Advertisement

ಜೀವನದ ಪರೀಕ್ಷೆಯಲ್ಲಿ ಮಕ್ಕಳು ಉತ್ತೀರ್ಣರಾಗಲಿ

11:48 PM Dec 18, 2021 | Team Udayavani |

ಕಳೆದ ವಾರ ಹೆಚ್ಚಿನ ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಅರ್ಧವಾರ್ಷಿಕ ಪರೀಕ್ಷೆ ನಡೆಸಲಾಯಿತು. ಪರಿಚಿತ ಹತ್ತನೇ ತರಗತಿ ಹುಡುಗಿಯೊಬ್ಬಳು ಪರೀಕ್ಷೆಯ ದಿನ ಪೇಟೆಯಲ್ಲಿ ತಾಯಿಯೊಡನೆ ಕಾಣಸಿಕ್ಕಳು.

Advertisement

ಕಾರಣ ಕೇಳಿದಾಗ ತಿಳಿದುಬಂದಿದ್ದೇನೆಂದರೆ, ಆಕೆ ಪರೀಕ್ಷೆ ಬರೆಯಲು ಹೋಗಿದ್ದಳು. ಆದರೆ ಪ್ರಶ್ನೆ ಪತ್ರಿಕೆ ನೋಡುತ್ತಿದ್ದಂತೆಯೇ ತಲೆನೋವು ಶುರುವಾಯಿತು. ಏಕಾಗ್ರತೆಯಿಂದ ಉತ್ತರಿಸಲು ಸಾಧ್ಯವಾಗಲಿಲ್ಲ. ತುಂಬಾ ಹೆದರಿ ಬಿಟ್ಟಳು. ಅದನ್ನು ಕಂಡ ಶಿಕ್ಷಕರು ಅವಳನ್ನು ಮನೆಗೆ ಕಳುಹಿಸಿಕೊಟ್ಟರು ಎಂದು. ಈಗ ತಾಯಿಯ ಜತೆ ವೈದ್ಯರ ಬಳಿ ಹೋಗುತ್ತಿದ್ದಳು. ಹಾಗೆಂದು ಆ ಹುಡುಗಿ ಕಲಿಯುವುದರಲ್ಲಿ ಹಿಂದೆ ಬಿದ್ದವಳಲ್ಲ. 90ರ ಮೇಲೆ ಅಂಕಗಳನ್ನು ಗಳಿಸುತ್ತಿದ್ದಳು. ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದಳು. ಇದನ್ನು ನೋಡಿದಾಗ ಶೈಕ್ಷಣಿಕ ವರ್ಷದ ನಷ್ಟವು ಮಕ್ಕಳ ಮೇಲೆ ಬೀರಿರುವ ಪರಿಣಾಮಗಳು ಇದರಿಂದ ತಿಳಿಯುತ್ತವೆ.

ಪ್ರಸ್ತುತ ಹತ್ತನೇ ತರಗತಿಯಲ್ಲಿರುವ ವಿದ್ಯಾರ್ಥಿಗಳ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಅವರು ಈ
ಹಿಂದೆ ಎದುರಿಸಿದ ಪರೀಕ್ಷೆ ಎಂದರೆ ಅದು ಏಳನೇ ತರಗತಿಯ ವಾರ್ಷಿಕ ಪರೀಕ್ಷೆ. ಅದು ಸೆಮಿಸ್ಟರ್‌ ಪ್ರಕಾರ ಆಗಿದ್ದರಿಂದ ಒಂದೂವರೆ ಗಂಟೆಯ 40 ಅಂಕಗಳ ಪರೀಕ್ಷೆ ಯಾಗಿತ್ತು. ಅದರ ಅನಂತರ ಎಂಟನೇ ತರಗತಿ ವಾರ್ಷಿಕ ಪರೀಕ್ಷೆ ರದ್ದಾಯಿತು. 9ನೇ ತರಗತಿಯಲ್ಲಿ ಪಠ್ಯಕ್ರಮಗಳು ಸರಿಯಾಗಿ ನಡೆಯಲಿಲ್ಲ ಪರೀಕ್ಷೆಯೂ ನಡೆಸಲ್ಪಡಲಿಲ್ಲ. ಈ ವರ್ಷ ಸೆಪ್ಟಂಬರ್‌ ತಿಂಗಳಲ್ಲಿ ಹತ್ತನೇ ತರಗತಿ ಆರಂಭ ವಾಯಿತು. ಮಹತ್ವದ ಪರೀಕ್ಷೆ ನಡೆಯುತ್ತಿರುವುದು ಇದೇ ಮೊದಲು. ಹೀಗಾಗಿ ಮಕ್ಕಳಿಗೆ ಪರೀಕ್ಷೆ ಬರೆಯುವು ದೆಂದರೆ ಹೆದರಿಕೆ ಶುರುವಾಗಿ ಬಿಡುತ್ತಿದೆ.

ಇದು ಕೇವಲ ಮೇಲೆ ತಿಳಿಸಿದ ಹುಡುಗಿಯೊಬ್ಬಳ ಕಥೆಯಲ್ಲ. ಪ್ರತ್ಯಕ್ಷವಾಗಿ ಕಂಡು ಮಾತನಾಡಿಸಿದ ಇನ್ನು ಕೆಲವು ವಿದ್ಯಾರ್ಥಿಗಳ ಕಥೆಯೂ ಇದೆ. ಪ್ರತಿಯೊಬ್ಬರಿಗೂ ಪರೀಕ್ಷೆ ಬರೆಯಲು ಹೋಗುವಾಗ ಏನೋ ಒಂದು ಗೊಂದಲ, ತಳಮಳ, ಏನೋ ಹೆದರಿಕೆ. ಹಾಗೆಂದು ಹಿಂದೆಲ್ಲ ಮಕ್ಕಳು ಧೈರ್ಯವಾಗಿ ಹೋಗಿ ಪರೀಕ್ಷೆ ಬರೆಯುತ್ತಿದ್ದರು ಎಂದರ್ಥವಲ್ಲ. ಪರೀಕ್ಷೆ ಎಂದರೆ ಮಕ್ಕಳಲ್ಲಿ ಹೆದರಿಕೆ ಸಹಜವೇ. ಆದರೆ ಈ ಸಲ ತಳಮಳ ಸ್ವಲ್ಪ ಬೇರೆಯದೇ ರೀತಿಯದ್ದು. ಮೊದಲನೆಯದಾಗಿ ಹತ್ತನೇ ತರಗತಿ ಎಂದರೆ ಮೊದಲ ದಿನದಿಂದಲೇ ಎಲ್ಲರೂ ಮಕ್ಕಳಲ್ಲಿ ಭೀತಿ ಮೂಡಿಸಿ ಬಿಡುತ್ತಾರೆ. ಅದಕ್ಕೆ ಸರಿಯಾಗಿ ಶಾಲೆಯಲ್ಲಿ ಶಿಕ್ಷಕರು ಕೂಡ ಪಠ್ಯಕ್ರಮಗಳನ್ನು ಆದಷ್ಟು ಬೇಗ ಮುಗಿಸುವುದರತ್ತ ಗಮನ ಹರಿಸುತ್ತಿದ್ದಾರೆಯೇ ಹೊರತು ಮಕ್ಕಳ ಮೇಲೆ ಬೀಳುತ್ತಿರುವ ಒತ್ತಡದ ಬಗ್ಗೆ ಪರಿವೆ ಇದ್ದಂತಿಲ್ಲ. ಪ್ರತಿಯೊಂದು ಶಾಲೆಗೂ ನೂರು ಶೇಕಡಾ ಫ‌ಲಿತಾಂಶ ಪಡೆಯಬೇಕು ಎನ್ನುವುದೊಂದೇ ಗುರಿಯಾಗಿದ್ದು, ಅವರು ಮಕ್ಕಳನ್ನು ತಯಾರು ಮಾಡುವುದು ಈ ನಿಟ್ಟಿನಲ್ಲೇ .

ಹತ್ತನೇ ತರಗತಿ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳನ್ನೆಲ್ಲ ನಿಲ್ಲಿಸಿ ಬಿಡುತ್ತಾರೆ. ಒಂದೊಮ್ಮೆ ಇದ್ದರೂ ಮಕ್ಕಳೇ ಅವುಗಳಲ್ಲಿ ಭಾಗವಹಿಸುವುದಿಲ್ಲ. ಅಂತಹ ವಾತಾವರಣ ಶಾಲೆಯಲ್ಲೂ ಮನೆಯಲ್ಲೂ ನಿರ್ಮಾಣವಾಗಿರುತ್ತದೆ.
ಬೆಳಗ್ಗೆ ಶಾಲಾ ಸಮಯಕ್ಕಿಂತ ಅರ್ಧ ಗಂಟೆ ಬೇಗ ಶಾಲೆ ಪ್ರಾರಂಭಿಸಿ, ಸಂಜೆ ಶಾಲಾ ಸಮಯದ ಅನಂತರವೂ ಹೆಚ್ಚುವರಿ ತರಗತಿ, ರಜಾದಿನಗಳಲ್ಲಿ ತರಗತಿ ನಡೆಸುವುದು, ಹೀಗೆ ಒಂದೇ ಎರಡೇ ಶಾಲೆಗಳು ಫ‌ಲಿತಾಂಶ ಹೆಚ್ಚಿಸಿಕೊಳ್ಳಲು ಪಡುವ ಪರಿಪಾಟಲು. ಶಿಕ್ಷಕರ ಕಷ್ಟವೂ ಅರ್ಥವಾಗುತ್ತದೆ. ಅವರಿಗೆ ಪಠ್ಯಕ್ರಮಗಳನ್ನು ಆದಷ್ಟು ಬೇಗ ಮುಗಿಸಬೇಕು, ರಿವಿಜನ್‌ ನಡೆಸಬೇಕು, ಶಾಲೆಯ ಫ‌ಲಿತಾಂಶ ಚೆನ್ನಾಗಿರುವಂತೆ ನೋಡಿಕೊಳ್ಳಬೇಕು ಇತ್ಯಾದಿ ಇತ್ಯಾದಿ. ಇವೆಲ್ಲವುಗಳಿಂದ ಮಕ್ಕಳ ಮನಸ್ಸಿನ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಯಾರೂ ಚಿಂತಿಸುತ್ತಿಲ್ಲ. ಹೌದು, ನಮ್ಮ ಶಿಕ್ಷಣ ಪದ್ಧತಿಯಲ್ಲಿ ಲೋಪದೋಷಗಳು ಇರಬಹುದು ಮತ್ತು ಇಡೀ ವರ್ಷ ನಡೆಸಿದ ಪಾಠವನ್ನು ಮೂರು ಗಂಟೆಗಳಲ್ಲಿ ಬರೆದು ಅದರಿಂದ ಫ‌ಲಿತಾಂಶ ನಿರ್ಧರಿಸುವುದು, ಇವೆಲ್ಲ ಸರಿಯಲ್ಲದಿರಬಹುದು. ಆದರೆ ಈಗ ಇರುವ ವ್ಯವಸ್ಥೆಗೆ ಹೊಂದಿಕೊಂಡು ಹೋಗಬೇಕಲ್ಲವೇ? ಮುಂದೆ ಅದರಲ್ಲೂ ಬದಲಾವಣೆಯನ್ನು ನಿರೀಕ್ಷಿಸೋಣ. ಆದರೆ ಈ ಸಮಯದ ಆವಶ್ಯಕತೆ ಎಂದರೆ ಮಕ್ಕಳಲ್ಲಿ ಧೈರ್ಯ ತುಂಬುವುದು.

Advertisement

ಮಕ್ಕಳಿಗೆ ಮುಖ್ಯವಾಗಿ ತಿಳಿಸಬೇಕಾಗಿರುವುದು ಜೀವನದಲ್ಲಿ ಬರುವ ಅನೇಕ ಪರೀಕ್ಷೆಗಳಲ್ಲಿ ಹತ್ತನೇ ತರಗತಿ ಪರೀಕ್ಷೆಯು ಒಂದಾಗಿದ್ದು, ಅದಕ್ಕೆ ಹೆಚ್ಚಿನ ಮಹತ್ವ ಕೊಡುವುದು ಬೇಡ, ನಿಮ್ಮ ತಯಾರಿ ಸರಿಯಾಗಿರಲಿ, ಧೈರ್ಯದಿಂದಲೇ ಪರೀಕ್ಷೆ ಎದುರಿಸಿ, ಹೆದರಿದರೆ ಗೊತ್ತಿರುವ ಉತ್ತರವೂ ಮರೆತುಹೋಗಬಹುದು ಎಂದು. ಅವರಿಗೆ ಬರೆ ಯುವ ಪರೀಕ್ಷೆಗಿಂತ ಬದುಕುವ ಪರೀಕ್ಷೆ ಮುಖ್ಯ ಎಂದು ತಿಳಿ ಹೇಳ್ಳೋಣ. ಪರೀಕ್ಷೆಗಾಗಿ ಕಂಠಪಾಠ ಮಾಡಿ ಕಲಿಯದೇ ವಿಷಯವನ್ನು ಮನನ ಮಾಡಿಕೊಂಡು ಕಲಿಯುವುದು ಹೇಗೆಂದು ತಿಳಿಸಿಕೊಡೋಣ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದೊಂದೇ ಜೀವನದ ಗುರಿಯಲ್ಲ. ಅಂಕಗಳ ಹೊರತಾಗಿಯೂ ಸುಂದರ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಅವರಿಗೆ ಮನದಟ್ಟು ಮಾಡೋಣ. ಆದುದರ ಬಗ್ಗೆ ಚಿಂತಿಸದೆ ಮುಂದಾಗುವುದರತ್ತ ಗಮನ ಹರಿಸುವಂತೆ ಮಾಡೋಣ. ಬದುಕಿನಲ್ಲಿ ಪರೀಕ್ಷೆಗಳು ಬಹಳಷ್ಟಿವೆ. ಆದರೆ ಬದುಕು ಒಂದೇ. ಅದನ್ನು ಧೈರ್ಯದಿಂದ ನ್ಯಾಯ ಮಾರ್ಗದಲ್ಲಿ ಬಾಳುವಂತೆ ಪ್ರೇರೇಪಿಸೋಣ. ಇದರಲ್ಲಿ ಶಿಕ್ಷಕರಷ್ಟೇ ಮಹತ್ವದ ಪಾತ್ರವನ್ನು ಹೆತ್ತವರೂ ವಹಿಸಬೇಕು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಬನ್ನಿ, ನಮ್ಮ ಮಕ್ಕಳನ್ನು ಜೀವನದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಸಿದ್ಧಗೊಳಿಸೋಣ.

– ಶಾಂತಲಾ ಎನ್‌. ಹೆಗ್ಡೆ, ಸಾಲಿಗ್ರಾಮ

Advertisement

Udayavani is now on Telegram. Click here to join our channel and stay updated with the latest news.

Next