Advertisement

Kadaba ಸ್ವಾಭಿಮಾನ ಭರಿತ ಸಮಾಜ ನಿರ್ಮಾಣ ಗುರಿಯಾಗಿರಲಿ: ಡಾ| ನಿರ್ಮಲಾನಂದನಾಥ ಸ್ವಾಮೀಜಿ

12:04 AM Dec 27, 2023 | Team Udayavani |

ಕಡಬ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರು ಬೌದ್ಧಿಕ ಮತ್ತು ಅರ್ಥಿಕವಾಗಿ ಸದೃಢರಾಗುವಂತೆ ಮಾಡಬೇಕು. ತನ್ಮೂಲಕ ಸ್ವಾಭಿಮಾನ ಭರಿತ ಸಮಾಜ ನಿರ್ಮಾಣ ನಮ್ಮ ಗುರಿಯಾಗಿರಲಿ ಎಂದು ಆದಿಚುಂಚನಗಿರಿ ಮಠದ ಡಾ| ನಿರ್ಮಲಾನಂದ ನಾಥ ಸ್ವಾಮೀಜಿ ನುಡಿದರು.

Advertisement

ಅವರು ಮಂಗಳವಾರ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಕಡಬದ ಹೊಸಮಠದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಒಕ್ಕಲಿಗ ಗೌಡ ಸಮುದಾಯ ಭವನದ ಶಿಲಾನ್ಯಾಸ ಹಾಗೂ ಕಡಬದಲ್ಲಿ ಒಕ್ಕಲಿಗ ಸ್ಪಂದನಾ ಸಮುದಾಯ ಸಹಕಾರ ಸಂಘದ ಉದ್ಘಾಟನೆ ನೆರವೇರಿಸಿ ನೂತನ ತಾಲೂಕು ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ನಾಡಿಗೆ ಹಲವು ಕೊಡುಗೆಗಳನ್ನು ನೀಡಿದ ಸಮಾಜ ನಮ್ಮದು. ಯಾವುದೇ ರೀತಿಯಲ್ಲಿ ಕೀಳರಿಮೆ ಬೇಡ. ಸ್ವಾಮಿ ವಿವೇಕಾನಂದರ ಪ್ರೇರಣೆಯಂತೆ 1897ರಲ್ಲಿ ಕೆ.ಎಚ್‌. ರಾಮಯ್ಯನವರು ಹುಟ್ಟುಹಾಕಿದ ಒಕ್ಕಲಿಗ ಗೌಡ ಸಂಘದ ಇತಿಹಾಸ ಅತ್ಯಂತ ಹಿರಿದು. ನಾವು ನಮ್ಮ ಪರಂಪರೆ, ಗೌರವವನ್ನು ಉಳಿಸಿಕೊಂಡು ಇತರ ಸಮಾಜಗಳಿಗೂ ಧ್ವನಿಯಾಗುವ ರೀತಿಯಲ್ಲಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಕಡಬದಲ್ಲಿ ತಾಲೂಕು ಮಟ್ಟದ ನೂತನ ಸಂಘ ಉದಯವಾಗುವ ಮೊದಲೇ 15 ಕೋಟಿ ರೂ. ವೆಚ್ಚದ ಬೃಹತ್‌ ಸೌಧದ ಶಿಲಾನ್ಯಾಸ ನಡೆಸುವ ಮೂಲಕ ಹೊಸ ಸಾಹಸವನ್ನು ಕೈಗೆತ್ತಿಕೊಂಡು ಸಮಾಜದ ದೃಷ್ಟಿಯಲ್ಲಿ ಅಪ್ಯಾಯಮಾನವಾದ ಕೆಲಸ ಮಾಡಿದೆ. ಸಮಾಜದ ಹೆಮ್ಮೆಯ ಸಂಕೇತವಾಗಿರುವ ಈ ಕಾರ್ಯದಲ್ಲಿ ಆದಿ ಚುಂಚನಗಿರಿ ಮಠವು ಎಲ್ಲ ಸಂದರ್ಭದಲ್ಲಿ ಜತೆಗಿದೆ. ಸಮಾಜದ ಎಲ್ಲ ಸ್ತರದ ಜನರನ್ನು ಒಟ್ಟುಗೂಡಿಸಿಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿರುವ ನೂತನ ತಂಡದ ಕಾರ್ಯ ಶ್ಲಾಘನೀಯ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ| ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಸಮಾಜವು ಎಂದಿಗೂ ಪರಾವಲಂಬಿ ಗಳಾಗಬಾರದು. ನಮ್ಮನ್ನು ಬೇರೆಯವರು ನಿಯಂತ್ರಿಸಲು ಅವಕಾಶ ನೀಡಬಾರದು. ನಮ್ಮತನಕ್ಕೆ ಧಕ್ಕೆ ಬಂದಾಗ ನಾವು ಹೋರಾಟಕ್ಕೂ ಸಿದ್ಧರಾಗಬೇಕು ಎಂದರು.

Advertisement

ಡಿ.ವಿ. ಸದಾನಂದ ಗೌಡ ಮಾತನಾಡಿ, ಕಡಬದ ಈ ಕಾರ್ಯಕ್ರಮ ಜಿಲ್ಲೆಯ ಜನರಿಗೆ ಒಕ್ಕಲಿಗ ಸಮುದಾಯದ ಶಕ್ತಿಯ ಸಂದೇಶ ನೀಡಿದೆ. ಸುರೇಶ್‌ ಗೌಡ ಬೈಲು ಮತ್ತು ತಂಡದ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.

ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಹನುಮಂತಯ್ಯ, ವಿಧಾನಪರಿಷತ್‌ ಸದಸ್ಯ ಭೋಜೇ ಗೌಡ, ಮಾಜಿ ಶಾಸಕ ಸಂಜೀವ ಮಠಂದೂರು, ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನ ಸಮಿತಿಯ ಅಧ್ಯಕ್ಷ ಕಿರಣ್‌ ಬುಡ್ಲೆಗುತ್ತು ಮಾತನಾಡಿದರು.

ಪ್ರಮುಖರಾದ ರವಿ ಮುಂಗ್ಲಿಮನೆ, ಮೋಹನ್‌ರಾಮ್‌ ಸುಳ್ಳಿ, ಚಿದಾನಂದ ಬೈಲಾಡಿ, ಜಾಕೆ ಮಾಧವ ಗೌಡ, ಲೋಕಯ್ಯ ಗೌಡ, ಪದ್ಮ ಗೌಡ ಬೆಳಾಲು, ನಿತ್ಯಾನಂದ ಮುಂಡೋಡಿ, ಎ.ವಿ. ತೀರ್ಥರಾಮ, ಉಮೇಶ್‌ ಎಂಪಿ., ಡಿ.ಬಿ. ಬಾಲಕೃಷ್ಣ ಗೌಡ, ಪಿ.ಸಿ. ಜಯರಾಮ, ಲಿಂಗಪ್ಪ ಗೌಡ ಅಳಿಕೆ, ಚಂದ್ರಾ ಕೋಲ್ಚಾರು, ಕುಶಾಲಪ್ಪ ಗೌಡ ಪೂವಾಜೆ, ಮೋನಪ್ಪ ಗೌಡ, ರಂಜನ್‌ ಜಿ.ಗೌಡ, ಗುರುದೇವ್‌ ಗೌಡ ಯು.ಬಿ., ವಿಶ್ವನಾಥ ಗೌಡ, ಬಾಲಕೃಷ್ಣ ಗೌಡ ಕೇರಿಮಾರ್‌, ಎ.ವಿ. ನಾರಾಯಣ ಗೌಡ ಅತಿಥಿಗಳಾಗಿದ್ದರು. ಕೇಶವ ಗೌಡ ಅಮೈ, ಗೋಪಾಲಕೃಷ್ಣ ಗೌಡ ಪುಯಿಲ, ಪ್ರಶಾಂತ್‌ ಗೌಡ ಪಂಜೋಡಿ, ಶಿವಪ್ರಸಾದ್‌ ಗೌಡ ಪುತ್ತಿಲ, ತಮ್ಮಯ್ಯ ಗೌಡ, ಮಂಜುನಾಥ ಗೌಡ ಉಪಸ್ಥಿತರಿದ್ದರು. ಶಿವರಾಮ ಗೌಡ ಸ್ವಾಗತಿಸಿ, ಸುರೇಶ್‌ ಗೌಡ ಪ್ರಸ್ತಾವನೆಗೈದರು. ಹಿರಿಯಣ್ಣ ಗೌಡ ವಂದಿಸಿದರು. ಚೇತನ್‌, ಸುಶ್ಮಿತಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next