Advertisement

ಪರಿಸರಸ್ನೇಹಿ ಗಣೇಶೋತ್ಸವ ನಾಡಿನ ಜನತೆಯ ಸಂಕಲ್ಪವಾಗಲಿ

10:44 PM Sep 14, 2023 | Team Udayavani |

ಗಣಪನ ಹಬ್ಬವನ್ನು ಆಚರಿಸಲು ದೇಶಾದ್ಯಂತ ದಿನಗಣನೆ ಆರಂಭವಾಗಿದೆ. ಈಗಾಗಲೇ ಗಣೇಶನ ವಿಗ್ರಹಗಳ ತಯಾರಿಕೆ ಮತ್ತು ಮಾರಾಟ ಪ್ರಕ್ರಿಯೆ ಬಿರುಸುಗೊಂಡಿದೆ. ಗಣೇಶನ ಹಬ್ಬದ ಆಚರಣೆ ವೇಳೆ ಪರಿಸರದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸರಕಾರ ಮತ್ತು ವಿವಿಧ ಪರಿಸರಸ್ನೇಹಿ ಸಂಘಟನೆಗಳು ಸಾರ್ವಜನಿಕರಿಗೆ ಈಗಾಗಲೇ ಕರೆ ನೀಡಿವೆ. ಈ ನಿಟ್ಟಿನಲ್ಲಿ ಜನರು ಹೆಚ್ಚಿನ ಆಸಕ್ತಿ ತೋರಬೇಕಿದೆ.

Advertisement

ಗಣಪನ ಹಬ್ಬ ಎಂದಾಕ್ಷಣ ಮನೆಮನೆಗಳಲ್ಲಿ ಗಣಪತಿಯ ವಿಗ್ರಹವನ್ನು ಕೂರಿಸಿ ಭಕ್ತಿಯಿಂದ ಪೂಜಿಸಿ ಸಂಭ್ರಮಿಸುವುದು ವಾಡಿಕೆ. ಆದರೆ ಕಳೆದ ಕೆಲವು ವರ್ಷಗಳಿಂದೀಚೆಗೆ ಮಣ್ಣಿನ ವಿಗ್ರಹದ ಬದಲಿಗೆ ಪ್ಲಾಸ್ಟರ್‌ ಆಫ್ ಪ್ಯಾರಿಸ್‌(ಪಿಒಪಿ) ವಿಗ್ರಹಗಳನ್ನು ಮಾರುಕಟ್ಟೆಯಿಂದ ಖರೀದಿಸಿ ತಂದು ಪೂಜಿಸಿ ಅದನ್ನು ಜಲಮೂಲಗಳಲ್ಲಿ ವಿಸರ್ಜಿಸುವ ಕಾರ್ಯ ನಡೆಯುತ್ತಿದೆ. ಈ ಪಿಒಪಿ ವಿಗ್ರಹಗಳು ಹಗುರವಾಗಿರುವುದರಿಂದ ಮತ್ತು ಹೆಚ್ಚಿನ ಆಕರ್ಷಣೆಯನ್ನು ಹೊಂದಿರುವುದರಿಂದ ಈ ವಿಗ್ರಹಗಳತ್ತ ಜನರು ಸಹಜವಾಗಿಯೇ ಆಕರ್ಷಿತರಾಗುತ್ತಿದ್ದಾರೆ.

ಆದರೆ ಈ ಪಿಒಪಿ ವಿಗ್ರಹಗಳು ಪರಿಸರಕ್ಕೆ ಮಾರಕವಾಗಿದ್ದು ಜೀವಜಂತುಗಳ ಪ್ರಾಣಕ್ಕೇ ಕುತ್ತು ತರುತ್ತವೆ. ಈ ವಿಗ್ರಹಗಳ ತಯಾರಿ ಮತ್ತು ಮಾರಾಟವನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ ಎಂಬುದನ್ನು ಜನರು ಮರೆಯಬಾರದು. ಈ ಹಿನ್ನೆಲೆಯಲ್ಲಿ ಜನರು ಗಣಪನ ಮಣ್ಣಿನ ವಿಗ್ರಹಗಳನ್ನು ಖರೀದಿಸಿ, ಮನೆಗೆ ತಂದು ಪೂಜಿಸುವುದು ಕೇವಲ ಪರಿಸರ ಮಾತ್ರವಲ್ಲದೆ ನಮ್ಮ ಆರೋಗ್ಯಕ್ಕೂ ಹಿತಕರ ಹಾಗೂ ಧಾರ್ಮಿಕ ದೃಷ್ಟಿಯಿಂದಲೂ ಶ್ರೇಯಸ್ಕರ. ಅಲ್ಲದೆ ಅರಿಶಿನ, ಗೋಮಯ, ವಿವಿಧ ಬೇಳೆಕಾಳುಗಳಿಂದ ತಯಾರಿಸಲಾದ ಗಣೇಶನ ವಿಗ್ರಹಗಳನ್ನು ಪೂಜಿಸುವುದು ಕೂಡ ಪರಿಸರಸ್ನೇಹಿ ನಡೆಯಾಗಿದೆ.

ಮಣ್ಣಿನ ವಿಗ್ರಹಗಳಿಗೆ ಬಣ್ಣ ಬಳಿಯುವ ಸಂದರ್ಭದಲ್ಲೂ ವಿಗ್ರಹ ತಯಾರಕರು ಎಚ್ಚರಿಕೆ ವಹಿಸುವುದು ಅತ್ಯವಶ್ಯ. ರಾಸಾಯನಿಕ ಬಣ್ಣಗಳ ಬದಲಾಗಿ ಸಸ್ಯಜನ್ಯ ಬಣ್ಣಗಳನ್ನು ಬಳಸುವುದರಿಂದ ಜಲಮೂಲಗಳು ಮಾಲಿನ್ಯಗೊಳ್ಳುವುದನ್ನು ತಡೆಯಬಹುದು. ಅಲ್ಲದೆ ಇಂಥ ಸಾವಯವ ಬಣ್ಣಗಳು ಜಲಮೂಲಗಳನ್ನು ಶುದ್ದೀಕರಿಸಲೂ ಸಹಕಾರಿ.

ಇನ್ನು ಸಾರ್ವಜನಿಕ ಗಣೇಶೋತ್ಸವ ಸಂದರ್ಭಗಳಲ್ಲಿ ಪ್ರಚಾರ ಮತ್ತು ಅಲಂಕಾರಕ್ಕೆ ಬಳಸಲಾಗುವ ಬ್ಯಾನರ್‌, ಬಂಟಿಂಗ್‌ಗಳಲ್ಲೂ ಪ್ಲಾಸ್ಟಿಕ್‌, ಪಿಒಪಿ, ಥರ್ಮಾಕೋಲ್‌ ಮತ್ತಿತರ ಪರಿಸರಕ್ಕೆ ಹಾನಿ ಮಾಡುವಂಥ ವಸ್ತುಗಳ ಬದಲಾಗಿ ಸಾಧ್ಯವಾದಷ್ಟು ಹತ್ತಿ ಬಟ್ಟೆಗಳನ್ನು ಬಳಸಲು ಸಂಘಟಕರು ಆಸಕ್ತಿ ತೋರಬೇಕು. ಹಬ್ಬದ ಆಚರಣೆ ವೇಳೆ ಹೆಚ್ಚಿನ ಶಬ್ದಮಾಲಿನ್ಯವಾಗದಂತೆ ಎಚ್ಚರಿಕೆ ವಹಿಸಬೇಕು. ಏಕಬಳಕೆಯ ಪ್ಲಾಸ್ಟಿಕ್‌ ಉತ್ಪನ್ನಗಳ ಬದಲಾಗಿ ಮರುಬಳಕೆಯ ಉತ್ಪನ್ನ ಅಥವಾ ಪರಿಸರಕ್ಕೆ ಪೂರಕವಾದ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು. ಗಣಪನ ಅಲಂಕಾರಕ್ಕಾಗಿ ಬಳಸಲಾದ ಹೂವುಗಳನ್ನು ವಿಗ್ರಹಗಳಿಂದ ತೆಗೆದು ಆ ಬಳಿಕ ನೀರಿನಲ್ಲಿ ವಿಸರ್ಜಿಸುವುದರಿಂದ ಜಲ ಮಾಲಿನ್ಯವನ್ನು ತಪ್ಪಿಸಬಹುದಾಗಿದೆ. ದೇವರ ಅಲಂಕಾರ, ಪೂಜೆಗೆ ಬಳಸಲಾದ ಹೂವುಗಳನ್ನು ಲೋಬಾನ, ಸುಗಂಧ ದ್ರವ್ಯ ತಯಾರಿಗೆ ಬಳಸಬಹುದಾಗಿದೆ. ಇನ್ನು ತ್ಯಾಜ್ಯದ ಸಮರ್ಪಕ ವಿಲೇವಾರಿಗಾಗಿ ಸ್ಥಳೀಯಾಡಳಿತ ಸಂಸ್ಥೆಗಳೊಂದಿಗೆ ಸಾರ್ವಜನಿಕ ಗಣೇಶೋತ್ಸವ ಆಯೋಜಕರು ಕೈಜೋಡಿಸಬೇಕು.

Advertisement

ಗಣೇಶೋತ್ಸವವನ್ನು ಪರಿಸರಸ್ನೇಹಿಯಾಗಿ ಆಚರಿಸುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ದೇಶಕ್ಕೆ ಮಾದರಿಯಾಗೋಣ. ಇದು ನಾಡಿನ ಜನತೆಯ ಒಕ್ಕೊರಲ ಸಂಕಲ್ಪವಾಗಲಿ.

 

Advertisement

Udayavani is now on Telegram. Click here to join our channel and stay updated with the latest news.

Next