ಹಾವೇರಿ: ಮನುಷ್ಯರು ಸೇವಿಸಬಹುದಾದ ಕೀಟಗಳು ತಯಾರಿಸಿದ ಒಂದೇ ಒಂದು ಪದಾರ್ಥವೆಂದರೆ ಅದು ಜೇನುತುಪ್ಪ ಮಾತ್ರ. ಆದರೆ, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯುವಂತಹ ಜೇನುತುಪ್ಪ ಕಲಬೆರಕೆ ಯಿಂದ ಕೂಡಿರುತ್ತದೆ. ಜನರಿಗೆ ಪರಿಶುದ್ಧವಾದ ಜೇನುತುಪ್ಪ ದೊರೆಯುತ್ತಿಲ್ಲ ಎಂದು ದೇವಿಹೊಸೂರ ತೋಟಗಾರಿಕೆ ಸಂಶೋಧನಾ ವಿಶ್ವವಿದ್ಯಾಲಯ ಕೇಂದ್ರದ ಮುಖ್ಯಸ್ಥ ಡಾ|ಪ್ರಭುದೇವ ಅಜ್ಜಪ್ಪಳವರ ಹೇಳಿದರು.
ತಾಲೂಕಿನ ದೇವಿಹೊಸೂರು ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ವತಿಯಿಂದ ವಿಶ್ವ ಜೇನು ದಿನಾಚರಣೆ ಮತ್ತು ಒಂದು ದಿನದ ಜೇನು ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜೇನುತುಪ್ಪ ತಯಾರಾಗುವುದು ಸಸ್ಯಗಳಿಂದ. ಮಕರಂದ, ಸಿಹಿ ಜಿನಗು ಹಾಗೂ ಕೆಲವು ಕೀಟಗಳು ತಮ್ಮ ದೇಹದಿಂದ ಸ್ರವಿಸುವಂತಹ ಹೆಚ್ಚಾದ ಸಕ್ಕರೆಯ ಅಂಶವನ್ನು ಸೇವಿಸಿ ಅದಕ್ಕೆ ತಮ್ಮ ಉದರದ ಕಿಣ್ವಗಳನ್ನು ಸೇರಿಸಿ ಮತ್ತೆ ಬಾಯಿಂದ ಜೇನು ಗೂಡಿನ ತುಪ್ಪದ ಕೋಣೆಗೆ ಸುರಿದು ಹೆಚ್ಚಿನ ನೀರಿನ ಅಂಶವನ್ನು ತೆಗೆದು ಶುದ್ಧವಾದ ತುಪ್ಪವನ್ನು ತಯಾರಿಸಿ ಸಂಗ್ರಹಿಸಿಕೊಂಡಿರುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯುವಂತಹ ಜೇನುತುಪ್ಪ ಕಲಬೆರಕೆಯಿಂದ ಕೂಡಿರುತ್ತದೆ. ಹಾಗಾಗಿ, ಜನರಿಗೆ ಪರಿಶುದ್ಧ ಜೇನುತುಪ್ಪ ದೊರೆಯುತ್ತಿಲ್ಲ ಎಂದು ಹೇಳಿದರು.
ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ|ವಿನಯಕುಮಾರ್ ಎಂ.ಎಂ. ಮಾತನಾಡಿ, ಆಧುನಿಕ ಜೇನು ಕೃಷಿ ಪಿತಾಮಹ, ಜೇನು ಕೃಷಿ ಮಹತ್ವ ಸಾರಿದ ಆಂಟೋನ್ ಜಾನ್ಸರ್ ಅವರು 1734ರ ಮೇ 20ರಂದು ಜನಿಸಿದರು. ಅವರ ನೆನಪಿಗೆ ಮೇ 20 ರಂದು ವಿಶ್ವ ಜೇನು ದಿನಾಚರಣೆ ಆಚರಿಸಲಾಗುತ್ತದೆ ಎಂದರು.
ರೈತ ಸಮುದಾಯಕ್ಕೆ ಮತ್ತು ಜೇನು ಕೃಷಿ ಆಸಕ್ತರಿಗೆ ಅರಿವು ಮೂಡಿಸುವುದು ಮೊದಲ ಆದ್ಯತೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಭೂಮಿಯ ಮೇಲೆ ಜೇನು ಸಂಪತ್ತು ನಿಧಾನವಾಗಿ ನಶಿಸುತ್ತಿವೆ. ಮನುಷ್ಯ ತನ್ನ ದುರಾಸೆಯಿಂದ ಜೇನುತುಪ್ಪಕ್ಕಾಗಿ ಅವುಗಳನ್ನು ಅಮಾನುಷವಾಗಿ ಸುಟ್ಟು ಹಾಕುವುದು, ಮನೆ, ಕಚೇರಿ, ವಠಾರಗಳಲ್ಲಿ ಕಟ್ಟುವಂತಹ ಜೇನುಗೂಡುಗಳಿಂದ ತೊಂದರೆಯಾಗಬಹುದೆಂಬ ಕಾರಣದಿಂದ ಅವುಗಳಿಗೆ ತೊಂದರೆ ನೀಡುವುದು ಮತ್ತು ವಾತಾವರಣದ ವೈಪರೀತ್ಯ, ಕಾಡುಗಳ ನಾಶ, ಅವೈಜ್ಞಾನಿಕವಾಗಿ ಪೀಡೆನಾಶಕಗಳ ಬಳಕೆಯಿಂದ ಆಗುತ್ತಿರುವ ಹಾನಿ ತಪ್ಪಿಸಲು ಜೇನು ಕೃಷಿಕರಿಗೆ, ಸಾರ್ವಜನಿಕರಿಗೆ ಮತ್ತು ರೈತರಿಗೆ ಇವುಗಳ ಬಗ್ಗೆ ಸರಿಯಾಗಿ ಅರಿವು ಮೂಡಿಸಲು ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದು ಅತೀ ಅವಶ್ಯಕವಾಗಿದೆ ಎಂದರು.
ತರಬೇತಿ ಕಾರ್ಯಕ್ರಮದಲ್ಲಿ 45ಕ್ಕೂ ಹೆಚ್ಚು ಹಿರೇಕೆರೂರು ತಾಲೂಕಿನ ಸ್ವಸಹಾಯ ಗುಂಪಿನ ಮಹಿಳೆಯರು ಮತ್ತು ಹಾವೇರಿ ಸುತ್ತಮುತ್ತಲಿನ ಜೇನು ಕೃಷಿ ಆಸಕ್ತರು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ|ವಿನಯಕುಮಾರ್ ಎಂ.ಎಂ. ಮತ್ತು ವಿದ್ಯಾಶ್ರೀ ದುಳೆಹೊಳಿ ಅವರು ಜೇನು ಕೃಷಿ ಹಾಗೂ ಪರಾಗ ಸ್ಪರ್ಶದ ಮಹತ್ವ, ಜೇನು ಸಂಸ್ಕರಣೆ ಮತ್ತು ಜೇನು ಉತ್ಪನ್ನಗಳು ವಿಷಯಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.
ಡಾ|ವಿನಯಕುಮಾರ್ ಎಂ.ಎಂ. ಮತ್ತು ಕ್ಷೇತ್ರ ಸಹಾಯಕರಾದ ಜಯಪ್ಪ ಕೆರೂಡಿ ಜೇನು ಕೃಷಿ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಹಾವೇರಿ ಎನ್‌ಆರ್ ಎಲ್‌ಎಂ ಸಹಾಯಕ ಯೋಜನಾಧಿಕಾರಿ ಪರಶುರಾಮ್ ಪೂಜಾರ, ದೇವಿಹೊಸೂರ ತೋಟಗಾರಿಕಾ ಸಂಶೋಧನಾ ಕೇಂದ್ರದ ಡಾ|ರವಿಕುಮಾರ್ ಬಿ., ಡಾ|ಕಿರಣ್‌ಕುಮಾರ್ ನಾಗಜ್ಜನವರ, ಡಾ|ಚಂದ್ರಾವತಿ ಬಿ. ಹಾಗೂ ರಮೇಶ್ ದಾಸರ್ ಇತರರಿದ್ದರು.
ಜೇನು ಕೃಷಿ ಮಹಿಳೆಯರಿಗೆ ಒಂದು ಅತ್ಯುತ್ತಮ ಉಪ ಕಸುಬಾಗಿದೆ. ಮಹಿಳೆಯರು ಕೃಷಿಯೊಂದಿಗೆ ಇತರೆ ಉಪಕಸುಬುಗಳಾದ ಹೈನುಗಾರಿಕೆ, ಕೋಳಿ ಸಾಕಾಣಿಕೆ ಹಾಗೂ ಜೇನು ಕೃಷಿಯಂತಹ ಚಟುವಟಿಕೆಗಳನ್ನು ಮಾಡಿಕೊಂಡು ಹೆಚ್ಚಿನ ಆದಾಯ ಗಳಿಸಬಹುದಾಗಿದೆ. –
ಡಾ|ಗುರುಮೂರ್ತಿ ಎಸ್.ಬಿ., ಸಹ ಪ್ರಾಧ್ಯಾಪಕರು, ತೋಟಗಾರಿಕೆ ಸಂಶೋಧನಾ ವಿವಿ, ದೇವಿಹೊಸೂರ