ ರೈತ ವಿರೋಧಿ ನೀತಿಯಿಂದಾಗಿ ಅನ್ನದಾತರು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲದೆ, ಸಾಲದ ಹೊರೆ ಇತರೆ ಕಾರಣದಿಂದ ಆತ್ಮಹತ್ಯೆಯಂತಹ ಘೋರ ಹಾದಿ ತುಳಿಯುತ್ತಿದ್ದಾರೆ. ಸಾಲದ ಬಾಧೆಯಿಂದ ಅನ್ನದಾತರನ್ನ ಪಾರು ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಕೃತಿ ವಿಕೋಪ, ಬೆಲೆ ಕುಸಿತ, ಹುಳುಬಾಧೆಯಿಂದ ಉಂಟಾಗುವ ನಷ್ಟದ ಕಾರಣಕ್ಕೆ ಪಾವತಿ ಮಾಡದ ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆ, ಸಂಘ, ಬ್ಯಾಂಕ್‌ಗಳಲ್ಲದೆ ಖಾಸಗಿ ರಂಗದಲ್ಲಿನ ಸಾಲ ಸೇರಿ ಎಲ್ಲವನ್ನೂ ಮನ್ನಾ ಮಾಡುವಂತಹ ಋಣಮುಕ್ತ ಕಾಯ್ದೆ ಜಾರಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ದೇಶದ ಎಲ್ಲಾ ರಾಜ್ಯಗಳಲ್ಲಿ ರೈತರು ಒಂದಿಲ್ಲ ಒಂದು ರೀತಿಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಇಡೀ ರೈತಾಪಿ ವರ್ಗದ ಸಮಸ್ಯೆಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ, ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎರಡು ದಿನಗಳ ವಿಶೇಷ ಸಂಸತ್ ಅಧಿವೇಶನ ನಡೆಸಬೇಕು ಎಂದು ಮಹಾರಾಷ್ಟ್ರದ ಸಂಸದ ರಾಜು ಶೆಟ್ಟಿ ಮತ್ತು ಕೇರಳದ ಕೆ.ಕೆ. ರಾಘೇಶ್ ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರ ಜಿ.ಎಸ್.ಟಿ. ಜಾರಿ ಹಿನ್ನೆಲೆಯಲ್ಲಿ ಸಂಸತ್ ನ ವಿಶೇಷ ಅಧಿವೇಶನ ನಡೆಸಿದಂತೆಯೇ ರೈತರ ಸಮಸ್ಯೆ ಚರ್ಚಿಸಲಿಕ್ಕಾಗಿಯೇ ಎರಡು ದಿನ ವಿಶೇಷ ಅಧಿವೇಶನ ನಡೆಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ರೈತ, ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಮತ್ತು ಮೂರು ಪ್ರಮುಖ ಬೇಡಿಕೆ ಈಡೇರಿಕೆಗ ಒತ್ತಾಯಿಸಿ ಲಕ್ಷಾಂತರ ರೈತರು ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ರೈತರ ಬೇಡಿಕೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕು. ಕೇಂದ್ರ ಸರ್ಕಾರ ಅನ್ನದಾತರ ಬೇಡಿಕೆಗೆ ಸ್ಪಂದಿಸದೇ ಹೋದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.
ಸಿಪಿಐ ಮುಖಂಡ, ನಗರಪಾಲಿಕೆ ಸದಸ್ಯ ಆವರಗೆರೆ ಎಚ್.ಜಿ. ಉಮೇಶ್,ಆನಂದರಾಜ್, ಆವರಗೆರೆ ಚಂದ್ರು, ಆವರಗೆರೆ ವಾಸು, ಐರಣಿ ಚಂದ್ರು, ಎನ್.ಟಿ. ಬಸವರಾಜ್, ಸರೋಜಾ, ಸಿಐಟಿಯುನ ಕೆ.ಎಲ್. ಭಟ್, ಕೆ.ಎಚ್.ಆನಂದರಾಜ್, ಇ. ಬಾಡ ಶ್ರೀನಿವಾಸ್, ಎಐಯುಟಿಯುಸಿನ ಮಂಜುನಾಥ್ ಕುಕ್ಕವಾಡ, ಇಂಟಕ್‌ನ ತಿಪ್ಪೇಸ್ವಾಮಿ, ಗದಿಗೇಶ್ ಪಾಳೇದ್, ಸೈಯದ್ ಖಾಜಾಪೀರ್, ಎಸ್. ಶೇಖರನಾಯ್ಕ, ರಮೇಶ್‌ನಾಯ್ಕ, ಚಮನ್‌ಸಾಬ್, ಜಯಪ್ಪ, ಸುರೇಶ್ ಯರಗುಂಟೆ, ಸಿ. ರಮೇಶ್, ಎಚ್.ಪಿ. ಉಮಾಪತಿ, ಎಚ್.ಜಿ. ಶಿವಕುಮಾರ್ ಇತರರು ಇದ್ದರು.