Advertisement

UV Fusion: ಸ್ನೇಹದ ಕಡಲಲ್ಲಿ ನಮ್ಮ ಬಾಳ ದೋಣಿ ಸಾಗಲಿ

03:51 PM Aug 22, 2023 | Team Udayavani |

ಸ್ನೇಹ ಸಂಬಂಧ ರಕ್ತ ಸಂಬಂಧಕ್ಕಿಂತ ಮಿಗಿಲು. ಸ್ನೇಹವೆಂಬುದು ಭಾವನಾತ್ಮಕ ಬೆಸುಗೆಯ ಸಮ್ಮಿಲನ. ಸ್ನೇಹಕ್ಕೆ ಗಂಡು – ಹೆಣ್ಣು, ಬಡವ – ಬಲ್ಲಿದ, ಜಾತಿ – ಧರ್ಮ ಎಂಬ ಭೇದ ಭಾವವಿಲ್ಲ. ಜೀವಕ್ಕೆ ಜೀವ ಕೊಡುವವರು, ಕಷ್ಟ ಕಾಲದಲ್ಲಿ ನೆರವಿಗೆ ಬರುವವರೇ ನಮ್ಮ ಪ್ರಾಣ ಸ್ನೇಹಿತರು. ಯಾರ ಬಳಿಯೂ ಹೇಳಿಕೊಳ್ಳಲಾಗದ ಅನೇಕ ಗುಪ್ತ ವಿಷಯಗಳನ್ನು ನಾವು ನಮ್ಮ ಗೆಳೆಯರ ಬಳಿ ಹಂಚಿಕೊಳ್ಳುತ್ತೇವೆ. ಅಂದರೆ ಸ್ನೇಹವೆಂಬುದಕ್ಕೆ ಅಷ್ಟು ಮಹತ್ವವಿದ್ದು, ಅದೊಂದು ಹೃದಯಾಂತರಾಳದ ಎಂದೂ ಅಳಿಸದ ಮಧುರ ಬಾಂಧವ್ಯ.

Advertisement

ನಮ್ಮಲ್ಲಿರುವ ಹೃದಯ ಶ್ರೀಮಂತಿಕೆಯಿಂದ ಸ್ನೇಹವರ್ಗವನ್ನು ಸಂಪಾದಿಸಲು ಸಾಧ್ಯ. ಎಲ್ಲಿ ಸ್ನೇಹದ ವಾತಾವರಣವಿದೆಯೋ ಅಲ್ಲಿ ಭಗವಂತನ ಸಾನ್ನಿಧ್ಯಕ್ಕೆ ಸಮಾನಾದ ವಾತಾವರಣ ಇದೆಯೆಂದೇ ಅರ್ಥ. ವಿನಮ್ರ, ನಿಗರ್ವಿ, ಶಿಸ್ತು ಬದ್ಧ ವ್ಯಕ್ತಿತ್ವವು ಸ್ನೇಹ ಸಂಪಾದನೆಗೆ ಮುಖ್ಯವಾಗಿದೆ. ನಮ್ಮ ಅಂತರಂಗದಲ್ಲಿ ಪ್ರೀತಿಯ ಬೀಜವು ಮೊಳಕೆಯೊಡೆದಾಗ ನಮಗೆ ಎಲ್ಲೆಲ್ಲೂ ಸ್ನೇಹಿತರೇ ಕಾಣ ಸಿಗುತ್ತಾರೆ. ನಮ್ಮ ಸ್ನೇಹ ಪರ ಮನಸ್ಸು ಶತ್ರುತ್ವದ ವಾತಾವರಣವನ್ನು ನಿರ್ನಾಮ ಮಾಡಬಲ್ಲದು. ನಮ್ಮಲ್ಲಿ ಪ್ರೀತಿಯ ಮನಸ್ಸುಗಳಿದ್ದಲ್ಲಿ ಎಲ್ಲ ಕಡೆಯಿಂದಲೂ ಶುಭ ಸೂಚನೆಯ ಫ‌ಲವೇ ನಮಗೆ ಗೋಚರಿಸುತ್ತದೆ. ಎಂತಹ ಕಠಿನ ಹೃದಯದವರನ್ನೂ ನಮ್ಮಲ್ಲಿರುವ ಮೃದು ಮನಸ್ಸಿನ ನಯ – ವಿನಯಗಳ ನಡತೆಯಿಂದ ಅವರನ್ನು ಸರಿ ದಾರಿಗೆ ತರಲು ಸಾಧ್ಯವಾಗುತ್ತದೆ.

ಪ್ರೀತಿ, ಸ್ನೇಹವೆಂಬುದು ಹಂಚಿದಷ್ಟು ಹೆಚ್ಚಾಗುತ್ತಾ ಹೋಗುತ್ತದೆ. ಸ್ನೇಹ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಹರಡ ಬಲ್ಲ ಒಂದು ಸುಂದರ ಸೋಂಕು. ಬದುಕಲು, ಬದುಕಿಸಲು ಸ್ನೇಹ ಎಂಬ ಮನಸ್ಸಿದ್ದರೆ ಮಾತ್ರ ಸಾಧ್ಯ. ಧನ – ದಾನ್ಯಗಳ ಸಂಪತ್ತು ನಿಜವಾದ ಆಸ್ತಿಯಲ್ಲ. ಪ್ರೀತಿ, ಪ್ರೇಮ, ಸ್ನೇಹ – ಸೌಹಾರ್ದತೆಯೇ ನಿಜವಾದ ಸಂಪತ್ತು. ಭಗವಂತನು ನಾವು ಜನ್ಮ ತಾಳುವಾಗಲೇ ನಮಗೆ ಪ್ರೀತಿ, ಪ್ರೇಮಗಳ ವರಗಳನ್ನು ದಯ ಪಾಲಿಸಿದ್ದಾನೆ. ಆದರೆ ನಮ್ಮಲ್ಲಿ ಮಾತ್ರ ದರಿದ್ರರು, ಬಡವರು ಎಂದು ಕೀಳರಿಮೆಯ ಭಾವನೆ ಇದೆ. ಆದರೆ ನಮಗೆ ಕರುಣಿಸಿದ ಪ್ರೀತಿ, ಸ್ನೇಹಗಳ ಸಂಪನ್ಮೂಲವನ್ನು ಸರಿಯಾಗಿ ಸದುಪಯೋಗಗೊಳಿಸಿದಾಗ ನಮ್ಮಷ್ಟು ದೊಡ್ಡ ಶ್ರೀಮಂತರು ಬೇರೆ ಯಾರೂ ಇಲ್ಲ. ಈ ಶ್ರೀಮಂತಿಕೆಯನ್ನು ಪಡೆಯಲು ಯಾವ ಖರ್ಚು ಇಲ್ಲ. ಹೃದಯದಲ್ಲಿರುವ ಶ್ರೀಮಂತಿಕೆಯನ್ನು ಖರ್ಚು ಮಾಡ ಬೇಕು ಅಷ್ಟೇ.

ಗ್ರಂಥ ಓದಿದವರೆಲ್ಲ ಪಂಡಿತರಾಗುವುದಿಲ್ಲ. ಪದವಿ ಗಳಿಸಿದವರು ಪೂರ್ಣ ಶಿಕ್ಷಣವಂತರಾಗುವುದಿಲ್ಲ, ಕಂಕಣ ಭಾಗ್ಯ ದೊರೆತ ಮಾತ್ರಕ್ಕೆ ಗೃಹಸ್ಥರಾಗುವುದಿಲ್ಲ, ಸಾರ್ವಜನಿಕ ವೇದಿಕೆಗಳಲ್ಲಿ ಭಾಷಣ ಬಿಗಿದ ಮಾತ್ರ ಕ್ಕೆ ಮಾತ್ರ ಮೇಧಾವಿಯಾಗುವುದಿಲ್ಲ, ಆದರೆ ತಮ್ಮಲ್ಲಿರುವ ಅಮೂಲ್ಯವಾದ ಸ್ವರ್ಣ ಕಲಶದಂತಿರುವ ಪ್ರೀತಿ, ಸ್ನೇಹಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಾಗ ಮಾತ್ರ ಯಶಸ್ಸಿನ ಮೆಟ್ಟಿಲನ್ನು ಏರಲು ಸಾಧ್ಯವಾಗುತ್ತದೆ.

ಗಂಡ – ಹೆಂಡತಿ ಸ್ನೇಹ, ತಂದೆ, ತಾಯಿ – ಮಕ್ಕಳ ಸ್ನೇಹ, ಗುರು – ಶಿಷ್ಯರ ಸ್ನೇಹ, ಅಣ್ಣ – ತಮ್ಮಂದಿರ ಸ್ನೇಹ, ಅಕ್ಕ – ತಂಗಿಯರ ಸ್ನೇಹ ಇವು ಎಲ್ಲವೂ ಭಾವನಾತ್ಮಕವಾದ ಸ್ನೇಹ ಸಂಬಂಧಗಳೇ. ಇಂತಹ ಸಂಬಂಧಗಳೇ ಸಾರ್ವಜನಿಕ ವ್ಯವಸ್ಥೆಯಲ್ಲಿ ಸಮ್ಮಿಳಿತಗೊಂಡಾಗ ಸಮಾಜದಲ್ಲಿ ಸಾಮರಸ್ಯದ ಸಾಮ್ರಾಜ್ಯ ನಿರ್ಮಾಣವಾಗುತ್ತದೆ. ನಮ್ಮ ಕಠೊರ ಗುಣಗಳು ನಮ್ಮನ್ನು ಜೀವನದ ನಾಶದ ಅಂಚಿಗೆ ಕೊಂಡೊಯ್ಯುತ್ತದೆ. ನಮ್ಮ ಮಾನಸಿಕ ಸಮತೋಲನಗಳಿಗೆ ನಮ್ಮಲ್ಲಿರುವ ಗುಣಗಳೇ ಮುಖ್ಯ ಕಾರಣ. ಆದ್ದರಿಂದ ನಿಕೃಷ್ಟವಾದ ಋಣಾತ್ಮಕ ಗುಣಗಳನ್ನು ದೂರ ಮಾಡಿ ಪ್ರೀತಿ, ಸ್ನೇಹಗಳು ಎಂಬ ಗುಣಾತ್ಮಕವಾದ ಅಂಶಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ನಿಜವಾದ ಶ್ರೀಮಂತಿಕೆಯು ನಮಗೆ ಪ್ರಾಪ್ತವಾಗುತ್ತದೆ.

Advertisement

ಹಾಲಿಗಿಂತ ಜೇನು ಮಧುರ, ಜೇನಿಗಿಂತ ಸ್ನೇಹ ಮಧುರ, ಸ್ನೇಹಕ್ಕಿಂತಲೂ ಪ್ರೀತಿ ಎಂಬುದು ಇನ್ನೂ ಮಧುರ. ನಾವು ಪ್ರೀತಿಸುವವರೇ ನಮನ್ನು ಪ್ರೀತಿಸುತಿದ್ದರೆ ಅದು ಅತ್ಯಂತ ಮಧುರ. ಆದ್ದರಿಂದ ನಮ್ಮಲ್ಲಿ ಎಲ್ಲರಲ್ಲೂ ಅಮರ ಮಧುರ ಪ್ರೇಮವಾಗಲಿ. ಸ್ನೇಹದ ಕಡಲಲ್ಲಿ ನಮ್ಮ ಬಾಳೆಂಬ ದೋಣಿಯು ನಿರಾತಂಕವಾಗಿ ನಿರಂತರ ಸಾಗಲಿ, ಬರಡಾದ ಬದುಕಲ್ಲಿ ಸ್ನೇಹವೆಂಬ ಬಂಗಾರದ ಬದುಕು ನಮ್ಮದಾಗಲಿ.

-ಹರೀಶ್ಚಂದ್ರ, ಕುಪ್ಪೆಪದವು

Advertisement

Udayavani is now on Telegram. Click here to join our channel and stay updated with the latest news.

Next