ಚಿಕ್ಕನಾಯಕನಹಳ್ಳಿ: ಸಾರ್ವಜನಿಕರ ತೆರಿಗೆ ಹಣದಲ್ಲಿ ಸರ್ಕಾರಿ ಅಧಿಕಾರಿಗಳಿಗಾಗಿ ನಿರ್ಮಾಣಗೊಂಡಿರುವ ವಸತಿ ಗೃಹಗಳಲ್ಲಿ ಅಧಿಕಾರಿಗಳು ವಾಸಿಸದೇ ಪಾಳು ಬಿದ್ದಿವೆ. ಜತೆಗೆ ಜನರ ತೆರಿಗೆ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ ಎಂದು ಲಂಚ ಮುಕ್ತ ವೇದಿಕೆ ಮಲ್ಲಿಕಾರ್ಜುನ್ ಭಟ್ಟರಹಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿ.ಎಚ್.ರಸ್ತೆ ಪಕ್ಕದ ತಹಶೀಲ್ದಾರ್ ವಸತಿ ಗೃಹದ ಹಿಂಭಾಗದಲ್ಲಿ ಸುಮಾರು 12ಕ್ಕೂ ಹೆಚ್ಚು ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಆದರೆ ವಸತಿಗೃಹಗಳಲ್ಲಿ ಅಧಿಕಾರಿಗಳು ವಾಸ ಮಾಡದೇ ಪಾಳುಬಿದ್ದಿವೆ. ಸುಸಜ್ಜಿತ ಕಟ್ಟಡಗಳು ಈಗ ದುರಸ್ತಿ ಹಂತ ತಲುಪುತ್ತಿವೆ. ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳು ಇಲ್ಲಿವೆ. ಆದರೂ ಅಧಿಕಾರಿಗಳು ಇಲ್ಲಿ ವಾಸ ಮಾಡಲು ಸಿದ್ಧರಿಲ್ಲದಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಎಚ್‌ಆರ್‌ಎ ಸೌಲಭ್ಯ ಕಡಿತವಾಗೊಳಿಸಿ: ಸರ್ಕಾರ ಅಧಿಕಾರಿಗಳಿಗೆ ವಸತಿಗಾಗಿ ಮನೆ ಬಾಡಿಗೆ ಭತ್ಯೆ(ಎಚ್‌ಆರ್‌ಎ)ಎಂದು ತಾಲೂಕಿಗೆ ಅನುಗುಣವಾಗಿ ಪ್ರತಿ ತಿಂಗಳು ಭತ್ಯೆ ನೀಡುತ್ತಿದೆ. ಅಧಿಕಾರಿಗಳು, ಸರ್ಕಾರಿ ವಸತಿ ಗೃಹಗಳಲ್ಲಿ ವಾಸ ಮಾಡಿದರೆ ಹಣ ಕಡಿತವಾಗುತ್ತದೆ. ಸರ್ಕಾರಿ ವಸತಿ ಗೃಹಗಳು ಸುಸಜ್ಜಿತವಾಗಿದ್ದರೂ, ತಾಪಂ ಇಒ ಸೇರಿದಂತೆ ಯಾವ ಅಧಿಕಾರಿಗಳೂ, ಇಲ್ಲಿ ವಾಸ ಮಾಡುತ್ತಿಲ್ಲ. ಆದರೆ ತಾಲೂಕು, ಜಿಲ್ಲಾ ಕೇಂದ್ರಗಳಿಂದ ಪ್ರತಿದಿನ ಚಿಕ್ಕನಾಯಕನಹಳ್ಳಿ ತಾಲೂಕಿಗೆ ಕೆಲಸಕ್ಕೆ ಬರುತ್ತಿದ್ದಾರೆ. ಅಧಿಕಾರಿಗಳಿಗಾಗಿಯೇ ನಿರ್ಮಾಣವಾಗಿರುವ ವಸತಿ ಗೃಹಗಳಲ್ಲಿ ವಾಸ ಮಾಡದ ಅಧಿಕಾರಿಗಳ ಎಚ್‌ಆರ್‌ಎ ಕಡಿತಗೊಳಿಸಿ ಕೇಂದ್ರ ಸ್ಥಾನದಲ್ಲಿ ವಾಸ ಮಾಡುವಂತೆ ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.
ವ್ಯವಸ್ಥಿತವಾದ ಕಟ್ಟಡ: ಅಧಿಕಾರಿಗಳಿಗೆ ವಾಸ ಮಾಡಲು ಬೇಕಾಗಿರುವ ನೀರಿನ ವ್ಯವಸ್ಥೆ ವಿದ್ಯುತ್ ವ್ಯವಸ್ಥೆ, 2 ಬಿಎಚ್‌ಕೆ, 3 ಬಿಎಚ್‌ಕೆ ಮನೆಗಳು, ಮನೆಗಳ ಮುಂದೆ ವಿಶಾಲ ಆವರಣ, ಮನೆಗಳಿಗೆ ಸಮೀಪವಾಗಿರುವ ಬಸ್ ನಿಲ್ದಾಣ, ಹೋಟಲ್, ದಿನಸಿ ಅಂಗಡಿಗಳು ಹಾಗೂ ಕಾಲು ನೆಡಿಗೆಯಲ್ಲಿ ಹೋಗಬಹುದಾದಷ್ಟು ಹತ್ತಿರದಲ್ಲಿ ಇರುವ ತಾಲೂಕು ಪಂಚಾಯಿತಿ, ತಾಲೂಕು ಕಚೇರಿಗಳು ಇಷ್ಟೆಲ್ಲ ಮೂಲ ಸೌಕರ್ಯ ಹೊಂದಿದ್ದರೂ ವಾಸ ಮಾಡುತ್ತಿಲ್ಲ. ಹೀಗೆ ಮುಂದುವರಿದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕಚೇರಿಗೆ ಸಮಯಕ್ಕೆ ಹಾಜರಾಗದ ಅಧಿಕಾರಿಗಳು: ದೂರದ ಊರುಗಳಿಂದ ದಿನನಿತ್ಯ ಬರುವ ಅಧಿಕಾರಿಗಳು ಬಹುತೇಕ ದಿನಗಳು ಕಚೇರಿ ಸಮಯಕ್ಕೆ ಸರಿಯಾಗಿ ಹಾಜರಿರುವುದಿಲ್ಲ ಹಾಗೂ ಕಚೇರಿ ಸಮಯ ಮುಗಿಯುವ ಮುನ್ನವೇ ಕಚೇರಿಯಿಂದ ಹೋಗುತ್ತಾರೆ. ಸಾರ್ವಜನಿಕರು ಪ್ರಶ್ನಿಸಿದರೆ ಸಭೆ, ಬೇರೆ ಕಚೇರಿಗಳಲ್ಲಿ ಕೆಲಸವಿದೆ ಎಂದು ಉತ್ತರಿಸುತ್ತಾರೆ. ತಾಲೂಕು ಕೇಂದ್ರದಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಕೇಂದ್ರ ಸ್ಥಳದಲ್ಲಿ ವಾಸ ಮಾಡಬೇಕು. ಇದರಿಂದ ಸಾರ್ವಜನಿಕರಿಗೆ ದಿನ ಯಾವ ಸಮಯದಲ್ಲಿಯಾದರೂ ಅಧಿಕಾರಿಗಳು ಸಿಗುತ್ತಾರೆ. ಕೇಂದ್ರ ಸ್ಥಳದಲ್ಲೇ ಅಧಿಕಾರಿಗಳು ವಾಸಿಸಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದ್ದಾರೆ.
ವಸತಿ ಗೃಹದಲ್ಲೇ ವಾಸವಿರುವ ತಹಶೀಲ್ದಾರ್: ದುರಸ್ತಿ ಹಂತ ತಲುಪಿದ್ದ ವಸತಿ ಗೃಹವನ್ನು ತಹಶೀಲ್ದಾರ್ ತೇಜಸ್ವಿನಿ ನವೀಕರಣಗೊಳಿಸಿಕೊಂಡು ತಾಲೂಕು ಕೇಂದ್ರ ಸ್ಥಳದಲ್ಲಿ ವಾಸ ಮಾಡುತ್ತಿದ್ದಾರೆ. ಇದೇ ರೀತಿ ಇಒ, ಎಇಇ, ಬಿಇಒ ಸೇರಿದಂತೆ ಬೇರೆ ಇಲಾಖೆ ಅಧಿಕಾರಿಗಳು ಸಹ ಇಲ್ಲೇ ವಾಸ ಮಾಡಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯಪಟ್ಟಿದ್ದಾರೆ.
ಸುಸಜ್ಜಿತ ಹಾಗೂ ಮೂಲ ಸೌಕರ್ಯಗಳನ್ನು ಹೊಂದಿರುವ ವಸತಿ ಗೃಹಗಳಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ವಾಸಿಸಬೇಕು. ಜನಪ್ರತಿನಿಧಿಗಳು ಹಾಗು ಸಂಬಂಧಿಸಿದ ಅಧಿಕಾರಿಗಳು ಈ ಸಂಬಂಧ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ.
-ಮಲ್ಲಿಕಾರ್ಜುನ್ ಭಟ್ಟರಹಳ್ಳಿ, ಹೋರಾಟಗಾರ