Advertisement

ಧರ್ಮ ಕಟ್ಟುವವರು ಅಧಿಕಾರ ಬಿಟ್ಟು ಬರಲಿ

11:18 AM Nov 09, 2017 | |

ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆಯ ಹೋರಾಟ ದಿನೇ ದಿನೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಲಿಂಗಾಯತ ಮತ್ತು ವೀರಶೈವದ ನಡುವೆ ವ್ಯತ್ಯಾಸ ಇದೆ ಎಂದು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಾರರು ಸಮಾವೇಶಗಳನ್ನು ನಡೆಸುತ್ತ ವೀರಶೈವ ಮುಖಂಡರ ವಿರುದ್ಧ ನೇರವಾಗಿ ಹಾಗೂ ವೈಯಕ್ತಿಕವಾಗಿ ಆರೋಪಗಳನ್ನು ಮಾಡುತ್ತಿದ್ದು, ಈ ಎಲ್ಲ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಉದಯವಾಣಿಯೊಂದಿಗೆ ನೇರಾ ನೇರ ಉತ್ತರ ನೀಡಿದ್ದಾರೆ.

Advertisement

ಪ್ರತ್ಯೇಕ ಧರ್ಮದ ಹೋರಾಟ ದಾರಿ ತಪ್ಪಿದೆಯಾ?
ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮಾಡುವವರನ್ನು ಬಸವಣ್ಣನೇ ದಾರಿ ತಪ್ಪಿಸಿದ್ದಾನೆ. ಈ ಬಗ್ಗೆ ನಾವೇನೂ ಮಾತಾಡಿಲ್ಲ. ಸಮಾವೇಶಗಳನ್ನು ಮಾಡ್ಕೊಂಡು ದುಡ್ಡು ಕೊಟ್ಟು ಜನರನ್ನು ಸೇರಿಸುತ್ತಿದ್ದಾರೆ. 5 ಲಕ್ಷ ಜನರನ್ನು ಸೇರಿಸುತ್ತೇವೆ ಅಂತ ಹೇಳಿದ್ದರು. 50 ಸಾವಿರ ಜನರೂ ಬಂದಿರಲಿಲ್ಲ. ಅದರಲ್ಲಿ ವೀರಶೈವರೂ ಇರಲಿಲ್ಲ.

ಲಿಂಗಾಯತ ಪ್ರತ್ಯೇಕ ಅಂತ ಯಾಕೆ ಕೇಳ್ತಿದ್ದಾರೆ? ವೀರಶೈವಕ್ಕೂ ಲಿಂಗಾಯತಕ್ಕೂ ಸಂಬಂಧ ಇಲ್ವಾ?
ಲಿಂಗಾಯತ ಪ್ರತ್ಯೇಕ ಅನ್ನೋದು ಅವರಿಗೆ ಈಗ ಅರಿವಾಗಿದೆ. ಪ್ರತ್ಯೇಕ ಧರ್ಮದ ಬಗ್ಗೆ ಹೋರಾಟ ಮಾಡುವವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದು ಹೋರಾಟ ಮಾಡಲಿ. ಅಧಿಕಾರ ಇದೆ ಎಂದು ಅಹಂಕಾರದಲ್ಲಿ ಈ ರೀತಿ ಮಾಡುತ್ತಿದ್ದಾರೆ. ಧರ್ಮ ಕಟ್ಟುವವರು ಅಧಿಕಾರ ಬಿಟ್ಟು ಬರಲಿ. ಅವಾಗ ಎಲ್ಲರ ಸಾಮರ್ಥ್ಯ ಗೊತ್ತಾಗುತ್ತದೆ. 

ಸಚಿವರುಗಳು ವೈಯಕ್ತಿಕ ಆರೋಪ ಮಾಡುತ್ತಿದ್ದಾರಲ್ಲಾ ಯಾಕೆ?
ಅದನ್ನು ಅವರಿಗೇ ಕೇಳಬೇಕು. ದುಡ್ಡಿನ ಮದ ಬಂದಿದೆ, ಹೀಗಾಗಿ ಎಲ್ಲಾ ಮಾತನಾಡುತ್ತಾರೆ. ಇಷ್ಟು ದಿನ ಎಲ್ಲಿದ್ದರು ಇವರೆಲ್ಲಾ? 

ಪಂಚಮಸಾಲಿ ಪೀಠಾಧ್ಯಕ್ಷರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ, ಅವರು ಪೀಠಾಧ್ಯಕ್ಷರಾಗಿ ಮುಂದುವರಿ ಯಬಾರದು ಅಂತ ಒತ್ತಡ ಕೇಳಿ ಬರುತ್ತಿದೆಯಲ್ಲಾ?
ಅಂಥ ಸ್ವಾಮೀಜಿಗಳ ಬಗ್ಗೆ ಏನ್‌ ಮಾತಾಡೋದು? ಇವರೆಲ್ಲಾ ಕಾವಿ ಬಟ್ಟೆ ಬಿಚ್ಚಿಟ್ಟು ಮನೆಗೆ ಹೋಗಬೇಕು. ಇಂಥವರಿಗೆ ಜನರೇ ಬುದ್ಧಿ ಕಲಿಸುತ್ತಾರೆ. ಬಾಯಿಗೆ ಬಂದದ್ದು ಮಾತನಾಡಿ ದ್ದಾರೆ. ನಾಲಿಗೆಗೆ ಎಲುಬಿಲ್ಲ ಅಂತ ಏನೇನೋ ಮಾತನಾಡುತ್ತಿದ್ದಾರೆ.

Advertisement

ಅವರಿಗೆ ಹೋರಾಟ ಮಾಡಲು ಕಾರು, ದುಡ್ಡು ಕೊಟ್ಟಿ ದ್ದಾರೆ ಅಂತ ಆರೋಪ ಮಾಡಿದ್ರಿ. ಇದು ನಿಜಾನಾ?
ಅದೆಲ್ಲಾ ಚರ್ಚೆಯಾಗುತ್ತಿದೆ. ವಾಸ್ತವ ಒಂದೊಂದೇ ಹೊರ ಬರುತ್ತದೆ. ನಾನೇಕೆ ಈಗ ಅದನ್ನೆಲ್ಲಾ ಹೇಳಲಿ? ಮುಂದಿನ ದಿನಗಳಲ್ಲಿ ನಿಮಗೇ ಗೊತ್ತಾಗುತ್ತದೆ. 

ಒಂದಾಗಿ ಹೋಗಬೇಕು ಅನ್ನುವ ಪ್ರಯತ್ನ ಎಲ್ಲಿಗೆ ಬಂತು?
ನಾವು ಹೊಂದಿಕೊಂಡು ಹೋಗಬೇಕು ಅಂತಾನೇ ಪ್ರಯತ್ನ ನಡೆಸಿದ್ದೆವು. ಸಮಿತಿ ರಚನೆ ಮಾಡಬೇಕು ಎಂದು ತೀರ್ಮಾನ ಆಗಿತ್ತು. ಆದರೆ, ಅವರೇ ಅದನ್ನು ಬಿಟ್ಟು ಪ್ರತ್ಯೇಕ ಸಭೆಗಳನ್ನು ಮಾಡಿಕೊಂಡು ವೈಯಕ್ತಿಕ ಆರೋಪ ಮಾಡುತ್ತಿದ್ದಾರೆ. ಅವರು ಮಾತಿಗೆ ತಪ್ಪಿದ್ದಾರೆ. ನಾವು ಅವರನ್ನು ಬಿಡುವುದಿಲ್ಲ. ಕಟ್ಟಿಕೊಳ್ಳುವುದೂ ಇಲ್ಲ. ಎಷ್ಟು ದಿನ ನಡೆಯುತ್ತದೆಯೋ ನಡೆಯಲಿ. ನಾವು ಈಗಲೂ ಚರ್ಚೆಗೆ ಮುಕ್ತವಾಗಿದ್ದೇವೆ. ಈಗಲೂ ಒಟ್ಟಾಗಿ ಹೋಗಬೇಕೆಂದೇ ನಾವು ಪ್ರಯತ್ನ ನಡೆಸಿದ್ದೇವೆ.

ಪ್ರತ್ಯೇಕ ಹೋಗುವುದರ ಹಿಂದಿನ ಉದ್ದೇಶ ಏನು?
ಇದರ ಹಿಂದೆ ಯಾರ ಹುನ್ನಾರ ಇದೆಯೋ ನನಗೆ ಗೊತ್ತಿಲ್ಲ. ನೂರು ವರ್ಷದಿಂದ ಮಹಾಸಭೆ ಸಮುದಾಯದ ಹಿತ ಕಾಯುತ್ತ ಬಂದಿದೆ. ಆದರೆ, ಈಗ ಪ್ರತ್ಯೇಕವಾಗುವ ಮಾತುಗಳ ನ್ನಾಡುತ್ತಿದ್ದಾರೆ. ಅವರ ಉದ್ದೇಶ ಏನಿದೆಯೋ ನನಗೆ ಗೊತ್ತಿಲ್ಲ.

ಸಿಎಂ ಒಟ್ಟಾಗಿ ಬನ್ನಿ ಅಂತ ಹೇಳಿದ್ದರು. ನೀವು ಇಬ್ಭಾಗವಾಗಿದ್ದೀರಿ. ಮುಂದಿನ ಹೋರಾಟ ಹೇಗೆ?
ಸಿಎಂ ಎರಡೂ ಕಡೆಯವರನ್ನು ಕರೆದು ಮಾತನಾಡಬೇಕು. ವೀರಶೈವರು ಮತ್ತು ಲಿಂಗಾಯತರು ಯಾರ ಬಳಿ ಸೂಕ್ತ ದಾಖಲೆ/ಮಾಹಿತಿ ಇದೆಯೋ ಅದನ್ನು ನೋಡಿ ತೀರ್ಮಾನ ಕೈಗೊಳ್ಳಬೇಕು. ಅವರು ಯಾರ ಪರವಾಗಿದ್ದಾರೋ ಗೊತ್ತಿಲ್ಲ. ಅವರ ಸಂಪುಟದಲ್ಲಿ ಸಚಿವರು ಬಗ್ಗೆ ಸ್ವಲ್ಪ ತೂಕ ಜಾಸ್ತಿ ಇರಬಹುದು. ಸಿಎಂ ಒಟ್ಟಾಗಿ ಕರೆಯದಿದ್ದರೆ, ನಮ್ಮ ಮನೆಯಲ್ಲಿ ನಾವು ಅವರ ಮನೆಯಲ್ಲಿ ಅವರು ಇರುತ್ತಾರೆ.

ವೀರಶೈವರ ಬಳಿ ದಾಖಲೆಗಳೇ ಇಲ್ಲ ಅಂತ ಹೇಳ್ತಿದ್ದಾರೆ, ನಿಜಾನಾ?
ನಮ್ಮ ಬಳಿ ಎಲ್ಲಾ ದಾಖಲೆಗಳಿವೆ. ಬಸವಣ್ಣ, ಚೆನ್ನ ಬಸವಣ್ಣನೇ ವೀರಶೈವ ಅಂತ ಹೇಳಿದ್ದಾನೆ. ಅವರು ನೂರು ಬಾರಿ ಸುಳ್ಳು ಹೇಳಿ, ಸುಳ್ಳನ್ನ ನಿಜ ಮಾಡಲು ಹೊರಟಿದ್ದಾರೆ. 

ಈ ಸರ್ಕಾರದಿಂದ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುತ್ತದೆ ಎನ್ನುವ ನಂಬಿಕೆ ಇದೆಯಾ ನಿಮಗೆ?
ಈ ಸರ್ಕಾರದ ಕೈಯಲ್ಲಿ ಏನೂ ಅಧಿಕಾರ ಇಲ್ಲ. ಸಿದ್ದರಾಮಯ್ಯಗೆ ಕೇವಲ ಪ್ರಸ್ತಾವನೆ ಕಳಿಸುವ ಅಧಿಕಾರ ಇದೆ. ಇವರಿಂದ ಬೇರೆ ಏನೂ ಆಗುವುದಿಲ್ಲ. ಯುಪಿಎ ಸರ್ಕಾರ ಇನ್ನೆರಡು ತಿಂಗಳು ಅಧಿಕಾರದಲ್ಲಿದ್ದಿದ್ದರೆ, ಇವರ ಪ್ರಸ್ತಾವನೆ ಇಲ್ಲದೆಯೇ ಕೇಂದ್ರ ಸರ್ಕಾರದಿಂದಲೇ ನಾವು ಪಡೆದುಕೊಂಡು ಬರುತ್ತಿದ್ದೆವು. ಸೋನಿಯಾ ಗಾಂಧಿ ಜೊತೆಗೆ ಮಾತುಕತೆ ಮಾಡಿ ಎಲ್ಲವನ್ನೂ ಒಪ್ಪಿಗೆ ಪಡೆದುಕೊಂಡಿದ್ದೆವು. ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದರೆ, ಸ್ವಲ್ಪ ಬಲ ಬರುತ್ತದೆ ಅಷ್ಟೆ. 

ಲಿಂಗಾಯತ ಹೋರಾಟಗಾರರು ನಿಮ್ಮ ವಿರುದ್ಧ ಯುದ್ಧ ಸಾರಿದ್ದಾರಲ್ಲಾ?
ಅವರು ಯುದ್ಧ ಸಾರುತ್ತಿದ್ದಾರೆ. ಆದರೆ, ಇನ್ನೂ ಯುದ್ಧ ಆರಂಭ ವಾಗಿಲ್ಲ. ಯುದ್ಧ ಆರಂಭವಾದರೆ, ನಮ್ಮ ಬಳಿಯೇ ಜಲಜನಕ ಆಟಂ ಬಾಂಬ್‌ ಇವೆ. ಆದರೆ ನಮಗೆ ಯುದ್ಧ ಬೇಕಾಗಿಲ್ಲ. ಸಂಧಾನ ಬೇಕಾಗಿದೆ. ಎಲ್ಲರೂ ಒಟ್ಟಾಗಿ ಹೋಗಬೇಕು ಅನ್ನೋದು ನಮ್ಮ ವಾದ. ಅದಕ್ಕಾಗಿ ನಮ್ಮ ಬಾಗಿಲು ಯಾವಾಗಲೂ ತೆರದೇ ಇರುತ್ತದೆ. 

ಸಿದ್ದರಾಮಯ್ಯ ಸರ್ಕಾರದಲ್ಲಿ ಲಿಂಗಾಯತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದೀರಿ? 
ಆ ಬಗ್ಗೆ ಈಗ ನಾನೇನು ಮಾತನಾಡುವುದಿಲ್ಲ. ಈ ಸರ್ಕಾರ ಯಾರ ಪರವಾಗಿ ಇತ್ತು ಅನ್ನೋದನ್ನು ಜನರೇ ನಿರ್ಧರಿಸು
ತ್ತಾರೆ. ಯಾರಿಗೆ ಅನ್ಯಾಯ ಆಗ್ತಿದೆ ಅಂತ ರಾಜ್ಯದ ಜನತೆಗೆ ಗೊತ್ತಿದೆ. ಮುಖ್ಯಮಂತ್ರಿ ಯಾರಾದರೆ, ಯಾರಿಗೆ ಅನುಕೂಲ ಆಗಲಿದೆ ಅನ್ನೋದೂ ಜನರಿಗೆ ಗೊತ್ತಿದೆ. 

ಮುಂದಿನ ಬಾರಿ ರಾಜ್ಯದಲ್ಲಿ ವೀರಶೈವ ಲಿಂಗಾಯತ ಮುಖ್ಯಮಂತ್ರಿ ಆಗಬೇಕು ಅಂತ ಬಯಸುತ್ತೀರಾ? 
ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ವಿಚಾರದಲ್ಲಿ ಶಾಸಕಾಂಗ ಸಭೆ ಮತ್ತು ಹೈ ಕಮಾಂಡ್‌ ತೀರ್ಮಾನ ಅಂತಿಮ. ಅಷ್ಟಕ್ಕೂ ಸಿದ್ದರಾಮಯ್ಯ ಬಿಟ್ಟು ಕೊಡಬೇಕಲ್ಲಾ? ಈಗ ಸಿಎಂ ಸೀಟ್‌ ಖಾಲಿ ಇಲ್ಲ. ಬಹುಮತ ಬಂದ್ರೆ ಅವರು ಬಿಟ್ಟು ಕೊಡ್ತಾರ?

ಕಾಂಗ್ರೆಸ್‌ನಲ್ಲಿ ಲಿಂಗಾಯತ ನಾಯಕರಲ್ಲಿ ಸಿಎಂ ಆಗುವ ಅರ್ಹತೆ ಯಾರಿಗೂ ಇಲ್ಲಾ ಅಂತಾರೆ?
ಎಂ.ಬಿ. ಪಾಟೀಲ್‌ ಮುಖ್ಯಮಂತ್ರಿ ಆಗ್ತಿàನಿ ಅಂತ ಹೇಳಿಕೊಂಡಿ ದ್ದಾರಲ್ಲ, ಅವರಿಗೆ ಅದರ ಆಸೆ ತೋರಿಸಿರಬೇಕು. ಅಧಿಕಾರ ಅಂದರೆ ಎಲ್ಲರೂ ಕಚ್ಚಾಡ್ತಾರೆ. ಮುಖ್ಯಮಂತ್ರಿ ಯಾರಾಗಬೇಕು ಅಂತ ಜನರು ತೀರ್ಮಾನ ಮಾಡ್ತಾರೆ. 

ಜಾತಿ ಸಮೀಕ್ಷೆಯಲ್ಲಿ ಲಿಂಗಾಯತರ ಜನಸಂಖ್ಯೆ ನಾಲ್ಕನೇ ಸ್ಥಾನದಲ್ಲಿದೆ ಅಂತ ಸುದ್ದಿ ಇದೆಯಲ್ಲಾ?
ಜಾತಿ ಸಮೀಕ್ಷೆ ಏನಾಗಿದೆಯೋ ನನಗೆ ಗೊತ್ತಿಲ್ಲ. ವೀರಶೈವ ಲಿಂಗಾಯತರ ಎಲ್ಲ ಒಳ ಪಂಗಡಗಳು ಒಟ್ಟಿಗೆ ಸೇರಿದರೆ ನಮ್ಮ ಜನ ಸಂಖ್ಯೆಯೇ ಹೆಚ್ಚಾಗುತ್ತದೆ. ಸಿದ್ದರಾಮಯ್ಯನ ಮನಸಿನಲ್ಲಿ ಏನಿದೆಯೋ ಯಾರಿಗೆ ಗೊತ್ತು? ನಾನು ಮಂತ್ರಿಯಾಗಿದ್ದಾಗ ಆ ರೀತಿಯ ಯಾವುದೇ ಚರ್ಚೆ ಆಗಿರಲಿಲ್ಲ. ಈಗ ಏನಾಗಿದೆಯೋ ನನಗೆ ಗೊತ್ತಿಲ್ಲ. 

ಮುಂದಿನ ಬಾರಿ ನೀವು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೀರಾ?
2018ರ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ. ಕೆಪಿಸಿಸಿ ಯಿಂದ ನನಗೇ ಟಿಕೆಟ್‌ ಕೊಡ್ತಾರೆ. ಮತ್ತೆ ನಾನೇ ಗೆಲ್ಲುತ್ತೇನೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಹಿರಿಯರಿಗೆ ಟಿಕೆಟ್‌ ನೀಡುವುದಿಲ್ಲ ಎನ್ನುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. 

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತೆ ಅನ್ನುವ ನಂಬಿಕೆ ಇದೆಯಾ?
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವೇ ಬಹುಮತ ಪಡೆಯಲಿದೆ. ನಾವೇ ನಂಬರ್‌ ಒನ್‌ ಸ್ಥಾನದಲ್ಲಿ ಆಯ್ಕೆಯಾಗಿ ಅಧಿಕಾರಕ್ಕೆ ಬರುತ್ತೇವೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ.

ನಮ್ಮದು ಸ್ವತಂತ್ರ ಸಂಘಟನೆ
ನಮ್ಮ ಮಹಾಸಭೆ ಯಾವುದೇ ಪಕ್ಷದ ಪರವಾಗಿಯೂ ಯಾವುದೇ ಪಕ್ಷದ ಬೆಂಬಲವಾಗಿಯೂ ಇಲ್ಲ. ಇದು ಸ್ವತಂತ್ರ ಸಂಘಟನೆ. ಬಿಜೆಪಿಯವರು ಇದು ಕಾಂಗ್ರೆಸ್‌ ಪ್ರೇರಿತ ಹೋರಾಟ ಅಂತಿದ್ದಾರೆ. ಆದರೆ ಬಿಜೆಪಿಯವರು ಹೇಳಿದ ಹಾಗೆ ಈ ಸಂಘಟನೆಗೂ ಕಾಂಗ್ರೆಸ್‌ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ.

ಸಂದರ್ಶನ: ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next