ದಾವಣಗೆರೆ: ಪುತ್ರಿ ಬೇಡ ಜಂಗಮ ಹೆಸರಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಒಂದು ವಾರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ಇಲಾಖೆ ರಾಜ್ಯ ಅಧ್ಯಕ್ಷ ಎಫ್.ಎಚ್. ಜಕ್ಕಪ್ಪನವರ ಒತ್ತಾಯಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಪಿ. ರೇಣುಕಾಚಾರ್ಯ ಅವರ ಪುತ್ರಿ ಬೆಂಗಳೂರು ಉತ್ತರ ತಹಶೀಲ್ದಾರ್ ಕಚೇರಿಯಿಂದ 2012ರ ನ.17ರಂದು ಬೇಡಜಂಗಮ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ರೇಣುಕಾಚಾರ್ಯರಿಗೆ ಗೊತ್ತಿದ್ದರೂ ಈವರೆಗೆ ಸುಮ್ಮನಿದ್ದಾರೆ. ಜಾತಿ ಪ್ರಮಾಣಪತ್ರವನ್ನೂ ರದ್ದುಪಡಿಸಿಲ್ಲ. ದಲಿತರ ಮೀಸಲಾತಿ ಕಬಳಿಕೆಗೆ ಯತ್ನಿಸಿರುವುದು ಅಕ್ಷಮ್ಯ ಕ್ರಿಮಿನಲ್ ಅಪರಾಧ. ಹಾಗಾಗಿ ಒಂದು ವಾರದಲ್ಲಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ತಮ್ಮ ಪುತ್ರಿಗೆ ಸಹೋದರ ಎಂ.ಪಿ. ದಾರುಕೇಶಯ್ಯ ಬೇಡಜಂಗಮ ಪ್ರಮಾಣಪತ್ರ ಕೊಡಿಸಿದ್ದಾರೆ. ಯಾವುದೇ ಸೌಲಭ್ಯ ಪಡೆದುಕೊಂಡಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರುವುದೇ ಮಹಾನ್ ಅಪರಾಧ. ಅದನ್ನು ಅವರೇ ಒಪ್ಪಿಕೊಂಡಿದ್ದಾರೆ. ಹಾಗಾಗಿ ರೇಣುಕಾಚಾರ್ಯ ಮತ್ತು ಅವರ ಸಹೋದರನನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಎಂ.ಪಿ. ರೇಣುಕಾಚಾರ್ಯ ಅವರು ಈ ವೇಳೆಗೆ ನೈತಿಕ ಹೊಣೆ ಅರಿತು ರಾಜೀನಾಮೆ ನೀಡಬೇಕಿತ್ತು. ಇನ್ನು ಒಂದು ವಾರದಲ್ಲಿ ರಾಜೀನಾಮೆ ನೀಡಬೇಕು. ಇಲ್ಲದೆ ಹೋದಲ್ಲಿ ಅವರು ರಾಜೀನಾಮೆ ನೀಡುವವರೆಗೂ ದಾವಣಗೆರೆ ಜಿಲ್ಲೆಯಲ್ಲಿ ವಿವಿಧ ಹಂತದ ಹೋರಾಟ ನಡೆಸಲಾಗುವುದು. ಬೇಡಜಂಗಮರ ಹೆಸರಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಜಾತಿ ಪ್ರಮಾಣಪತ್ರ ರದ್ದುಪಡಿಸಬೇಕು ಎಂದು ಕೋರಿ ಮಾ.28ರ ಸೋಮವಾರ ಬೆಂಗಳೂರಿನಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಡಿಜಿಪಿ ರವೀಂದ್ರನಾಥ್ ಅವರಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ.ಎಂ. ವಾಗೀಶಸ್ವಾಮಿ ಎಂಬುವವರು ಮಾಯಕೊಂಡ ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ದಾವಣಗೆರೆ ಜಿಲ್ಲಾಡಳಿತ ಕೂಡಲೇ ಸಮಗ್ರ ತನಿಖೆ ನಡೆಸಬೇಕು. ಪ್ರಮಾಣಪತ್ರ ಪಡೆದುಕೊಂಡಿರುವುದು ರುಜು ವಾತು ಆದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ದಾವಣಗೆರೆ ಜಿಲ್ಲೆಯಲ್ಲಿ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೇಡ ಜಂಗಮ ಜಾತಿ ಹೆಸರಲ್ಲಿ ಶಾಲೆಗಳ ಪ್ರವೇಶ ಪಡೆದಿರುವುದನ್ನೂ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಎಂ.ಪಿ. ರೇಣುಕಾಚಾರ್ಯ ಅವರೇ ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆದಿರುವುದನ್ನು ಒಪ್ಪಿಕೊಂಡರೂ ಈ ವಿಷಯ ಸದನದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಸಿಎಂ, ಕಾನೂನು ಸಚಿವರು ರೇಣುಕಾಚಾರ್ಯ ಅವರನ್ನು ಸಮರ್ಥಿಸಿ ಕೊಂಡಿರುವುದು ಖಂಡನೀಯ ಎಂದರು. ಜಿಲ್ಲಾಧ್ಯಕ್ಷ ಬಿ.ಎಚ್. ವೀರಭದ್ರಪ್ಪ ಮಾತನಾಡಿ, ಲಿಂಗಾಯತ ಜಂಗಮರು ನಮ್ಮ ಗುರುಗಳು. ಅವರೇ ನಮ್ಮ ಅನ್ನವನ್ನು ಕಸಿಯುವುದು ಸರಿ ಅಲ್ಲ. ಮೂಲತಃ ಮಾಂಸಹಾರಿಗಳು, ಅಲೆಮಾರಿಗಳು, ಭಿಕ್ಷಾಟನೆ ಮಾಡುವ ಬೇಡ ಜಂಗಮರ ಹೆಸರಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರುವವರ ವಿರುದ್ಧ ಹಂತ ಹಂತದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ನಾಗರಾಜನಾಯ್ಕ, ಬಿ.ಎಂ. ಈಶ್ವರ್, ಆದಾಪುರ ನಾಗರಾಜ್, ಜಿ.ಎನ್. ರಂಗಸ್ವಾಮಿ, ಎಸ್. ಶೇಖರಪ್ಪ, ಟಿ.ಎಸ್. ರಾಮಪ್ಪ, ಜಿ. ರಾಕೇಶ್, ಜಿ.ಎಚ್. ತಮ್ಮಣ್ಣ ಇತರರು ಸುದ್ದಿಗೋಷ್ಠಿಯಲ್ಲಿದ್ದರು.