Advertisement
ಸಾಮಾನ್ಯವಾಗಿ ಈಶಾನ್ಯ ಮಾರುತಗಳು ದಕ್ಷಿಣ ಒಳನಾಡು ಪ್ರದೇಶದಲ್ಲಿ ಹೆಚ್ಚಿನ ಮಳೆ ಸುರಿಸಿದರೆ, ಈ ಬಾರಿ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿಯೂ ಉತ್ತಮ ಮಳೆಯಾಗಿದೆ. ಸದ್ಯ ಕರಾವಳಿ, ಮಲೆನಾಡು ಮತ್ತು ಒಳನಾಡಿನಲ್ಲಿ ವಿವಿಧ ಕೃಷಿ ಬೆಳೆಗಳು ಕಟಾವಿನ ಹಂತದಲ್ಲಿದೆ. ಆದರೆ ಮಳೆಯಿಂದಾಗಿ ಆಹಾರ ಧಾನ್ಯಗಳು, ತರಕಾರಿ ಸಹಿತ ಬಹುತೇಕ ಕೃಷಿ ಬೆಳೆಗಳ ಕೊಯ್ಲು ವಿಳಂಬಗೊಳ್ಳುವಂತಾಗಿದೆ.
Related Articles
Advertisement
ರೈತರು ಕಳೆದ ನಾಲ್ಕು ತಿಂಗಳುಗಳಿಂದ ಶ್ರಮ ವಹಿಸಿ, ಬೆಳೆದ ಬೆಳೆಗಳು ಇನ್ನೇನು ಕೈ ಸೇರಿತು ಎನ್ನುವಷ್ಟರಲ್ಲಿ ಹಿಂಗಾರಿನ ಆರ್ಭಟ ಎಲ್ಲವನ್ನೂ ಆಪೋಶನ ತೆಗೆದುಕೊಳ್ಳತೊಡಗಿರುವುದರಿಂದ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.ಕಳೆದೆರಡು ತಿಂಗಳುಗಳಿಂದ ರಾಜ್ಯದಲ್ಲಿ ಹಗರಣ, ಭ್ರಷ್ಟಾಚಾರ, ಅಕ್ರಮಗಳನ್ನು ಮುಂದಿಟ್ಟು ಆಡಳಿತ ಮತ್ತು ವಿಪಕ್ಷಗಳ ನಡುವೆ ರಾಜಕೀಯ ವಾಕ್ಸಮರ, ಪ್ರತಿಭಟನೆ ಬಿರುಸಿನಿಂದ ಸಾಗಿದ್ದು, ಆಡಳಿತ ಯಂತ್ರ ಬಹುತೇಕ ನಿಷ್ಕ್ರಿಯ ಸ್ಥಿತಿಯಲ್ಲಿದೆ. ರಾಜ್ಯದ ಲಕ್ಷಾಂತರ ರೈತರು ಸದ್ಯ ಸಂಕಷ್ಟದ ಸ್ಥಿತಿಯಲ್ಲಿದ್ದು ಸರಕಾರ, ಜನಪ್ರತಿನಿಧಿ ಗಳು ಮತ್ತು ಆಡಳಿತ ಯಂತ್ರ ರೈತರ ನೆರವಿಗೆ ಧಾವಿಸಬೇಕು. ರಾಜಕೀಯವೇನೇ ಇರಲಿ, ಸರಕಾರ ಮತ್ತು ಜನಪ್ರತಿನಿಧಿಗಳಿಗೆ ಸದ್ಯ ರೈತರ ಸಂಕಷ್ಟಕ್ಕೆ ಸ್ಪಂದಿಸುವುದೇ ಪ್ರಥಮ ಆದ್ಯತೆಯಾಗಬೇಕು. ಮಳೆಯಿಂದಾಗಿ ಬೆಳೆ ಹಾನಿಗೀಡಾದ ಪ್ರದೇಶಗಳ ತುರ್ತು ಸಮೀಕ್ಷೆ ನಡೆಸಿ, ರೈತರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು. ಬೆಳೆ ವಿಮೆ ಸಕಾಲದಲ್ಲಿ ರೈತರ ಕೈಸೇರುವಂತೆ ಮಾಡಿ, ಮುಂದಿನ ಹಂಗಾಮಿನ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ತೋರುವಂತೆ ಮಾಡಬೇಕು. ಕೃಷಿ ಬೆಳೆಗಳನ್ನು ಸಂರಕ್ಷಿಸಲು ಅಗತ್ಯ ಗೋದಾಮು ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು. ಇದೇ ವೇಳೆ ಕಾಳಸಂತೆಕೋರರು ಪರಿಸ್ಥಿತಿಯ ದುರ್ಲಾಭ ಪಡೆಯದಂತೆ ಕಟ್ಟೆಚ್ಚರ ವಹಿಸಬೇಕು. ದೀಪಾವಳಿ ಹಬ್ಬ ಸಮೀಪಿಸುತ್ತಿರುವುದರಿಂದ ಆಹಾರ ಧಾನ್ಯಗಳು ಮತ್ತು ತರಕಾರಿ ಬೇಡಿಕೆಗೆ ತಕ್ಕಷ್ಟು ಪ್ರಮಾಣದಲ್ಲಿ ಮಾರುಕಟ್ಟೆಗೆ ಪೂರೈಕೆಯಾಗುವುದನ್ನು ಖಾತರಿಪಡಿಸುವ ಮೂಲಕ ಬೆಲೆಗಳನ್ನು ನಿಯಂತ್ರಣ ದಲ್ಲಿರಿಸಿಕೊಳ್ಳುವ ಗುರುತರ ಹೊಣೆಗಾರಿಕೆ ಸರಕಾರದ್ದಾಗಿದೆ. ಇವೆಲ್ಲದರತ್ತ ಸರಕಾರ ಮತ್ತು ಆಡಳಿತ ಯಂತ್ರ ತುರ್ತು ಗಮನಹರಿಸಿದಲ್ಲಿ ರೈತರು ಮತ್ತು ಗ್ರಾಹಕರು ಸಂಕಷ್ಟದಿಂದ ಪಾರಾಗಲು ಸಾಧ್ಯ.