ಕೊರೊನಾ ಮೂರನೇ ಅಲೆಯಲ್ಲಿ ಆತಂಕ ತಗ್ಗುತ್ತಿದ್ದಂತೆ ಬೆಂಗಳೂರಿನಲ್ಲಿ ತಿಂಗಳ ಬಳಿಕ ಶಾಲಾ-ಕಾಲೇಜುಗಳು ಸೋಮವಾರದಿಂದ ಆರಂಭವಾಗಿವೆ. ಉಳಿದೆಡೆಗಳಲ್ಲಿ ಆತಂಕದ ನಡುವೆಯೇ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿವೆ. ಕೆಲವು ಶಾಲಾ ಕಾಲೇಜುಗಳಿಂದ ಅನಾರೋಗ್ಯದ ವರದಿಗಳು ಬರುತ್ತಿದ್ದು, ಈ ನಿಟ್ಟಿನಲ್ಲಿ ಇದು ಎಲ್ಲರೂ ಎಚ್ಚರ ವಹಿಸಿಕೊಳ್ಳಬೇಕಾದ ಸಮಯ.
ಕೊರೊನಾ ಮೂರನೇ ಅಲೆ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ಹೀಗಾಗಿ ಮುನ್ನಚ್ಚರಿಕೆ ಅನಿವಾರ್ಯ. ಶಾಲಾ-ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರು, ಹೆತ್ತವರು ಹಾಗೂ ವಿದ್ಯಾರ್ಥಿಗಳು ಎಲ್ಲರೂ ಈ ಬಗ್ಗೆ ಜಾಗೃತಿವಹಿಸಬೇಕು. ಮಕ್ಕಳಲ್ಲಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಎದುರಾದರೂ ಆತಂಕ ಇದ್ದೇ ಇರುತ್ತದೆ. ಹೀಗಾಗಿ ಸರಕಾರಿ ಹಾಗೂ ಖಾಸಗಿ ಶಾಲೆಗಳ ಮುಖ್ಯಸ್ಥರು ಸ್ವತ್ಛತೆ ಹಾಗೂ ಸುರಕ್ಷತೆ ಬಗ್ಗೆ ಹೆಚ್ಚು ಗಮನಹರಿಸಬೇಕು. ಮುಂದಿನ ಎರಡು -ಮೂರು ತಿಂಗಳು ಪರೀಕ್ಷೆ ಸಮಯ.
ಹೀಗಾಗಿ ವಿದ್ಯಾರ್ಥಿಗಳು ಒಂದೆಡೆ ಸೇರುವುದು ಸಹಜ. ಆದರೆ ಇದರಿಂದ ಆರೋಗ್ಯಕ್ಕೆ ತೊಂದರೆಯಾಗದಂತೆ ನೋಡಿ ಕೊಳ್ಳಬೇಕಾಗಿದೆ. ಸರಕಾರದ ನಿಯಮ ಪಾಲನೆ ಒಂದು ಕಡೆ. ಸ್ವಯಂ ನಿಯಂತ್ರಣ ಹಾಗೂ ನಿರ್ಬಂಧಗಳ ಮೂಲಕ ಕೊರೊನಾ ಅಷ್ಟೇ ಅಲ್ಲದೆ ಇತರ ಆರೋಗ್ಯ ಸಮಸ್ಯೆಗಳು ಮಕ್ಕಳನ್ನು, ವಿದ್ಯಾರ್ಥಿಗಳನ್ನು ಬಾಧಿಸದಂತೆ ಎಚ್ಚರಿಕೆ ವಹಿಸಬೇಕಿದೆ. ವಿದ್ಯಾರ್ಥಿ ಸಮೂಹ ಅಷ್ಟೇ ಅಲ್ಲದೆ ಶಿಕ್ಷಕ ಹಾಗೂ ಬೋಧಕೇತರ ಸಿಬಂದಿಯೂ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು ಅವರ ಆರೋಗ್ಯವೂ ಮುಖ್ಯ. ಸರಕಾರವು ಶಾಲಾ- ಕಾಲೇಜು ಆರಂಭದ ತೀರ್ಮಾನ ಕೈಗೊಂಡಿರುವುದು ಒಳ್ಳೆಯ ಕ್ರಮ. ಜತೆಗೆ ಜತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು.
ಶಾಲಾ- ಕಾಲೇಜುಗಳಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಹೊರಡಿಸಲಾದ ಪ್ರತ್ಯೇಕ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ನೋಡಿಕೊಳ್ಳುವುದು ಶಾಲಾ ಆಡಳಿತ ಮಂಡಳಿ ಮತ್ತು ಸಂಬಂಧಿತ ವಲಯದ ಅಧಿಕಾರಿಗಳ ಜವಾಬ್ದಾರಿ. ಜತೆಗೆ ಹೆತ್ತವರಿಗೂ ತಿಳಿವಳಿಕೆ ಮೂಡಿಸಬೇಕು.
ಮೊದಲ ಹಾಗೂ ಎರಡನೇ ಅಲೆಯ ಅನುಭವದ ಆಧಾರದ ಮೇಲೆ ಸಾಕಷ್ಟು ಕ್ರಮ ಕೈಗೊಂಡರೂ ಮೂರನೇ ಅಲೆ ಸಂದರ್ಭದಲ್ಲೂ ಸ್ವಲ್ಪ ಮಟ್ಟಿಗೆ ಸಮಸ್ಯೆಯಾಯಿತು. ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗದಂತೆ ನೋಡಿಕೊಂಡು ಶೈಕ್ಷಣಿಕ ಚಟುವಟಿಕೆಗಳು ಯಥಾ ಪ್ರಕಾರ ನಡೆದು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಯಾವುದೇ ಅಡೆ-ತಡೆ ಎದುರಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಹಾಗೆಯೇ 15ರಿಂದ 18ರ ವರೆಗಿನ ವಯೋಮಾನದ (ಹತ್ತನೇ ತರಗತಿಯಿಂದ ದ್ವಿತೀಯ ಪಿಯು ತನಕ) ವಿದ್ಯಾರ್ಥಿಗಳು ಲಸಿಕೆ ತೆಗೆದುಕೊಳ್ಳುವಂತೆ ಪ್ರೇರೇಪಿಸುವುದು ಹಾಗೂ ಪಾಲಕರ ಮನವೊಲಿಕೆ ಮಾಡುವುದು ಸಹ ಶಾಲಾ ಆಡಳಿತ ಮಂಡಳಿಯ ಆದ್ಯ ಕರ್ತವ್ಯವಾಗಿದೆ.
ಈ ನಿಟ್ಟಿನಲ್ಲಿ ಆರೋಗ್ಯ, ಶಿಕ್ಷಣ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಜತೆಗೂಡಿಯೇ ಕೆಲಸ ಮಾಡಬೇಕು. ಜತೆಗೆ ಶಿಕ್ಷಕ, ಉಪನ್ಯಾಸಕ ಸಮೂಹ, ಹೆತ್ತವರು ಸಹ ಜತೆಗೂಡಬೇಕಾಗಿದೆ. ಮಕ್ಕಳ ಭವಿಷ್ಯವೂ ಮುಖ್ಯ, ಆರೋಗ್ಯವೂ ಮುಖ್ಯ. ಹೀಗಾಗಿ ಪ್ರತೀ ಹಂತದಲ್ಲೂ ಸೂಕ್ತ ತೀರ್ಮಾನ ಹಾಗೂ ಕ್ರಮಗಳೊಂದಿಗೆ ಮುಂದುವರಿಯಬೇಕು.