ಧಾರವಾಡ : ಬಿಜೆಪಿಯ ಹಿಂದುತ್ವದ ಅಸ್ತ್ರಕ್ಕೆ, ಕಾಂಗ್ರೆಸ್ ಬಸವಣ್ಣ, ಅಂಬೇಡ್ಕರರ ತತ್ವಗಳನ್ನು ಹೇಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಆದಿತ್ಯ ಮಯೂರ ರೆಸಾರ್ಟ್‌ನ ಆವರಣದಲ್ಲಿ ಧಾರವಾಡ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಪ್ರಚಾರಾರ್ಥ ಹಮ್ಮಿಕೊಂಡಿದ್ದ ಕಾಂಗ್ರೆಸ್‌ನ ವೀರಶೈವ- ಲಿಂಗಾಯತ ಸಮಾಜದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ವೀರಶೈವ ಲಿಂಗಾಯತ ಸಮಾಜ ಬಲಿಷ್ಠ ಸಮಾಜವಾಗಿದೆ. ಈ ಸಮಾಜದ ಮುಖಂಡರು ಎಲ್ಲ ಸಮುದಾಯದ ಜನರೊಂದಿಗೆ ಒಡನಾಟ ಹೊಂದಿದ್ದು, ಬಿಜೆಪಿಯವರ ಹಿಂದೂತ್ವದ ವಿರುದ್ದ ಬಸವಣ್ಣ, ಅಂಬೇಡ್ಕರ ತತ್ವ ಹೇಳಿರಿ. ಈ ಮೂಲಕ ವೀರಶೈವ ಲಿಂಗಾಯತ ಸಮಾಜದವರು ಬಸವಣ್ಣನವರನ್ನು ಉಳಿಸಬೇಕು. ವೀರಶೈವ ಲಿಂಗಾಯತ ಸಮಾಜ ಜಾಗೃತ ಸಮಾಜವಾಗಿದ್ದು, ಚುನಾವಣೆ ಸಂದರ್ಭದಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಬೇಕು ಎಂದರು.
ಕಾಂಗ್ರೆಸ್‌ನಲ್ಲಿನ ಎಲ್ಲ ವೀರಶೈವ ಲಿಂಗಾಯತ ಮುಖಂಡರು ಒಂದು ಸಮಿತಿಯನ್ನು ರಚಿಸಿಕೊಂಡು ಪಕ್ಷದ ಗೆಲುವಿಗೆ ಶ್ರಮಿಸಬೇಕು. ಅದಕ್ಕಾಗಿ ಜಿಲ್ಲೆಯಲ್ಲಿ ಒಂದು ಬೃಹತ್ ಸಮಾವೇಶವನ್ನೂ ಮಾಡೋಣ. ಈ ಬಗ್ಗೆ ಮುಖಂಡು ಸೂಕ್ತವಾದ ನಿರ್ಧಾರ ಕೈಗೊಂಡು ಪಕ್ಷದ ಸಂಘಟನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ಈ ಬಾರಿ ಅಭ್ಯರ್ಥಿ ವಿನೋದ ಅಸೂಟಿ ಚುನಾವಣೆ ಅಲ್ಲ, ಕಾಂಗ್ರೆಸ್ ಪಕ್ಷದ ಚುನಾವಣೆಯಾಗಿದೆ. ಹೀಗಾಗಿ ಅವರನ್ನು ಗೆಲ್ಲಿಸಬೇಕು. ಬಿಜೆಪಿಯನ್ನು ಏಕೆ ಸೋಲಿಸಬೇಕು ಎಂಬುದನ್ನು ಜನರಿಗೆ ತಿಳಿಸಬೇಕು. ಬಿಜೆಪಿ ಹಿಂದೂತ್ವದ ಮೇಲೆ ಚುನಾವಣೆ ಎದುರಿಸುತ್ತದೆ. ಜಾತಿ, ಧರ್ಮದ ಮೇಲೆ ಮತ ಕೇಳುತ್ತಾರೆ. ಇದೇ ಮಾದರಿಯಲ್ಲಿ ಕಾಂಗ್ರೆಸ್ ಪಕ್ಷವೂ ಚುನಾವಣೆ ಎದುರಿಸಲು ಸಿದ್ಧವಾಗಬೇಕಿದೆ ಎಂದರು.
ಲಿಂಗಾಯತ ಸಮಾಜದ ಮುಖಂಡ ಮೋಹನ ಲಿಂಬಿಕಾಯಿ ಮಾತನಾಡಿ, ವೀರಶೈವ ಲಿಂಗಾಯತ ಸಮಾಜಕ್ಕೆ ಕಳೆದ ಹಲವು ವರ್ಷಗಳಿಂದ ಅನ್ಯಾಯವಾಗಿದೆ. ಪ್ರಸ್ತುತ ಸಮಾಜ ಬಾಂಧವರು ಎಚ್ಚೆತ್ತುಕೊಂಡಿದ್ದು, ಒಂದಾಗಿ ಚುನಾವಣೆ ಎದುರಿಸಬೇಕಾಗಿದೆ. ಹೀಗಾಗಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿನ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಜಾಗೃತರಾಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವ ಪಿ.ಸಿ. ಸಿದ್ದನಗೌಡರ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಶಿವಲೀಲಾ ಕುಲಕರ್ಣಿ, ಕೆಎಂಎಫ್ ಒಕ್ಕೂಟದ ಮಾಜಿ ಅಧ್ಯಕ್ಷ ನೀಲಕಂಠ ಅಸೂಟಿ, ಧಾರವಾಡ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಜಗದೀಶ ಉಪ್ಪಿನ, ಬಾಪಿಗೌಡ ಪಾಟೀಲ, ಶರಣಪ್ಪ ಕೊಟಗಿ ಸೇರಿದಂತೆ ಹಲವರು ಇದ್ದರು.