Advertisement

ರೈತ ಕಾಯ್ದೆಗಳ ಹಿಂದೆಗೆತ ಚುನಾವಣ ತಂತ್ರವಾಗದಿರಲಿ

12:32 AM Nov 20, 2021 | Team Udayavani |

ಅಂತೂ ರೈತರ ಪ್ರತಿಭಟನೆಗೆ ಮಣಿದಿರುವ ಕೇಂದ್ರ ಸರಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆದಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಶುಕ್ರವಾರ ಬೆಳಗ್ಗೆ ಗುರುನಾನಕ್‌ ಜಯಂತಿ ಭಾಷಣದ ವೇಳೆ ಈ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಒಂದು ವರ್ಗದ ರೈತರ ಮನವೊಲಿಕೆ ಮಾಡುವಲ್ಲಿ ನಾವು ವಿಫ‌ಲರಾಗಿದ್ದೇವೆ ಎಂದಿರುವ ಅವರು ಈ ಕುರಿತಂತೆ ರೈತರ ಕ್ಷಮೆಯನ್ನೂ ಕೇಳಿದ್ದಾರೆ.

Advertisement

ಸರಿಸುಮಾರು ಕಳೆದ ಒಂದು ವರ್ಷದಿಂದಲೂ ಈ ಮೂರು ಕಾಯ್ದೆಗಳನ್ನು ವಿರೋಧಿಸಿ ಉತ್ತರ ಭಾರತದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯೇ ನಡೆದಿತ್ತು. ಆರಂಭದಲ್ಲಿ ಪಂಜಾಬ್‌ ಮತ್ತು ಹರಿಯಾಣದ ರೈತರು ಈ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ಆರಂಭಿಸಿದ್ದರೆ  ಅನಂತರದಲ್ಲಿ ಇದು ಉತ್ತರ ಪ್ರದೇಶಕ್ಕೂ ವ್ಯಾಪಿಸಿತ್ತು. ಅಲ್ಲದೆ

ಪ್ರತಿಭಟನ ಸ್ಥಳದಲ್ಲಿಯೇ ನೂರಾರು ರೈತರು ಪ್ರಾಣವನ್ನೂ ಕಳೆದುಕೊಳ್ಳುವಂತಾಯಿತು.

ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಜಾರಿಗೆ ಬಂದ ಈ ಈ ಕೃಷಿ ಕಾಯ್ದೆಗಳ ವಿರುದ್ಧ ನ.25ರಂದು ದಿಲ್ಲಿ ಚಲೋ ಹೆಸರಿನಲ್ಲಿ ಪಂಜಾಬ್‌ ಮತ್ತು ಹರಿಯಾಣದ ರೈತರು ಪ್ರತಿಭಟನೆ ಆರಂಭಿಸಿದ್ದರು. ಅಲ್ಲಿಂದ ಜನವರಿ ವರೆಗೆ ಸುಮಾರು ಏಳು ಸುತ್ತು ಕೇಂದ್ರ ಮತ್ತು ರೈತರ ನಡುವೆ ಮಾತುಕತೆಯೂ ನಡೆದಿತ್ತು. ಇದರ ಮಧ್ಯೆಯೇ ಸುಪ್ರೀಂ ಕೋರ್ಟ್‌ನಲ್ಲೂ ಕಾಯ್ದೆಗಳ ವಿರುದ್ಧ ಅರ್ಜಿ ಹಾಕಲಾಗಿದ್ದು, ಈ ಮೂರನ್ನು ಜಾರಿ ಮಾಡದಂತೆ ಕೋರ್ಟ್‌ ಆದೇಶ ನೀಡಿ, ಸಮಿತಿಯೊಂದನ್ನೂ ರಚಿಸಿತ್ತು.

ಇದನ್ನೂ ಓದಿ:ಸಮಾನ ನಾಗರಿಕ ಸಂಹಿತೆ ಜಾರಿ ಮಾಡಿ: ಕೇಂದ್ರಕ್ಕೆ ಹೈಕೋರ್ಟ್‌ ಸೂಚನೆ

Advertisement

ರೈತರ ಪ್ರತಿಭಟನೆ ಆರಂಭವಾಗಿ ಈಗಾಗಲೇ ವರ್ಷ ಕಳೆಯಿತು. ಇಂಥ ಸಮಯದಲ್ಲೇ ಕೇಂದ್ರ ಸರಕಾರ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆದುಕೊಳ್ಳುವ ತೀರ್ಮಾನ ಮಾಡಿದೆ. ತಜ್ಞರು ಹೇಳುವಂತೆ ಈ ಕಾಯ್ದೆಗಳ ವಿಚಾರದಲ್ಲಿ ಕೇಂದ್ರ ಸರಕಾರ ಕೆಲವೊಂದು ತಪ್ಪು ಹೆಜ್ಜೆ ಇಟ್ಟಿತು. ಅಂದರೆ ಈ ಕಾಯ್ದೆಗಳ ಫ‌ಲಾನುಭವಿಗಳು, ಅಂದರೆ ರೈತ ಸಂಘಟನೆಗಳ ಜತೆಗೆ ಮೊದಲು ಮಾತನಾಡಿ ಬಳಿಕ ಇವುಗಳ ಅಂಗೀಕಾರ ಮಾಡಬಹುದಿತ್ತು. ಹಾಗೆಯೇ ಸಂಸತ್‌ನಲ್ಲೂ ಸ್ಥಾಯೀ ಸಮಿತಿಗೆ ಮಸೂದೆಗಳನ್ನು ಕಳುಹಿಸಿ ಒಂದಷ್ಟು ದಿನ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಬಹುದಿತ್ತು.

ಒಂದು ಲೆಕ್ಕಾಚಾರದಲ್ಲಿ ಈ ಮೂರು ಕಾಯ್ದೆಗಳು ರೈತರ ಪರವಾಗಿದ್ದರೂ ಅವಸರ ರೀತಿಯಲ್ಲಿ ಜಾರಿ ಮಾಡಿದ್ದರಿಂದ ರೈತರು ಅನಗತ್ಯ ಗೊಂದಲಕ್ಕೆ ಒಳಗಾದರು. ಹಾಗೆಯೇ ಈ ಕಾಯ್ದೆಗಳಿಂದಾಗುವ ಅನುಕೂಲಗಳ ಬಗ್ಗೆ ಅರಿವು ಮೂಡಿಸುವಲ್ಲಿ ಕೇಂದ್ರ ಸರಕಾರ ವಿಫ‌ಲವಾಯಿತು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ಕಾಯ್ದೆಗಳನ್ನು ವಾಪಸ್‌ ಪಡೆದ ಮೇಲೆ ವಿಪಕ್ಷಗಳ ನಾಯಕರು, ಮುಂಬರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ  ಈ ಕ್ರಮ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅದರಲ್ಲಿಯೂ ಉತ್ತರ ಪ್ರದೇಶ ಮತ್ತು ಪಂಜಾಬ್‌ ಚುನಾವಣೆಯ ಮೇಲೆ ಗಮನ ಇರಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ, ಕೇಂದ್ರ ಸರಕಾರ ಈಗ ತೆಗೆದುಕೊಂಡಿರುವ ನಿರ್ಧಾರ ಚುನಾವಣ ತಂತ್ರವಾಗಬಾರದು. ಇದಕ್ಕೆ ಬದಲಾಗಿ ಮುಂದಿನ ದಿನಗಳಲ್ಲಿ ಭಾಗೀದಾರರು ಮತ್ತು ರಾಜ್ಯ ಸರಕಾರಗಳ ಜತೆ ಮಾತುಕತೆ ನಡೆಸಿ ಕೃಷಿ ಸುಧಾರಣೆಗೆ ಮನಸ್ಸು ಮಾಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next