Advertisement

ದೇಶದ ಆರ್ಥಿಕತೆಗೆ ಹೊಸ ಭಾಷ್ಯ ಬರೆದ ಡಾ. ಮನಮೋಹನ್‌ ಸಿಂಗ್‌

06:16 AM Dec 27, 2024 | Team Udayavani |

ದೇಶದ 14ನೇ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಡಾ| ಮನಮೋಹನ್‌ ಸಿಂಗ್‌ ಅವರು ದೇಶ ಕಂಡ ಅತ್ಯುತ್ತಮ ಮತ್ತು ಪ್ರಗತಿಶೀಲ ಆರ್ಥಿಕ ತಜ್ಞ. ಓರ್ವ ರಾಜಕಾರಣಿ ಎನ್ನುವುದಕ್ಕಿಂತ ಹಣಕಾಸು ತಜ್ಞರಾಗಿಯೇ ಹೆಚ್ಚಾಗಿ ಗುರುತಿಸಿಕೊಂಡವರು. 1990ರ ದಶಕದ ಆರಂಭದಲ್ಲಿ ದೇಶದ ಆರ್ಥಿಕತೆ ಸಂಪೂರ್ಣ ನೆಲಕಚ್ಚಿದ್ದ ವೇಳೆ ಹಣಕಾಸು ಸಚಿವಗಿರಿಯು ಹೊಣೆ ತಮ್ಮ ಹೆಗಲ ಮೇಲೇರಿದಾಗ ಆ ಸವಾಲನ್ನು ಸ್ವೀಕರಿಸಿದ್ದೇ ಅಲ್ಲದೆ ಸಮರ್ಥವಾಗಿ ನಿಭಾಯಿಸಿ, ದಿವಾಳಿ ಅಂಚಿಗೆ ತಲುಪಿದ್ದ ದೇಶದ ಅರ್ಥ ವ್ಯವಸ್ಥೆಗೆ ಸುಧಾರಣೆಯ ಸ್ಪರ್ಶವನ್ನು ನೀಡಿ ಆರ್ಥಿಕತೆಯನ್ನು ಮರಳಿ ಹಳಿಗೆ ತಂದ ಓರ್ವ ಅಸಾಧಾರಣ ಆರ್ಥಿಕ ಸುಧಾರಕ.

Advertisement

ಉದಾರಿಕರಣ, ಜಾಗತೀಕರಣ ಮತ್ತು ಖಾಸಗಿಕರಣ ನೀತಿಗಳನ್ನು ಪರಿಚಯಿಸಿ, ದೇಶದ ಮಾರುಕಟ್ಟೆಯನ್ನು ವಿಶ್ವಕ್ಕೆ ಪರಿಚಯಿಸಿದ್ದೇ ಅಲ್ಲದೆ ತಮ್ಮ ಕಠಿನ ಪರಿಶ್ರಮ, ವಿನಯವಂತಿಕೆ, ಮೃದು ಸ್ವಭಾವದ ಕಾರಣದಿಂದಾಗಿಯೇ ಪ್ರಧಾನಿ ಪಟ್ಟ ಒಲಿದು ಬಂದಾಗ ಅದನ್ನು ನಿರಾಕರಿಸದೆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ.

ಓರ್ವ ಬೋಧಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಡಾ| ಸಿಂಗ್‌, ಆ ಬಳಿಕ ವಾಣಿಜ್ಯ ಮತ್ತು ಆರ್ಥಿಕ ಇಲಾಖೆಗಳಲ್ಲಿ ಒಂದೊಂದೇ ಹುದ್ದೆಗಳಿಗೆ ಭಡ್ತಿ ಪಡೆದು ಹಣಕಾಸು ಸಚಿವಾಲಯದ ಕಾರ್ಯದರ್ಶಿ, ಯೋಜನಾ ಆಯೋಗದ ಉಪಾಧ್ಯಕ್ಷ, ಆರ್‌ಬಿಐ ಗವರ್ನರ್‌, ಪ್ರಧಾನಮಂತ್ರಿಯ ಸಲಹೆಗಾರ ಮತ್ತು ಯುಜಿಸಿ ಅಧ್ಯಕ್ಷ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಪ್ರತಿಯೊಂದು ಹುದ್ದೆಯಲ್ಲಿ ಸೇವೆ ಸಲ್ಲಿಸುವಾಗಲೂ ಅಭಿವೃದ್ಧಿಪರ ಮತ್ತು ಜನಸಾಮಾನ್ಯರ ಹಿತವನ್ನು ಎತ್ತಿ ಹಿಡಿಯುವಂತಹ ದಿಟ್ಟ ಹೆಜ್ಜೆಗಳನ್ನು ಇರಿಸುವ ಮೂಲಕ ದೇಶದ ಜನರಲ್ಲಿ ತಮ್ಮದೇ ಆದ ಛಾಪನ್ನು ಒತ್ತಿದ ಧೀಮಂತ ಮೇಧಾವಿ.

1991-1996ರ ಅವಧಿಯಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸಿಂಗ್‌ ಅವರ ನೈಜ ಆರ್ಥಿಕ ತಜ್ಞತೆ ಬೆಳಕಿಗೆ ಬಂದಿತು. ಹಣಕಾಸು ಕ್ಷೇತ್ರದಲ್ಲಿ ತಾವು ಜಾರಿಗೆ ತರಲು ನಿರ್ಧರಿಸಿದ ಸುಧಾರಣ ನೀತಿಗೆ ದೇಶದೆಲ್ಲೆಡೆಯಿಂದ ವ್ಯಾಪಕ ವಿರೋಧದ ಹೊರತಾಗಿಯೂ ಜಾಗತಿಕವಾಗಿ ಭಾರತ ಬಲಿಷ್ಠ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಂತಾಗಲು ಭದ್ರ ಅಡಿಪಾಯವನ್ನು ಹಾಕಿಕೊಟ್ಟಿದ್ದರು. 1991ರಿಂದ ನಿರಂತರವಾಗಿ ರಾಜ್ಯಸಭೆಯ ಸದಸ್ಯರಾಗಿ ಕಾರ್ಯ­ನಿರ್ವಹಿಸುತ್ತ ಬಂದಿದ್ದ ಅವರು ಪ್ರಸಕ್ತ ವರ್ಷದ ಆದಿಯಲ್ಲಿ ಸಕ್ರಿಯ ರಾಜಕೀಯದಿಂದ ಹಿಂದೆ

ಸರಿದಿದ್ದರು. 1998-2004ರ ಅವಧಿಯಲ್ಲಿ ರಾಜ್ಯಸಭೆಯ ವಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರು. 2004 ಮತ್ತು 2009ರ ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಮೈತ್ರಿಕೂಟ ಗೆಲುವು ಸಾಧಿಸಿದಾಗ ಮೈತ್ರಿ ಸರಕಾರವನ್ನು ಯಶಸ್ವಿಯಾಗಿ ಮುನ್ನಡೆಸಿದ ಹೆಗ್ಗಳಿಕೆ ಡಾ| ಮನಮೋಹನ್‌ ಸಿಂಗ್‌ ಅವರದು. ತಮ್ಮ ಅಧಿಕಾರಾವಧಿಯಲ್ಲಿ ಅವರು ಅನುಷ್ಠಾನಗೊಳಿಸಿದ ಯೋಜನೆಗಳು ಇಂದಿಗೂ ದೇಶದ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ತಮ್ಮ ಎರಡೂವರೆ ದಶಕಗಳ ರಾಜಕಾರಣದ ಅವಧಿಯಲ್ಲಿ ಹತ್ತು ಹಲವು ಟೀಕೆ, ಆರೋಪಗಳಿಗೆ ಗುರಿಯಾದರೂ ಅವ್ಯಾವುದನ್ನೂ ಲೆಕ್ಕಿಸದೆ ಸಾಕಷ್ಟು ದೂರದೃಷ್ಟಿಯೊಂದಿಗೆ ರೂಪಿಸಿದ ಯೋಜನೆ, ಚಿಂತನೆಗಳನ್ನು ಕಾರ್ಯಗತಗೊಳಿಸುವ ಮೂಲಕ

Advertisement

ದೇಶದ ರಾಜಕಾರಣಿಗಳಿಗೆ ಒಂದಿಷ್ಟು ತಜ್ಞತೆಯ ಪಾಠವನ್ನು ಕಲಿಸಿಕೊಟ್ಟಿದ್ದರು. ಸಿಂಗ್‌ ಇಂದು ದೈಹಿಕವಾಗಿ ಅಗಲಿದ್ದರೂ ಅವರು ಓರ್ವ ಹಣಕಾಸು ತಜ್ಞನಾಗಿ, ಪ್ರಧಾನಿಯಾಗಿ ಜಾರಿಗೆ ತಂದ ಯೋಜನೆ, ಚಿಂತನೆಗಳ ನೇರ ಫ‌ಲಾನುಭವಿ­ಗಳಾಗಿರುವ ದೇಶವಾಸಿಗಳೆಲ್ಲರಿಗೂ ಸದಾ ಸ್ಮರಣಾರ್ಹರು. ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇನೇ ಇದ್ದರೂ ತಮ್ಮ ಮೃದು ಮಾತುಗಳ ಮೂಲಕವೇ ಎಲ್ಲರನ್ನೂ ತಮ್ಮತ್ತ ಸೆಳೆಯುವ ಚುಂಬಕ ಶಕ್ತಿಯನ್ನು ಹೊಂದಿದ್ದ ಡಾ| ಮನಮೋಹನ್‌ ಸಿಂಗ್‌ ಅವರ ವ್ಯಕ್ತಿತ್ವ ದೇಶದ ಪಾಲಿಗೆ ಸದಾ ಚಿಂತನೆಯ ಚಿಲುಮೆಯೇ ಸರಿ.

Advertisement

Udayavani is now on Telegram. Click here to join our channel and stay updated with the latest news.

Next