ಕರಾಚಿ: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಭಾರತ ಕ್ರಿಕೆಟ್ ತಂಡಕ್ಕೆ ಪಾಕಿಸ್ಥಾನಕ್ಕೆ ಪ್ರಯಾಣಿಸಲು ಕೇಂದ್ರ ಸರಕಾರ ಅನುಮತಿ ನಿರಾಕರಿಸಿದ್ದರೆ, ಅದಕ್ಕೆ ಲಿಖೀತ ದಾಖಲೆ ನೀಡಿ ಎಂದು ಪಿಸಿಬಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಯನ್ನು (ಬಿಸಿಸಿಐ) ಕೇಳಿರುವುದಾಗಿ ವರದಿಯಾಗಿದೆ.
ಭದ್ರತೆಯ ಕಾರಣದಿಂದಾಗಿ, ಮುಂದಿನ ವರ್ಷ ಪಾಕಿಸ್ಥಾನದಲ್ಲಿ ನಡೆಯಲಿರುವ ಏಕ ದಿನ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ತಂಡ ವನ್ನು ಕಳುಹಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದವು. ಈ ಹಿನ್ನೆಲೆಯಲ್ಲಿ ಪಿಸಿಬಿ, ಸರಕಾರದ ಲಿಖೀತ ದಾಖಲೆ ನೀಡುವಂತೆ ಬಿಸಿಸಿಐಯನ್ನು ಕೇಳಿದೆ ಎನ್ನಲಾಗಿದೆ.
ಒಂದು ವೇಳೆ ಭಾರತ ಸರಕಾರ ಅನುಮತಿ ನಿರಾಕರಿಸಿದ್ದರೆ, ಅದು ಲಿಖೀತ ರೂಪದಲ್ಲಿ ಇರ ಬೇಕಾದುದು ಕಡ್ಡಾಯ. ಹೀಗಾಗಿ, ಅನುಮತಿ ನಿರಾಕರಣೆಯ ಲಿಖೀತ ಪತ್ರವನ್ನು ಬಿಸಿಸಿಐ ಕೂಡಲೇ ಐಸಿಸಿಗೆ ನೀಡಬೇಕು ಎಂದು ಪಿಸಿಬಿ ತಿಳಿಸಿದೆ.
ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ಟೂರ್ನಿಯನ್ನು ನಡೆಸಲು ಉದ್ದೇಶಿಸಲಾಗಿದೆ. ಹೀಗಾಗಿ ಪಾಕಿಸ್ಥಾನಕ್ಕೆ ತನ್ನ ತಂಡವನ್ನು ಕಳುಹಿಸುವ ಬಗ್ಗೆ ಬಿಸಿಸಿಐ, ಟೂರ್ನಿಯ ಆರಂಭಕ್ಕೆ 5-6 ತಿಂಗಳ ಒಳಗಾಗಿ ಐಸಿಸಿಗೆ ಲಿಖೀತ ಮಾಹಿತಿ ನೀಡಬೇಕಾಗಿದೆ.
ಭಾರತ-ಪಾಕಿಸ್ಥಾನ ನಡುವೆ ರಾಜಕೀಯ ಭಿನ್ನಾಭಿಪ್ರಾಯ ಇರುವುದರಿಂದ ಪಾಕ್‌ಗೆ ಭಾರತ ತಂಡ ತೆರಳುವ ಸಾಧ್ಯತೆ ಇಲ್ಲ. ಇದರ ಬದಲು ಚಾಂಪಿಯನ್ಸ್ ಟ್ರೋಫಿ ವೇಳೆ ದುಬಾೖ ಅಥವಾ ಶ್ರೀಲಂಕಾದಲ್ಲಿ ಭಾರತದ ಪಂದ್ಯಗಳನ್ನು ನಡೆಸುವಂತೆ ಐಸಿಸಿಗೆ ಪತ್ರ ಬರೆಯಲು ಬಿಸಿಸಿಐ ಮುಂದಾಗಿರುವುದಾಗಿ ವರದಿಯಾಗಿತ್ತು. ಆದರೆ ಈ ಬಗ್ಗೆ ಬಿಸಿಸಿಐ ಅಥವಾ ಐಸಿಸಿ ಈವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ.
ವಿಶ್ವಕಪ್ ಬಹಿಷ್ಕಾರದ ಬೆದರಿಕೆ
ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ಥಾನಕ್ಕೆ ತೆರಳದಿದ್ದರೆ, ಭಾರತ-ಶ್ರೀಲಂಕಾ ಜಂಟಿಯಾಗಿ ನಡೆಸುವ 2026ರ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಪಾಕಿಸ್ಥಾನ ಬಹಿಷ್ಕರಿಸುವುದಾಗಿ, ಪಿಸಿಬಿಯು ಐಸಿಸಿಗೆ ಬೆದರಿಕೆ ಒಡ್ಡುತ್ತಿದೆ ಎಂದು ಕೆಲವು ವರದಿಗಳು ಹೇಳಿವೆ.