Advertisement

ಶಾಲಾ ತರಗತಿಯಲ್ಲೇ ವಿದ್ಯಾರ್ಥಿಗಳಿಗೆ ಪಾಠ

02:31 AM Oct 10, 2020 | mahesh |

ತೆಕ್ಕಟ್ಟೆ: ಕೊರೊನಾದ ತೀವ್ರತೆ ಏರುಗತಿಯಲ್ಲಿರುವುದರಿಂದ ಶಾಲಾ ರಂಭದ ಬಗ್ಗೆ ರಾಜ್ಯ ಸರಕಾರ ಇನ್ನೂ ನಿರ್ಧಾರ ಪ್ರಕಟಿಸದಿದ್ದರೂ ಇಲ್ಲಿನ ಯಡಾಡಿ, ಮತ್ಯಾಡಿಯ ಖಾಸಗಿ ಶಾಲೆಯೊಂದು ಹೆತ್ತವರ ಆಗ್ರಹದಂತೆ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

Advertisement

ಲಿಟ್ಲ ಸ್ಟಾರ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತರಗತಿ ನಡೆಸುತ್ತಿದ್ದಾರೆಂಬ ಮಾಹಿತಿ ಆಧರಿಸಿ ಮಾಧ್ಯಮದವರು ಶಾಲೆಗೆ ಭೇಟಿ ನೀಡಿದಾಗ ಶಿಕ್ಷಕರು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ ವಿಷಯಕ್ಕೆ ಸಂಬಂಧಿಸಿ ವಿಶೇಷ ತರಗತಿ ನಡೆಸುತ್ತಿರುವುದು ಕಂಡು ಬಂದಿದೆ. ಈ ಸಂಬಂಧ ಶಾಲಾ ಆಡಳಿತ ಮಂಡಳಿಯವರನ್ನು ವಿಚಾರಿಸಿದಾಗ ಶಾಲೆಯ ತರಗತಿಗಳು ವಾಟ್ಸಾಪ್‌ ಮೂಲಕ ನಡೆಯುತ್ತದೆ. ಆದರೆ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆಯಿಂದ ಗಣಿತ ವಿಷಯಕ್ಕೆ ಸಂಬಂಧಿಸಿ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಪೋಷಕರ ಒತ್ತಾಯದಿಂದಾಗಿ ತರಗತಿ ನಡೆಸಿದ್ದೇವೆ ಎಂದು ಹೇಳಿದ್ದಾರೆ.

ಶಿಕ್ಷಣ ಇಲಾಖೆ ವಿದ್ಯಾಗಮ ಕಾರ್ಯಕ್ರಮವನ್ನು ಆರಂಭಿಸಿದರೂ ಮಕ್ಕಳು ಶಾಲೆಯ ಹೊರಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಪಾಠ ಕೇಳುತ್ತಿದ್ದಾರೆ. ಆದರೆ ತರಗತಿ ಒಳಗಡೆ ಇಷ್ಟರವರೆಗೆ ಎಲ್ಲಿಯೂ ಪಾಠ ನಡೆದಿರಲಿಲ್ಲ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸರಕಾರ ಶಾಲಾ ಆರಂಭಕ್ಕೆ ಹಿಂದೇಟು ಹಾಕುತ್ತಿದೆ. ಈ ಕಾರಣದಿಂದಾಗಿ ಶಿಕ್ಷಣ ಸಂಸ್ಥೆಯ ಈ ನಡೆ ಸಾರ್ವಜನಿಕರಲ್ಲಿ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ತರಗತಿ ಆರಂಭಿಸಲು ಶಿಕ್ಷಣ ಇಲಾಖೆ ಮತ್ತು ಪೋಷಕರು ಅನುಮತಿ ನೀಡಿದ್ದಾರಾ? ಎನ್ನುವುದನ್ನು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.

ನೆಟ್‌ವರ್ಕ್‌ ಸಮಸ್ಯೆ
ಈಗಾಗಲೇ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಆನ್‌ಲೈನ್‌ ತರಗತಿಗಳು ಆರಂಭಗೊಂಡಿವೆ. ಆದರೆ ಗ್ರಾಮೀಣ ಭಾಗದಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆಗಳು ಒಂದೆಡೆಯಾದರೆ ಮತ್ತೂಂದೆಡೆ ಅದಕ್ಕೆ ಪೂರಕವಾದ ಆ್ಯಂಡ್ರಾಯ್ಡ ಮೊಬೈಲ್‌ ಹ್ಯಾಂಡ್‌ಸೆಟ್‌ಗಳ ಸಮಸ್ಯೆ
ಯಿಂದಾಗಿ ಕಲಿಕೆಯ ಹಂಬಲದಲ್ಲಿರುವ ಅದೆಷ್ಟೋ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪರಿತಪಿಸುತ್ತಿರು ವುದು ಕೂಡ ವಾಸ್ತವ ಸತ್ಯ.

ಅನುಮತಿ ನೀಡಿಲ್ಲ
ಜಿಲ್ಲೆಯಲ್ಲಿ ಯಾವುದೇ ವಿದ್ಯಾ ಸಂಸ್ಥೆಗಳಿಗೆ ತರಗತಿ ನಡೆಸಲು ಅನುಮತಿ ನೀಡಿರುವುದಿಲ್ಲ, ಅಲ್ಲದೆ ಸರಕಾರದ ಆದೇಶವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೀರಲಿಲ್ಲ. ಈ ಘಟನೆಯ ಬಗ್ಗೆ ವರದಿ ಪಡೆದು, ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆದೇಶಿಸಲಾಗಿದೆ.
-ವೇದಮೂರ್ತಿ ಪ್ರಭಾರ ವಿದ್ಯಾಂಗ
         ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ

Advertisement

ಪೋಷಕರ ಒತ್ತಾಯ
ನಮ್ಮ ಶಾಲೆಯ ತರಗತಿಗಳು ವಾಟ್ಸಾ ಪ್‌ ಮೂಲಕ ನಡೆಯುತ್ತಿದ್ದು, ನೆಟ್‌ವರ್ಕ್‌ ಸಮಸ್ಯೆಇರುವುದರಿಂದ ಗಣಿತ ವಿಷಯದ ಬಗ್ಗ ಸಂದೇಹಗಳನ್ನು ಬಗೆಹರಿಸಲು ಪೋಷಕರ ಒತ್ತಾಯದ ಮೇರೆಗೆ ಒಪ್ಪಿಗೆ ಪತ್ರದೊಂದಿಗೆ ಗುರುವಾರ 12 ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆ ತನಕ ಬಿಟ್ಟು ಹೋಗಿರುತ್ತಾರೆ.
– ಪಾಂಡುರಂಗ ಗಾಣಿಗ ಆಡಳಿತ ನಿರ್ದೇಶಕರು,
ಲಿಟ್ಲ ಸ್ಟಾರ್‌ ಆಂಗ್ಲ ಮಾಧ್ಯಮ ಶಾಲೆ, ಯಡಾಡಿ ಮತ್ಯಾಡಿ

Advertisement

Udayavani is now on Telegram. Click here to join our channel and stay updated with the latest news.

Next