ದಾವಣಗೆರೆ: ವಿಶ್ವ ಮಾನ್ಯತೆಯ ಭಗವದ್ಗೀತೆ ಅಧ್ಯಯನಕ್ಕಾಗಿ ಶಿಕ್ಷಣದಲ್ಲಿ ಅಳವಡಿಸಲು ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಶಿರಸಿ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಸರ್ಕಾರವನ್ನು ಒತ್ತಾಯಿಸಿದರು.
ನಗರದ ರಾಷ್ಟ್ರೋತ್ಥಾನ ಶಾಲಾ ಆವರಣದಲ್ಲಿ ಭಾನುವಾರ ನಡೆದ ಶ್ರೀ ಭಗವದ್ಗೀತೆ ಅಭಿಯಾನದ ರಾಜ್ಯಮಟ್ಟದ ಮಹಾ ಸಮರ್ಪಣಾ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಇಂದಿನ ವಾತಾವರಣದಲ್ಲಿ ವಿದ್ಯಾರ್ಥಿ ಮತ್ತು ಯುವ ಸಮುದಾಯದಲ್ಲಿ ಸಂಸ್ಕಾರದ ಕೊರತೆ ಕಂಡು ಬರುತ್ತಿದೆ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಆತ್ಮಹತ್ಯೆಯಂತಹ ಘೋರ ಹಾದಿ ತುಳಿಯುವಂತಹ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಬಾಲ್ಯದಲ್ಲೇ ಭಗವದ್ಗೀತೆ ಅಧ್ಯಯನ ಕಲಿಸುವುದರಿಂದ ಅನೇಕ ಸಮಸ್ಯೆ ದೂರವಾಗಲಿವೆ. ಶಿಕ್ಷಣದಲ್ಲೂ ಭಗವದ್ಗೀತೆ ಅಧ್ಯಾಯ ಅಳವಡಿಸುವತ್ತ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸ ತಮಗಿದೆ ಎಂದರು.
ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಮಾತನಾಡಿ, ಸಾರ್ವತ್ರಿಕ ಭ್ರಾ ತೃತ್ವದ ಉಪದೇಶ, ಶಾಂತಿ, ಆಧ್ಯಾತ್ಮಿಕತೆ ಮತ್ತು ಲೋಕಕಲ್ಯಾಣಕ್ಕಾಗಿ ಜಗತ್ತಿಗೇ ಮಾರ್ಗದರ್ಶನ ನೀಡುವಂತಹ ಭಗವದ್ಗೀತೆ ಜ್ಞಾನದ ಗಂಗೆ. ಭಗವದ್ಗೀತೆ ದೈವಿಕ ಕರ್ಮ, ದೈವಿಕ ಜ್ಞಾನ, ದೈವಿಕ ಭಕ್ತಿಯ ತ್ರಿವೇಣಿ ಸಂಗಮ. ಜ್ಞಾನ, ಧರ್ಮ, ಸಂಸ್ಕೃತಿಯಾಗಿದೆ. ಶುಭ ಜೀವನದ ಪುಸ್ತಕವಾಗಿದೆ. ಒತ್ತಡ ಮುಕ್ತ ಜೀವನ ನಡೆಸುವ ಕಲೆ ಕಲಿಸುತ್ತದೆ ಎಂದರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಜ್ಞಾನದ ಮೂಲವಾಗಿರುವ ಶ್ರೀಮದ್ ಭಗವದ್ಗೀತೆಯ ಅಧ್ಯಾಯವನ್ನು ಪಠ್ಯಕ್ರಮದಲ್ಲಿ ಅಳವಡಿಸುವುದು ಮಾತ್ರವಲ್ಲ, ಎಲ್ಲೆಡೆಯೂ ಕಡ್ಡಾಯವಾಗಿ ಕಲಿಸುವಂತಾಗಬೇಕು. ಗೀತಾ ಅಧ್ಯಯನ, ಸಾರದ ಪಾಲನೆ ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ. ಏಕತಾ ಮನೋಭಾವ ಬೆಳೆಸುವಂತಹ ಭಗವದ್ಗೀತೆ ಅಭಿಯಾನಕ್ಕಷ್ಟೇ ಸೀಮಿತವಾಗದೆ ಸಾರ್ವತ್ರಿಕವಾಗಬೇಕು ಎಂದು ಆಶಿಸಿದರು.
ಸಿರಿಗೆರೆ ತರಬಾಳು ಮಠದ ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶ್ರೀ ವೇಮನಾನಂದ ಸ್ವಾಮೀಜಿ, ಶ್ರೀ ತ್ಯಾಗೀಶ್ವರಾನಂದ ಮಹಾರಾಜ್, ಸಂಸದ ಜಿ.ಎಂ.ಸಿದ್ದೇಶ್ವರ, ಮೇಯರ್ ಜಯಮ್ಮ ಗೋಪಿ ನಾಯ್ಕ, ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ವಿಘ್ನೇಶ್ವರ ನರಸಿಂಹ ಹೆಗಡೆ ಇದ್ದರು. ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶ್ರೀ ಭಗವದ್ಗೀತೆ ಅಭಿಯಾನದ ಜಿಲ್ಲಾ ಸಮಿತಿ ಸಂಯುಕ್ತಾಶ್ರಯದಲ್ಲಿ ನ.3ರಿಂದ ಶ್ರೀ ಭಗವದ್ಗೀತೆ ಅಭಿಯಾನ ಆರಂಭಗೊಂಡಿತ್ತು.