Advertisement

ದೇಶ ಉಳಿಯಲು ಅಧಿಕಾರಕ್ಕೆ ಬರಲಿ ಕಾಂಗ್ರೆಸ್‌

12:03 PM Mar 13, 2022 | Team Udayavani |

ಅಫಜಲಪುರ: ಕಾಂಗ್ರೆಸ್‌ ಪಕ್ಷವನ್ನು ಬೂತ್‌ ಮಟ್ಟದಿಂದ ಸಂಘಟನೆ ಮಾಡುವ ಉದ್ದೇಶದಿಂದ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈ ಬಾರಿ ಆನ್‌ಲೈನ್‌ ಸದಸ್ಯತ್ವ ನೋಂದಣಿ ಅಭಿಯಾನ ನಡೆಸಲಾಗುತ್ತಿದೆ ಎಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.

Advertisement

ಪಟ್ಟಣದ ನ್ಯಾಷನಲ್‌ ಫಂಕ್ಷನ ಹಾಲನಲ್ಲಿ ನಡೆದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಅಫಜಲಪುರ ಮತಕ್ಷೇತ್ರದ 251 ಬೂತ್‌ಗಳಲ್ಲಿ ಕನಿಷ್ಟ 200ಕ್ಕೂ ಹೆಚ್ಚು ಜನರ ಆನ್‍ಲೈನ್‌ ಸದಸ್ಯತ್ವ ಮಾಡಿಸಬೇಕು. ಈ ನಿಟ್ಟಿನಲ್ಲಿ ಜವಬ್ದಾರಿ ಹೊತ್ತು ಶ್ರಮ ವಹಿಸಿ ಕೆಲಸ ಮಾಡಿ, ಮಾರ್ಚ್‌ ಅಂತ್ಯದ ವರೆಗೆ ತಾಲೂಕಿನ 251 ಬೂತ್‌ಗಳಲ್ಲಿ 25 ಸಾವಿರ ಸದಸ್ಯತ್ವ ನೋಂದಣಿಯಾಗಬೇಕು ಎಂದು ಸಲಹೆ ನೀಡಿದರು.

ಶಾಸಕ ಎಂ.ವೈ. ಪಾಟೀಲ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಸೇವೆ ಸಲ್ಲಿಸಿದ ಪಕ್ಷ ಕಾಂಗ್ರೆಸ್‌. ಈ ದೇಶದ ಉಳಿವಿಗೆ ಕಾಂಗ್ರೆಸ್‌ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾಗಿದೆ. ಅಭಿವೃದ್ಧಿ ಮಾಡಿದರೂ ಕಳೆದ ಲೋಕಸಭೆ ಚುನಾವಣೆಯಲ್ಲಿ ಮತದಾರರು ಡಾ| ಮಲ್ಲಿಕಾರ್ಜುನ ಖರ್ಗೆ ಅವರನ್ನು ಯಾಕೆ ಸೋಲಿಸಿದರು ಎನ್ನುವ ಅಳಕು ಕಾಡುತ್ತಿದೆ ಎಂದರು.

ಹಿರಿಯ ಮುಖಂಡ ಮಕ್ಬೂಲ್‌ ಪಟೇಲ್‌ ಮಾತನಾಡಿ, ಅಫಜಲಪುರ ಕಾಂಗ್ರೆಸ್‌ ಎನ್ನುವುದು ಲಗಾಮು ಇಲ್ಲದ ಕುದುರೆಯಂತಾಗಿದೆ. ಮೂಲ ಕಾಂಗ್ರೆಸ್ಸಿಗರಿಗೆ ಬೆಲೆ ಇಲ್ಲದಂತಾಗಿದೆ. ಮೂಲ ಕಾಂಗ್ರೆಸ್‌, ವಲಸಿಗ ಕಾಂಗ್ರೆಸ್‌ ಎನ್ನುವ ಕೂಗು ಬಹಳ ಗೊಂದಲ ಸೃಷ್ಟಿ ಮಾಡಿದೆ. ಶಾಸಕರ ಬೆಂಬಲಿಗರು ಮೂಲ ಬಿಜೆಪಿಗರಾಗಿದ್ದಾರೆ. ಪಕ್ಷದಲ್ಲಿ ಅವರದ್ದೇ ದರ್ಬಾರ್‌ ನಡೆಯುತ್ತಿದೆ. ಹೀಗಾಗಿ ಮೂಲ ಕಾಂಗ್ರೆಸ್ಸಿಗರಿಗೆ ಯಾರು ಕೇಳವವರಿಲ್ಲದಂತಾಗಿದೆ ಎನ್ನುತ್ತಿದ್ದಂತೆ ಗದ್ದಲದ ವಾತಾವರಣ ಸೃಷ್ಟಿಯಾಯಿತು.

ಮಾಜಿ ಸಚಿವ ಶರಣಪ್ರಕಾಸ ಪಾಟೀಲ ಮಧ್ಯ ಪ್ರವೇಶಿಸಿ, ಎಲ್ಲ ಪಕ್ಷಗಳಲ್ಲೂ ಸಮಸ್ಯೆಗಳಿವೆ. ಅದನ್ನು ಪಕ್ಷದ ಹಿರಿಯರ ಮುಂದೆ ಚರ್ಚಿಸಿ ಬಗೆಹರಿಸಿಕೊಳ್ಳಿ ಎಂದರು. ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ತಾಲೂಕು ಅಧ್ಯಕ್ಷ ಮಹಾಂತೇಶ ಪಾಟೀಲ, ಉಸ್ತುವಾರಿ ಸಂಜಯ ಜಾಗಿರದಾರ, ವಿಜಯಕುಮಾರ ರಾಮಕೃಷ್ಣ, ಪ್ರಕಾಶ ಜಮಾದಾರ, ಸಿದ್ಧಾರ್ಥ ಬಸರಿಗಿಡ, ಮತೀನ್‌ ಪಟೇಲ್‌, ನಾಗೇಶ ಕೊಳ್ಳಿ, ರಾಜಗೋಪಾಲ ರೆಡ್ಡಿ, ಸುರೇಶ ತಿಬಶೆಟ್ಟಿ, ಶಿವಶರಣಪ್ಪ ಹಿರಾಪೂರ, ಶರಣು ಕುಂಬಾರ ಹಾಗೂ ಕಾರ್ಯಕರ್ತರು ಇದ್ದರು.

Advertisement

ಯಾರಿಗೂ ನೊವುಂಟು ಮಾಡುವ ಉದ್ದೇಶದಿಂದ ವೇದಿಕೆಯಲ್ಲಿ ಮಾತನಾಡಿಲ್ಲ. ನಾನು ಹುಟ್ಟಿದ್ದೇ ಕಾಂಗ್ರೆಸ್‌ ಪಕ್ಷಕ್ಕಾಗಿ, ಸಾಯೋದು ಕಾಂಗ್ರೆಸ್ಸಿಗನಾಗಿ. ನನ್ನ ಹಿರಿತನಕ್ಕೆ ಪಕ್ಷದ ಯುವ ಮುಖಂಡರು ಗೌರವ ಕೊಡಬೇಕಾಗಿತ್ತು. ನನ್ನ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಗದ್ದಲ ಸೃಷ್ಟಿಸಿ ನನಗೆ ನೋವುಂಟು ಮಾಡಿದ್ದಾರೆ. ಪಕ್ಷದಲ್ಲಿ ಎಲ್ಲವು ಸರಿಯಾಗಿಲ್ಲ ಎನ್ನುವುದು ಗುಟ್ಟೇನು ಅಲ್ಲ. ಆದರೆ ಅದನ್ನು ಸರಿಪಡಿಸಿ ಎಲ್ಲರನ್ನು ಒಗ್ಗೂಡಿಸಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. -ಮಕ್ಬೂಲ್‌ ಪಟೇಲ್‌, ಹಿರಿಯ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next