Advertisement

ಕೆಪಿಎಸ್‌ಸಿ ಲೋಪಗಳಿಲ್ಲದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿ

03:42 AM Dec 31, 2024 | Team Udayavani |

ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಕಳೆದ ಆಗಸ್ಟ್‌ ತಿಂಗಳಲ್ಲಿ ಕೆಎಎಸ್‌ ಪೂರ್ವಭಾವಿ ಪರೀಕ್ಷೆ ನಡೆಸಿತ್ತು. ಆದರೆ ಆಗ ಭಾಷಾಂತರ ಸೇರಿದಂತೆ ಸಾಕಷ್ಟು ತಪ್ಪುಗಳಾದ್ದರಿಂದ ಕೆಪಿಎಸ್‌ಸಿ ರವಿವಾರ (ಡಿ.29) ಪೂರ್ವಭಾವಿ ಮರು ಪರೀಕ್ಷೆ ಆಯೋಜಿಸಿತ್ತು. ವಿಪರ್ಯಾಸ ಎಂದರೆ, ಈ ಮರು ಪರೀಕ್ಷೆಯೂ ಅವಾಂತರಗಳಿಂದ ಮುಕ್ತವಾಗಿರಲಿಲ್ಲ! ಪರಿಣಾಮ, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲೇ ಪ್ರತಿಭಟನೆ ನಡೆಸಿ, ಮತ್ತೆ ಮರು ಪರೀಕ್ಷೆಗೆ ಆಗ್ರಹಿಸಿದ್ದಾರೆ.

Advertisement

ಎಂದಿನಂತೆ ಭಾಷಾಂತರ ಸಮಸ್ಯೆ ಜತೆಗೆ ಈ ಬಾರಿ ಒಎಂಆರ್‌ ಶೀಟ್‌ ಸಂಖ್ಯೆ-ಅಭ್ಯರ್ಥಿಗಳ ನೋಂದಣಿ ಸಂಖ್ಯೆ, ಒಎಂಆರ್‌ ಶೀಟ್‌-ಪ್ರಶ್ನೆಪತ್ರಿಕೆ ನಡುವೆ ತಾಳೆಯಾಗಿಲ್ಲ. ಇದರಿಂದಾಗಿ ಕೆಲವು ಕೇಂದ್ರಗಳಲ್ಲಿ ಪರೀಕ್ಷೆ ಒಂದು ಗಂಟೆ ವಿಳಂಬವಾಗಿದೆ. 204 ಸರಕಾರಿ, 189 ಅನುದಾನಿತ ಹಾಗೂ 161 ಖಾಸಗಿ ಶಾಲಾ – ಕಾಲೇಜುಗಳಲ್ಲಿ ಪರೀಕ್ಷೆಯನ್ನು ಕೈಗೊಳ್ಳಲಾಗಿತ್ತು. ಈ ಪೈಕಿ ವಿಜಯಪುರ ಮತ್ತು ಕೋಲಾರ ಜಿಲ್ಲೆಯ ಪರೀûಾ ಕೇಂದ್ರಗಳಲ್ಲಿ ಸಾಕಷ್ಟು ಗೊಂದಲಗಳಾಗಿವೆ. ಮರು ಪರೀಕ್ಷೆಯಲ್ಲಿಯೂ ನಾಲ್ಕೈದು ಪ್ರಶ್ನೆಗಳ ಭಾಷಾಂತರದಲ್ಲಿ ದೋಷಗಳು ಕಂಡು ಬಂದಿವೆ. ಹಾಗಾಗಿ ಮರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ ಕೆಲವು ಅಭ್ಯರ್ಥಿಗಳು ಕೆಪಿಎಸ್‌ಸಿ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

ಕೆಎಎಸ್‌ ಸ್ಪರ್ಧಾತ್ಮಕ ಪರೀಕ್ಷೆಗಳು ಮಾತ್ರವಲ್ಲ, ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಇತರ ಯಾವುದೇ ಪರೀಕ್ಷೆಗಳು ಲೋಪಗಳಿಂದ ಮುಕ್ತವಾಗದಿರುವುದು ಆತಂಕಕಾರಿ ವಿಷಯವಾಗಿದೆ. ಕೆಪಿಎಸ್‌ಸಿ ಇತಿಹಾಸವನ್ನು ಕೆದಕಿದರೆ ಪರೀಕ್ಷಾ ಅಕ್ರಮಗಳು, ಲೋಪಗಳು ಸುರುಳಿಯಾಗಿ ಬಿಚ್ಚಿಕೊಳ್ಳುತ್ತವೆ. 1998, 1999, 2011ರ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯಲ್ಲಿನ ಅಕ್ರಮಗಳು ಭಾರೀ ಸದ್ದು ಮಾಡಿದ್ದವು.

ಅಕ್ರಮ ಆರೋಪದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಅಂದಿನ ಅಧ್ಯಕ್ಷರು, ಸದಸ್ಯರು ಜೈಲುಪಾಲಾಗಿದ್ದರು. 2014 ಮತ್ತು 2015ರ ಸಾಲಿನ ನೇಮಕಾತಿ­ಯಲ್ಲೂ ಗೊಂದಲಗಳಾಗಿದ್ದವು. ಕೆಪಿಎಸ್‌ಸಿಯ ಈ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಗೆ ಅನೇಕ ಬಾರಿ ನ್ಯಾಯಾಲಯಗಳು ಚಾಟಿ ಕೂಡ ಬೀಸಿವೆ. ಆದರೆ ಈಗಲೂ ಕೆಪಿಎಸ್‌ಸಿ ತನ್ನ ತಪ್ಪುಗಳನ್ನು ತಿದ್ದಿಕೊಂಡಿಲ್ಲ ರವಿವಾರ ನಡೆದ ಕೆಎಎಸ್‌ ಪೂರ್ವಭಾವಿ ಮರು ಪರೀಕ್ಷೆ ಮತ್ತೂಮ್ಮೆ ಸಾಕ್ಷ್ಯ ಒದಗಿಸಿದೆ.

ಕೆಪಿಎಸ್‌ಸಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಿದರೂ ಅದರ ಕಾರ್ಯದಕ್ಷತೆ­ಯನ್ನು ಹೆಚ್ಚಿಸುವುದು ಸರಕಾರದ ಜವಾಬ್ದಾರಿಯೇ ಆಗಿರುತ್ತದೆ. ಈ ನಿಟ್ಟಿನಲ್ಲಿ 2013ರಲ್ಲಿ ನೇಮಿಸಲಾಗಿದ್ದ ಪಿ.ಸಿ. ಹೂಟಾ ಸಮಿತಿ ಅನೇಕ ಶಿಫಾರಸುಗಳನ್ನು ಮಾಡಿತ್ತು. ಈ ಪೈಕಿ ಭಾಗಶಃ ಶಿಫಾರಸುಗಳನ್ನು ಮಾತ್ರವೇ ಸರಕಾರ ಒಪ್ಪಿಕೊಂಡಿದೆ. ಇದು ಸೂಕ್ತವಾದ ನಡೆಯಲ್ಲ. ಸಮಿತಿಯ ಎಲ್ಲ ಶಿಫಾರಸುಗಳನ್ನು ಅಂಗೀಕರಿಸಿ, ಜಾರಿಗೆ ತರಬೇಕು.

Advertisement

ಆಗ, ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ರೀತಿಯಲ್ಲಿ ದಕ್ಷತೆಯಿಂದ, ಯಾವುದೇ ಲೋಪಕ್ಕೆ ಅವಕಾಶವಿಲ್ಲದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೈಗೊಳ್ಳಬಹುದು. ಜತೆಗೆ, ಕೆಪಿಎಸ್‌ಸಿ ಕಾರ್ಯದರ್ಶಿಯಂಥ ಪ್ರಮುಖ ಹುದ್ದೆಗಳಿಗೆ ಕನ್ನಡಬಲ್ಲ ಅಥವಾ ಸ್ಥಳೀಯರಾಗಿರುವ ಅಧಿಕಾರಿಗಳನ್ನು ನೇಮಕ ಮಾಡುವುದರಿಂದ ಹೆಚ್ಚಿನ ಸಮಸ್ಯೆಗಳನ್ನು ತಡೆಯಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಜವಾಬ್ದಾರಿ ಕೆಪಿಎಸ್‌ಸಿಯದ್ದು. ಹಾಗಾಗಿ ಅದಕ್ಕೂ ತನಗೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ರಾಜ್ಯ ಸರ್ಕಾರವು ವರ್ತಿಸುವಂತಿಲ್ಲ.

ಯಾಕೆಂದರೆ, ಪರೀಕ್ಷಾ ಲೋಪಗಳು,ಪರೀಕ್ಷಾ ಅಕ್ರಮಗಳು ಲಕ್ಷಾಂತರ ಯುವ­ಕರ ಬದುಕಿಗೆ ಬರೆ ನೀಡಬಲ್ಲವು. ಹಾಗಾಗಿ, ಕೆಪಿಎಸ್‌ಸಿ ಪರೀಕ್ಷೆಗಳ ಲೋಪಗಳನ್ನು ಗಂಭೀರವಾಗಿ ತೆಗೆದುಕೊಂಡು, ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವತ್ತ ಗಮನ ಹರಿಸಬೇಕು. ಇಲ್ಲದಿದ್ದರೆ, ಮತ್ತೂಂದು ಪರೀಕ್ಷೆಯಲ್ಲಿ ಮತ್ತದೇ ಲೋಪಗಳು ಉಂಟಾಗಿ, ಮುಜುಗರ ಎದುರಿಸಬೇಕಾಗುತ್ತದೆ ಎಂಬುದನ್ನು ಮರೆಯಬಾರದು.

Advertisement

Udayavani is now on Telegram. Click here to join our channel and stay updated with the latest news.

Next